Sugarcane Crisis| ಸಚಿವ, ಶಾಸಕರು, ರಾಜಕೀಯ ನಾಯಕರ ಒಡೆತನವೇ ಜೋರು: ರೈತರ ಬೇಡಿಕೆ ಈಡೇರಿಕೆಗೆ ಸರ್ಕಾರ ಸರ್ಕಸ್‌

ಬೆಂಗಳೂರಿನಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಗೆ ಒಟ್ಟು 82 ಸಕ್ಕರೆ ಕಾರ್ಖಾನೆ ಮಾಲೀಕರು ಅಥವಾ ಆಡಳಿತ ಮಂಡಳಿ ಮುಖ್ಯಸ್ಥರು ಆಗಮಿಸಿ ಕಬ್ಬು ಬೆಳೆಗಾರರಿಗೆ ನೀಡಬೇಕಾದ ಮೊತ್ತದ ಬಗ್ಗೆ ಒಮ್ಮತದ ನಿರ್ಧಾರ ಮಾಡಬೇಕಾಗಿದೆ.

Update: 2025-11-07 09:18 GMT

ಸಚಿವ ಸತೀಶ್‌ ಜಾರಕಿಹೊಳಿ, ಶಾಸಕ ರಮೇಶ್‌ ಜಾರಕಿಹೊಳಿ,ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಶಾಸಕ ಶಾಮನೂರು ಶಿವಶಂಕರಪ್ಪ

Click the Play button to listen to article

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದ್ದು ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸರ್ಕಾರಕ್ಕೆ ರೈತರ ಹೋರಾಟದ ಬಿಸಿ ಒಂದೆಡೆಯಾದರೆ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳು ಬಹುತೇಕ ರಾಜಕೀಯ ನಾಯಕರದ್ದೇ ಆಗಿರುವುದು ಸರ್ಕಾರಕ್ಕೆ ಮತ್ತೊಂದು ತಲೆಬೇನೆಯಾಗಿದೆ.

ಗುರುವಾರ(ನ.6) ನಡೆದ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಹೋರಾಟದ ಬಗ್ಗೆ ಗಂಭೀರವಾದ ಚರ್ಚೆಯಾಗಿತ್ತು. ಪ್ರತೀ ಟನ್‌ಗೆ 3,300 ರೂ ಕೊಡಿಸಲು ಸಕ್ಕರೆ ಕಾರ್ಖನೆ ಮಾಲೀಕರ ಜೊತೆ  ಸರ್ಕಾರ ಚರ್ಚೆ ನಡೆಸುತ್ತಿದ್ದು, ಅಂತಿಮವಾಗಿ ಪ್ರತಿ ಟನ್‌ ಕಬ್ಬಿಗೆ 3,400 ರೂ. ನೀಡಿ ರೈತರನ್ನು ಸಮಾಧಾನಪಡಿಸಲು ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ಸಕ್ಕರೆ ಕಾರ್ಖನೆ ಮಾಲೀಕರು ಒಪ್ಪಿಗೆ ಸೂಚಿಸುತ್ತಾರೋ ಅಥವಾ ನಿರಾಕರಿಸುತ್ತಾರೋ ಎಂಬುದು ಸರ್ಕಾರದ ಆತಂಕವಾಗಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಗೆ ಒಟ್ಟು 82 ಸಕ್ಕರೆ ಕಾರ್ಖಾನೆ ಮಾಲೀಕರು  ಅಥವಾ ಆಡಳಿತ ಮಂಡಳಿ ಮುಖ್ಯಸ್ಥರು ಆಗಮಿಸಿ ಕಬ್ಬು ಬೆಳೆಗಾರರಿಗೆ ನೀಡಬೇಕಾದ ಮೊತ್ತದ ಬಗ್ಗೆ ಒಮ್ಮತದ ನಿರ್ಧಾರ ಮಾಡಬೇಕಾಗಿದೆ.

