ತುಮಕೂರು ಲೋಕಸಭಾ ಕ್ಷೇತ್ರ | ತಮ್ಮವರು, ಹೊರಗಿನವರ ನಡುವೆ ಯಾರ ಪಾಲಾಗಲಿದೆ ಕಲ್ಪತರು ಸೀಮೆ?

ತುಮಕೂರಿನಲ್ಲಿ ಕಾಂಗ್ರೆಸ್‌ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಜೆಪಿಯ ಲಿಂಗಾಯಿತ ಅಭ್ಯರ್ಥಿಯ ಪರ ಜೆಡಿಎಸ್‌ ಭರ್ಜರಿ ಪ್ರಚಾರ ನಡೆಸುತ್ತಿದೆ. ಆ ಮೂಲಕ 2019 ರ ದೇವೇಗೌಡರ ಸೋಲಿಗೆ ಉತ್ತರ ನೀಡಲು ಹವಣಿಸುತ್ತಿದೆ.;

Update: 2024-04-23 06:27 GMT

ಹಲವು ವಿಚಾರಗಳಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರದ ಹಣಾಹಣಿ ಈ ಬಾರಿ ಕುತೂಹಲ ಕೆದರಿಸಿದೆ. ರಾಜ್ಯದ ಪ್ರಮುಖ ಮತ್ತು ಪ್ರಬಲ ಎರಡು ಜಾತಿಯ ಅಭ್ಯರ್ಥಿಗಳು ಈ ಬಾರಿ ಮುಖಾಮುಖಿಯಾಗಿದ್ದು, ಜೆಡಿಎಸ್-ಬಿಜೆಪಿ ಮೈತ್ರಿ ಕೂಡಾ ಈ ಕ್ಷೇತ್ರದಲ್ಲಿ ಗಣನೀಯ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಪಕ್ಷದಿಂದ ಒಕ್ಕಲಿಗ ಸಮುದಾಯದ ಮುದ್ದು ಹನುಮೇಗೌಡ ಅವರು ಕಣಕ್ಕಿಳಿದಿದ್ದರೆ, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಲಿಂಗಾಯತ ಸಮುದಾಯದ ವಿ. ಸೋಮಣ್ಣ ಅವರು ಕಣದಲ್ಲಿದ್ದಾರೆ. ಈ ಇಬ್ಬರು ಅನುಭವಿ ರಾಜಕಾರಣಿಗಳ ಸೆಣಸಾಟಕ್ಕೆ ತುಮಕೂರು ಸಾಕ್ಷಿಯಾಗಲಿದ್ದು, ಕಳೆದ ಬಾರಿ ತುಮಕೂರಿನಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರು ಈ ಬಾರಿ ಇನ್ನಷ್ಟು ಹುರುಪಿನಿಂದ ತಮ್ಮನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಬಾರಿಯ ಸೋಲಿನ ಅವಮಾನಕ್ಕೆ ತಕ್ಕ ಉತ್ತರ ನೀಡುವ ಉತ್ಸಾಹದಲ್ಲಿದ್ದಾರೆ.

ಹೊರಗಿನವರಾದ ಸೋಮಣ್ಣ ಅವರಿಗೆ ಲೋಕಸಭಾ ಸ್ಥಾನವನ್ನು ಬಿಟ್ಟುಕೊಡಲಾಗುವುದೇ? ಎಂದು ಕಾಂಗ್ರೆಸ್‌ ನಾಯಕರು ಕೂಡಾ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದು, ಮುದ್ದೇಹನುಮೇಗೌಡರ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿಗೆ ವರವಾಗುವ ಜಾತಿ ಸಮೀಕರಣ

ಜೆಡಿಎಸ್‌ ಕಳೆದ ಬಾರಿ ಕಾಂಗ್ರೆಸ್‌ ನೊಂದಿಗೆ ದೋಸ್ತಿ ಮಾಡಿಕೊಂಡಿದ್ದರೆ, ಈ ಬಾರಿ ಕಳೆದ ಬಾರಿಯ ವೈರಿಯಾಗಿದ್ದ ಬಿಜೆಪಿಯೊಂದಿಗೆ ನೆಂಟಸ್ತಿಕೆ ಮಾಡಿಕೊಂಡಿದೆ. 2019 ರ ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್‌ ನಾಯಕರೇ ಕಾರಣ ಎಂದು ಕಣ್ಣೀರು ಹಾಕಿ ದೂರಿದ್ದ ದೇವೇಗೌಡ ಅವರು, ಈ ಬಾರಿ ಕೈ ಅಭ್ಯರ್ಥಿಯನ್ನು ಸೋಲಿಸಲು ಶಪಥ ಮಾಡಿದ್ದಾರೆ.

