ಎಸ್‌ಎಂಕೆ ಕನಸಿನ ಮದ್ದೂರು ಸಾಮರಸ್ಯಕ್ಕೆ 'ಕಲ್ಲು'; ನೊಂದ ರಾಮ-ರಹೀಮ ನಗರದ ಜನತೆ
ವಿವಿಧ ಸಂಸ್ಕೃತಿ, ಸಮುದಾಯಗಳು ದಶಕಗಳಿಂದ ಕೂಡು ಬಾಳುತ್ತಿರುವ ಮದ್ದೂರಿನ ರಾಮ ರಹೀಮ ನಗರದಲ್ಲಿ ಕೋಮು ದ್ವೇಷ ಹರಡಿರುವುದು ಸ್ಥಳೀಯರಲ್ಲೇ ಅಸಹನೆಗೆ ಕಾರಣವಾಗಿದೆ.;
ಹಸಿರು ಹೊದಿಕೆಯ ನಡುವೆ ಹರಿಯುವ ಜೀವ ನದಿ, ಕೃಷಿಯನ್ನೇ ನಂಬಿ ಬದುಕುವ ಜನ, ಮತ್ತು ಸಂಸ್ಕೃತಿ-ಆಚರಣೆಗಳಲ್ಲಿ ಸಹಬಾಳ್ವೆಯ ಶ್ರೀಮಂತಿಕೆ... ಇದು ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ದಶಕಗಳ ಭಾವೈಕ್ಯತೆಯ ಚಿತ್ರಣ. ಆದರೆ, ಈಗ ಈ ಸಾಮರಸ್ಯದ ಬದುಕಿಗೆ ಕೋಮು ದಳ್ಳುರಿಯ ಕಹಿ ಉಂಟಾಗಿದೆ.
ಮದ್ದೂರಿನ 'ರಾಮ-ರಹೀಮ ನಗರ' ತನ್ನ ಹೆಸರಿಗೆ ಅನ್ವರ್ಥವಾಗಿ, ವಿವಿಧ ಧರ್ಮಗಳ ಜನರು ಸೌಹಾರ್ದತೆಯಿಂದ ಬಾಳುತ್ತಿದ್ದ ಪ್ರದೇಶ. ಇಲ್ಲಿನ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಪರಸ್ಪರರ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಿ, ಕಷ್ಟ-ಸುಖಗಳಲ್ಲಿ ಸಹೋದರರಂತೆ ಸ್ಪಂದಿಸುತ್ತಾ, ಭಾವೈಕ್ಯತೆಗೆ ಮಾದರಿಯಾಗಿದ್ದರು.
ಆದರೆ, ಕಳೆದ ಭಾನುವಾರ, ಸೆಪ್ಟೆಂಬರ್ 7ರಂದು ನಡೆದ ಗಣೇಶೋತ್ಸವ ಮೆರವಣಿಗೆಯ ವೇಳೆ ಸಂಭವಿಸಿದ ಅನಿರೀಕ್ಷಿತ ಕಲ್ಲುತೂರಾಟದ ಘಟನೆ, ಈ ದಶಕಗಳ ಸಾಮರಸ್ಯಕ್ಕೆ ಬೆಂಕಿಯಿಟ್ಟಿದೆ. ಈ ಘಟನೆಯ ನಂತರ ನಡೆದ ಪ್ರತಿಭಟನೆ, ಲಾಠಿ ಚಾರ್ಜ್ ಮತ್ತು ರಾಜಕೀಯ ಕೆಸರೆರಚಾಟಗಳು, ಅಲ್ಲಿಯವರೆಗೂ ಅಣ್ಣ-ತಮ್ಮಂದಿರಂತಿದ್ದ ಎರಡು ಸಮುದಾಯಗಳ ನಡುವೆ ದ್ವೇಷದ ಗೋಡೆಯನ್ನು ನಿರ್ಮಿಸಿವೆ. ಕ್ಷಣಮಾತ್ರದಲ್ಲಿ ನಡೆದ ಈ ಘಟನೆಯು, ಮದ್ದೂರಿನ ಭಾವೈಕ್ಯತೆಯ ಪರಂಪರೆಗೆ ಮಸಿ ಬಳಿದಿದ್ದು, ಈಗ ರಾಮ-ರಹೀಮರ ನಗರವು ಬೂದಿ ಮುಚ್ಚಿದ ಕೆಂಡದಂತಿದೆ.
