ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿರುವ ಸಂಸ್ಥೆಗಳ ವಿಲೀನ ಅಥವಾ ಮುಚ್ಚಲು ಶಿಫಾರಸ್ಸು

ಸರ್ಕಾರಕ್ಕೆ ಹಣಕಾಸು ಹೊರೆಯಾಗಿರುವ 7 ಸಂಸ್ಥೆಗಳನ್ನು ಮುಚ್ಚಬೇಕು ಮತ್ತು 9 ಸಂಸ್ಥೆಗಳನ್ನು ಇಲಾಖೆಗಳೊಂದಿಗೆ ಅಥವಾ ನಿಗಮ-ಮಂಡಳಿಗಳೊಂದಿಗೆ ಆಡಳಿತ ಸುಧಾರಣಾ ಆಯೋಗ ವಿಲೀನಗೊಳಿಸುವಂತೆ ಶಿಫಾರಸ್ಸು

Update: 2025-10-16 14:12 GMT
Click the Play button to listen to article

ಸರ್ಕಾರಕ್ಕೆ ಹಣಕಾಸು ಹೊರೆಯಾಗಿರುವ ಏಳು ಸಂಸ್ಥೆಗಳನ್ನು  ಮುಚ್ಚಬೇಕು ಮತ್ತು ಒಂಭತ್ತು ಸಂಸ್ಥೆಗಳನ್ನು ಇಲಾಖೆಗಳೊಂದಿಗೆ ಅಥವಾ ನಿಗಮ-ಮಂಡಳಿಗಳೊಂದಿಗೆ ವಿಲೀನಗೊಳಿಸಬೇಕು ಎಂದು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. 

ಆಯೋಗವು 148 ನಿಗಮ- ಮಂಡಳಿಗಳ ಪೈಕಿ 84 ಸಂಸ್ಥೆಗಳ  ಆರ್ಥಿಕ ಸ್ಥಿತಿ ಗತಿ ಸೇರಿದಂತೆ ಕಾರ್ಯವೈಖರಿ ಕುರಿತು ಅಧ್ಯಯನ ನಡೆಸಿತು. ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಲಾಯಿತು. ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾರ್ಯನಿರ್ವಹಣೆ ಕುರಿತು ಅಧ್ಯಯನ ನಡೆಸಿದ ಬಳಿಕ ಈ ಶಿಫಾರಸ್ಸು ಮಾಡಲಾಗಿದೆ. ನಿಗಮ-ಮಂಡಳಿಗಳ ಕಾರ್ಯವ್ಯಾಪ್ತಿಯ ಪುನಾರವರ್ತನೆ ತೊಡೆದು ಹಾಕಲು ಮತ್ತು ದಕ್ಷತೆಯನ್ನು ಸುಧಾರಿಸಲು ಸಂಸ್ಥೆಗಳ ಆರ್ಥಿಕ ಸುಸ್ಥಿರತೆ ಸೇರಿದಂತೆ ಇತರೆ ವಿಷಯಗಳನ್ನ ಕುರಿತು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಆಯೋಗಕ್ಕೆ ಗಮನಕ್ಕೆ ಬಂದ ಮಾಹಿತಿ ಕ್ರೋಢೀಕರಿಸಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜತೆ ಕೂಲಂಕಷವಾಗಿ ಚರ್ಚೆ ನಡೆಸಿದ ಬಳಿಕ ಒಂಭತ್ತು ಸಂಸ್ಥೆಗಳನ್ನು ವಿಲೀನಗೊಳಿಸಲು ಮತ್ತು ಏಳು ಸಂಸ್ಥೆಗಳನ್ನು ಮುಚ್ಚಲು ಶಿಫಾರಸ್ಸು ಮಾಡಿದೆ. 

