ಮೆಟ್ರೋ ದರ ಇಳಿಸಿ ಸಾರ್ವಜನಿಕ ಸಾರಿಗೆ ಉತ್ತೇಜಿಸಲು ತೇಜಸ್ವಿ ಸೂರ್ಯ ಅಗ್ರಹ

ವೈಜ್ಞಾನಿಕ ಪರಿಹಾರಗಳನ್ನು ನೀಡಿದ್ದೇವೆ. ಬೆಂಗಳೂರಿನ ಶೇ 70 ಜನರು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತಾಗಬೇಕು. ಆ ನಿಟ್ಟಿನಲ್ಲಿ 5 ಅಂಶಗಳನ್ನು ಮುಂದಿಟ್ಟಿದ್ದೇವೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

Update: 2025-10-29 13:23 GMT

ತೇಜಸ್ವಿಸೂರ್ಯ 

Click the Play button to listen to article

ಬೆಂಗಳೂರಿನ ಟನಲ್‌ ರಸ್ತೆಯು ಕಾಂಗ್ರೆಸ್ ಸರಕಾರದ ಸಾಮಾಜಿಕ ಪಿಡುಗಿನ ನಿವಾರಣೆಗೆ 43 ಸಾವಿರ ಕೋಟಿಯ ಯೋಜನೆ ಗೆ ಮುಂದಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟನಲ್‌ ರಸ್ತೆಗೆ 43 ಸಾವಿರ ಕೋಟಿ ಖರ್ಚು ಆಗಲಿದೆ. ಹೊಸ 18 ಕಿಮೀ ಸುರಂಗ ಮಾರ್ಗ ರಚನೆಯಿಂದ ಬೆಂಗಳೂರಿನ ಎಲ್ಲ ಟ್ರಾಫಿಕ್ ಸಮಸ್ಯೆ ಪರಿಹಾರ ಹೇಗೆ ಸಾಧ್ಯ? ದುರಂತ ನಿಭಾಯಿಸುವುದು ಹೇಗೆ? ಸಾರಿಗೆ ಸಾಧ್ಯತೆ ಕುರಿತು ಅಧ್ಯಯನ ನಡೆದಿಲ್ಲ. ತಜ್ಞರು ಹೇಳಿದ್ದನ್ನೂ ಕೇಳುತ್ತಿಲ್ಲ ಎಂದು ಆಕ್ಷೇಪಿಸಿದರು. ಸಾರ್ವಜನಿಕರ ದುಡ್ಡು ಪೋಲು ಮಾಡುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಇಲ್ಲ ಎಂದು ನುಡಿದರು.

ವೈಜ್ಞಾನಿಕ ಪರಿಹಾರಗಳನ್ನು ನೀಡಿದ್ದೇವೆ. ಬೆಂಗಳೂರಿನ ಶೇ 70 ಜನರು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತಾಗಬೇಕು. ಆ ನಿಟ್ಟಿನಲ್ಲಿ 5 ಅಂಶಗಳನ್ನು ಮುಂದಿಟ್ಟಿದ್ದೇವೆ. ಎಲ್ಲ ಯೋಜನೆಗಳು ವಿಳಂಬವಾಗಿವೆ ಮತ್ತು ನಿಧಾನವಾಗಿವೆ. ಹೊಸ ಯೋಜನೆಗಳನ್ನು ಆರಂಭಿಸುವ ಮೊದಲು ಬಾಕಿ ಇರುವ ಯೋಜನೆ ಮುಗಿಸಿ. ಕಡಿಮೆ ಸಮಯ, ಕಡಿಮೆ ಖರ್ಚಿನಲ್ಲಿ ಅತಿ ಹೆಚ್ಚು ಜನರಿಗೆ ಪ್ರಯೋಜನ ಲಭಿಸಬೇಕಿದೆ. ಕಾರುಗಳಿಗೆ ಆದ್ಯತೆ ಕೊಡುವ ಹಾಗೆ ಇರಬಾರದು ಎಂದಿರುವುದಾಗಿ ಹೇಳಿದರು.

ಸಾರ್ವಜನಿಕ ಸಾರಿಗೆಗೆ ಆದ್ಯತೆ ಇರಲಿ

ಸಮನ್ವಯತೆಯಿಂದ ಕೆಲಸ ನಡೆಯಲಿ. ನಡೆದುಕೊಂಡು ಓಡಾಡುವ ಸಾರ್ವಜನಿಕರಿಗೆ ಫುಟ್‍ಪಾತ್ ರಸ್ತೆ ಇರಬೇಕು. ಕಳೆದ 3 ವರ್ಷಗಳಿಂದ ರಸ್ತೆಯಲ್ಲಿ ನಡೆದಾಡುವ ಜನರ ಗರಿಷ್ಠ ಸಾವು ಸಂಭವಿಸುತ್ತಿದೆ. ಇದು ಬೆಂಗಳೂರಿನಲ್ಲಿ ಗರಿಷ್ಠ ಪ್ರಮಾಣದಲ್ಲಿದೆ ಎಂದು ಗಮನ ಸೆಳೆದರು.

