ಮಾಹಿತಿ ಸೋರಿಕೆ ಆತಂಕ; ಸಮೀಕ್ಷೆಯಲ್ಲಿ ಭಾಗವಹಿಸಬೇಡಿ- ಹೈಕೋರ್ಟ್‌ ವಕೀಲ ಬಿ.ವಿ.ಆಚಾರ್ಯ

ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಮೀಕ್ಷೆಯಲ್ಲಿ ಮಾಹಿತಿ ಸೋರಿಕೆ ಆತಂಕವಿದ್ದು, ಯಾರೂ ಕೂಡ ಭಾಗವಹಿಸಬೇಡಿ. ಸಮೀಕ್ಷೆಯಿಂದ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಸಹಾಯ ಆಗುವುದಿಲ್ಲ ಎಂದು ವಕೀಲ ಬಿ.ವಿ. ಆಚಾರ್ಯ ತಿಳಿಸಿದ್ದಾರೆ.

Update: 2025-09-28 13:48 GMT

ಸಾಮಾಜಿಕ ಸಮೀಕ್ಷೆಯ ಕಾರ್ಯವಿಧಾನಗಳಿಗೆ ಅಪಸ್ವರ ಕೇಳಿಬರುತ್ತಿರುವ ಬೆನ್ನಲ್ಲೇ ಹೈಕೋರ್ಟ್‌ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು ಸಮೀಕ್ಷೆಗೆ ಅಸಮಾಧಾನ ಹೊರಹಾಕಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಮೀಕ್ಷೆಯಲ್ಲಿ ಮಾಹಿತಿ ಸೋರಿಕೆ ಆತಂಕವಿದ್ದು, ಯಾರೂ ಕೂಡ ಭಾಗವಹಿಸಬೇಡಿ. ಸಮೀಕ್ಷೆಯಿಂದ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಸಹಾಯ ಆಗುವುದಿಲ್ಲ. ಹಾಗಾಗಿ ಸಮೀಕ್ಷೆಯಿಂದ ದೂರ ಉಳಿಯುವಂತೆ ಕರೆ ನೀಡಿದ್ದಾರೆ.

ಪ್ರಸ್ತುತ ಜಾತಿಗಣತಿಯ ಉದ್ದೇಶವು ಹಿಂದುಳಿದ ಜಾತಿಗಳ ಪಟ್ಟಿ ಸಂಪೂರ್ಣವಾಗುವಂತೆ ನೋಡಿಕೊಳ್ಳುವುದೇ ಆಗಿದೆ. ಯಾವ ಯಾವ ಸಮುದಾಯಗಳನ್ನು ಹಿಂದುಳಿದ ವರ್ಗಗಳಲ್ಲಿ ಸೇರಿಸಬೇಕು, ಯಾರನ್ನು ಕೈಬಿಡಬೇಕು ಎಂಬುದರ ಸಮಗ್ರ ಮಾಹಿತಿ ಸಂಗ್ರಹಿಸುವುದೇ ಇದರ ಗುರಿ. ಇದು ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಪಡುವುದಿಲ್ಲ. ಹಾಗಾಗಿ ನಮಗೆ ಯಾವುದೇ ಲಾಭವಿಲ್ಲ ಎಂದು ಹೇಳಿದ್ದಾರೆ.

ವೈಯಕ್ತಿಕ ಮಾಹಿತಿ ಸೋರಿಕೆ ಅಪಾಯ

ಸಮೀಕ್ಷೆಯಲ್ಲಿ ಕೇಳಲಾಗುವ 60ಕ್ಕೂ ಹೆಚ್ಚು ಪ್ರಶ್ನೆಗಳ ಕುರಿತು ಅನುಮಾನ ವ್ಯಕ್ತಪಡಿಸಿರುವ ಅವರು, ಆದಾಯದ ವಿವರ, ಆಧಾರ್ ಸಂಖ್ಯೆ, ಕುಟುಂಬದ ಮಾಹಿತಿ ಹಾಗೂ ಆಸ್ತಿ ವಿವರ ಇತ್ಯಾದಿ ಅಂಶಗಳನ್ನು ಹಂಚಿಕೊಳ್ಳುವುದು ಅನಗತ್ಯ. ಒಂದು ವೇಳೆ ಮಾಹಿತಿ ಸಂಗ್ರಹವಾದರೆ ದುರುಪಯೋಗವಾಗುವ ಅಪಾಯವಿದೆ ಎಂದು ಬಿ.ವಿ.ಆಚಾರ್ಯ ಎಚ್ಚರಿಸಿದ್ದಾರೆ.

“ನಾನು ಮಾತ್ರವಲ್ಲ, ಅನೇಕ ಕಾನೂನು ತಜ್ಞರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸುವುದು, ಬಿಡುವುದು ಸಂಪೂರ್ಣ ಐಚ್ಛಿಕ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಹಾಗಾಗಿ ಜಾತಿಗಣತಿಯಲ್ಲಿ ಯಾರನ್ನೂ ಬಲವಂತವಾಗಿ ಪಾಲ್ಗೊಳ್ಳುವಂತೆ ಒತ್ತಾಯಿಸುವಂತಿಲ್ಲ ಎಂದು ಬಿ.ವಿ.ಆಚಾರ್ಯ ಪುನರುಚ್ಚರಿಸಿದ್ದಾರೆ.