ಮುಚ್ಚಲು ಶಿಫಾರಸ್ಸು ಮಾಡಿರುವ ಸಂಸ್ಥೆಗಳು 

* ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ

* ಕರ್ನಾಟಕ ರಾಜ್ಯ ಸಂಯಮ ಮಂಡಳಿ

* ಕರ್ನಾಟಕ ಸಹಕಾರಿ ಕೋಳಿ ಸಾಕಾಣಿಕೆ ಒಕ್ಕೂಟ

* ಕರ್ನಾಟಕ ಪಲ್ಪ್‌ವುಡ್‌ ಲಿಮಿಟೆಡ್‌

* ಕರ್ನಾಟಕ ರಾಜ್ಯ ಆಗ್ರೋ ಕಾರ್ನ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌

* ಮೈಸೂರು ಲ್ಯಾಂಪ್‌ ವರ್ಕ್ಸ್‌ ಲಿಮಿಟೆಡ್‌

* ಕರ್ನಾಟಕ ಆಗ್ರೋ ಇಂಡಸ್ಟ್ರೀಸ್‌ ಕಾರ್ಪೋರೇಷನ್‌ ಲಿಮಿಟೆಡ್‌

ಒಂಭತ್ತು ಸಂಸ್ಥೆಗಳ ವಿಲೀನಕ್ಕೆ ಶಿಫಾರಸ್ಸು:

ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಒಂಭತ್ತು ಸಂಸ್ಥೆಗಳನ್ನು ವಿಲೀನಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಕರ್ನಾಟಕ ರಾಜ್ಯ ಏಡ್ಸ್‌ ತಡೆಗಟ್ಟುವ ಸೊಸೆಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ವಿಲೀನ ಮಾಡುವುದು ಸೂಕ್ತ. ಅಂತೆಯೇ ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ ನಿಯಮಿತವನ್ನು ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್‌, ಆಹಾರ ಕರ್ನಾಟಕ ಲಿಮಿಟೆಡ್‌ ಸಂಸ್ಥೆಯನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ, ಬೆಂಗಳೂರು ಸಬ್‌ ಅರ್ಬನ್‌ ರೈಲ್ವೆ ಕಂಪನಿ ಲಿಮಿಟೆಡ್‌ (ಬಿ-ರೈಡ್‌) ಅನ್ನು ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಲಿಮಿಟೆಡ್‌ (ಕೆ-ರೈಡ್‌), ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತವನ್ನು ಜವಳಿ ಮೂಲಸೌಕರ್ಯ ಅಭಿವೃದ್ಧಿ, ಮೈಸೂರು ಕ್ರೋಮ್‌ ಟ್ಯಾನಿಂಗ್‌ ಕಂಪನಿ ಲಿಮಿಟೆಡ್‌ ಅನ್ನು ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತವನ್ನು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ, ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರವನ್ನು ಸಂಬಂಧಿಸಿದ ನೀರಾವರಿ ನಿಗಮದೊಂದಿಗೆ ವಿಲೀನ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ. 

ವಿಧಾನಸೌಧದಲ್ಲಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್.‌ವಿ.ದೇಶಪಾಂಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸ್ಸಿನ ವರದಿಯನ್ನು ಸಲ್ಲಿಕೆ ಮಾಡಿದರು. ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿ ನಷ್ಟದಲ್ಲಿರುವ ಮತ್ತು ನಿಷ್ಕ್ರಿಯವಾಗಿರುವ ಮಂಡಳಿಗಳು ಮತ್ತು ನಿಗಮಗಳ ವಿಲೀನ ಅಥವಾ ಮುಚ್ಚುವಿಕೆಗಾಗಿ ಆರು ತಿಂಗಳಲ್ಲಿ ಏಕೀಕೃತ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಬೇಕು. ಪ್ರತಿ ಇಲಾಖೆಯು ಕಾರ್ಯಸಾಧ್ಯತೆಯನ್ನು ನಿರ್ಣಯಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಗೆ ಸಲ್ಲಿಕೆ ಮಾಡಬೇಕು ಎಂದು ಆಯೋಗವು ಸಲಹೆ ನೀಡಿದೆ. 

