Actor Darshan Case | ನಟ ದರ್ಶನ್‌ಗೆ ಆ.28ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳಿಗೆ ಆಗಸ್ಟ್ 28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.

Update: 2024-08-14 12:11 GMT
ನಟ ದರ್ಶನ್‌

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಸೇರಿ ಎಲ್ಲ ಆರೋಪಿಗಳಿಗೆ ಆ.28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.

ಬುಧವಾರ (ಆ.14) ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ನಟ ದರ್ಶನ್ ಮತ್ತು ಪ್ರಕರಣದ ಇತರೆ ಆರೋಪಿಗಳನ್ನು 24ನೇ ಎಸಿಎಂಎಂ ಇನ್ಚಾರ್ಜ್ ಕೋರ್ಟ್ ಎದುರು ಹಾಜರುಪಡಿಸಲಾಯಿತು. ಪೊಲೀಸರ ರಿಮ್ಯಾಂಡ್ ಅರ್ಜಿಯನ್ನು ಪುರಸ್ಕರಿಸಿದ ಮ್ಯಾಜಿಸ್ಟ್ರೇಟರು, ಪ್ರಕರಣದ ಎಲ್ಲ ಆರೋಪಿಗಳಿಗೂ ಆ.28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ಹೊರಡಿಸಿದೆ.

ಬೆಂಗಳೂರು ಜೈಲಿನಲ್ಲಿರುವ ಆರೋಪಿಗಳು ಹಾಗೂ ತುಮಕೂರು ಜೈಲಿನಲ್ಲಿರುವ ಮೂವರು ಆರೋಪಿಗಳನ್ನು ಪೊಲೀಸರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರುಪಡಿಸಿದ್ದರು. ಈ ಸಮಯದಲ್ಲಿ ಪೊಲೀಸರು, ಎಲ್ಲ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶ ಜಡ್ಜ್ ವಿಶ್ವನಾಥ್ ಸಿ ಗೌಡರ್ ಅವರು ಎಲ್ಲ ಆರೋಪಿಗಳಿಗೂ ಆ.28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದರು. ಆರೋಪಿಗಳಿಗೆ ಪುನಃ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲು ಪೊಲೀಸರು ಎಂಟು ಕಾರಣಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.

ಪೊಲೀಸರು ನೀಡಿದ ಎಂಟು ಕಾರಣ

1) ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿದ್ದು FSL ವರದಿಯಲ್ಲಿ ಬಹುತೇಕ ದೃಢವಾಗಿದೆ. ಈಗಾಗಲೇ ಕೆಲವು ಎಫ್ಎಸ್ಎಲ್ ವರದಿಗಳು ಬಂದಿವೆ.

2) ಪ್ರಕರಣ ಸಂಬಂಧ ಇನ್ನೂ ಹಲವರ ವಿಚಾರಣೆ ಬಾಕಿ ಇದೆ, ಸೆಕ್ಷನ್ 164 ರ ಅಡಿಯಲ್ಲಿ ಕೆಲವು ಸಾಂದರ್ಭಿಕ ಸಾಕ್ಷಿಗಳ ಹೇಳಿಕೆ ಬಾಕಿ ಇದೆ.

3)  ಆರೋಪಿಗಳು ಪ್ರಭಾವಿಗಳಾಗಿದ್ದು ಮೃತ ರೇಣುಕಾ ಸ್ವಾಮಿಯ ಕುಟುಂಬಕ್ಕೆ ಆಮಿಷ ಅಥವಾ ಬೆದರಿಕೆ ಸಾಧ್ಯತೆ ಇದೆ.

4)  ಮತ್ತಷ್ಟು ಟೆಕ್ನಿಕಲ್ ಸಾಕ್ಷಿಗಳನ್ನು CFSL ಪರೀಕ್ಷೆಗೆಂದು ಕಳಿಸಿದ್ದು ಅವುಗಳ ವರದಿ ಬರುವುದು ಬಾಕಿ ಇದೆ.