ಮದ್ದೂರಿನ ಐತಿಹಾಸಿಕ ಹಿನ್ನೆಲೆ
ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ್ದ, ಜನರಲ್ಲಿ ದೇಶಾಭಿಮಾನ ಮೂಡಿಸಿದ್ದ ʼಶಿವಪುರ ಸತ್ಯಾಗ್ರಹʼ ಇದೇ ಮದ್ದೂರಿನಲ್ಲಿ ನಡೆದಿತ್ತು.1938 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ವೇಳೆ ತ್ರಿವರ್ಣ ಧ್ವಜ ಹಾರಿಸಲಾಗಿತ್ತು. ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಅಂಗವಾಗಿ ಶಿವಪುರದಲ್ಲಿ ಸತ್ಯಾಗ್ರಹ ಸ್ಮಾರಕವಿದೆ.
ʼಮದ್ದೂರು ವಡೆʼಯ ವಿಶಿಷ್ಟ ಸ್ವಾದ ದಕ್ಷಿಣ ಭಾರತದಾದ್ಯಂತ ಹರಡಿದೆ. ಇಂದಿಗೂ ಬೆಂಗಳೂರು- ಮೈಸೂರು ರೈಲು ನಿಲ್ದಾಣಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಖಾದ್ಯ ಮದ್ದೂರು ವಡೆ. ರುಚಿಕರ ಹಾಗೂ ಮೃದುತ್ವದಿಂದ ಮದ್ದೂರು ವಡೆ ಹೆಚ್ಚು ಪ್ರಖ್ಯಾತಿ ಪಡೆದಿದೆ. ಇದೀಗ ಈ ಖಾದ್ಯ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಳಕೆಯಲ್ಲಿದೆ.
ಇನ್ನು ಕೊಕ್ಕರೆ ಬೆಳ್ಳೂರು ಕೂಡ ಮದ್ದೂರು ತಾಲೂಕಿನ ಪ್ರಸಿದ್ಧ ಪಕ್ಷಿಧಾಮವಾಗಿದೆ. ದೇಶವಿದೇಶಗಳಿಂದ ನೂರಾರು ಜಾತಿಯ ಕೊಕ್ಕರೆಗಳು ಇಲ್ಲಿ ವಲಸೆ ಬರಲಿದ್ದು, ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಮದ್ದೂರಿನಲ್ಲಿ ಹರಿಯುವ ಕಾವೇರಿ ಉಪನದಿ ಶಿಂಷಾ ನೀರಿನಲ್ಲಿ ಬೆಳೆದಿರುವ ಸಿಹಿ ಎಳನೀರು ಹೆಚ್ಚು ಪ್ರಸಿದ್ಧಿ ಪಡೆದಿದೆ. ಇಲ್ಲಿಂದ ಎಳನೀರನ್ನು ಪಂಜಾಬ್ , ಮಹಾರಾಷ್ಟ್ರ , ಪಶ್ಚಿಮ ಬಂಗಾಳ , ಗೋವಾ , ತೆಲಂಗಾಣ , ಗುಜರಾತ್‌ಗೂ ಕೊಂಡೊಯ್ದು ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಮದ್ದೂರನ್ನು ದೇಶದ ಎಳನೀರು ರಾಜಧಾನಿ ಎಂತಲೇ ಕರೆಯಲಾಗುತ್ತದೆ.
