Federal Explainer | ಬೆಳಗಾವಿ ಕಾಂಗ್ರೆಸ್‌ ಅಧಿವೇಶನ: ಗಾಂಧಿ ನೇತೃತ್ವದ ಐತಿಹಾಸಿಕ ಸಭೆಯ ಮಹತ್ವವೇನು?

ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಕುಂದಾನಗರ ಬೆಳಗಾವಿ ಸಜ್ಜುಗೊಂಡಿದೆ. ಸ್ವಾತಂತ್ರ್ಯ ಚಳವಳಿಯ ರಥ ಮುನ್ನಡೆಸಲು ಕಾರಣವಾದ ಗಾಂಧೀಜಿ ನೇತೃತ್ವದ ಐತಿಹಾಸಿಕ ಕಾಂಗ್ರೆಸ್‌ ಅಧಿವೇಶನದ ಐತಿಹ್ಯ ಇಲ್ಲಿದೆ.

Update: 2024-12-25 12:04 GMT
1924 ರಲ್ಲಿ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ

ಕುಂದಾನಗರಿ ಬೆಳಗಾವಿಯಲ್ಲಿ ʼಗಾಂಧಿ ಭಾರತʼ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. 1924ರ ಡಿ.26 ಹಾಗೂ 27 ರಂದು ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಐತಿಹಾಸಿಕ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ʼಗಾಂಧಿ ಭಾರತʼ ಹೆಸರಿನಲ್ಲಿ ಎರಡು ದಿನಗಳ ವಿಶೇಷ ಸಮಾವೇಶ ಏರ್ಪಡಿಸಿದೆ. ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ಭಾಗವಹಿಸಲಿದ್ದು, ಅಂದಾಜು ಒಂದೂವರೆ ಲಕ್ಷ ಜನರು ʼಗಾಂಧಿ ಭಾರತʼ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಡಿ.26 ರಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. 400ಮಂದಿ ಆಹ್ವಾನಿತರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಡಿ.27 ರಂದು ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ ಸಮಾವೇಶ ನಡೆಯಲಿದೆ. ಕಾರ್ಯಕ್ರಮಲ್ಲಿ ಒಂದೂವರೆ ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಮೊದಲ ದಿನದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಆಹ್ವಾನ ಇರುವುದಿಲ್ಲ, ಕಾಂಗ್ರೆಸ್‌ ಪ್ರಮುಖ ಆಹ್ವಾನಿತರಿಗೆ ಮಾತ್ರ ಅವಕಾಶವಿರಲಿದೆ. ಎರಡನೇ ದಿನದ ಸಮಾವೇಶದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

1924 ಡಿ.26 ಹಾಗೂ 27 ರಂದು ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನವು ದೇಶದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲು. ಸ್ವಾತಂತ್ರ್ಯ ಸಮರಕ್ಕೆ ಮಹತ್ವದ ತಿರುವು ನೀಡಿದ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯದಿರಲು ಅಂದಿನ ಕಾಂಗ್ರೆಸ್‌ ಪಣ ತೊಟ್ಟ ಅಧಿವೇಶನ ಇದಾಗಿತ್ತು. ಇದೀಗ ಆ ಐತಿಹಾಸಿನ ಅಧಿವೇಶನದ ಶತಮಾನೋತ್ಸವ ಸಮಾವೇಶದ ಹಿನ್ನೆಲೆಯಲ್ಲಿ ನಿಮಗೆ ಗೊತ್ತಿರಬೇಕಾದ ವಿವರ ಇಲ್ಲಿದೆ..

ನೂರು ವರ್ಷದ ಹಿಂದೆ ನಡೆದ ಗಾಂಧಿ ಸಾರಥ್ಯದ ಕಾಂಗ್ರೆಸ್‌ ಅಧಿವೇಶನದ ನೋಟ

ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ರೂವಾರಿ ಯಾರು?

