Sonu Nigam: ಕನ್ನಡದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಸೋನು ನಿಗಮ್‌, ಎಸ್‌ಬಿಐ ಸಿಬ್ಬಂದಿಯ ಉದ್ಧಟತನ ಸಮರ್ಥಿಸಿ ಪೋಸ್ಟ್

ಚಂದಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್‌ನ ಕನ್ನಡೇತರ ಸಿಬ್ಬಂದಿಯ ಉದ್ಧಟ ವರ್ತನೆಯನ್ನು ಸಮರ್ಥಿಸುವ ಮೂಲಕ ಅವರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.;

Update: 2025-05-22 05:19 GMT

ಗಾಯಕ ಸೋನು ನಿಗಮ್ ಮತ್ತೊಮ್ಮೆ ಕನ್ನಡದ ವಿಚಾರದಲ್ಲಿ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಈ ಹಿಂದೆ ಕನ್ನಡಾಭಿಮಾನಿಗಳನ್ನು ಪಹಲ್ಗಾಮ್ ಭಯೋತ್ಪಾದಕರಿಗೆ ಹೋಲಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಸೋನು, ಈಗ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವಾಗ್ವಾದಕ್ಕಿಳಿದಿದ್ದಾರೆ. ಕನ್ನಡ ಸಿನಿಮಾ ಹಿಂದಿಗೆ ಡಬ್ ಮಾಡಬಾರದು ಎಂದು ತಾಕೀತು ಮಾಡಿದ್ದಾರೆ.

ಚಂದಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್‌ನ ಕನ್ನಡೇತರ ಸಿಬ್ಬಂದಿಯ ಉದ್ಧಟ ವರ್ತನೆಯನ್ನು ಸಮರ್ಥಿಸುವ ಮೂಲಕ ಅವರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಚಂದಾಪುರದ ಎಸ್‌ಬಿಐ ಶಾಖೆಯ ವ್ಯವಸ್ಥಾಪಕರೊಬ್ಬರು ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ ವಿಡಿಯೋ ವೈರಲ್ ಆದ ನಂತರ ಈ ವಿವಾದ ಭುಗಿಲೆದ್ದಿತ್ತು. ಈ ಘಟನೆಯನ್ನು ಖಂಡಿಸಿದ್ದ ತೇಜಸ್ವಿ ಸೂರ್ಯ, ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸಲು ಸ್ಥಳೀಯ ಸಿಬ್ಬಂದಿಯನ್ನು ನಿಯೋಜಿಸುವ ಮಹತ್ವವನ್ನು ಒತ್ತಿ ಹೇಳಿದ್ದರು. "ನೀವು ಕರ್ನಾಟಕದಲ್ಲಿ, ವಿಶೇಷವಾಗಿ ಬ್ಯಾಂಕಿಂಗ್‌ನಂತಹ ವಲಯದಲ್ಲಿ ಗ್ರಾಹಕ ಸಂಪರ್ಕ ಸಾಧಿಸುವ ಕೆಲಸ ಮಾಡುತ್ತಿದ್ದರೆ, ಗ್ರಾಹಕರಿಗೆ ಅವರಿಗೆ ತಿಳಿದಿರುವ ಭಾಷೆಯಲ್ಲಿ ಸಂವಹನ ನಡೆಸುವುದು ಮುಖ್ಯ. ಈ ರೀತಿ ಒರಟಾಗಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕೆಲಸ ಮಾಡುವ ಬ್ಯಾಂಕುಗಳು ಕನ್ನಡದಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸಬೇಕು" ಎಂದು ತೇಜಸ್ವಿ ಸೂರ್ಯ ಪೋಸ್ಟ್ ಮಾಡಿದ್ದರು.