2019 ರಲ್ಲಿ ದೇವೇಗೌಡರ ಸೋಲನ್ನು ಒಕ್ಕಲಿಗ ಸಮುದಾಯದ ಸ್ವಾಭಿಮಾನದ ಪ್ರಶ್ನೆಯೆಂಬಂತೆ ಬಿಂಬಿಸಲು ದಳ-ಕಮಲ ಮೈತ್ರಿಯು ಪ್ರಯತ್ನ ಪಡುತ್ತಿದ್ದು, ದೇವೇಗೌಡರ ನಾಮʼಬಲʼದಿಂದಲೇ ತನ್ನ ಅಭ್ಯರ್ಥಿಯನ್ನು ಗೆಲುವಿನ ದಡ ಸೇರಿಸಲು ಪ್ರಯತ್ನ ನಡೆಯುತ್ತಿದೆ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಇದ್ದರೂ, ಒಳ ಒಪ್ಪಂದದಿಂದಾಗಿ ದೇವೇಗೌಡರು ಸೋಲನುಭವಿಸಬೇಕಾಗಿತ್ತು. ಆ ತಪ್ಪು ಪುನರಾವರ್ತನೆ ಆಗದಂತೆ ಎರಡೂ ಪಕ್ಷಗಳು ಎಚ್ಚರಿಕೆಯಲ್ಲಿವೆ.

ತುಮಕೂರಿನಲ್ಲಿ ಲಿಂಗಾಯತ-ಒಕ್ಕಲಿಗ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಿಜೆಪಿ ಮತಬ್ಯಾಂಕ್‌ ಆಗಿರುವ ಲಿಂಗಾಯತರ ಮತಗಳು, ತಮ್ಮ ಪರ ಬೀಳುವ ನಿರೀಕ್ಷೆಯಲ್ಲಿ ಸೋಮಣ್ಣ ಇದ್ದಾರೆ. ಎದುರಾಳಿ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರಾದರೂ, ಜೆಡಿಎಸ್‌, ದೇವೇಗೌಡರ ಸೋಲು ಮೊದಲಾದ ಅಂಶಗಳ ಆಧಾರದ ಮೇಲೆ ಒಕ್ಕಲಿಗ ಮತಗಳನ್ನೂ ಬಾಚಿಕೊಳ್ಳುವ ತಂತ್ರಗಾರಿಕೆ ಸೋಮಣ್ಣ ಅವರಲ್ಲಿ ಕಾಣುತ್ತಿದೆ. ಹಾಗಾಗಿಯೇ, ʼದೇವೇಗೌಡರ ಗೆಲುವಿಗೆ ಕ್ರಮ ಸಂಖ್ಯೆ…ʼ ಎಂದು ಜೆಡಿಎಸ್‌ ಕೂಡಾ ಪ್ರಚಾರ ನಡೆಸುತ್ತಿದೆ.

ಒಕ್ಕಲಿಗ-ಲಿಂಗಾಯತ ಮತಗಳನ್ನು ಸೆಳೆಯುವುದು ಮಾತ್ರವಲ್ಲದೆ, ಇನ್ನೊಂದೆಡೆ, ಲಂಬಾಣಿ, ಭೋವಿ, ಎಸ್‌ಸಿ (ಎಡಗೈ) ಮತ್ತು ಕಾಡು ಗೊಲ್ಲರಂತಹ ಸಮುದಾಯಗಳ ನಾಯಕರು ಕೂಡಾ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕೈ ಹಿಡಿಯಲು ಮುಂದಾಗಿದ್ದಾರೆ.

ರಾಜ್ಯಸಭೆಯಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಪ್ರಸ್ತಾಪಿಸಿದ್ದು, ಚುನಾವಣೆಯಲ್ಲೂ ಈ ವಿಚಾರವನ್ನು ಮುಂದಿಟ್ಟು ಸಮುದಾಯದ ಮುಖಂಡರ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಸಿದ್ಧರಾಮಯ್ಯ ಸಂಪುಟದಲ್ಲಿ ಲಂಬಾಣಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಲಿಲ್ಲ ಎಂಬ ಅಸಮಾಧಾನವನ್ನು ಕೂಡಾ ತಮ್ಮ ಪರ ಮತಗಳಾಗಿ ಪರಿವರ್ತಿಸಲು ದಳ-ಕಮಲ ಪಡೆ ಸಜ್ಜಾಗಿದೆ.

2023 ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣಾ ಕ್ಷೇತ್ರಗಳಿಂದ ಸೋತ ಬಳಿಕ ರಾಜಕೀಯ ಅಸ್ತಿತ್ವಕ್ಕಾಗಿ ಮಾಡು ಇಲ್ಲವೇ ಮಡಿ ಎಂಬ ಹೋರಾಟದಲ್ಲಿರುವ ಸೋಮಣ್ಣ ಅವರು ಮಾಜಿ ಸಚಿವ ಜೆ ಸಿ ಮಾಧುಸ್ವಾಮಿಯ ಅಸಮಾಧಾನದ ಬಗ್ಗೆ ಆತಂಕಿತರಾಗಿದ್ದಾರೆ. ಸೋಮಣ್ಣ ಹೊರಗಿನವರು ಎಂಬ ವಿಚಾರದ ಮೇಲೆ ಟಿಕೆಟ್‌ ಹಂಚಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದ ಮಾಧುಸ್ವಾಮಿಯವರ ಮನವೊಲಿಕೆ ಮಾಡಲಾಗಿದೆಯಾದರೂ, ಅಸಮಾಧಾನ ಹೊಗೆ ಆಂತರ್ಯದಲ್ಲಿ ಇದೆ ಎಂಬುದು ಮಾಧುಸ್ವಾಮಿ ಆಪ್ತರ ಮಾತು.

ಕಾಂಗ್ರೆಸ್‌ ಅಭ್ಯರ್ಥಿ ಬಲವೇನು?

ಕಾಂಗ್ರೆಸ್‌ ಅಭ್ಯರ್ಥಿ ಮುದ್ದು ಹನುಮೇಗೌಡ ಅವರು ಸ್ಥಳೀಯರು ಎಂಬುವುದೇ ಅವರ ಮೊದಲ ಪ್ಲಸ್‌ ಪಾಯಿಂಟ್.‌ ಸೋಮಣ್ಣ ಅವರು ಹೊರಗಿನವರು ಎಂದು ಟಿಕೆಟ್‌ ನೀಡುವ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ನಾಯಕರು ವ್ಯಕ್ತಪಡಿಸಿದ ಅಸಮಾಧಾನ ಕ್ಷೇತ್ರದ ಮತದಾರರ ಮನಸಿನಿಂದ ಇನ್ನೂ ಸಂಪೂರ್ಣವಾಗಿ ಮಾಯವಾಗಿಲ್ಲ. ಅಲ್ಲದೆ, ಮುದ್ದು ಹನುಮೇಗೌಡರು ಕ್ಷೇತ್ರದಲ್ಲಿ ಟಿಕೆಟ್‌ ಘೋಷಣೆಯಾಗುವ ಮೊದಲೇ ಓಡಾಡಿ ಸ್ಥಳೀಯ ಮುಖಂಡರ ವಿಶ್ವಾಸ ಗಳಿಸಿಕೊಂಡಿದ್ದರು.

ಅಲ್ಲದೆ, ಲಿಂಗಾಯತ ಅಭ್ಯರ್ಥಿಯ‌ ಎದುರು ನಿಂತಿರುವ ಒಕ್ಕಲಿಗ ಪ್ರತಿನಿಧಿ ಎಂಬಂತೆಯೂ ಸಮುದಾಯದ ಒಳಗೆ ಪ್ರಚಾರ ನಡೆಸಲಾಗುತ್ತಿದೆ. ಕಳೆದ, ವಿಧಾನಸಭೆ ಚುನಾವಣೆ ವೇಳೆ, ಒಕ್ಕಲಿಗ ಡಿಕೆ ಶಿವಕುಮಾರ್‌ ಅವರು ಸಿಎಂ ಆಗಲಿದ್ದಾರೆಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಒಕ್ಕಲಿಗರು ʼಕೈʼ ಹಿಡಿದಿದ್ದರು. ಈ ಬಾರಿ ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ ಎನ್ನುವುದು ಫಲಿತಾಂಶದ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ಕಳೆದ ಬಾರಿ ದೇವೇಗೌಡರು ಸೋಲಲು ಮುದ್ದು ಹನುಮೇಗೌಡರೂ ಕಾರಣ ಎಂಬ ಮಾತುಗಳು ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವುದೂ ಅವರ ಹಿನ್ನಡೆಗೆ ಕಾರಣವಾಗುವ ಸಾಧ್ಯತೆ ಇದೆ. ಅದಾಗ್ಯೂ, ಡಿಕೆ ಸಹೋದರರು ಒಕ್ಕಲಿಗರೊಳಗೆ ತಮ್ಮ ಅಭ್ಯರ್ಥಿಯ ಪರವಾಗಿ ಚೌಕಾಶಿ ನಡೆಸುತ್ತಿದ್ದು, ಒಂದೆಡೆ ಮುದ್ದು ಹನುಮೇಗೌಡ, ಡಿಕೆ ಸಹೋದರರು ಮತ್ತೊಂದೆಡೆ ಜೆಡಿಎಸ್‌ ಮತ್ತು ದೇವೇಗೌಡ ಅವರ ನಡುವೆ ಒಕ್ಕಲಿಗರ ಮತ ಸೆಳೆಯಲು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

ʼರಾಜ್ಯಕ್ಕೆ ಕುಮಾರಣ್ಣ, ಕೇಂದ್ರಕ್ಕೆ ಮೋದಿʼ ಎಂದು ಈ ಹಿಂದೆ ತಿರುಗಾಡುತ್ತಿದ್ದ ಒಕ್ಕಲಿಗ ಹುಡುಗರು ಈ ಬಾರಿ ಮಗುಮ್ಮಾಗಿ ಜೆಡಿಎಸ್-ಬಿಜೆಪಿ ಅಭ್ಯರ್ಥಿಯನ್ನೇ ಕೈ ಹಿಡಿಯಲಿದ್ದಾರೆ ಎನ್ನುವುದು ಕಾಂಗ್ರೆಸ್‌ ನ ಸ್ಥಳೀಯ ಒಕ್ಕಲಿಗ ನಾಯಕರ ಆತಂಕಕ್ಕೆ ಕಾರಣವಾಗಿದೆ. ಅದನ್ನು ಬಿಟ್ಟರೆ, ಕುರುಬ, ಮುಸ್ಲಿಂ ಮತದಾರರು ಕಾಂಗ್ರೆಸ್‌ ನ ಭದ್ರ ಮತಬ್ಯಾಂಕ್ ಗಳಾಗಲಿದ್ದಾರೆ.

ಘಟಾನುಘಟಿಗಳ ಸಂಘರ್ಷ

ಒಂದೆಡೆ ವಿ ಸೋಮಣ್ಣ ಪರ ಹಾಲಿ-ಮಾಜಿ ಪ್ರಧಾನಿಗಳ ನಾಮ ಬಲ, ಜಾತಿ ಬಲಗಳಿದ್ದರೆ, ಇನ್ನೊಂದೆಡೆ ಮುದ್ದು ಹನುಮೇಗೌಡ ಪರ ಸಚಿವರಾದ ಕೆ ಎನ್ ರಾಜಣ್ಣ, ಡಾ  ಜಿ ಪರಮೇಶ್ವರ್‌ ಮೊದಲಾದವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಉಭಯ ಬಣಗಳಲ್ಲೂ ಘಟಾನುಘಟಿ ಪ್ರಭಾವಿಗಳು ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ತುಮಕೂರು ಲೋಕಸಭಾ ಕಣವನ್ನು ರೋಚಕವಾಗಿಸಿದೆ. ತುಮಕೂರಿನಲ್ಲಿ ಸ್ಥಳೀಯ ಅಭ್ಯರ್ಥಿ ವಿಜಯದ ಕೈ ಎತ್ತುತ್ತಾರಾ? ಹೊರಗಿನ ಸೋಮಣ್ಣ ಗೆಲುವು ಬಾಚಿಕೊಳ್ಳುತ್ತಾರ ಎಂಬುದು ಕಾದು ನೋಡಬೇಕಿದೆ.

Tags:    

Similar News