No To Child Pregnancy| ಅಪ್ರಾಪ್ತೆಯರ ಮೇಲಿನ ದೌರ್ಜನ್ಯ ತಡೆಗೆ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಅಗತ್ಯ

ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದರ ಅರಿವು ಮೂಡಿಸುವಲ್ಲಿ ನಾವು ವಿಫಲರಾಗಿದ್ದೇವೆ. ಶಾಲೆಗಳಲ್ಲಿ 'ಗುಡ್ ಟಚ್, ಬ್ಯಾಡ್ ಟಚ್' ಬಗ್ಗೆ ಹೇಳಿಕೊಡುವುದು ಕೇವಲ ಒಂದು ಕಾರ್ಯಕ್ರಮವಾಗಿ ಉಳಿಯಬಾರದು.;

Update: 2025-09-08 02:30 GMT

ವಿಧಾನಪರಿಷತ್‌ ಸದಸ್ಯ ಡಿ.ಎಸ್‌. ಅರುಣ್‌

Click the Play button to listen to article

ʼಮಗಳೇ ಎಚ್ಚರʼ ಎಂಬ ದ ಫೆಡರಲ್‌ ಕರ್ನಾಟಕದ ಅಭಿಯಾನಕ್ಕೆ ಜನಪ್ರತಿನಿಧಿಗಳೂ ಬೆಂಬಲ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ವಸತಿ ಶಾಲೆಗಳಲ್ಲಿ ಮುಗ್ಧ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಮತ್ತು ಗರ್ಭಿಣಿಯರಾಗುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ  ದ ಫೆಡರಲ್‌ ಕರ್ನಾಟಕ ಜಾಗೃತಿ ಅಭಿಯಾನ ಅರಂಭಿಸಿದೆ.

ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್  ಈ ಬಗ್ಗೆ ವಿಶೇಷ ಸಂದರ್ಶನವನ್ನು ನೀಡಿದ್ದಾರೆ. ರಾಜ್ಯಾದ್ಯಂತ ಜಾಗೃತಿ ಅಭಿಯಾನ ಅರಂಭಿಸಬೇಕಾದ ಅವಶ್ಯಕತೆಯ ಬಗ್ಗೆ ಅವರು ಒತ್ತಿಹೇಳಿದ್ದಾರೆ.

"ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ. 9ನೇ ತರಗತಿಯ ವಿದ್ಯಾರ್ಥಿನಿಯರು ಮಕ್ಕಳಿಗೆ ಜನ್ಮ ನೀಡುತ್ತಿರುವುದು ನಮ್ಮ ಸಮಾಜ ತಲೆತಗ್ಗಿಸುವಂತಹ ವಿಚಾರ. ಇದನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿಗೊಳಿಸುವುದರ ಜೊತೆಗೆ, ರಾಜ್ಯಾದ್ಯಂತ ಬೃಹತ್ ಜಾಗೃತಿ ಅಭಿಯಾನವನ್ನು ನಡೆಸುವ ತುರ್ತು ಅಗತ್ಯವಿದೆ" ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

 "ಇಂದಿನ ಡಿಜಿಟಲ್ ಯುಗದಲ್ಲಿ, ಮೊಬೈಲ್ ಮತ್ತು ಇಂಟರ್ನೆಟ್ ಬಳಕೆ ವ್ಯಾಪಕವಾಗಿದೆ. ಆದರೆ, ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದರ ಅರಿವು ಮೂಡಿಸುವಲ್ಲಿ ನಾವು ವಿಫಲರಾಗಿದ್ದೇವೆ. ಶಾಲೆಗಳಲ್ಲಿ 'ಗುಡ್ ಟಚ್, ಬ್ಯಾಡ್ ಟಚ್' ಬಗ್ಗೆ ಹೇಳಿಕೊಡುವುದು ಕೇವಲ ಒಂದು ಕಾರ್ಯಕ್ರಮವಾಗಿ ಉಳಿಯಬಾರದು, ಅದೊಂದು ನಿರಂತರ ಅಭಿಯಾನವಾಗಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.

ವೈಜ್ಞಾನಿಕ ರೀತಿಯ ಜಾಗೃತಿ ಕಾರ್ಯಕ್ರಮಕ್ಕೆ ಸಲಹೆ

"ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕವಾಗಿ, ಅವರ ಮನಸ್ಥಿತಿಗೆ ಅನುಗುಣವಾಗಿ ಅರಿವು ಮೂಡಿಸಬೇಕು. ಇಬ್ಬರನ್ನೂ ಒಟ್ಟಿಗೆ ಕೂರಿಸಿ ಹೇಳುವುದರಿಂದ ಕೆಲವರಿಗೆ ಮುಜುಗರ ಉಂಟಾಗಬಹುದು. ಆದ್ದರಿಂದ, ಮಕ್ಕಳ ತಜ್ಞರು, ಮನೋವೈದ್ಯರು ಮತ್ತು ಸ್ತ್ರೀರೋಗ ತಜ್ಞರ ತಂಡವನ್ನು ರಚಿಸಿ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ವೈಜ್ಞಾನಿಕವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಮಹತ್ವದ ಕಾರ್ಯಕ್ಕೆ ಖಾಸಗಿ ವೈದ್ಯರು ಕೂಡ ಸರ್ಕಾರದೊಂದಿಗೆ ಕೈಜೋಡಿಸಲು ಸಿದ್ಧರಿದ್ದಾರೆ" ಎಂದು ಅರುಣ್ ಭರವಸೆ ನೀಡಿದ್ದಾರೆ.

ಶಾಲಾ ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕುರಿತು ಒಂದು ಸಮಗ್ರ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು. ಈ ಸಾಮಾಜಿಕ ಪಿಡುಗನ್ನು ತೊಲಗಿಸಲು, ಸರ್ಕಾರದ ಎಲ್ಲಾ ಪ್ರಯತ್ನಗಳಿಗೂ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದ್ದಾರೆ.

Tags:    

Similar News