SSLC RESULT | ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪೂರ್ಣ: 8ಕ್ಕೆ ಫಲಿತಾಂಶ?

ಮೇ 8ರಂದು ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ

Update: 2024-05-02 07:03 GMT
ಮೇ 8ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ.
Click the Play button to listen to article

ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾಗಿದ್ದು, ಮೇ 8ರಂದು ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಿದ್ಧತೆ ನಡೆಸಿದೆ.

ಮಾರ್ಚ್ 25ರಿಂದ ಏ.6ರವರೆಗೆ ರಾಜ್ಯದ 2,750 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಆಯಾ ವಿಷಯಗಳ ಪರೀಕ್ಷೆಗಳು ಮುಗಿದ ಮರುದಿನವೇ ಮೌಲ್ಯ ಮಾಪನ ಕಾರ್ಯ ಆರಂಭಿಸಲಾಗಿತ್ತು. ಎಲ್ಲ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದ್ದು, ಅಂಕಗಳ ಕೂಡುವಿಕೆ ಕಾರ್ಯ ನಡೆಯುತ್ತಿದೆ. ಮೇ 6ರ ಒಳಗೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ಮೇ 7ರಂದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯಲಿರುವುದರಿಂದ 8ರಂದು ಫಲಿತಾಂಶ ಪ್ರಕಟಿಸಲು ಮಂಡಳಿ ನಿರ್ಧರಿಸಿದೆ.

4.41 ಲಕ್ಷ ಬಾಲಕರು, 4.28 ಲಕ್ಷ ಬಾಲಕಿಯರೂ ಸೇರಿದಂತೆ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಇದೇ ಮೊದಲ ಬಾರಿಗೆ ಮೂರು ಪರೀಕ್ಷೆಗಳನ್ನು ಪರಿಚಯಿಸಲಾಗಿದ್ದು, ಮೇ ಮೂರನೇ ವಾರದಲ್ಲೇ ಎರಡನೇ ಪರೀಕ್ಷೆ ಆರಂಭವಾಗಲಿದೆ. ಉತ್ತೀರ್ಣರಾದ ವಿದ್ಯಾರ್ಥಿಗಳು ಸಹ ಅಂಕಗಳನ್ನು ವೃದ್ಧಿಸಿಕೊಳ್ಳಲು ಉಳಿದ ಎರಡು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬರುತ್ತವೆಯೋ ಅದರ ಅಂಕಪಟ್ಟಿ ಪಡೆಯಬಹುದು.

Tags:    

Similar News