ಜೈನ-ಹಿಂದೂ ವಾಸ್ತುಶಿಲ್ಪದ ದೇಗುಲಗಳು
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣವು ಕೇವಲ ಕೃಷಿ ಪ್ರಧಾನ ಪ್ರದೇಶವಷ್ಟೇ ಅಲ್ಲ, ಅದು ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿಯೂ ಶ್ರೀಮಂತವಾದ ನಾಡು. ಹೊಯ್ಸಳ ದೊರೆ ವಿಷ್ಣುವರ್ಧನ ನಿರ್ಮಿಸಿದ ಐತಿಹಾಸಿಕ ಅಲ್ಲಾಳನಾಥ ದೇವಾಲಯ, ಚೋಳರ ಪೂರ್ವ ಕಾಲದ ವರದರಾಜ ದೇವಾಲಯ, ಮತ್ತು 1000 ವರ್ಷಗಳಷ್ಟು ಹಳೆಯದಾದ ಜೈನ ದೇವಾಲಯಗಳು ಇಲ್ಲಿನ ವಾಸ್ತುಶಿಲ್ಪ ವೈಭವಕ್ಕೆ ಸಾಕ್ಷಿಯಾಗಿವೆ. 2016ರಲ್ಲಿ, ಭಾರತೀಯ ಪುರಾತತ್ವ ಇಲಾಖೆಯು ಆರ್ಥಿಪುರದ ಗುಡ್ಡದ ಮೇಲೆ 3 ರಿಂದ 9ನೇ ಶತಮಾನಕ್ಕೆ ಸೇರಿದ 13 ಅಡಿ ಎತ್ತರದ ಬಾಹುಬಲಿ ಪ್ರತಿಮೆಯನ್ನು ಉತ್ಖನನ ಮಾಡಿರುವುದು, ಈ ನೆಲದ ಪ್ರಾಚೀನತೆಯನ್ನು ಸಾರುತ್ತದೆ. ಇಂತಹ ವೈವಿಧ್ಯಮಯ ಸಂಸ್ಕೃತಿ ಮತ್ತು ಸಮುದಾಯಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡು, ಮದ್ದೂರು ಕೂಡು ಬದುಕಿಗೆ ಹೆಸರಾಗಿತ್ತು.
ಆದರೆ, ಶಾಂತಿಪ್ರಿಯರೆಂದೇ ಹೆಸರಾದ ಮಂಡ್ಯ ಜಿಲ್ಲೆಯಲ್ಲಿ, ಇತ್ತೀಚೆಗೆ ಧಾರ್ಮಿಕ ಆಚರಣೆಗಳನ್ನು ಶಾಂತಿ ಕದಡುವ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. "ಕಳೆದ ವರ್ಷ ನಾಗಮಂಗಲದಲ್ಲಿ ನಡೆದ ಗಣೇಶೋತ್ಸವದ ಗಲಭೆ, ಇದೀಗ ಮದ್ದೂರಿನಲ್ಲಿ ನಡೆದ ಕಲ್ಲುತೂರಾಟದ ಘಟನೆಗಳು, ಪಟ್ಟಣದ ಭಾವೈಕ್ಯತೆಗೆ ಮಸಿ ಬಳಿಯುವ ಕಿಡಿಗೇಡಿಗಳ ಪ್ರಯತ್ನಗಳಾಗಿವೆ. ಇದಕ್ಕೆ ರಾಜಕಾರಣಿಗಳೂ ಹೊಣೆಗಾರರು," ಎಂದು ಮದ್ದೂರಿನ ನಿವಾಸಿ ಬೋರಲಿಂಗಯ್ಯ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
"ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವವನ್ನು, ಇಂದು ಕಿಡಿಗೇಡಿಗಳು ಕೋಮು ಸೌಹಾರ್ದವನ್ನು ಹಾಳು ಮಾಡಲು ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ," ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯರಲ್ಲೇ ಅಸಮಾಧಾನ
ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ಹಾಗೂ ನಂತರದ ವಿದ್ಯಮಾನಗಳ ಬಗ್ಗೆ ಸ್ಥಳೀಯರೇ ಅಸಮಾಧಾನ ಹೊರಹಾಕುತ್ತಾರೆ. ಮದ್ದೂರಿನ ರಾಮ ರಹೀಮ್ ನಗರದಲ್ಲಿ ಹಿಂದೂ-ಮುಸ್ಲಿಮರು ಸಹೋದರರಂತೆ ಬದುಕುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನ ಎಂದರೆ ಗಲಭೆಗೂ ಮೂರು ದಿನ ಮುಂಚೆ ಮುಸ್ಲಿಂ ಸಮುದಾಯದವರು ಮಿಲಾನ್ ಪ್ರಯುಕ್ತ ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಆಯೋಜಿಸಿದ್ದರು. ನೂರಾರು ಹಿಂದೂ ಸಮುದಾಯದವರು ರಕ್ತದಾನ ಮಾಡಿದ್ದರು ಎಂದು ಮದ್ದೂರು ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಆದಿಲ್ ಅಲಿ ಖಾನ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಎಸ್‌ಎಂಕೆ ಇಟ್ಟ ಹೆಸರು ರಾಮ ರಹೀಮ್ ನಗರ
ಹಿಂದೂಗಳು ಹಾಗೂ ಮುಸ್ಲಿಮರು ಅನೋನ್ಯವಾಗಿ ವಾಸಿಸುತ್ತಿದ್ದ ದೃಶ್ಯವನ್ನು ಗಮನಿಸಿದ್ದ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಲ್ಲಿನ ಪ್ರದೇಶಕ್ಕೆ ರಾಮ ರಹೀಮ್ ನಗರ ಎಂದು ನಾಮಕರಣ ಮಾಡಿದ್ದರು. ಈ ಹಿಂದೆ ಎಸ್ .ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಗುಡಿಸಲುಗಳು ಭಸ್ಮ ಆಗಿದ್ದವು. ಆಗ ಇಲ್ಲಿನವರಿಗೆ ಮನೆಗಳನ್ನು ಕಟ್ಟಿಸಿಕೊಟ್ಟು ರಾಮ ರಹೀಮ್ ನಗರ ಎಂದು ನಾಮಕರಣ ಮಾಡಿದ್ದರು.
ಒಟ್ಟಾಗಿಯೇ ಸಮಸ್ಯೆ ಇತ್ಯರ್ಥ
ಮದ್ದೂರಿನ ರಾಮ ರಹೀಮ್ ನಗರದಲ್ಲಿ ಸಣ್ಣ ಪುಟ್ಟ ಗಲಾಟೆಯಾದರೆ ಅಥವಾ ಸಮಸ್ಯೆಯಾದರೆ ಪೊಲೀಸ್ ಠಾಣೆಗೆ ಹೋಗುವ ಮೊದಲು ಹಿಂದೂ-ಮುಸ್ಲಿಂ ಮುಖಂಡರು ಚರ್ಚಿಸಿ ಬಗೆಹರಿಸಿಕೊಳ್ಳುತ್ತಾರೆ. ಉಭಯ ಧರ್ಮಿಯರ ಹಬ್ಬದಲ್ಲಿ ಎರಡೂ ಸಮುದಾಯದವರು ಪಾಲ್ಗೊಂಡು ಆಚರಿಸುವಷ್ಟರ ಮಟ್ಟಿಗೆ ಸಾಮರಸ್ಯವಿದೆ.
ಗಣೇಶೋತ್ಸವ ವೇಳೆ ಗಲಭೆಯಾಗಿದ್ದು ಏಕೆ?
ಮಸೀದಿ ಮುಂಭಾಗದ ಬದಲು ಪಕ್ಕದ ಶಾಲೆ ಬೀದಿಯಲ್ಲಿ ಗಣೇಶೋತ್ಸವ ಹೋಗಬೇಕಾಗಿತ್ತು. ಭಾನುವಾರ ಅಂದು ಈದ್ ಮಿಲಾನ್ ಹಿನ್ನಲೆಯಲ್ಲಿ ಪಕ್ಕದ ಶಾಲೆ ಬೀದಿಯಲ್ಲಿ ಅನ್ನಸಂತರ್ಪಣೆ ಮಾಡಲಾಗುತ್ತಿತ್ತು. ಪೊಲೀಸರು ಗಣೇಶೋತ್ಸವವನ್ನು ಮಸೀದಿ ಬೀದಿಯಲ್ಲಿ ಕಳುಹಿಸಿದ್ದರು. ಮಸೀದಿ ಮುಂದೆ ಮೆರವಣಿಗೆ ಬಂದಾಗ ಡಿಜೆ ಆಪ್ ಮಾಡಿ ಯಾವುದೇ ಡ್ಯಾನ್ಸ್ ಮಾಡುತ್ತಿರಲಿಲ್ಲ. ಮಸೀದಿ ದಾಟಿ 100 ಮೀಟರ್ ಮುಂದೆ ಹೋದಾಗ ನಮ್ಮವರೇ ಕೆಲ ಕಿಡಿಗೇಡಿಗಳು ಕಲ್ಲು ಹೊಡೆದಿದ್ದೇ ಗಲಾಟೆಗೆ ಕಾರಣ ಎಂದು ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಆದಿಲ್ ಅಲಿ ಖಾನ್ ಬೇಸರ ಹೊರಹಾಕಿದ್ದಾರೆ.
