Basanagouda Patil Yatnal Expelled | ಯಡಿಯೂರಪ್ಪ ʼಕುಟುಂಬದʼ ವಿರುದ್ಧ ಸೆಟೆದ ಯತ್ನಾಳ್ ಎರಡನೇ ಬಾರಿ ಉಚ್ಛಾಟನೆ
2015 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಬಿಜಾಪುರ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಗೆ ಟಿಕೆಟ್ ಸಿಗದೇ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ವರಿಷ್ಠರ ಸೂಚನೆ ಬಳಿಕವೂ ನಾಮಪತ್ರ ಹಿಂತೆಗೆದುಕೊಳ್ಳದ ಕಾರಣ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿತ್ತು.;
ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆಗೊಂಡ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಈ ದಂಡನೆ ಹೊಸದೇನಲ್ಲ. 2010 ರಲ್ಲಿ ಬಿಜೆಪಿಗೆ ಗುಡ್ ಬೈ ಹೇಳಿ ಜೆಡಿಎಸ್ ಪಕ್ಷದಲ್ಲಿ ಒಂದು ಸುತ್ತು ಹಾಕಿಕೊಂಡು ಮತ್ತೆ ಬಿಜೆಪಿಗೆ ಸೇರಿದ್ದ ಯತ್ನಾಳ್ ಅವರನ್ನು 2015 ರಲ್ಲಿ ಉಚ್ಛಾಟನೆ ಮಾಡಲಾಗಿತ್ತು.
ಅದೇ ವರ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್( ಬಿ.ಆರ್.ಪಾಟೀಲ್ ಬಣ) ಸೇರಿದ್ದ ಬಸನಗೌಡ ಪಾಟೀಲ ಯತ್ನಾಳ್ ಅವರು ಮೂರೇ ವರ್ಷಗಳಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಯತ್ನಾಳ್ ರಾಜಕೀಯ ಜೀವನದ ಹಾವು ಏಣಿ ಆಟ, ಕುತೂಹಲಕಾರಿ ಹೆಜ್ಜೆಗಳ ಕುರಿತ ಮಾಹಿತಿ ಇಲ್ಲಿದೆ.
ಪ್ರಬಲ ಹಿಂದುತ್ವವಾದಿಯಾದ ಬಸನಗೌಡ ಪಾಟೀಲ ಯತ್ನಾಳ್ ಅವರು 1994 ರಲ್ಲಿ ವಿಧಾನಸಭೆ ಚುನಾವಣೆಗೆ ಬಿಜಾಪುರ ಕ್ಷೇತ್ರದಿಂದ ಸ್ಪರ್ಧಿಸಿ ರಾಜ್ಯ ರಾಜಕಾರಣ ಪ್ರವೇಶಿಸಿದ್ದರು. 1999 ರಲ್ಲಿ ಬಿಜಾಪುರ ಕ್ಷೇತ್ರದಿಂದ ಸ್ಪರ್ಧಿಸಿ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದರು. 2002ರ ಅಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಜವಳಿ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಸೆ. 8, 2003 ರಿಂದ ಮೇ 16, 2004ರವರೆಗೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
2004 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎರಡನೇ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಬಿಜಾಪುರ (ವಿಜಯಪುರ)ಕ್ಷೇತ್ರ ಪುನರ್ವಿಂಗಡಣೆಯ ನಂತರ ಪರಿಶಿಷ್ಟ ಜಾತಿಗೆ ಮೀಸಲಾದ ಕಾರಣ 2009 ರಲೋಕಸಭೆ ಚುನಾವಣೆಯಲ್ಲಿ ಯತ್ನಾಳ್ ಅವರಿಗೆ ಟಿಕೆಟ್ ನಿರಾಕರಿಸಲಾಯಿತು.
ಪಕ್ಷದಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ 2010 ರಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಜೆಡಿಎಸ್ ಸೇರ್ಪಡೆಯಾದರು. 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತರು. ಆದರೂ ಅದೇ ವರ್ಷ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ನಿರ್ಧರಿಸಲಾಯಿತು. ಆದರೆ, ರಾಜ್ಯ ಅಧ್ಯಕ್ಷ ಹುದ್ದೆ ನಿರಾಕರಿಸಿದ ಯತ್ನಾಳ್ ಅವರು ಮರಳಿ ಭಾರತೀಯ ಜನತಾ ಪಾರ್ಟಿಗೆ ಸೇರಿದ್ದರು.
2015 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಬಿಜಾಪುರ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಗೆ ಟಿಕೆಟ್ ಸಿಗದೇ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ವರಿಷ್ಠರ ಸೂಚನೆ ಬಳಿಕವೂ ನಾಮಪತ್ರ ಹಿಂತೆಗೆದುಕೊಳ್ಳದ ಕಾರಣ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿತ್ತು. ಬಳಿಕ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್( ಎಸ್.ಆರ್. ಪಾಟೀಲ್ ಬಣ) ಸೇರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.
2018 ರಲ್ಲಿ ಮೂರು ವರ್ಷಗಳ ಬಳಿಕ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಲಾಯಿತು. ಕಟ್ಟಾ ಹಿಂದುತ್ವ ನಿಲುವುಗಳನ್ನು ಪ್ರತಿಪಾದಿಸುವ ಜೊತೆಗೆ ಲಿಂಗಾಯತ ಸಮುದಾಯ ಬೆಂಬಲ ಹೊಂದಿದ್ದರಿಂದ ಅವರನ್ನು ಪಕ್ಷದ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಬಿಜೆಪಿಗೆ ಕರೆದುಕೊಂಡಿದ್ದರು.
2018 ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2023 ರ ಚುನಾವಣೆಯಲ್ಲೂ ಗೆಲುವು ಸಾಧಿಸಿ ಶಾಸಕ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ.
2015 ರಲ್ಲಿ ವಿಧಾನ ಪರಿಷತ್‌ಗೆ ಟಿಕೆಟ್ ನಿರಾಕರಿಸಿದ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧ ಯತ್ನಾಳ್ ಆರಂಭಿಸಿದ ಸಮರ ಈಗ ಮತ್ತೊಮ್ಮೆ ಅವರಿಂದಲೇ ಉಚ್ಛಾಟನೆಗೆ ಕಾರಣವಾಗಿರುವುದು ವಿಪರ್ಯಾಸ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗಿನಿಂದಲೇ ವಾಗ್ದಾಳಿ, ಬಹಿರಂಗ ಟೀಕೆ ಮುಂದುವರಿಸಿದ್ದರು. ಯಡಿಯೂರಪ್ಪ ಅವರು ವಯೋಸಹಜ ಕಾರಣಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿ ಇಲ್ಲದಿದ್ದರೂ ಮಗನನ್ನು ಭವಿಷ್ಯದ ನಾಯಕನಂತೆ ಬಿಂಬಿಸುತ್ತಿರುವ ಬಿಎಸ್‌ವೈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಪ್ರತ್ಯೇಕ ಬಣ ಕಟ್ಟಿಕೊಂಡು ವಾಗ್ದಾಳಿ ಮುಂದುವರಿಸಿದ್ದು, ಪಕ್ಷಕ್ಕೆ ತೀವ್ರ ಮುಜುಗರ ತಂದೊಡ್ಡಿತ್ತು.