ಭೂಸ್ವಾಧೀನದಲ್ಲಿ ಸುಧಾರಣೆಗಳು ಅಗತ್ಯ

ಕೆಐಎಡಿಬಿ ಕಾಯ್ದೆ, ಬಿಡಿಎ ಕಾಯ್ದೆ, ಕೆಎಚ್‌ಬಿ ಕಾಯ್ದೆ, ಕೊಳೆಗೇರಿ ಪ್ರದೇಶ ಕಾಯ್ದೆ ಮತ್ತು ನೀರಾವರಿ ಕಾಯ್ದೆ ಸೇರಿದಂತೆ  ಭೂ ಸ್ವಾಧೀನ ಸಂಬಂಧ ವಿವಿಧ ಕಾಯ್ದೆಗಳಲ್ಲಿ ಪಾರದರ್ಶಕತೆ, ನ್ಯಾಯೋಚಿತ ಪರಿಹಾರ, ಪುನರ್ವಸತಿಗಳ ನಿಯಮದಲ್ಲಿ ವ್ಯತಿರಿಕ್ತ ನಿಬಂಧನೆಗಳನ್ನು ಆಯೋಗವು ಗಮನಿಸಿದೆ. ಕಾಯ್ದೆಯಲ್ಲಿ ವ್ಯತಿರಿಕ್ತ ನಿಬಂಧನೆಗಳನ್ನು ತಪ್ಪಿಸಲು ಕೇಂದ್ರ ಕಾಯ್ದೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮಾನಾಂತರ ರಾಜ್ಯ ನಿಬಂಧನೆಗಳನ್ನು ಬದಲಾಯಿಸಬೇಕು. ಇಲಾಖೆಗಳು ಸಲ್ಲಿಸಿರುವ ತಿದ್ದುಪಡಿ ನಿಯಮಗಳನ್ನು ಪರಿಶೀಲಿಸಲು ಮತ್ತು ಭೂಸ್ವಾಧೀನ ಕಾನೂನುಗಳನ್ನು ಸಮನ್ವಯಗೊಳಿಸಲು ಉನ್ನತಮಟ್ಟದ ಸಮಿತಿಯನ್ನು ರಚಿಸಬೇಕು. ಇದು ಭೂಮಾಲೀಕರ ಹಕ್ಕುಗಳನ್ನು ರಕ್ಷಿಸುವ ಮತ್ತು ದಾವೆಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಿರಬೇಕು ಎಂದು ಶಿಫಾರಸ್ಸಿನಲ್ಲಿ ಉಲ್ಲೇಖಿಸಲಾಗಿದೆ. 

ಯಾವುದೇ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಭೂಸ್ವಾಧೀನ ಅಧಿಕಾರಿಗಳನ್ನು ಸದರಿ ಹುದ್ದೆಯಿಂದ ವರ್ಗಾಯಿಸಬಾರದು. ಯೋಜನೆಯ ಗಾತ್ರ ಮತ್ತು ಅವಧಿಗೆ ಅನುಗುಣವಾಗಿ ಅವಶ್ಯ ಇರುವ ಸಹಾಯಕ ಸಿಬ್ಬಂದಿಯನ್ನು ಮಂಜೂರು ಮಾಡಬೇಕು ಎಂದು ಸಲಹೆ ನೀಡಿದೆ. 