ಪುಲ್ವಾಮಾ ದಾಳಿಯಲ್ಲಿ ಕರ್ನಾಟಕದ 3 ಜನರು ಸತ್ತಿದ್ದರು. ಅದು ದೊಡ್ಡ ಸುದ್ದಿ ಆಗಿತ್ತು. ಬೆಂಗಳೂರಿನಲ್ಲಿ ಪ್ರತಿದಿನ 15-20 ಜನರು ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಸಾಯುತ್ತಾರೆ. ಬೆಂಗಳೂರಿಗೆ ಸಬರ್ಬನ್ ರೈಲು, ಮೆಟ್ರೋ, ಟ್ರ್ಯಾಮ್‍ಗಳು, ರಿಂಗ್ ರೈಲ್ ಬೇಕಿದೆ ಎಂದು ಅವರು ತಿಳಿಸಿದರು.

ಹಳದಿ ಮೆಟ್ರೋ ಮಾರ್ಗ ಆರಂಭವಾದ ಬಳಿಕ ಸಿಲ್ಕ್ ಬೋರ್ಡಿನಲ್ಲಿ ಕಾರುಗಳ ಸಂಚಾರ ದಟ್ಟಣೆ ಶೇ 37ರಷ್ಟು ಕಡಿಮೆ ಆಗಿದೆ ಎಂದು ಸರಕಾರವೇ ಹೇಳಿದೆ. ಇದನ್ನೇ ಗಮನಿಸುವುದಾದರೆ ನಾವು ಮೆಟ್ರೋ ಹೆಚ್ಚಿಸಬೇಕೇ ಅಥವಾ ಕಾರುಗಳ ಸಂಚಾರಕ್ಕೆ ಸುರಂಗ ಮಾರ್ಗ ಮಾಡಬೇಕೇ ಎಂದು ಕೇಳಿದರು.

ನೇರಳೆ ಮೆಟ್ರೋ ಮಾರ್ಗದಿಂದ ಶೇ 12ರಿಂದ 14ರಷ್ಟು ಸಾರಿಗೆ ದಟ್ಟಣೆ ಕಡಿಮೆಯಾಗಿದೆ. ಕಾರಿನಲ್ಲಿ ಹೋಗುವವರು ಎ.ಸಿ. ಇರುವ ಮೆಟ್ರೋವನ್ನು ಬಯಸುತ್ತಾರೆ. ತ್ವರಿತವಾಗಿ ಓಡಾಟ ಮತ್ತು ಕಡಿಮೆ ವೆಚ್ಚದ ಪ್ರಯಾಣ ಇದಕ್ಕೆ ಕಾರಣ ಎಂದು ನುಡಿದರು. ಸಮಗ್ರ ಸಂಚಾರ ಯೋಜನೆಯಡಿ ಬೆಂಗಳೂರಿಗೆ 300 ಕಿಮೀ ಮೆಟ್ರೋ ಆಗಬೇಕೆಂದಿದೆ. ಪ್ರತಿ 3 ನಿಮಿಷಕ್ಕೊಂದು ಮೆಟ್ರೋ ರೈಲು ಓಡಾಡುವಂತಿರಬೇಕು. ಇದು ಬಿಜೆಪಿಯ ಪರ್ಯಾಯ ಸಲಹೆ ಎಂದು ವಿವರಿಸಿದರು.

300 ಕಿಮೀ ಮೆಟ್ರೋ ಮಾರ್ಗ ಇದ್ದಾಗ ಬೆಂಗಳೂರಿನ ಯಾವುದೇ ಜಾಗದಲ್ಲಿದ್ದರೂ ಕಾಲ್ನಡಿಗೆಯಲ್ಲಿ 5 ನಿಮಿಷ ಹೋದಾಗ ಮೆಟ್ರೋ ಸ್ಟೇಷನ್ ಲಭಿಸುತ್ತದೆ. ಇದರಿಂದ ಯಾರೂ ಟ್ರಾಫಿಕ್‍ನಲ್ಲಿ ಬಳಲುವ ಸಾಧ್ಯತೆ ಇಲ್ಲ. ಖಾಸಗಿ ವಾಹನ ಮನೆಯಲ್ಲಿಟ್ಟು ಮೆಟ್ರೋದಲ್ಲಿ ಓಡಾಡುತ್ತಾರೆ ಎಂದು ತಿಳಿಸಿದರು.