ಕೈ ಮುಗಿದು ಕ್ಷಮೆ ಕೇಳಿದ ಆದಿಲ್ ಅಲಿ ಖಾನ್
ನಮ್ಮವರಲ್ಲೇ ಕೆಲವರು ಕಲ್ಲು ಎಸೆದಿರುವುದು ಮೇಲ್ನೋಟಕ್ಕೆ ಕಂದು ಬಂದಿದೆ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಇದು ಸಣ್ಣ ಘಟನೆ. ಆದರೆ, ರಾಜಕಾರಣಿಗಳು ಪ್ರವೇಶಿಸಿ ವಿಷಯವನ್ನು ದೊಡ್ಡದು ಮಾಡಿದ್ದಾರೆ. ದಯವಿಟ್ಟು ಯಾವ ರಾಜಕಾರಣಿಗಳು ಕೂಡ ಇದರಲ್ಲಿ ಭಾಗಿಯಾಗಬೇಡಿ, ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಆದಿಲ್ ಖಾನ್ ಕೈ ಮುಗಿದು ಮನವಿ ಮಾಡಿದ್ದಾರೆ.
ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದು ನಮಗೆ ಗೊತ್ತು
ನಮ್ಮ ಸಮಾಜದ ಕೆಲ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಅವರನ್ನು ಜೈಲಿಗೆ ಕಳಿಸಲಾಗಿದೆ. ಈ ಕಿಡಿಗೇಡಿಗಳಿಂದ ನಮ್ಮ ಸಮಾಜಕ್ಕೆ ಕಳಂಕ ಬಂದಿದೆ. ಇವರ ಬಗ್ಗೆ ನಮ್ಮ ಸಮಾಜದ ಮುಖಂಡರು ಕಠಿಣ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇಷ್ಟು ವರ್ಷ ಹಿಂದೂ-ಮುಸ್ಲಿಮರು ಅನೋನ್ಯದಿಂದ ಬದುಕಿದ್ದೇವೆ. ಮುಂದೆಯೂ ಅದೇ ರೀತಿ ಬದುಕಲು ಇಷ್ಟಪಡುತ್ತೇವೆ ಎಂದು ಹೇಳಿದ್ದಾರೆ.
ರಾಮ ರಹೀಮ ನಗರದ ಪುಟ್ಟನಾಯಕ ಮತ್ತು ಶಿವಣ್ಣ ಗೌಡ ಅವರು ಹೇಳುವಂತೆ ಇದೊಂದು ಕಹಿ ಘಟನೆ. "ಈ ಘಟನೆಯಿಂದ ನಮ್ಮೊಳಿಗನ ಸಾಮರಸ್ಯಕ್ಕೆ ತೊಂದರೆಯಾಗಿಲ್ಲ. ಆದರೆ ರಾಜಕೀಯ ಪಕ್ಷಗಳು ಹುಳಿಹಿಂಡಬಾರದಷ್ಟೇ," ಎಂದು ಅವರು ಹೇಳುತ್ತಾರೆ. "ಆ ಹುಡುಗರು ಜೈಲಿನಿಂದ ಹೊರ ಬಂದ ಬಳಿಕ ನಾವೆಲ್ಲರೂ ಕೂತು ಬುದ್ಧಿವಾದ ಹೇಳುತ್ತೇವೆ," ಎಂದೂ ಅವರು ಹೇಳಿದ್ದಾರೆ.