5) ಪವಿತ್ರ, ದರ್ಶನ್ ನಿಂದ 17 ಆರೋಪಿಗಳವರೆಗೆ ಕೃತ್ಯದಲ್ಲಿ ಭಾಗಿ ಆಗಿರುವುದು ಮೇಲ್ನೋಟಕ್ಕೆ ತಿಳಿದಿದೆ. ಅಷ್ಟು ಮಂದಿಯ ವಿರುದ್ದ ಭೌತಿಕ, ತಾಂತ್ರಿಕ, ಸಾಂದರ್ಭಿಕ ಸಾಕ್ಷಿ ಪತ್ತೆ ಆಗಿದೆ.

6)  ಕೊಲೆಯಲ್ಲಿ ಪ್ರತಿ ಆರೋಪಿಯ ಪಾತ್ರದದ ಬಗ್ಗೆ ತಿಳಿಯಬೇಕಿದೆ. ಕೃತ್ಯದಲ್ಲಿ ಪ್ರತಿಯೊಬ್ಬರು ವಹಿಸಿದ್ದ ಪಾತ್ರ, ಉದ್ದೇಶಗಳ ಬಗ್ಗೆ ಗೊತ್ತಾಗಬೇಕಿದೆ.

7) ಆರೋಪಿಗಳಿಗೆ ಹಣಬಲ ಇದೆ. ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ಆರೋಪಿಗಳಿಗೆ ಜಾಮೀನು ನೀಡಿದರೆ ತೊಂದರೆ ಆಗುವ ಸಾಧ್ಯತೆ ಇದೆ. ಸಾಕ್ಷಿಗಳ ಬೆದರಿಕೆ ಹಾಕಿ ಸಾಕ್ಷಿ ನಾಶ ಸಾಧ್ಯತೆ ಇದೆ.

8) ಈ ಎಲ್ಲ ಕಾರಣಗಳನ್ನು ಪರಿಗಣಿಸಿ ನ್ಯಾಯಾಧೀಶರು ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೂ ಆಗಸ್ಟ್ 28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದಾರೆ.

ಸೆಪ್ಟೆಂಬರ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದ್ದು, ಚಾರ್ಜ್ ಶೀಟ್ ಸಲ್ಲಿಕೆ ಆದ ಬಳಿಕ ದರ್ಶನ್ ಹಾಗೂ ಇತರೆ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ನಟ ದರ್ಶನ್, ಪವಿತ್ರಾ ಗೌಡ ಇನ್ನೂ ಹಲವರನ್ನು ಪೊಲೀಸರು ಬಂಧಿಸಿದ್ದರು. ದರ್ಶನ್ ಮತ್ತು ಇತರೆ ಆರೋಪಿಗಳು ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟು ಎರಡು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಆದರೆ ಪ್ರಕರಣದ ಸ್ವರೂಪ ಗಂಭೀರವಾಗಿರುವ ಕಾರಣ ಆರೋಪಿಗಳಿಗೆ ಜಾಮೀನು ಸಿಗುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.

ಚಿಕ್ಕಣ್ಣ, ಯಶಸ್ ಸೂರ್ಯ, ದರ್ಶನ್ ಮನೆ ಕೆಲಸದವರು, ವಾಟರ್ ಸರ್ವೀಸ್ ಅಂಗಡಿಯವರು, ಆರೋಪಿಗಳಿಗೆ ಖುಷ್ಕ, ಬೀಡಿ, ಸಿಗರೇಟ್ ತಂದುಕೊಟ್ಟವರು, ಹೀಗೆ 40ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ಸಂಗ್ರಹ ಮಾಡಿದ್ದಾರೆ. ಇವರೆಲ್ಲರೂ ಪ್ರಕರಣದ ಪ್ರತ್ಯಕ್ಷ ಸಾಕ್ಷಿಗಳಾಗಿ ಪರಿಗಣನೆ ಮಾಡಲಾಗಿದೆ.

Tags:    

Similar News