ಸೂರ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋನು ನಿಗಮ್, ತಮ್ಮ ಟ್ವೀಟ್‌ಗಳಲ್ಲಿ (ಹಿಂದಿಯಲ್ಲಿ) ತೇಜಸ್ವಿ ಸೂರ್ಯ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. "ಹಾಗಿದ್ದರೆ ನೀವು ಕನ್ನಡ ಫಿಲಂಗಳನ್ನು ಹಿಂದಿಗೆ ಡಬ್ ಮಾಡಬಾರದು. ಸಾಫ್ಟ್‌ವೇರ್ ಕಂಪನಿಗಳಲ್ಲೂ ಕನ್ನಡ ಬಲ್ಲವರನ್ನು ಮಾತ್ರ ನಿಯೋಜಿಸಬೇಕು. ಅಮೆರಿಕನ್ ಕ್ಲೈಂಟ್‌ಗಳು ತಮ್ಮ ಯೋಜನೆಗಳನ್ನು ಕರ್ನಾಟಕದಲ್ಲಿ ಪೂರ್ಣಗೊಳಿಸಲು ಬಯಸಿದರೆ, ಅವರು ಕನ್ನಡದಲ್ಲಿಯೂ ಮಾತನಾಡಬೇಕು. ಇದರಲ್ಲಿ ಯಾವುದೇ ರಾಜಿ ಇರಬಾರದು. ಸರಿಯೇ ತೇಜಸ್ವಿ ಅವರೇ?" ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೊಬ್ಬ ಭಾಷಾ ಯೋಧರೇ; ಸೋನು ಪ್ರಶ್ನೆ

ಮತ್ತೊಂದು ಪೋಸ್ಟ್‌ನಲ್ಲಿ ಸೋನು ನಿಗಮ್, ತೇಜಸ್ವಿ ಸೂರ್ಯ ಅವರನ್ನು "ನೀವು ಇನ್ನೊಬ್ಬ ಭಾಷಾ ಯೋಧನೇ" ಎಂದು ಪ್ರಶ್ನಿಸಿದ್ದಾರೆ. "ಹಾಗಾದರೆ ಕನ್ನಡ ಚಲನಚಿತ್ರಗಳನ್ನು ಹಿಂದಿಯಲ್ಲಿ ಡಬ್ ಮಾಡಬೇಡಿ! ಕನ್ನಡ ಚಲನಚಿತ್ರಗಳನ್ನು ಭಾರತದಾದ್ಯಂತ ಬಿಡುಗಡೆ ಮಾಡಬೇಡಿ! ಕನ್ನಡ ಚಲನಚಿತ್ರ ತಾರೆಯರಿಗೆ ಇದನ್ನು ಹೇಳಲು ನಿಮಗೆ ಧೈರ್ಯವಿದೆಯೇ ಅಥವಾ ನೀವು ಕೇವಲ ಇನ್ನೊಬ್ಬ ಭಾಷಾ ಯೋಧನೇ" ಎಂದು ಸವಾಲು ಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಖಂಡನೆ

ಕನ್ನಡ ಮಾತನಾಡಲು ನಿರಾಕರಿಸಿದ ಎಸ್‌ಬಿಐ ವ್ಯವಸ್ಥಾಪಕರ ವರ್ತನೆಯನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯಅವರೂ ಖಂಡಿಸಿದ್ದರು. "ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು" ಎಂದು ಹೇಳಿದ್ದರು. ಮುಖ್ಯಮಂತ್ರಿಗಳ ಈ ಹೇಳಿಕೆಯ ಕೆಲವೇ ಗಂಟೆಗಳಲ್ಲಿ ಸೋನು ನಿಗಮ್ ಅವರ ಟ್ವೀಟ್‌ಗಳು ಬಂದಿವೆ.

ಈ ಹಿಂದೆಯೂ ಬೆಂಗಳೂರಿನಲ್ಲಿ ನಡೆದ ಸಂಗೀತ ಕಛೇರಿಯೊಂದರಲ್ಲಿ ಸೋನು ನಿಗಮ್ ಕನ್ನಡಿಗರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು. ಆಗ ಕನ್ನಡಾಭಿಮಾನಿಗಳ ವಿನಂತಿಗಳನ್ನು ಪಹಲ್ಗಾಮ್ ದಾಳಿಗೆ ಲಿಂಕ್ ಮಾಡಿದ್ದ ಅವರ ಹೇಳಿಕೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅವರನ್ನು ನಿಷೇಧಿಸಿತ್ತು. ಬಳಿಕ ಸೋನು ನಿಗಮ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು. ಇದೀಗ ಹೊಸ ವಿವಾದದೊಂದಿಗೆ ಸೋನು ನಿಗಮ್ ಮತ್ತೆ ಕನ್ನಡದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Tags:    

Similar News