ಮಾದರಿ ಶಿಕ್ಷಕರು: ಸ್ವಂತ ಖರ್ಚಿನಲ್ಲಿ ಶಾಲೆ ದುರಸ್ತಿ, 60 ಮಕ್ಕಳ ದತ್ತು ಸ್ವೀಕಾರ
ಶಾಲೆಯಲ್ಲಿ ಸುಮಾರು 140 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಂಟು ಕೊಠಡಿಗಳಿವೆ. ಅವುಗಳಲ್ಲಿ ಮೂರು ಕೊಠಡಿಗಳು ಶಿಥಿಲಗೊಂಡಿದ್ದು, ಒಂದು ಕೊಠಡಿಯ ಸೀಲಿಂಗ್ ಕಳಚಿ ಬೀಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು.;
ಶಾಲಾ ಶಿಕ್ಷಕ ಹಣಮಂತ್ರಾಯ ಐನೂರ
ರಾಜ್ಯದ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ ಎಂಬ ದೂರುಗಳು ಕೇಳಿಬರುತ್ತಿರುವ ನಡುವೆಯೇ, ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಒಬ್ಬರು ತಮ್ಮ ಸಂಬಳದ ಹಣದಲ್ಲಿ ಶಾಲಾ ಕೊಠಡಿಯ ಚಾವಣಿಯನ್ನು ದುರಸ್ತಿ ಮಾಡಿದರೆ, ಮತ್ತೊಬ್ಬರು 60 ಬಡ ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಶಾಖಾಪುರ ಎಸ್.ಎ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಹಣಮಂತ್ರಾಯ ಐನೂಲಿ ಅವರು, ತಾವು ಕೆಲಸ ನಿರ್ವಹಿಸುತ್ತಿರುವ ಶಾಲೆಯ ಶಿಥಿಲಗೊಂಡ ಕೊಠಡಿಯ ಮೇಲ್ಛಾವಣಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿಗೊಳಿಸಿ ಮಾದರಿಯಾಗಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಶಾಲೆಯ ದುಸ್ಥಿತಿಯನ್ನು ಕಂಡು ಮರುಗಿದ್ದರು. 140 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಒಟ್ಟು ಎಂಟು ಕೊಠಡಿಗಳಿದ್ದು, ಅವುಗಳಲ್ಲಿ ಮೂರು ಶಿಥಿಲಗೊಂಡಿದ್ದವು. ಒಂದು ಕೊಠಡಿಯ ಚಾವಣಿ ಕುಸಿದು ಬೀಳುವ ಹಂತದಲ್ಲಿದ್ದು, ಮಕ್ಕಳ ಕಲಿಕೆಗೆ ಅಪಾಯಕಾರಿಯಾಗಿತ್ತು. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಕೊನೆಗೆ, "ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆಯಿರಬಾರದು" ಎಂಬ ಧ್ಯೇಯದೊಂದಿಗೆ, ಹಣಮಂತ್ರಾಯ ಅವರು ತಮ್ಮ ಸಂಬಳದಿಂದ 70,000 ರೂಪಾಯಿಗಳನ್ನು ವ್ಯಯಿಸಿ, ಅಪಾಯಕಾರಿ ಕೊಠಡಿಯ ಮೇಲ್ಛಾವಣಿಯನ್ನು ದುರಸ್ತಿ ಮಾಡಿಸಿ ಮಕ್ಕಳ ಕಲಿಕೆಗೆ ಸುರಕ್ಷಿತ ವಾತಾವರಣ ನಿರ್ಮಿಸಿಕೊಟ್ಟಿದ್ದಾರೆ.
60 ವಿದ್ಯಾರ್ಥಿಗಳನ್ನು ದತ್ತು ಪಡೆದ ವಿಶ್ವನಾಥ ಧುಮಾಳ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿಶ್ವನಾಥ ಧುಮಾಳ ಅವರು, ಬಡ ಮತ್ತು ಅಲೆಮಾರಿ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಆಸರೆಯಾಗಿದ್ದಾರೆ.
ಪ್ರತಿ ವರ್ಷ ಶಾಲೆ ಬಿಟ್ಟ, ಅಲೆಮಾರಿ ಮತ್ತು ಆರ್ಥಿಕವಾಗಿ ಹಿಂದುಳಿದ ಹತ್ತು ಮಕ್ಕಳನ್ನು ದತ್ತು ಪಡೆದು, ಅವರ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ವಿಶ್ವನಾಥ ಅವರು ವಹಿಸಿಕೊಳ್ಳುತ್ತಾರೆ. ಈವರೆಗೆ ಅವರು ಸುಮಾರು 60 ವಿದ್ಯಾರ್ಥಿಗಳನ್ನು ದತ್ತು ಪಡೆದು, ಅವರ ಬದುಕಿಗೆ ಬೆಳಕಾಗಿದ್ದಾರೆ.
ಇದಲ್ಲದೆ, ಪ್ರತಿದಿನ ಶಾಲೆ ಆರಂಭವಾಗುವ ಒಂದು ಗಂಟೆ ಮುಂಚಿತವಾಗಿ ಶಾಲೆಗೆ ಬಂದು, ನವೋದಯ, ಮೊರಾರ್ಜಿ ದೇಸಾಯಿ ಮತ್ತು ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಮಕ್ಕಳಿಗೆ ವಿಶೇಷ ತರಬೇತಿ ನೀಡುತ್ತಾರೆ. ಅವರ ಈ ಪ್ರಯತ್ನದ ಫಲವಾಗಿ, ಹಲವಾರು ವಿದ್ಯಾರ್ಥಿಗಳು ಪ್ರತಿಷ್ಠಿತ ವಸತಿ ಶಾಲೆಗಳಿಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.