ಜಾರಕಿಹೊಳಿ ಕುಟುಂಬದ ಒಡೆತನದಲ್ಲಿವೆ 5 ಕಾರ್ಖಾನೆಗಳು

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ‌ ಮಾಲೀಕತ್ವದಲ್ಲಿ ಬೆಳಗಾಂ ಶುಗರ್ಸ್ ಮತ್ತು ಸತೀಶ್ ಶುಗರ್ಸ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಲೀಕತ್ವದ ಗೋಕಾಕ್ ಸಕ್ಕರೆ ಕಾರ್ಖಾನೆ, ಹಿರೇನಂದಿ ಸೌಭಾಗ್ಯಲಕ್ಷ್ಮೀ‌ ಕಾರ್ಖಾನೆ, ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಲೀಕತ್ವದ ದ. ಘಟಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಗಳಿವೆ.

ಸಕ್ಕರೆ ಕಾರ್ಖಾನೆ ಮಾಲಿಕತ್ವವನ್ನು ಪರಿಗಣಿಸಿದರೆ,  ಸಚಿವರು ಮತ್ತು ಶಾಸಕರು ಸೇರಿದಂತೆ ಪ್ರಮುಖವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಬಹುಪಾಲು ನಿಯಂತ್ರಣ ಹೊಂದಿದ್ದಾರೆ. ಹಾಗಾಗಿ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆ ಸಂಬಂಧ ಸ್ಪಷ್ಟ ನಿರ್ಣಯ ತೆಗೆದುಕೊಳ್ಳುವ ಸಂಬಂಧ ಸರ್ಕಾರ ತ್ರಾಸಪಡುತ್ತಿದೆ.

ರಾಜಕೀಯ ನಾಯಕರ ಸಕ್ಕರೆ ಕಾರ್ಖಾನೆಗಳು

ಮಲ್ಲಿಕಾರ್ಜುನ ಕೋರೆ ಮಾಲೀಕತ್ವದ ಚಿದಾನಂದ ‌ಪ್ರಭು ಕೋರೆ ಸಹಕಾರಿ ಕಾರ್ಖಾನೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಲೀಕತ್ವದ ಹರ್ಷ ಶುಗರ್ಸ್, ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ, ಮಾಜಿ ಸಂಸದ ಪ್ರಭಾಕರ್ ಕೋರೆ ಮಾಲೀಕತ್ವದ ಶಿವಶಕ್ತಿ ಶುಗರ್ಸ್, ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಬೀರೇಶ್ವರ್ ಸಕ್ಕರೆ ಕಾರ್ಖಾನೆ, ಶ್ರೀಮಂತ ಪಾಟೀಲ್ ಅವರ ಅಥಣಿ ಫಾರ್ಮರ್ಸ್ ಶುಗರ್ಸ್, ನಿಖಿಲ್ ಕತ್ತಿ ಮಾಲೀಕತ್ವದ ವಿಶ್ವರಾಜ್ ಶುಗರ್ಸ್, ಮಾಜಿ ಸಂಸದ ರಮೇಶ್ ಕತ್ತಿ ಅವರ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆ, ಸಂಸದ ಅಣ್ಣಸಾಹೇಬ್ ಜೊಲ್ಲೆ ಮಾಲೀಕತ್ವದ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ, ಶಾಸಕ ಲಕ್ಷ್ಮಣ ಸವದಿ ಮಾಲೀಕತ್ವದ ಕೃಷ್ಣ ಸಹಕಾರ ಸಕ್ಕರೆ ಕಾರ್ಖಾನೆ, ಹೊಂದಿದ್ದಾರೆ.

ಹರಿಹಂತ ಶುಗರ್ಸ್, ಸೌಥ್ ಇಂಡಿಯನ್ ಶುಗರ್ಸ್, ಅಥಣಿ ಶುಗರ್ಸ್, ಬಸವಪ್ರಭು ಕೋರೆ ಸಕ್ಕರೆ ಕಾರ್ಖಾನೆ, ಐಇಐಡಿ ಕ್ಯಾರಿ ಲಿಮಿಟೆಡ್, ಧನಲಕ್ಷ್ಮಿ ಶುಗರ್ಸ್‌, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಸಕ್ಕರೆ ಕಾರ್ಖಾನೆ ಮಾಲಿಕರು ಭಾಗಿಯಾಗಿದ್ದಾರೆ.

