ರಾಜ್ಯದಿಂದ ಒಂದೇ ಒಂದು ಕಂಪನಿ ಹೊರ ಹೋಗಿಲ್ಲ, ತಪ್ಪುಕಲ್ಪನೆ ಬೇಡ; ಎಂ.ಬಿ.ಪಾಟೀಲ್‌

ಫಾಕ್ಸ್‌ಕಾನ್ ಕಂಪನಿಯು ತೈವಾನ್ ನಂತರದ ತನ್ನ ಬೃಹತ್ ಘಟಕವನ್ನು ನಮ್ಮಲ್ಲಿ ಆರಂಭಿಸಿದೆ. ಇಲ್ಲಿಂದ ದುಬಾರಿ ಮೊಬೈಲ್ ಫೋನ್‌ಗಳು ರಫ್ತಾಗಿ ಹೋಗುತ್ತವೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

Update: 2025-10-29 09:09 GMT

ಸಚಿವ ಎಂ.ಬಿ. ಪಾಟೀಲ್‌

Click the Play button to listen to article

ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ಪರಿಸರವಿದೆ. ಉತ್ತಮ ಪ್ರತಿಭಾ ಸಂಪನ್ಮೂಲದ ಜತೆಗೆ ಸರ್ಕಾರದ ಕೈಗಾರಿಕಾ ನೀತಿಯೂ ಸ್ಪಷ್ಟವಾಗಿದೆ. ರಾಜ್ಯದಿಂದ ಕೈಗಾರಿಕೆಗಳು ಕಾಲ್ಕೀಳುತ್ತಿವೆ ಎಂಬುದು ಕೇವಲ ತಪ್ಪು ಕಲ್ಪನೆ, ಇಲ್ಲಿಯವರೆಗೆ ರಾಜ್ಯದಿಂದ ಒಂದೇ ಒಂದು ಕೈಗಾರಿಕೆ ಹೊರಹೋಗಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು. 

ಬುಧವಾರ ಮೈಸೂರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ಕಳೆದ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಗಿದೆ. ಇದರಿಂದ 10.27 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುವ ಖಾತ್ರಿ ದೊರೆತಿದೆ. ಶೇ. 60ಕ್ಕಿಂತ ಹೆಚ್ಚು ಬಂಡವಾಳ ಈಗಾಗಲೇ ಹೂಡಿಕೆಯಾಗಿದೆ. ನಾವು ಬರೀ ಮಾತನಾಡುವುದಿಲ್ಲ. ನುಡಿದಂತೆ ನಡೆಯುತ್ತಿದ್ದೇವೆ. ಈ ಹೂಡಿಕೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದರು.

ಒಸಾಕಾವಾ ಕಂಪನಿಯಿಂದ ಹೂಡಿಕೆ

ಫಾಕ್ಸ್‌ಕಾನ್ ನಂತಹ ದೈತ್ಯ ಕಂಪನಿಯು ತೈವಾನ್ ನಂತರದ ತನ್ನ ಬೃಹತ್ ಘಟಕವನ್ನು ನಮ್ಮಲ್ಲಿ ಆರಂಭಿಸಿದೆ. ಇಲ್ಲಿಂದ ದುಬಾರಿ ಮೊಬೈಲ್ ಫೋನ್‌ಗಳು ರಫ್ತಾಗಿ ಹೋಗುತ್ತವೆ. ಜಪಾನ್‌ನಂತಹ  ಸಂಪ್ರದಾಯವಾದಿ ದೇಶದಿಂದ ಕಳೆದ ಎರಡು ವರ್ಷಗಳಲ್ಲಿ ರಾಜ್ಯಕ್ಕೆ 10,500 ಕೋಟಿ ರೂ. ಬಂಡವಾಳ ಹೂಡಿಕೆಯ ಖಾತ್ರಿ ಸಿಕ್ಕಿದೆ. ಸಾಮಾನ್ಯವಾಗಿ ಅಲ್ಲಿ ಕುಟುಂಬ ಪರಿವಾರಗಳೇ ಕೈಗಾರಿಕೆ ನಡೆಸುವುದರಿಂದ ನಿರ್ಧಾರ ತೆಗೆದುಕೊಳ್ಳುವುದು ನಿಧಾನವಾಗುತ್ತದೆ. ಆದರೂ ನಮ್ಮ ವಿಚಾರದಲ್ಲಿ ಎಲ್ಲವೂ ತ್ವರಿತಗತಿಯಲ್ಲಿ ನಡೆದಿದೆ. ಒಸಾಕಾವಾ ಕಂಪನಿ ಕೂಡ ಹೂಡಿಕೆ ಮಾಡಲು ಬಂದಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ತಾರತಮ್ಯ

ನಮ್ಮಲ್ಲಿ ಸೆಮಿಕಂಡಕ್ಟರ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಪ್ರೋತ್ಸಾಹವಿದೆ. ನಮ್ಮ ಕೈಗಾರಿಕಾ ನೀತಿ ಉದ್ಯಮಸ್ನೇಹಿಯಾಗಿದೆ. ಆದರೆ ಕೇಂದ್ರ ಸರ್ಕಾರವು ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ವಿಶೇಷ ಪ್ರೋತ್ಸಾಹಕ ಕ್ರಮಗಳನ್ನು ಹೊಂದಿದ್ದು, ಈ ಕಂಪನಿಗಳು ಅದು ಬಿಜೆಪಿ ಆಡಳಿತವಿರುವ ಗುಜರಾತ್, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಕಳಿಸಿಕೊಡುತ್ತಿದೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ. ಹಿಂದೆ ಒಂದು ಕಂಪನಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ರಾಜ್ಯದಲ್ಲೇ ಹೂಡಿಕೆ ಮಾಡಲು ತೀರ್ಮಾನಿಸಿತ್ತು. ಆದರೆ, ದೆಹಲಿಗೆ ಹೋದಾಗ ಅವರು ಮನಸ್ಸು ಬದಲಿಸಿದರು. ಕೇಂದ್ರ ಸರ್ಕಾರವು ಇಂತಹ ತಾರತಮ್ಯವನ್ನು ಬಿಡಬೇಕು ಎಂದರು.

Tags:    

Similar News