ಎಸ್ಸೆಸ್ಸೆಲ್ಸಿ ಪಾಸಾಗಲು ಇನ್ನು ಶೇ. 33 ಅಂಕ ಸಾಕು: ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ

ಈ ಸಂಬಂಧ ಸರ್ಕಾರವು ಗುರುವಾರ ಕರಡು ನಿಯಮಾವಳಿಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.;

Update: 2025-07-25 05:25 GMT
ಎಸ್‌ಎಸ್‌ಎಲ್‌ಸಿ

ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿರುವ ಕರ್ನಾಟಕ ಸರ್ಕಾರ, ಪಾಸಾಗಲು ಬೇಕಾದ ಕನಿಷ್ಠ ಅಂಕಗಳ ಮಿತಿಯನ್ನು ಸರಳಗೊಳಿಸಲು ಮುಂದಾಗದೆ. ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಎರಡನ್ನೂ ಸೇರಿಸಿ, ಪ್ರತಿ ವಿಷಯದಲ್ಲಿ ಒಟ್ಟಾರೆ ಶೇ.33ರಷ್ಟು ಅಂಕಗಳನ್ನು ಪಡೆದರೆ ಸಾಕು, ಅವರು ತೇರ್ಗಡೆಯಾಗಲಿದ್ದಾರೆ.

ಈ ಸಂಬಂಧ ಸರ್ಕಾರವು ಗುರುವಾರ ಕರಡು ನಿಯಮಾವಳಿಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಸಿಬಿಎಸ್ಇ ಮಾದರಿಯನ್ನು ಅನುಸರಿಸಿ ಜಾರಿಗೆ ತರಲು ಉದ್ದೇಶಿಸಿರುವ ಈ ಹೊಸ ಪದ್ಧತಿಯಲ್ಲಿ, ಪ್ರತಿ ವಿಷಯದ 100 ಅಂಕಗಳನ್ನು 80 ಅಂಕಗಳ ಲಿಖಿತ ಪರೀಕ್ಷೆ ಮತ್ತು 20 ಅಂಕಗಳ ಆಂತರಿಕ ಮೌಲ್ಯಮಾಪನ ಎಂದು ವಿಭಜಿಸಲಾಗಿದೆ.

ಹೊಸ ನಿಯಮದ ಪ್ರಕಾರ, ಲಿಖಿತ ಮತ್ತು ಆಂತರಿಕ ಅಂಕಗಳೆರಡನ್ನೂ ಒಟ್ಟುಗೂಡಿಸಿ 100ಕ್ಕೆ 33 ಅಂಕಗಳನ್ನು ಪಡೆದರೆ ವಿದ್ಯಾರ್ಥಿಯನ್ನು ತೇರ್ಗಡೆ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಒಬ್ಬ ವಿದ್ಯಾರ್ಥಿಯು ಆಂತರಿಕ ಮೌಲ್ಯಮಾಪನದಲ್ಲಿ ಪೂರ್ಣ 20 ಅಂಕಗಳನ್ನು ಪಡೆದರೆ, ಆತ ಲಿಖಿತ ಪರೀಕ್ಷೆಯಲ್ಲಿ 80ಕ್ಕೆ ಕೇವಲ 13 ಅಂಕಗಳನ್ನು ಗಳಿಸಿದರೂ ಆ ವಿಷಯದಲ್ಲಿ ಉತ್ತೀರ್ಣನಾಗುತ್ತಾನೆ.

ಇದಲ್ಲದೆ, ಒಟ್ಟಾರೆ ಫಲಿತಾಂಶಕ್ಕೂ ಈ ನಿಯಮ ಅನ್ವಯವಾಗಲಿದೆ. ಎಲ್ಲಾ ವಿಷಯಗಳನ್ನು ಸೇರಿಸಿ ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಯು ಪಾಸಾಗುತ್ತಾನೆ. ಒಂದು ವೇಳೆ, ಆತ ಯಾವುದಾದರೂ ವಿಷಯದಲ್ಲಿ ಶೇ.30ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದರೂ, ಒಟ್ಟಾರೆ ತೇರ್ಗಡೆಗೆ ಬೇಕಾದ ಅಂಕಗಳನ್ನು ಗಳಿಸಿದ್ದರೆ, ಆತನನ್ನು ತೇರ್ಗಡೆ ಎಂದು ಪರಿಗಣಿಸಲಾಗುವುದು.

ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸರ್ಕಾರವು 15 ದಿನಗಳ ಕಾಲಾವಕಾಶ ನೀಡಿದೆ. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಈ ಹೊಸ ನಿಯಮಾವಳಿಯನ್ನು ಅಧಿಕೃತವಾಗಿ ಜಾರಿಗೆ ತರಲಾಗುವುದು. ಈ ಬದಲಾವಣೆಯು ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಮತ್ತು ಫಲಿತಾಂಶದ ಪ್ರಮಾಣವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.

Tags:    

Similar News