ಪ್ರೋತ್ಸಾಹಿಸಬೇಕೇ ಅಥವಾ ಬರೆ ಹಾಕಬೇಕೇ..?

ಇದೇ ಮೊತ್ತ ಬಳಸಿದರೆ 5 ವರ್ಷಗಳಲ್ಲಿ ಅಂದರೆ, 2031ರ ಒಳಗೆ 317 ಕಿಮೀ ಮೆಟ್ರೋ ಮಾರ್ಗ ರಚಿಸಲು ಸಾಧ್ಯವಿದೆ. ಆದರೆ, ಸರಕಾರಕ್ಕೆ ಅದರ ಕಡೆ ಆಸಕ್ತಿ ಇಲ್ಲ ಎಂದು ಟೀಕಿಸಿದರು. ಇದೇ ಸರಕಾರ ಮೆಟ್ರೋ ದರ ಏರಿಸಿದೆ ಎಂದು ಆಕ್ಷೇಪಿಸಿದ ಅವರು, ಕೋಣನಕುಂಟೆಯಿಂದ ಒರಾಯನ್ ಮಾಲ್ ಇರುವ ಜಾಗಕ್ಕೆ ಒಂದು ಕುಟುಂಬದ 4 ಜನರು ಹೋಗಲು ಒಂದು ಕಡೆಯಿಂದ ತಲಾ 70 ರೂ. ಟಿಕೆಟ್ ದರ ಇದೆ. 4 ಜನರು ಹೋದಾಗ 280 ರೂ. ಖರ್ಚಾಗುತ್ತದೆ. ಸ್ವಂತ ಕಾರಿನಲ್ಲಿ 160 ರೂ. ವೆಚ್ಚವಾಗುತ್ತದೆ. ಆದರೆ, 75 ನಿಮಿಷ ಬೇಕು. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಬೇಕೇ ಅಥವಾ ಅದರಲ್ಲಿ ಹೋಗುವವರಿಗೆ ಬರೆ ಹಾಕಬೇಕೇ ಎಂದು ತೇಜಸ್ವಿ ಸೂರ್ಯ ಅವರು ಪ್ರಶ್ನಿಸಿದರು.

ಲಾಲ್‍ಬಾಗ್‍ನಿಂದ ಒರಾಯನ್ ಮಾಲ್‍ಗೆ ಗಂಡ- ಹೆಂಡತಿ ಮೆಟ್ರೋದಲ್ಲಿ ಹೋಗುವುದಾದರೆ 100 ರೂ. ದರದಲ್ಲಿ 25 ನಿಮಿಷದಲ್ಲಿ ಹೋಗಬಹುದು. ಬೈಕಿನಲ್ಲಿ ಹೋದರೆ 30 ರೂ. ಖರ್ಚಾಗುತ್ತದೆ. ಜಾಸ್ತಿ ಜನರು ಹೋಗುವಂತೆ ಮೆಟ್ರೋ ದರ ಇರಬೇಕೇ? ಅಥವಾ ಗಗನಚುಂಬಿ ದರವನ್ನೇ ಮೆಟ್ರೋಗೆ ಇಡಬೇಕೇ ಎಂದು ಕೇಳಿದರು.

ಮೆಟ್ರೋ ದರವನ್ನು ಆದಷ್ಟು ಬೇಗ ಇಳಿಸಿ

ಈಗ 10 ಲಕ್ಷ ಜನರು ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ಓಡಾಡುತ್ತಿದ್ದಾರೆ. 45 ಲಕ್ಷ ಜನರು ಬಿಎಂಟಿಸಿಯಲ್ಲಿ ಓಡಾಡುತ್ತಿದ್ದಾರೆ. ಒಟ್ಟು 55 ಲಕ್ಷ ಜನರು ಸಾರ್ವಜನಿಕ ಸಾರಿಗೆಯಲ್ಲಿ ಈಗಾಗಲೇ ಸಂಚರಿಸುತ್ತಾರೆ. ಅವರಿಗಾಗಿ ದರ ಇಳಿಸಿ ಎಂದು ಒತ್ತಾಯಿಸಿದ್ದಾಗಿ ವಿವರಿಸಿದರು.  

ಪ್ರತಿ ಮೆಟ್ರೋ ಲೈನ್ ಸರಾಸರಿ 5ರಿಂದ 6 ವರ್ಷ ವಿಳಂಬ..