ಕಾಂಗ್ರೆಸ್ ನಾಯಕರ ಬೆಂಬಲ

ಜಾತಿ ಗಣತಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ನಾಯಕರು ಸಮೀಕ್ಷೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗಗಳ ಸಚಿವರು, ಲೋಕಸಭೆ ಹಾಗೂ ವಿಧಾನಸಭೆಯ ಸದಸ್ಯರು, ವಿಧಾನಪರಿಷತ್ತಿನ ಸದಸ್ಯರು ಹಾಗೂ ಹಿರಿಯ ನಾಯಕರ ವಿಶೇಷ ಸಭೆಯಲ್ಲಿ ಸಮೀಕ್ಷೆಯ ಯಶಸ್ವಿಗೆ ವಿಭಾಗವಾರು ಸಮಿತಿಗಳ ರಚನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ನಾಯಕರು ಸಮೀಕ್ಷೆ ಮೂಲಕ ಹಿಂದುಳಿದ ವರ್ಗಗಳ ನಿಖರ ಮಾಹಿತಿ ದೊರೆತರೆ, ಸಮಾಜದಲ್ಲಿ ಸಮಾನತೆ, ಶಿಕ್ಷಣ, ಉದ್ಯೋಗ ಹಾಗೂ ಸಾಂಸ್ಕೃತಿಕ ಹಕ್ಕುಗಳ ಬಲವರ್ಧನೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆಗೆ ಆತಂಕ ಏಕೆ?

ಕಳೆದ ಕೆಲವು ದಿನಗಳಿಂದ ಸಮೀಕ್ಷೆಯಲ್ಲಿ ಸಂಗ್ರಹವಾಗುತ್ತಿರುವ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಆತಂಕ ವ್ಯಕ್ತವಾಗುತ್ತಿದೆ.

ಹೆಸರು, ವಿಳಾಸ, ಕುಟುಂಬದ ವಿವರ, ಜಾತಿ, ಆರ್ಥಿಕ ಹಾಗೂ ಶೈಕ್ಷಣಿಕ ಮಾಹಿತಿಗಳು ಸೂಕ್ಷ್ಮವಾಗಿವೆ. ಇಂತಹ ಮಾಹಿತಿಗೆ ಸರಿಯಾದ ದತ್ತಾಂಶ ರಕ್ಷಣೆಯ ನಿಯಮಗಳಿಲ್ಲ. ಇದರಿಂದ ಮಾಹಿತಿ ಸೋರಿಕೆಯಾಗುವ ಅಪಾಯ ಇದೆ ಎಂಬುದು ಹಲವರ ಕಳವಳವಾಗಿದೆ.

ಸಮೀಕ್ಷೆಯ ಮಾಹಿತಿಯನ್ನು ವಿವಿಧ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಜಾತಿ ಆಧಾರಿತ ಧ್ರುವೀಕರಣಕ್ಕೂ ಕಾರಣವಾಗಲಿದೆ. ಆನ್‌ಲೈನ್ ಡೇಟಾ ಎಂಟ್ರಿ ಪ್ರಕ್ರಿಯೆಯಲ್ಲಿ ಹ್ಯಾಕಿಂಗ್ ಅಥವಾ ಸರ್ವರ್ ಸಮಸ್ಯೆ ಹೆಚ್ಚಾಗಿದೆ. ಸೈಬರ್ ಸುರಕ್ಷತಾ ವ್ಯವಸ್ಥೆ ದುರ್ಬಲವಾಗಿದ್ದರೆ, ಮಾಹಿತಿ ಹೊರಗೆ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಭಾರತದಲ್ಲಿ ಡೇಟಾ ಸಂರಕ್ಷಣೆ ಕಾಯ್ದೆ 2023 (Digital Personal Data Protection Act, 2023) ಇದ್ದರೂ ಜಾತಿಗಣತಿ ಮಾಹಿತಿಯ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳು ಇನ್ನೂ ಜಾರಿಯಾಗದಿರುವುದು ಈ ಆತಂಕಗಳಿಗೆ ಕಾರಣವಾಗಿದೆ.

ಮಾಹಿತಿ ಸೋರಿಕೆಯಾದರೆ ವೈಯಕ್ತಿಕ ಅಥವಾ ಸಮುದಾಯ ಮಟ್ಟದಲ್ಲಿ ಅಸುರಕ್ಷತೆ, ಭೇದಭಾವ, ದ್ವೇಷ ಹೆಚ್ಚುವ ಸಾಧ್ಯತೆ ಇರಲಿದೆ. ಆದ್ದರಿಂದ ತಜ್ಞರು ಮಾಹಿತಿ ನೀಡುವುದು ಕಡ್ಡಾಯವಲ್ಲ, ಸ್ವಯಂಪ್ರೇರಿತವಾಗಿ ಮಾತ್ರ ನೀಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags:    

Similar News