1923ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ 38ನೇ ಕಾಂಗ್ರೆಸ್ ಅಧಿವೇಶನ ನಡೆದಿತ್ತು. 39ನೇ ಅಧಿವೇಶನವನ್ನು ಕರ್ನಾಟಕದಲ್ಲಿ ನಡೆಸಲು ಆ ಅಧಿವೇಶನದಲ್ಲಿಯೇ ನಿರ್ಧರಿಸಲಾಗಿತ್ತು. ಆಗ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದ ಗಂಗಾಧರ ರಾವ್ ದೇಶಪಾಂಡೆ ಅವರು ಬೆಳಗಾವಿಯಲ್ಲೇ ಅಧಿವೇಶನ ನಡೆಸುವಂತೆ ಮಹಾತ್ಮ ಗಾಂಧಿ ಅವರನ್ನು ಒತ್ತಾಯಿಸಿದ್ದರು. ಅದರಂತೆ ಬೆಳಗಾವಿಯ ಅಂದಿನ ವಿಜಯನಗರ( ಟಿಳಕವಾಡಿ)ದಲ್ಲಿಅಧಿವೇಶನ ನಡೆಯಿತು. ಗಂಗಾಧರ ರಾವ್‌ ದೇಶಪಾಂಡೆ ಅವರೇ ಅಧಿವೇಶನದ ಸಂಪೂರ್ಣ ಉಸ್ತುವಾರಿ ವಹಿಸಿದ್ದರು.

ಬೆಳಗಾವಿಯಲ್ಲೇ ಅಧಿವೇಶನ ನಡೆಸಿದ್ದೇಕೆ?

ಬೆಳಗಾವಿ ಜಿಲ್ಲೆಯು ಮಹಾರಾಷ್ಟ್ರ, ಗೋವಾಗೆ ಸಂಪರ್ಕ ಕೊಂಡಿಯಂತಿತ್ತು. ಈ ಬಗ್ಗೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಭಾಗದ ಸ್ವಾತಂತ್ರ್ಯ ಹೋರಾಟಗಾರರು ಮಹಾತ್ಮಾ ಗಾಂಧಿ ಅವರ ಮುಂದೆ ಪ್ರಬಲ ವಾದ ಮಂಡಿಸಿದ್ದರು. ಹಾಗಾಗಿ ಮೂರೂ ರಾಜ್ಯಗಳಿಗೆ ಅನ್ವಯಿಸುವಂತೆ ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆಸಲು ನಿರ್ಣಯಿಸಲಾಯಿತು. ಅಧಿವೇಶನಕ್ಕಾಗಿ ಸಾಕಷ್ಟು ದೇಣಿಗೆಯನ್ನು ಸಂಗ್ರಹಿಸಿ, ಅಧಿವೇಶನವನ್ನು ಯಶಸ್ವಿಗೊಳಿಸಿದ್ದರು.

ಅಧಿವೇಶನದ ನಿರ್ಣಯಗಳೇನು?

ಬಂಗಾಳದ ಮೂಲಕ ಹಾದುಹೋಗುವ ಬ್ರಿಟಿಷರ ಎಲ್ಲ ಸರಕುಗಳಿಗೆ ಸುಂಕ ವಿನಾಯಿತಿ ನೀಡುವ ಹಾಗೂ ಬಂಗಾಳ ವಿಭಜನೆ ವಿರೋಧಿಸುವ ಕೊಲ್ಕತ್ತಾ ಒಪ್ಪಂದವನ್ನು ಅನುಮೋದಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.

ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯದಿರುವ ಕುರಿತಂತೆಯೂ ಕಾಂಗ್ರೆಸ್‌ ನಿರ್ಣಯ ಕೈಗೊಂಡಿತ್ತು.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಾಲಗಂಗಾಧರ ತಿಲಕ್‌ ನೇತೃತ್ವದ ತೀವ್ರಗಾಮಿಗಳ ಸ್ವರಾಜ್ ಬಣ, ಮಹಾತ್ಮಾ ಗಾಂಧಿ ನೇತೃತ್ವದ ಮಂದಗಾಮಿಗಳ ಬಣಗಳಾಗಿ ರೂಪುಗೊಂಡಿದ್ದವು. ಎರಡೂ ಗುಂಪುಗಳನ್ನು ಒಂದುಗೂಡಿಸಿ ಹೋರಾಟಕ್ಕೆ ಅಣಿಗೊಳಿಸಲು ಅಧಿವೇಶನದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಐತಿಹಾಸಿನ ಕಾಂಗ್ರೆಸ್‌ ಅಧಿವೇಶನದಲ್ಲಿ ಮಾತನಾಡುತ್ತಿರುವ ರಾಷ್ಟ್ರಪತಿ ಮಹಾತ್ಮಾ ಗಾಂಧೀಜಿ

ಅಧಿವೇಶನದ ಮಹತ್ವವೇನು?

