SSLC Exams | ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ; 8,96,447 ವಿದ್ಯಾರ್ಥಿಗಳು ಭಾಗಿ
ಕಳೆದ ವರ್ಷ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿ ಮಾಡಿದ್ದರಿಂದ ಫಲಿತಾಂಶದಲ್ಲಿ ಕುಸಿತವಾಗಿತ್ತು. ಈ ಹಿನ್ನೆಲೆಯಲ್ಲಿ ಕನಿಷ್ಟ ಉತ್ತೀರ್ಣ ಅಂಕಗಳನ್ನು ಶೇ.35ರಿಂದ ಶೇ.25ಕ್ಕೆ ಇಳಿಸಲಾಗಿತ್ತು. ಆದರೆ, ಈ ವರ್ಷ ಹಿಂದಿನ ನಿಯಮದಂತೆ ಶೇ.35ಕ್ಕೆ ನಿಗದಿ ಮಾಡಲಾಗಿದೆ.;
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-01 ಇಂದಿನಿಂದ (ಶುಕ್ರವಾರ ಮಾ. 21) ಏಪ್ರಿಲ್ 4ರ ವರೆಗೂ ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಪ್ರಸಕ್ತ ಸಾಲಿನಲ್ಲಿ 15,881 ಶಾಲೆಗಳ 8,42,817 ವಿದ್ಯಾರ್ಥಿಗಳು 38,091 ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 15,539 ಖಾಸಗಿ ಶಾಲೆ ಸೇರಿ 8,96,447 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 3,35,468 ಬಾಲಕರು, 3,78,389 ಬಾಲಕಿಯರು ಪರೀಕ್ಷೆ ಬರೆಯಲಿದ್ದು, 2018 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
2818 ಸ್ಥಾನಿಕ, ಜಿಲ್ಲಾ ಹಂತದಲ್ಲಿ 410, ತಾಲ್ಲೂಕು ಹಂತದಲ್ಲಿ 1662, ವಿಚಕ್ಷಣಾ ದಳವನ್ನು ಪರೀಕ್ಷಾ ಭದ್ರತಾ ದೃಷ್ಟಿಯಿಂದ ನೇಮಿಸಲಾಗಿದೆ. 1117 ಪ್ರಶ್ನೆಪತ್ರಿಕೆ ವಿತರಣಾ ಮಾರ್ಗಗಳನ್ನು ನಿಗದಿ ಮಾಡಲಾಗಿದೆ. ಈ ಬಾರಿ 65000 ಮೌಲ್ಯಮಾಪಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಂಡಳಿ ತಿಳಿಸಿದೆ.
ವೆಬ್‌ಕಾಸ್ಟಿಂಗ್
ಈ ಬಾರಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಇರಲಿದ್ದು, ಪ್ರತಿ ಜಿಲ್ಲೆಯಲ್ಲೂ ಆಯಾ ಜಿಲ್ಲಾಧಿಕಾರಿಗಳು ಪರೀಕ್ಷಾ ಕೇಂದ್ರಗಳ ಸ್ಥಿತಿಗತಿಗಳನ್ನು ವೀಕ್ಷಿಸಲಿದ್ದಾರೆ. ಪರೀಕ್ಷಾ ಸಮಯದಲ್ಲಿ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಪರಿಗಣಿಸಿ ಜೆರಾಕ್‌್ಸ ಸೆಂಟರ್, ಸೈಬರ್ ಕೇಂದ್ರಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಉತ್ತೀರ್ಣರಾಗಲು ಶೇ.35 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಕಳೆದ ವರ್ಷ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿ ಮಾಡಿದ್ದರಿಂದ ಫಲಿತಾಂಶದಲ್ಲಿ ಕುಸಿತವಾಗಿತ್ತು. ಈ ಹಿನ್ನೆಲೆಯಲ್ಲಿ ಕನಿಷ್ಟ ಉತ್ತೀರ್ಣ ಅಂಕಗಳನ್ನು ಶೇ.35ರಿಂದ ಶೇ.25ಕ್ಕೆ ಇಳಿಸಲಾಗಿತ್ತು. ಆದರೆ, ಈ ವರ್ಷ ಹಿಂದಿನ ನಿಯಮದಂತೆ ಶೇ.35ಕ್ಕೆ ನಿಗದಿ ಮಾಡಲಾಗಿದ್ದು, ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶದತ್ತ ಗಮನ ಹರಿಸಬೇಕೆಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.