ಇ-ತಂತ್ರಾಂಶಗಳ ಸಂಯೋಜನೆ

ನವೀಕೃತ ದಾಖಲೆಗಳನ್ನು ಖಚಿತಪಡಿಸಿಕೊಳ್ಳಲು ಭೂ ಸ್ವಾಧೀನ ಡೇಟಾವನ್ನು ಭೂಮಿ ತಂತ್ರಾಂಶದೊಂದಿಗೆ ಸಂಯೋಜಿಸಬೇಕು. ನ್ಯಾಯಾಲಯದ ನೊಟೀಸ್‌ಗಳು ಮತ್ತು ಆದೇಶಗಳನ್ನು ಸ್ವಯಂಚಾಲಿತವಾಗಿ ಸಂಬಂಧಿಸಿದ ಇಲಾಖೆಗಳಿಗೆ ಹೋಗುವಂತೆ ಮಾಡಲು ಇ-ಆಫೀಸ್‌ ಮತ್ತು ಸಿಸಿಎಂಎಸ್‌ ತಂತ್ರಾಂಶವನ್ನು ಸಂಯೋಜನೆಗೊಳಿಸಬೇಕು. ವಿಳಂಬವನ್ನು ಕಡಿಮೆ ಮಾಡಲು ನಿಗದಿತ ಕಾಲಮಿತಿ, ಪರಿಹಾರ ಪಾವತಿ ಮೇಲ್ವಿಚಾರಣೆ ಮತ್ತು ಮೇಲ್ಮನವಿ ಪ್ರಕರಣದ ಮೇಲ್ವಿಚಾರಣೆಯೊಂದಿಗೆ ಒಂದೇ ಭೂ ಸ್ವಾಧೀನ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಬೇಕು. ಒಪ್ಪಿಗೆ ಆಧಾರಿತ ಭೂಸ್ವಾಧೀನಕ್ಕಾಗಿ ಎಲ್ಲಾ ಸಂಸ್ಥೆಗಳಿಗೆ ಏಕರೂಪದ ನಿಯಮಗಳನ್ನು ರೂಪಿಸಬೇಕು ಎಂದು ಶಿಫಾರಸ್ಸು ಮಾಡಿದೆ. 

ಕಂದಾಯ, ನಗರಾಭಿವೃದ್ಧಿ, ಆರ್‌ಡಿಪಿಆರ್‌, ಬಿಎಂಆರ್‌ಡಿಎ, ಬಿಡಿಎ, ಡಿಟಿಸಿಸಿ ಸೇರಿದಂತೆ ವಿವಿಧ ಇಲಾಖೆಗಳನ್ನು ಕಾವೇರಿ ಆಸ್ತಿ ನೋಂದಣಿ ತಂತ್ರಾಂಶದೊಂದಿಗೆ ವಹಿವಾಟುಗಳನ್ನು ತಿರುಚಲು ಸಾಧ್ಯವಾಗದಂತೆ ಸಂಪರ್ಕಿಸುವ ಮೂಲಕ ಎಲ್ಲಾ ಸರ್ಕಾರಿ ಸ್ವಾಮ್ಯದ ಆಸ್ತಿಗಳ ದಾಖಲೆಗಳನ್ನು ಕ್ರೋಢೀಕರಿಸಲು ಒಂದೇ ಸಮಗ್ರ ವೇದಿಕೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದೆ. 

1500 ಶಿಫಾರಸ್ಸುಗಳು ಜಾರಿ: 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಡಳಿತ ಸುಧಾರಣಾ ಆಯೋಗವು  ಶಿಫಾರಸ್ಸುಗಳ 9ನೇ ವರದಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷ ಆರ್‌.ವಿ.ದೇಶಪಾಂಡೆ, 2024ರಲ್ಲಿ ಅಧಿಕಾರ ವಹಿಸಿಕೊಂಡ ವೇಳೆ 5,039 ಶಿಫಾರಸ್ಸುಗಳ ಪೈಕಿ ಕೇವಲ 99  ಶಿಫಾರಸ್ಸುಗಳನ್ನು ಮಾತ್ರ ಅನುಷ್ಠಾನಗೊಳಿಸಲಾಗಿತ್ತು. 42 ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕಾಲಮಿತಿ ನಿಗದಿಪಡಿಸಲಾಯಿತು. ಅಲ್ಲದೇ, ಸಂಬಂಧಿಸಿದ ಸಚಿವರನ್ನು ಸಂಪರ್ಕಿಸಿ ಶಿಫಾರಸ್ಸುಗಳ ಅನುಷ್ಠಾನಕ್ಕೆ ತೀವ್ರಗೊಳಿಸಲಾಯಿತು. ಈ ಪ್ರಯತ್ನದಿಂದಾಗಿ ಒಂದು ವರ್ಷದಲ್ಲಿ 1,500 ಶಿಫಾರಸ್ಸುಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು. 