ಹುಯಿಲುಗೋಳ ನಾರಾಯಣರಾವ್‌ ರಚಿಸಿದ ʼಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುʼ ಗೀತೆಯನ್ನು ಮೊದಲ ಬಾರಿಗೆ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದಲ್ಲಿ ಹಾಡಲಾಯಿತು. ಆಗಿನ್ನೂ ಪುಟ್ಟ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಈ ಗೀತೆಯನ್ನು ಹಾಡಿದ್ದರು. 1970ರವರೆಗೆ ಈ ಗೀತೆ ಅಧಿಕೃತ ನಾಡಗೀತೆಯಾಗಿತ್ತು.  

ಕಾಂಗ್ರೆಸ್‌ ಅಧಿವೇಶನಗಳಲ್ಲಿ ಮಹಾತ್ಮಾ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಬೆಳಗಾವಿ ಕಾಂಗ್ರೆಸ್‌ ಅಧಿವೇಶನವಾಗಿತ್ತು. ಖಾದಿ ಬಟ್ಟೆಯ ಬಳಕೆಯ ಮಹತ್ವ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನವರ ಹೋರಾಟ ಬಿಂಬಿಸುವ ನಾಟಕಗಳನ್ನು ಪ್ರದರ್ಶಿಸಿ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ತುಂಬಲಾಗಿತ್ತು.

ಅಧಿವೇಶನದಲ್ಲಿ ಎಷ್ಟು ಜನ ಭಾಗವಹಿಸಿದ್ದರು?

ಅವಿಭಜಿತ ಭಾರತದ ಮೂಲೆ ಮೂಲೆಗಳಿಂದ 17 ಸಾವಿರ ಜನರು ಬೆಳಗಾವಿ ಅಧಿವೇಶನಕ್ಕೆ ಸಾಕ್ಷಿಯಾಗಿದ್ದರು. ಇಂದಿನ ಬಲೂಚಿಸ್ತಾನದ ಕ್ವೆಟ್ಟಾದಿಂದ ಹಿಡಿದು ಪೂರ್ವದ ಬರ್ಮಾ, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ವಿವಿಧ ಕಡೆಗಳಿಂದ ಸ್ವಾತಂತ್ರ್ಯ ಹೋರಾಟಗಾರರು, ಸಾರ್ವಜನಿಕರು ಅಧಿವೇಶನಕ್ಕೆ ಬಂದಿದ್ದರು.

ಅಧಿವೇಶನದಲ್ಲಿ ಗಾಂಧೀಜಿ ಅವರೊಂದಿಗೆ ಕಾಂಗ್ರೆಸ್‌ ನ ಅಂದಿನ ಪ್ರಮುಖರಾದ ಮೋತಿಲಾಲ್‌ ನೆಹರು, ಜವಾಹರ ಲಾಲ್‌ ನೆಹರು, ಲಾಲಾ ಲಜಪತರಾಯ್‌, ರಾಜಗೋಪಾಲಾಚಾರಿ, ಆನಿ ಬೆಸೆಂಟ್, ಸರೋಜಿನಿ ನಾಯ್ಡು, ಚಿತ್ತರಂಜನ್‌ ದಾಸ್‌, ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌, ವಲ್ಲಭಾ ಬಾಯ್‌ ಪಟೇಲ್‌, ಬಾಬು ರಾಜೇಂದ್ರ ಪ್ರಸಾದ್‌, ಮೌಲಾನಾ ಶೌಕತ್‌ ಅಲಿ, ಮಹಮದ್‌ ಅಲಿ, ಪಂಡಿತ್‌ ಮದನ್‌ ಮೋಹನ್‌ ಮಾಳವೀಯ ಸೇರಿದಂತೆ ಹಲವು ಸ್ವಾತಂತ್ರ್ಯ ಸೇನಾನಿಗಳು ಭಾಗವಹಿಸಿದ್ದರು.

