ಮುಸ್ಲಿಂ ಶಿಕ್ಷಕನ ಮೇಲೆ ದ್ವೇಷಕ್ಕೆ ಶಾಲೆಯ ನೀರಿನ ಟ್ಯಾಂಕ್​ಗೆ ವಿಷ ಬೆರೆಸಿದ ಶ್ರೀರಾಮ ಸೇನೆಯ ಕಾರ್ಯಕರ್ತರ ಸೆರೆ

ಪೊಲೀಸರು ಹೂಲಿಕಟ್ಟಿ ಗ್ರಾಮದ ಶ್ರೀರಾಮ ಸೇನೆಯ ಸಾಗರ ಪಾಟೀಲ, ಕೃಷ್ಣ ಮಾದರ ಮತ್ತು ನಾಗನಗೌಡ ಪಾಟೀಲ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.;

Update: 2025-08-03 07:22 GMT

ರಾಜ್ಯವನ್ನು ಬೆಚ್ಚಿಬೀಳಿಸುವ ಎರಡು ಪ್ರತ್ಯೇಕ ಘಟನೆಗಳಲ್ಲಿ, ದುಷ್ಕರ್ಮಿಗಳು ಸರ್ಕಾರಿ ಶಾಲೆಗಳ ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ವಿಷ ಬೆರೆಸಿ ಅಮಾಯಕ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಮತ್ತು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕುಗಳಲ್ಲಿ ಈ ಘಟನೆಗಳು ವರದಿಯಾಗಿದ್ದು, ಮುಖ್ಯ ಶಿಕ್ಷಕರ ಮೇಲಿನ ವೈಯಕ್ತಿಕ ದ್ವೇಷ ಮತ್ತು ಕೋಮು ದ್ವೇಷಕ್ಕೆ ಶ್ರೀರಾಮ ಸೇನೆಯ ಕಾರ್ಯಕರ್ತರು ಕೃತ್ಯ ಎಸಗಿರುವುದು ಗೊತ್ತಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜುಲೈ 14 ರಂದು ನಡೆದ ಘಟನೆಯು ವ್ಯವಸ್ಥಿತ ಸಂಚಿನ ಫಲವಾಗಿತ್ತು ಎಂಬ ಆಘಾತಕಾರಿ ಸತ್ಯವನ್ನು ಪೊಲೀಸರು ಹೊರಗೆಡವಿದ್ದಾರೆ. ಅಂದು ಮಧ್ಯಾಹ್ನದ ಬಿಸಿಯೂಟದ ನಂತರ ವಿಷ ಬೆರೆಸಿದ ನೀರನ್ನು ಕುಡಿದು 11 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಹೂಲಿಕಟ್ಟಿ ಗ್ರಾಮದ ಶ್ರೀರಾಮಸೇನೆಯ ತಾಲೂಕು ಘಟಕದ ಅಧ್ಯಕ್ಷ ಸಾಗರ ಪಾಟೀಲ, ಕೃಷ್ಣ ಮಾದರ ಮತ್ತು ನಾಗನಗೌಡ ಪಾಟೀಲ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಸುಲೇಮಾನ್ ಗೋರಿನಾಯ್ಕ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಕಳೆದ 13 ವರ್ಷಗಳಿಂದ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದನ್ನು ಸಹಿಸದ ಆರೋಪಿಗಳು, ಅವರನ್ನು ಶಾಲೆಯಿಂದ ವರ್ಗಾವಣೆ ಮಾಡಿಸುವ ದುರುದ್ದೇಶದಿಂದ ಈ ಸಂಚು ರೂಪಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಸಂಚು ರೂಪಿಸಿದ್ದು ಹೀಗೆ

ಪ್ರಮುಖ ಆರೋಪಿ ಸಾಗರ ಪಾಟೀಲ, ಕೃಷ್ಣ ಮಾದರನ ಪ್ರೇಮ ಪ್ರಕರಣವನ್ನು ಮುಂದಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿದ್ದ. ನಂತರ, ಕೃಷ್ಣ ಮಾದರನು ಶಾಲೆಯ ಬಾಲಕನಿಗೆ ಚಾಕಲೇಟ್, ಕುರುಕುರೆ ಹಾಗೂ 500 ರೂ.ಹಣದ ಆಮಿಷವೊಡ್ಡಿ, ಕೀಟನಾಶಕವನ್ನು ನೀರಿನ ಟ್ಯಾಂಕ್‌ಗೆ ಹಾಕುವಂತೆ ಪ್ರಚೋದಿಸಿದ್ದ. ಪೊಲೀಸರ ತನಿಖೆ ವೇಳೆ ಬಾಲಕ ಸತ್ಯ ಒಪ್ಪಿಕೊಂಡಿದ್ದು, ಅವನನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ. ಅದೃಷ್ಟವಶಾತ್, ಬಾಲಕನು ವಿಷವನ್ನು ಟ್ಯಾಂಕ್‌ಗೆ ಸುರಿಯುವಾಗ ಅರ್ಧದಷ್ಟು ಹೊರಗೆ ಚೆಲ್ಲಿದ್ದರಿಂದ ಮತ್ತು ಮಕ್ಕಳು ನೀರು ಕುಡಿಯುವಾಗ ಅದರ ವಾಸನೆಯಿಂದ ತಕ್ಷಣ ಉಗುಳಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಹೊಸನಗರ ಪ್ರಕರಣ: ತನಿಖೆಗೆ ನಾಲ್ಕು ವಿಶೇಷ ತಂಡ

ಇದೇ ರೀತಿಯ ಘಟನೆಯು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೂವಿನಕೋಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಯೂ ನಡೆದಿದೆ. ಇಲ್ಲಿನ ಶಾಲೆಯ ಓವರ್‌ಹೆಡ್ ಟ್ಯಾಂಕ್‌ಗೆ ವಿಷಕಾರಿ ವಸ್ತು ಬೆರೆಸಿರುವುದು ಪತ್ತೆಯಾಗಿದೆ.

ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಚುರುಕುಗೊಳಿಸುವಂತೆ ಸೂಚಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದು, ಹಲವು ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲಾ ಎಸ್‌ಪಿ ಮಿಥುನ್ ಕುಮಾರ್ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Similar News