449 ಹೊಸ ಶಿಫಾರಸ್ಸುಗಳು: 

ಒಂಭತ್ತನೇ ವರದಿಯಲ್ಲಿ ನಾಲ್ಕು ಪ್ರಮುಖ ವಿಷಯಗಳಲ್ಲಿ 449 ಹೊಸ ಶಿಫಾರಸ್ಸುಗಳನ್ನು ಮಾಡಿದೆ. ಹಿಂದಿನ ಶಿಫಾರಸ್ಸುಗಳ ಅನುಷ್ಠಾನದ ಪ್ರಗತಿಯ ತ್ವರಿತಗೊಳಿಸಬೇಕು. ನಿಗಮ-ಮಂಡಳಿಗಳು, ಸರ್ಕಾರಿ ಸಂಘಗಳು ಮತ್ತು ಪ್ರಾಧಿಕಾರಗಳ ಪುನಾರಚನೆ, ಭೂಸ್ವಾಧೀನ ಮತ್ತು ಸಂಬಂಧಿತ ಸುಧಾರಣೆಗಳು, ಸಾಮಾನ್ಯ ಆಡಳಿತಾತ್ಮಕ, ಹಣಕಾಸು ಮತ್ತು ಇ-ಆಡಳಿತ ಸುಧಾರಣೆಗಳ ಕುರಿತು ತಿಳಿಸಲಾಗಿದೆ. 8ನೇ ವರದಿಯಲ್ಲಿ 5,228 ಶಿಫಾರಸ್ಸುಗಳನ್ನು ಮಾಡಲಾಗಿದ್ದು, 1,852 ಕಾರ್ಯಗತಗೊಳಿಸಲಾಗಿದೆ. 192 ಭಾಗಶಃ ಕಾರ್ಯಗತಗೊಳಿಸಲಾಗಿದೆ. 887 ಅನುಷ್ಠಾನದ ಹಂತದಲ್ಲಿವೆ. 1,745 ಪರಿಶೀಲನಾ ಹಂತದಲ್ಲಿದ್ದು, 363 ಶಿಫಾರಸ್ಸುಗಳನ್ನು ಒಪ್ಪಿಲ್ಲ ಎಂದು ತಿಳಿಸಿದರು. 

ಮುಂದಿನ ಬಾರಿ ಅನಗತ್ಯ ಯೋಜನೆಗಳಿಗೆ ಕಡಿವಾಣ ಹಾಕುವ ಬಗ್ಗೆ ಪರಿಶೀಲನೆ: 

ಮುಂದಿನ ಬಾರಿಯ ವರದಿಯಲ್ಲಿ ಹಿಂದಿನ ಸರ್ಕಾರಗಳು ಜಾರಿಗೊಳಿಸಿದ ಯೋಜನೆಗಳು ಸದ್ಯಕ್ಕೆ ಅಪ್ರಸ್ತುತವಾಗಿರುವಂತಹುಗಳನ್ನ ರದ್ದುಗೊಳಿಸುವ ಬಗ್ಗೆ  ಆಯೋಗವು ಅಧ್ಯಯನ ನಡೆಸಲಿದೆ. ಪ್ರಸ್ತುತ ಹಲವು ಯೋಜನೆಗಳು ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳ ಪಟ್ಟಿಯನ್ನು ಮಾಡಿ ರದ್ದು ಮಾಡುವಂತೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೇ, ಇದರ ಜತೆಗೆ ಹಲವು ಹುದ್ದೆಗಳು ಸಹ ಅನಗತ್ಯವಾಗಿದ್ದು, ಅವುಗಳ ರದ್ದತಿಗೂ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. 

Tags:    

Similar News