ಡಿಕೆಶಿ ಓಟಕ್ಕೆ ಬ್ರೇಕ್ ಹಾಕಲು ʼದಲಿತ ಸಿಎಂʼ ಅಸ್ತ್ರ ಪ್ರಯೋಗಿಸಿದ ಸಿಎಂ ಬಣ
ಕೆ.ಎಚ್. ಮುನಿಯಪ್ಪ ಅವರು ಸೋನಿಯಾ ಗಾಂಧಿ ಅವರಿಗೆ ಅತ್ಯಾಪ್ತರು. ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಷ್ಟೇ ಹಿರಿಯ ನಾಯಕರು. ಅವರ ಹಿರಿತನ ಆಧರಿಸಿ ಸಿಎಂ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಹೈಕಮಾಂಡ್ ಮುಂದಿಡಲು ಯೋಜನೆ ರೂಪಿಸಲಾಗಿದೆ.
ಸಿಎಂ ಬದಲಾವಣೆ, ʼನವೆಂಬರ್ ಕ್ರಾಂತಿʼ ಚರ್ಚೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಚಟುವಟಿಕೆಗಳು ಗರಿಗೆದರಿವೆ. ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಬಣದ ದಲಿತ ಸಚಿವರು ಹೊಸ ರಾಜಕೀಯ ತಂತ್ರ ರೂಪಿಸಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸ್ಥಾನ ಬದಲಾದರೆ ಆ ಜಾಗಕ್ಕೆ “ದಲಿತ ಸಿಎಂ” ಕಾರ್ಡ್ ಪ್ರಯೋಗಿಸಲು ಸಿಎಂ ಆಪ್ತರು ಸಜ್ಜಾಗಿದ್ದಾರೆ.
ಸಿಎಂ ನೇತೃತ್ವದಲ್ಲಿ ರಹಸ್ಯ ಸಭೆ
ಬೆಂಗಳೂರಿನ ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ದಲಿತ ಸಚಿವರೊಂದಿಗೆ ರಹಸ್ಯ ಸಭೆ ನಡೆಸಿದ್ದು, ದಲಿತ ಸಿಎಂ ಪ್ಲೇ ಕಾರ್ಡ್ ಪ್ರಯೋಗಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ ಭಾಗವಹಿಸಿ ಚರ್ಚೆ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಸಿಎಂ ಸ್ಥಾನದ ಬೇಡಿಕೆಗೆ ಪ್ರತಿಯಾಗಿ ದಲಿತ ಸಿಎಂ ಬೇಡಿಕೆ ಪ್ರಸ್ತಾಪ ಮುಂದಿಡುವ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ.
ದಲಿತ ಸಿಎಂ ಬೇಡಿಕೆಗೆ ತಂತ್ರ
ಸಿಎಂ ಸಿದ್ದರಾಮಯ್ಯ ಅವರು ಕುರ್ಚಿ ತ್ಯಾಗ ಮಾಡುವ ಪರಿಸ್ಥಿತಿ ಎದುರಾದರೆ ದಲಿತ ಸಿಎಂ ಬೇಡಿಕೆ ಇಡುವ ಕುರಿತು ತೀರ್ಮಾನಿಸಲಾಗಿದೆ. ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಜೊತೆಗೆ ಮುನಿಯಪ್ಪ ಹೆಸರನ್ನು ಮುನ್ನೆಲೆಗೆ ತರಲಾಗಿದೆ. ಆದರೆ, ಡಾ.ಜಿ. ಪರಮೇಶ್ವರ್ ಹಾಗೂ ಮಹದೇವಪ್ಪ ಅವರು ಸಿಎಂ ಸ್ಥಾನಕ್ಕೆ ಕೆ.ಎಚ್. ಮುನಿಯಪ್ಪ ಅವರ ಹೆಸರು ಪ್ರಸ್ತಾಪಿಸಿ, ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಕೆ.ಎಚ್. ಮುನಿಯಪ್ಪ ಅವರು ಸೋನಿಯಾ ಗಾಂಧಿ ಅವರಿಗೆ ಅತ್ಯಾಪ್ತರು. ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಷ್ಟೇ ಹಿರಿಯ ನಾಯಕರು. ಈಗಾಗಲೇ ಕೇಂದ್ರದಲ್ಲಿ ಏಳು ಬಾರಿ ಸಂಸದರಾಗಿದ್ದು, ಕೇಂದ್ರದಲ್ಲಿ ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. ಸದ್ಯ ಮುನಿಯಪ್ಪ ಅವರು ರಾಜ್ಯ ಸರ್ಕಾರದಲ್ಲಿ ಆಹಾರ ಸಚಿವರಾಗಿದ್ದು, ಅವರ ಹಿರಿತನ ಆಧರಿಸಿ ಸಿಎಂ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಹೈಕಮಾಂಡ್ ಮುಂದಿಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.
ಕೆಎಚ್ ಪರ ಪರಮೇಶ್ವರ್ ಬ್ಯಾಟಿಂಗ್ ಆರಂಭ
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಕೆ.ಎಚ್. ಮುನಿಯಪ್ಪ ಪರವಾಗಿ ಬ್ಯಾಟ್ ಬೀಸಿದ್ದು,ಹೈಕಮಾಂಡ್ ಬಳಿ ದಲಿತ ಸಿಎಂ ವಿಷಯ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ದಲಿತ ಸಿಎಂ ಮಾಡದಿದ್ದರೆ ದಲಿತ ಮತಗಳು ಕಾಂಗ್ರೆಸ್ನಿಂದ ದೂರವಾಗಬಹುದು ಎಂಬ ಆತಂಕವನ್ನೂ ಸಿಎಂ ಜತೆಗಿನ ರಹಸ್ಯ ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಎರಡು ದಿನಗಳ ಹಿಂದಷ್ಟೇ ಡಾ. ಜಿ. ಪರಮೇಶ್ವರ್ ಅವರು ಮುನಿಯಪ್ಪ ಅವರು ಸಿಎಂ ಆದರೆ ನಮ್ಮದೇನು ಅಭ್ಯಂತರ ಇಲ್ಲ. ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ದೊರೆತ ಸಮಾಧಾನ ಇರಲಿದೆ ಎಂದು ಹೇಳಿದ್ದರು
ಡಿಕೆಶಿ ಬಣದ ಅಧಿಕಾರ ಹಂಚಿಕೆ ಒತ್ತಡದ ನಡುವೆ ಸಿಎಂ ಬಣವು “ದಲಿತಾಸ್ತ್ರ” ಪ್ರಯೋಗಿಸಿರುವುದು ಹೊಸ ತಲೆನೋವು ತಂದಿಟ್ಟಿದೆ. ದಲಿತ ಸಚಿವರ ಈ ರಣತಂತ್ರ ಯಶಸ್ವಿಯಾದರೆ, ಡಿ.ಕೆ.ಶಿವಕುಮಾರ್ ಅವರ ಸಿಎಂ ಸ್ಥಾನದ ಆಸೆಗೆ ತಾತ್ಕಾಲಿಕವಾಗಿ ಬ್ರೇಕ್ ಬೀಳುವ ಸಾಧ್ಯತೆ ಇದೆ.