ಅರಣ್ಯದಂಚಿನ ಗ್ರಾಮಗಳಿಗೆ ವನ್ಯಜೀವಿಗಳ ಲಗ್ಗೆ; ಸಂಜೆ ಸಫಾರಿ ನಿಷೇಧಿಸಿ ಸರ್ಕಾರ ಆದೇಶ
ಸಫಾರಿಯು ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ಪರಿಸರ ಆಸಕ್ತರಿಗೆ ಶಿಕ್ಷಣ ನೀಡುವುದಾಗಿದೆ. ಇದು ಹಲವರಿಗೆ ಜೀವನೋಪಾಯವೂ ಆಗಿದೆ. ಈಗಿರುವ ಸಫಾರಿಯ ಟ್ರಿಪ್ ಗಳ ಪೈಕಿ ಒಂದು ಟ್ರಿಪ್ ಕಡಿತಗೊಳಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ರಾಜ್ಯದ ವಿವಿಧ ವನ್ಯಜೀವಿ ತಾಣಗಳಲ್ಲಿ ಅರಣ್ಯದಂಚಿನ ಗ್ರಾಮಗಳ ಸುರಕ್ಷತೆ ದೃಷ್ಟಿಯಿಂದ ಸಂಜೆ ಸಫಾರಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಂಜೆ ಸಫಾರಿಯಿಂದ ವನ್ಯ ಜೀವಿಗಳು ಅರಣ್ಯದಂಚಿನ ಗ್ರಾಮಗಳಿಗೆ ಬಂದು ತೊಂದರೆ ನೀಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಈ ಆದೇಶ ಹೊರಡಿಸಿದ್ದಾರೆ.
ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿಗಳ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಫಾರಿಯ ಟ್ರಿಪ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ರಾತ್ರಿ ೬ ಗಂಟೆ ನಂತರವೂ ಕಾಡಿನಲ್ಲಿ ಸಫಾರಿ ವಾಹನಗಳು ಸಂಚರಿಸುತ್ತಿವೆ. ವಾಹನದ ಬೆಳಕು ಮತ್ತು ಶಬ್ದದಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡುತ್ತಿವೆ ಎಂದು ವಿವಿಧ ರೈತ ಸಂಘಟನೆಗಳು ಆರೋಪಿಸಿ, ಸಫಾರಿ ನಿಲ್ಲಿಸುವಂತೆ ಮನವಿ ಮಾಡಿದ್ದರು.
ಸಫಾರಿಯು ವನ್ಯಜೀವಿಗಳ ಬಗ್ಗೆ ಪರಿಸರ ಆಸಕ್ತರಿಗೆ ಶಿಕ್ಷಣ ನೀಡುವುದಾಗಿದೆ. ಜತೆಗೆ ಹಲವರಿಗೆ ಜೀವನೋಪಾಯವೂ ಆಗಿದೆ. ಈ ನಿಟ್ಟಿನಲ್ಲಿ ಹಾಲಿ ಇರುವ ಸಫಾರಿಯ ಟ್ರಿಪ್ ಗಳ ಪೈಕಿ ಒಂದು ಟ್ರಿಪ್ ಕಡಿತಗೊಳಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ. ಸಂಜೆ ಆರರ ನಂತರ ಒಂದು ಟ್ರಿಪ್ ಆಯೋಜಿಸಲಾಗುತ್ತಿತ್ತು.
ನೈಟ್ ಸಫಾರಿ ವಿವಾದ
ರಾಜ್ಯ ಸರ್ಕಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನೈಟ್ ಸಫಾರಿ ಆರಂಭಿಸುವ ಪ್ರಸ್ತಾವನೆ ಹಲವು ವರ್ಷಗಳ ಹಿಂದೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.ಸಿಂಗಾಪುರದ ಮಾದರಿಯಲ್ಲಿ ನೈಟ್ ಸಫಾರಿಯನ್ನು 180 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ನೀಡಿತ್ತು.
ಪರಿಸರವಾದಿಗಳ ವಾದ
ಪ್ರಸ್ತಾವಿತ ಪ್ರದೇಶವು ಆನೆ ಕಾರಿಡಾರ್‌ನ ಭಾಗವಾಗಿದ್ದು, ಇಲ್ಲಿ ರಾತ್ರಿ ಸಫಾರಿಗೆ ಅವಕಾಶ ನೀಡುವುದು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ಉಲ್ಲಂಘನೆಯಾಗುತ್ತದೆ. ರಾತ್ರಿ ಬೆಳಕು ಮತ್ತು ವಾಹನಗಳ ಶಬ್ದವು ಪ್ರಾಣಿಗಳ ನೈಸರ್ಗಿಕ ನಡವಳಿಕೆಗಳನ್ನು ಹಾಳುಮಾಡುತ್ತದೆ. ಇದರಿಂದಾಗಿ ಆನೆಗಳು ಮಾನವ ವಸತಿಗಳತ್ತ ನುಗ್ಗುವುದು ಅಥವಾ ಬೇಟೆ ಪ್ರಾಣಿಗಳು ಗ್ರಾಮಗಳತ್ತ ಬರುವಂತಹ ಮಾನವ-ಪ್ರಾಣಿ ಸಂಘರ್ಷಗಳು ಹೆಚ್ಚಾಗುತ್ತವೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದರು.