ಕೊಲೆ ಆರೋಪಿ ದರ್ಶನ್ಗೆ ರಾಜಾತಿಥ್ಯ: ಪ್ರಕರಣದ ತನಿಖೆಗೆ 3 ವಿಶೇಷ ತಂಡ ರಚನೆ
ರೌಡಿಶೀಟರ್ಗಳ ಜೊತೆ ದರ್ಶನ್ ಬೆರೆತಿದ್ದು ಹೇಗೆ? ಲಾನ್ನಲ್ಲಿ ಎಲ್ಲರೂ ಒಟ್ಟಿಗೆ ಕೂರಲು ಚೇರ್ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಹೇಗೆ ಬಂತು? ಹಾಗೂ ಜೈಲಿನಲ್ಲಿ ಸಿಗರೇಟ್, ಮದ್ಯ, ಮಾದಕವಸ್ತು ನಿಷೇಧವಿದ್ದರೂ, ಹೇಗೆ ಒಳಗೆ ಬಂತು ಎಂದು ತನಿಖೆ ನಡೆಲಿವೆ ಈ ತಂಡ.;
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ಗೆ ಚಹಾ ಮತ್ತು ಸಿಗರೇಟ್ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದ್ದು, ಈ ಮೂರು ಪ್ರಕರಣದ ತನಿಖೆಗಾಗಿ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ ಅವರು ಮೂರು ವಿಶೇಷ ತಂಡ ರಚನೆ ಮಾಡಿದ್ದಾರೆ.
ಬೇಗೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಅವರಿಂದ ಮೊದಲನೇ ಪ್ರಕರಣದ ತನಿಖೆ ನಡೆಯುತ್ತದೆ. ಜೈಲಿನ ಲಾನ್ನಲ್ಲಿ ಕುಳಿತು ಕಾಫಿ ಸಿಗರೇಟ್ ಸೇವನೆ, ರೌಡಿಶೀಟರ್ಗಳ ಜೊತೆ ದರ್ಶನ್ ಬೆರೆತಿದ್ದು ಹೇಗೆ? ಲಾನ್ನಲ್ಲಿ ಎಲ್ಲರೂ ಒಟ್ಟಿಗೆ ಕೂರಲು ಚೇರ್ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಹೇಗೆ ಬಂತು? ಹಾಗೂ ಜೈಲಿನಲ್ಲಿ ಸಿಗರೇಟ್, ಮದ್ಯ, ಮಾದಕವಸ್ತು ನಿಷೇಧವಿದ್ದರೂ, ಹೇಗೆ ಒಳಗೆ ಬಂತು ಎಂದು ತನಿಖೆ ನಡೆಸಲಿದ್ದಾರೆ.
ಮೊಬೈಲ್ ಫೋನ್ನಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣದ ಬಗ್ಗೆ ಹುಳಿಮಾವು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ತನಿಖೆ ನಡೆಸುತ್ತಾರೆ. ಫೋಟೋ ತೆಗೆದಿದ್ದು ಹಾಗೂ ವಿಡಿಯೋ ಕರೆ ಮಾಡಿದ್ದು ಯಾರು? ಜೈಲಿನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ, ಆರೋಪಿಗಳ ಕೈಗೆ ಮೊಬೈಲ್ ಸಿಕ್ಕಿದ್ದು ಹೇಗೆ.? ಒದಗಿಸಿದವರು ಯಾರು, ನೆಟ್ ಕನೆಕ್ಷನ್ ಹೇಗೆ ಬಂತು ಎಂಬ ನಿಟ್ಟಿನಲ್ಲಿ ತನಿಖೆ ನಡೆಯಲಿದೆ. ಹೊರಗಡೆಯಿಂದ ಜೈಲಿನೊಳಗಿರುವವರಿಗೆ ವಿಡಿಯೋ ಕರೆ ಮಾಡಿರುವವರು ಯಾರು ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ಜೈಲು ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ದಾಖಲಾಗಿರುವ ಮೂರನೇ ಪ್ರಕರಣವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಎಸಿಪಿ ಮಂಜುನಾಥ್ ನೇತೃತ್ಚದ ತಂಡ ತನಿಖೆ ನಡೆಸುತ್ತದೆ.
ಈಗಾಗಲೇ ಕೊಲೆ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಸಿದ್ದತೆ ನಡೆಯುತ್ತಿದ್ದು, ಈ ತನಿಖೆ ಹಂತದಲ್ಲಿ ದರ್ಶನ್ ಎ2 ಆಗಿದ್ದಾರೆ. ಆದರೆ ಚಾರ್ಜ್‌ಶೀಟ್ ಸಲ್ಲಿಸುವಾಗ ಎ1 ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.