ಸರ್ಕಾರಕ್ಕೆ ಪರೋಕ್ಷ ಸವಾಲು

ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ ಸಭೆಯಲ್ಲಿ ಬಹುತೇಕ ರಾಜಕೀಯ ನಾಯಕರೇ ಇರುವ ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ಬೇಡಿಕೆ ಈಡೀರಿಸಿದರೆ ಕಾರ್ಖಾನೆಗಳನ್ನು ನಡೆಸುವುದು ಕಷ್ಟ. ಒಂದು ವೇಳೆ ಅಂತಹ ಸಂದರ್ಭ ಬಂದರೆ ಸರ್ಕಾರವೇ ಕಾರ್ಖಾನೆಗಳನ್ನು ನಡೆಸಲಿ ಎಂದು  ಸವಾಲು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

"ಕಬ್ಬು ಬೆಳೆಗಾರರ ಕಣ್ಣೀರು ಒರೆಸಲು ನಾವು ಸಾಲ ಮಾಡಿ, ಬ್ಯಾಂಕ್‌ಗಳ ಬೆನ್ನು ಬಿದ್ದು ಕಾರ್ಖಾನೆಗಳನ್ನು ಸ್ಥಾಪಿಸಿದ್ದೇವೆ. ಆದರೆ, ರೈತರ ಹೆಸರಿನಲ್ಲಿ ಕೆಲವರು ನಮ್ಮನ್ನು ದರೋಡೆಕೋರರು ಎಂದು ಕರೆಯುತ್ತಿರುವುದು ನೋವು ತರುತ್ತಿದೆ. ಇದೆಲ್ಲಾ ಸಾಕಾಗಿದೆ. ನಷ್ಟದಲ್ಲಿಯೇ ನಾವು ಕಾರ್ಖಾನೆ ನಡೆಸಬೇಕೆಂದರೆ, ಕಾರ್ಖಾನೆಗಳನ್ನೇ ಸರ್ಕಾರಕ್ಕೆ ಬಿಟ್ಟುಕೊಡಲು ಸಿದ್ಧರಿದ್ದೇವೆ ಸರ್ಕಾರವೇ ನಡೆಸಲಿ ಅಥವಾ ಬೇರೆಯವರಿಗೆ ನೀಡಲಿ" ಎಂದು  ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಕಾರ್ಖಾನೆ ನಡೆಸುವುದು ಬಹಳ ಕಷ್ಟವಾಗಿದೆ. ಮಹಾರಾಷ್ಟ್ರದ ಕಬ್ಬಿನಲ್ಲಿ ʼರಿಕವರಿ ಪ್ರಮಾಣʼ ಶೇ.14ರಷ್ಟಿದೆ. ಆದರೆ ಇಲ್ಲಿನ ಕಬ್ಬಿನಿಂದ ಸಿಗುವ ರಿಕವರಿ ಪ್ರಮಾಣ ಕಡಿಮೆ ಇದ್ದರೂ, ಅದೇ ಹಣವನ್ನು ಇಲ್ಲಿನವರು ಕೇಳುತ್ತಾರೆ ಎಂದು ಅಳಲು ತೋಡಿಕೊಂಡರು. ಸಕ್ಕರೆ ಕಾರ್ಖಾನೆಗಳು ಸಕ್ಕರೆ, ವಿದ್ಯುತ್ ಮತ್ತು ಎಥೆನಾಲ್ ಉತ್ಪಾದನೆ ಮಾಡಿದರೂ, ಕಾರ್ಮಿಕರ ಸವಲತ್ತು, ಸಂಬಳ ಮತ್ತು ರೈತರ ಬೇಡಿಕೆಗಳನ್ನು ಪೂರೈಸುವುದರಿಂದ ನಿರಂತರ ನಷ್ಟದಲ್ಲಿಯೇ ಮುಂದುವರಿದಿವೆ ಎಂದು ಅವರು ಸಿಎಂ ಮುಂದೆ ತಮ್ಮ ಸಮಸ್ಯೆಗಳನ್ನು ವಿವರಿಸಿದ್ದಾರೆ.

Tags:    

Similar News