Tunnel Road into Lalbagh Rock; Let the danger come, go to Bengaluru
x

ಲಾಲ್‌ಬಾಗ್‌ನಲ್ಲಿರುವ ಪುರಾತನ ಬಂಡೆ

ಸುರಂಗ ಮಾರ್ಗಕ್ಕಾಗಿ ಲಾಲ್‌ಬಾಗ್‌ನಲ್ಲಿ ಮರ ಕಡಿಯಲ್ಲ: ಸರ್ಕಾರದ ಭರವಸೆ; ತಡೆಯಾಜ್ಞೆಗೆ ಕೋರ್ಟ್​ ನಕಾರ

ಸರ್ಕಾರದ ಈ ಹೇಳಿಕೆಯನ್ನು ದಾಖಲಿಸಿಕೊಂಡ ಪೀಠ, “ಮುಂದಿನ ವಿಚಾರಣೆವರೆಗೆ ಲಾಲ್‌ಬಾಗ್‌ ವ್ಯಾಪ್ತಿಯಲ್ಲಿ ಯಾವುದೇ ಮರಗಳನ್ನು ಕತ್ತರಿಸುವುದಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ಭರವಸೆ ನೀಡಿರುವುದರಿಂದ, ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶದ ಅಗತ್ಯವಿಲ್ಲ,” ಎಂದು ತಿಳಿಸಿತು.


ನಗರದ ಬಹುಚರ್ಚಿತ ಜೋಡಿ ಸುರಂಗ ಮಾರ್ಗ ಯೋಜನೆಗಾಗಿ, ಬೆಂಗಳೂರಿನ ಶ್ವಾಸಕೋಶ ಎಂದೇ ಪ್ರಸಿದ್ಧವಾಗಿರುವ ಲಾಲ್‌ಬಾಗ್‌ ಸಸ್ಯತೋಟದ ಒಂದೇ ಒಂದು ಮರವನ್ನು ಕಡಿಯುವುದಿಲ್ಲ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಸ್ಪಷ್ಟ ಭರವಸೆ ನೀಡಿದೆ. ಸರ್ಕಾರದ ಈ ಭರವಸೆಯನ್ನು ದಾಖಲಿಸಿಕೊಂಡ ನ್ಯಾಯಾಲಯ, ಯೋಜನೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ ಉದ್ದೇಶಿತ ಸುರಂಗ ಮಾರ್ಗದ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ, ಹಿರಿಯ ಕಲಾವಿದ ಪ್ರಕಾಶ್ ಬೆಳವಾಡಿ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ವಿಭಾಗೀಯ ಪೀಠವು ಮಂಗಳವಾರ (ಅ.28) ನಡೆಸಿತು.

ವಿಚಾರಣೆ ವೇಳೆ ಪೀಠವು, ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರಿಗೆ, “ಸುರಂಗ ಮಾರ್ಗಕ್ಕಾಗಿ ಲಾಲ್‌ಬಾಗ್‌ ವ್ಯಾಪ್ತಿಯಲ್ಲಿ ಮರಗಳನ್ನು ಕಡಿಯಲಾಗುತ್ತದೆಯೇ?” ಎಂದು ನೇರವಾಗಿ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅಡ್ವೊಕೇಟ್‌ ಜನರಲ್‌, “ಇಲ್ಲ, ಲಾಲ್‌ಬಾಗ್‌ನಲ್ಲಿ ಯಾವುದೇ ಮರಗಳನ್ನು ಕಡಿಯುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಈ ಹೇಳಿಕೆಯನ್ನು ದಾಖಲಿಸಿಕೊಂಡ ಪೀಠ, “ಮುಂದಿನ ವಿಚಾರಣೆವರೆಗೆ ಲಾಲ್‌ಬಾಗ್‌ ವ್ಯಾಪ್ತಿಯಲ್ಲಿ ಯಾವುದೇ ಮರಗಳನ್ನು ಕತ್ತರಿಸುವುದಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ಭರವಸೆ ನೀಡಿರುವುದರಿಂದ, ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶದ ಅಗತ್ಯವಿಲ್ಲ,” ಎಂದು ತಿಳಿಸಿತು.

ಯೋಜನೆ ಕಾಗದದಲ್ಲಿದ್ದರೂ ಟೆಂಡರ್ ಏಕೆ? - ಅರ್ಜಿದಾರರ ವಾದ

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಡಿ.ಆರ್. ರವಿಶಂಕರ್‌ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು, “ಸುರಂಗ ಮಾರ್ಗ ಯೋಜನೆಯು ಇನ್ನೂ ಕೇವಲ ಕಾಗದದ ಮೇಲಿದೆ. ಯಾವುದೇ ಸಮಗ್ರ ಯೋಜನಾ ವರದಿ (DPR) ಸಿದ್ಧವಾಗಿಲ್ಲ. ಆದರೂ ಸರ್ಕಾರವು ತರಾತುರಿಯಲ್ಲಿ ಟೆಂಡರ್‌ ಪ್ರಕ್ರಿಯೆಯನ್ನು ಆರಂಭಿಸಿದೆ, ಇದು ಕಾನೂನುಬಾಹಿರ,” ಎಂದು ವಾದಿಸಿದರು.

ಅರ್ಜಿದಾರರ ವಾದವನ್ನು ಆಲಿಸಿದ ಪೀಠ, ಇದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಲ್ಲಿದ್ದು, ಎರಡೂ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿತು. ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ, ವಿಚಾರಣೆಯನ್ನು ಡಿಸೆಂಬರ್‌ 9ಕ್ಕೆ ಮುಂದೂಡಿತು.

Read More
Next Story