ಸಾಹಿತಿ ಸಂಶೋಧಕ ಚಂದ್ರಕಾಂತ ಬಿಜ್ಜರಗಿ ಅವರಿಗೆ ಕನಕಶ್ರೀ ಪ್ರಶಸ್ತಿ
ಚಂದ್ರಕಾಂತ ಬಿಜ್ಜರಗಿ ಅವರು ದರ್ಪಣ ವಾರಪತ್ರಿಕೆಯ ಸಂಪಾದಕರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಇವರು ಹಾಲುಮತ ಸನಾತನ ಧರ್ಮ, ಕುರುಬರ ಕುಲ ಪುತ್ರ ಚಂದ್ರಗುಪ್ತ ಮೌರ್ಯ , ದಾರ್ಶನಿಕ ಕವಿ ಕನಕದಾಸ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಹಿರಿಯ ಸಾಹಿತಿ ಸಂಶೋಧಕ ಚಂದ್ರಕಾಂತ ಬಿಜ್ಜರಗಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತಿ ವರ್ಷ ನೀಡುವ ಪ್ರತಿಷ್ಠಿತ 'ಕನಕಶ್ರೀ' ಪ್ರಶಸ್ತಿಗೆ ಈ ಸಾಲಿನಲ್ಲಿ ವಿಜಯಪುರದ ಹಿರಿಯ ಸಾಹಿತಿ ಮತ್ತು ಸಂಶೋಧಕ ಚಂದ್ರಕಾಂತ ಬಿಜ್ಜರಗಿ ಅವರು ಆಯ್ಕೆಯಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಪ್ರಕಟಿಸಿದ್ದಾರೆ.
ಚಂದ್ರಕಾಂತ ಬಿಜ್ಜರಗಿ ಅವರು ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. 'ದರ್ಪಣ' ವಾರಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು, 'ಹಾಲುಮತ ಸನಾತನ ಧರ್ಮ', 'ಕುರುಬರ ಕುಲ ಪುತ್ರ ಚಂದ್ರಗುಪ್ತ ಮೌರ್ಯ' ಹಾಗೂ 'ದಾರ್ಶನಿಕ ಕವಿ ಕನಕದಾಸ' ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಅವರ ಸಂಶೋಧನಾ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡು ಮನ್ನಣೆ ಗಳಿಸಿವೆ. ಡಾ. ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಶ್ರೀ ಬಿಜ್ಜರಗಿ ಅವರನ್ನು ಈ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಸಚಿವರು ತಿಳಿಸಿದ್ದಾರೆ.
ನವೆಂಬರ್ 8ರಂದು ಪ್ರಶಸ್ತಿ ಪ್ರದಾನ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 8ನೇ ನವೆಂಬರ್ 2025, ಶನಿವಾರದಂದು ಆಯೋಜಿಸಲಾಗಿರುವ 'ಸಂತ ಶ್ರೇಷ್ಠ ಕನಕದಾಸ ಜಯಂತಿ' ರಾಜ್ಯಮಟ್ಟದ ಸಮಾರಂಭದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಚಂದ್ರಕಾಂತ ಬಿಜ್ಜರಗಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಕನಕದಾಸರ ಪುತ್ಥಳಿ, ಪ್ರಶಸ್ತಿ ಫಲಕ ಹೊಂದಿರಲಿದೆ.