ಕಾಳೇನ ಅಗ್ರಹಾರದಿಂದ ನಾಗವಾರದ ವರೆಗಿನ ಗುಲಾಬಿ ಬಣ್ಣದ ಮೆಟ್ರೋ ಯೋಜನೆ 2020ರಲ್ಲಿ ಮುಕ್ತಾಯವಾಗಬೇಕಿತ್ತು. ಮಾರ್ಚ್ 2025 ಎಂದು ಎರಡನೇ ದಿನಾಂಕ ಕೊಟ್ಟರು. ಈಗ ಅದನ್ನು ಮಾರ್ಚ್ 2026ಕ್ಕೆ ವಿಸ್ತರಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿ ಮೆಟ್ರೋ ಲೈನ್ ಸರಾಸರಿ 5ರಿಂದ 6 ವರ್ಷ ವಿಳಂಬವಾಗುತ್ತಿದೆ ಎಂದು ಗಮನ ಸೆಳೆದರು. ಕಾಳೇನ ಅಗ್ರಹಾರದಿಂದ ನಾಗವಾರದ ವರೆಗಿನ ಗುಲಾಬಿ ಬಣ್ಣದ ಮೆಟ್ರೋ ಯೋಜನೆಗೆ ಸುರಂಗ ನಿರ್ಮಾಣದಲ್ಲಿ ಗಟ್ಟಿ ಬಂಡೆ ಅಡ್ಡ ಬರುತ್ತಿದೆ ಎಂದಿದ್ದಾರೆ. ಮೆಟ್ರೋಗೆ ಮಾತ್ರ ಗಟ್ಟಿ ಬಂಡೆ ಅಡ್ಡ ಬರುವುದೇ? ರಸ್ತೆ ಮಾಡಿದರೆ ಮೃದು ಬಂಡೆ ಸಿಗುತ್ತದೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ವಿಮಾನನಿಲ್ದಾಣದ ನೀಲಿ ಮೆಟ್ರೋ ಲೈನ್ 2024ಕ್ಕೆ ಸಂಪೂರ್ಣಗೊಳ್ಳಲಿದೆ ಎಂದಿದ್ದರು. 2026ಕ್ಕೆ ಭಾಗಶಃ, 2027ಕ್ಕೆ ಸಂಪೂರ್ಣ ಎಂದು ಈಗ ಹೇಳುತ್ತಿದ್ದಾರೆ. ಅದ್ಯಾವಾಗ ಆಗುತ್ತೋ ದೇವರಿಗೇ ಗೊತ್ತು ಎಂದು ತಿಳಿಸಿದರು.

ಸರ್ಜಾಪುರದಿಂದ ಹೆಬ್ಬಾಳ ಮೆಟ್ರೋದ ಜಾಗದಲ್ಲೇ ಟನೆಲ್ ರಸ್ತೆ ಪ್ರಸ್ತಾಪಿಸಿದ್ದಾರೆ. ಮೆಟ್ರೋ 2031ಕ್ಕೆ ಸಂಪೂರ್ಣವಾಗಬೇಕಿದೆ. ಟನಲ್‌ ರಸ್ತೆ ಯೋಜನೆಗಾಗಿ ಈ ಡಿಪಿಆರ್ ಕೂಡ ಬಾಕಿ ಇಟ್ಟಿದ್ದಾರೆ. ಸರ್ಜಾಪುರದಿಂದ ಹೆಬ್ಬಾಳ ಮೆಟ್ರೋದಿಂದ ಗಂಟೆಗೆ 69 ಸಾವಿರ ಜನರು ಓಡಾಡಬಹುದು. ಈ ಸರಕಾರಕ್ಕೆ ಅಷ್ಟು ಜನರು ಓಡಾಡುವುದು ಬೇಕಾಗಿಲ್ಲ. 1800 ಜನ ಕಾರು ಮಾಲೀಕರ ಓಡಾಟವಷ್ಟೇ ಅವರಿಗೆ ಬೇಕಾಗಿದೆ ಎಂದು ಆಕ್ಷೇಪಿಸಿದರು.

ಮೋದಿಯವರ ಸರಕಾರ ಬಂದ ಬಳಿಕ ನಾವೆಲ್ಲ ಪ್ರಯತ್ನ ಮಾಡಿ ಸರಕಾರ ಅಧಿಕಾರಕ್ಕೆ ಬಂದ ಮೊದಲ 100 ದಿನಗಳ ಒಳಗೆ ಜೆ.ಪಿ. ನಗರ- ಕೆಂಪಾಪುರದ ಕಿತ್ತಳೆ ಲೈನ್ ಡಿಪಿಆರ್ ಅನುಮೋದಿಸಲಾಗಿತ್ತು. ಈಗ ಒಂದೂವರೆ ವರ್ಷ ಆದರೂ ಟೆಂಡರ್ ಕರೆದಿಲ್ಲ. ಡಬಲ್ ಡೆಕರ್ ಹೊಸ ಯೋಜನೆಗಾಗಿ ಇದನ್ನು ನಿಲ್ಲಿಸಿದ್ದಾರೆ ಎಂದು ಟೀಕಿಸಿದರು.

Tags:    

Similar News