ಅಂದಿನ ಅಧಿವೇಶನಕ್ಕೆ ಖರ್ಚಾದ ಹಣವೆಷ್ಟು?

ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಅಂದು 2.20 ಲಕ್ಷ ರೂ ಖರ್ಚಾಗಿತ್ತು. ಹುದಲಿಯಲ್ಲಿ ಅತಿಥಿಗಳಿಗೆ ತಂಗಲು 250 ಗುಡಿಸಲುಗಳನ್ನು ನಿರ್ಮಿಸಲಾಗಿತ್ತು. ಶಾಮೀಯಾನ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಖರ್ಚು ಕಳೆದು 772 ರೂ. ಹಣ ಉಳಿದಿತ್ತು. ಆ ಹಣವನ್ನು ಕರ್ನಾಟಕ ಕಾಂಗ್ರೆಸ್ ಸಮಿತಿ ಖಾತೆಯಲ್ಲಿ ಇರಿಸಲಾಗಿತ್ತು.


ಶತಮಾನ ತುಂಬಿದ ಕಾಂಗ್ರೆಸ್ ಅಧಿವೇಶನ 

ಕಾಂಗ್ರೆಸ್‌ನ ಐತಿಹಾಸಿನ ಬೆಳಗಾವಿ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಡಿ.26 ಹಾಗೂ 27 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅಧಿವೇಶನಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಮಾಬ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಸಮಯದ ಅಭಾವದಿಂದ ಬರಲು ಒಪ್ಪಿರಲಿಲ್ಲ. ಈಗ ಕಾಂಗ್ರೆಸ್ ಪಕ್ಷದ ವರಿಷ್ಠರು ಸೇರಿದಂತೆ ನೂರಾರು ಸಂಖ್ಯೆಯ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. 150 ಸಂಸದರಿಗೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ.

ಶತಮಾನೋತ್ಸವದ ವಿಶೇಷತೆ ಏನು?

ಡಿ. 26 ರಂದು ಸಿಎಂ ಸಿದ್ದರಾಮಯ್ಯ ಅವರು ಅಧಿವೇಶನ ನಡೆದ ಬೆಳಗಾವಿಯ ವೀರಸೌಧದ ಆವರಣದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ಮಾಡಲಿದ್ದಾರೆ.

ಡಿ. 27 ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸುವರ್ಣ ಸೌಧದ ಮುಂದೆ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಲಿದ್ದಾರೆ.

ಮಹಾತ್ಮಾ ಗಾಂಧಿ ಅವರು ಐತಿಹಾಸಿನ ಅಧಿವೇಶನದಲ್ಲಿ ಪಾಲ್ಗೊಂಡ ಅಪರೂಪದ ಛಾಯಾಚಿತ್ರಗಳ ನವೀಕೃತ ಫೋಟೋ ಗ್ಯಾಲರಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ.

ಬೆಳಗಾವಿಯ ರಾಮತೀರ್ಥ ನಗರದಲ್ಲಿ ಅಧಿವೇಶನ ನಡೆಸಲು ಕಾರಣಕರ್ತರಾದ ಗಂಗಾಧರ ರಾವ್ ದೇಶಪಾಂಡೆ ಅವರ ಪ್ರತಿಮೆ ಅನಾವರಣ ಹಾಗೂ ಸ್ಮಾರಕ ಭವನ ಉದ್ಘಾಟನೆ ನಡೆಯಲಿದೆ.

ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಗಾಂಧಿ‌ ಭಾರತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದ ಎಲ್ಲಾ ಸರ್ಕಾರಿ, ಅನುದಾನಿತ‌ ಹಾಗೂ ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಡಿ.26 ಹಾಗೂ 27 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. 

ಬೆಳಗಾವಿ ನಗರದ ಸಿಪಿಝಡ್ ಮೈದಾನದಲ್ಲಿ ಗಾಂಧಿ ಭಾರತ ಕಾರ್ಯಕ್ರಮ ನಡೆಯಲಿದ್ದು, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಸೇರಿ ವಿವಿಧ ರಾಜ್ಯಗಳ ಸಾವಿರಾರು ಸಂಖ್ಯೆಯ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.

Tags:    

Similar News