ಕಾರಿನ ಮಿರರ್‌ಗೆ ತಾಕಿದ ಬೈಕ್; ಪದೇ ಪದೇ ಹಿಂಬಾಲಿಸಿ ಡಿಕ್ಕಿ ಹೊಡೆದ ಕಾರು; ಒಬ್ಬ ಸಾವು
ಕಾರಿನ ಮಿರರ್ ಚೂರಾಗಿದ್ದರಿಂದ ಕುಪಿತಗೊಂಡ ಮನೋಜ್ ಕುಮಾರ್ ಮತ್ತು ಆರತಿ ಶರ್ಮಾ ದಂಪತಿ ಬೈಕ್ ಸವಾರರನ್ನು ಎರಡು ಕಿ.ಮೀ. ಹಿಂಬಾಲಿಸಿ ಬಂದು ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಕಾರಿನ ಮಿರರ್‌ಗೆ ಸೋಕಿದ ಕಾರಣ ಕುಪಿತಗೊಂಡ ಮಾಲೀಕರು, ಬೈಕ್ ಸವಾರರನ್ನು ಹಿಂಬಾಲಿಸಿಕೊಂಡು ಹೋಗಿ ಪದೇ ಪದೇ ಡಿಕ್ಕಿ ಹೊಡೆದಿದ್ದಾರೆ. ಈ ಘಟನೆಯನ್ನು ಒಬ್ಬ ಮೃತಪಟ್ಟಿದ್ದು, ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರ (ಅ.27) ರಾತ್ರಿ 11.30ಕ್ಕೆ ಶ್ರೀರಾಮ ಲೇಔಟ್‌ನಲ್ಲಿ ಘಟನೆ ನಡೆದಿದೆ. ದರ್ಶನ್ ಮತ್ತು ವರುಣ್ ಇಬ್ಬರೂ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರಿನ ಮಿರರ್‌ಗೆ ಸೋಕಿದೆ. ಈ ವೇಳೆ ಮಿರರ್ ಗಾಜು ಒಡೆದಿದೆ. ಇದರಿಂದ ಕೋಪಗೊಂಡ ಮನೋಜ್ ಕುಮಾರ್ ಮತ್ತು ಆರತಿ ಶರ್ಮಾ ದಂಪತಿಯು ಸುಮಾರು ಎರಡು ಕಿ.ಮೀ ಹಿಂಬಾಲಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮನೋಜ್ ಕುಮಾರ್ ಕಳರಿಪಯಟ್ಟು ಶಿಕ್ಷಕನಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿ ಅಕಾಡೆಮಿ ನಡೆಸುತ್ತಿದ್ದಾರೆ. ಘಟನೆ ಬಳಿಕ ಸ್ಥಳದಿಂದ ಪಲಾಯನ ಮಾಡಿದ ದಂಪತಿಯನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ದರ್ಶನ್ ಮತ್ತು ವರುಣ್ ಇಬ್ಬರೂ ರಸ್ತೆಗುರುಳಿ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ದರ್ಶನ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪ್ರಾಥಮಿಕವಾಗಿ ಅಪಘಾತ ಎಂದು ಜೆಪಿ ನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ತನಿಖೆಯಿಂದ ಇದೊಂದು ಕೊಲೆ ಎಂದು ತಿಳಿದು ಬಂದಿದೆ.
ಯೂ ಟರ್ನ್ ಬಂದು ಮತ್ತೆ ಡಿಕ್ಕಿ ಹೊಡೆದಿದ್ದ ದಂಪತಿ
ಮೊದಲು ಇಬ್ಬರಿಗೂ ಡಿಕ್ಕಿ ಹೊಡೆದ ನಂತರ ತಪ್ಪಿಸಿಕೊಂಡ ದಂಪತಿಯು ಮತ್ತೊಮ್ಮೆ ಯೂ ಟರ್ನ್ ಮಾಡಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆ ನಂತರ ಸ್ಥಳದಿಂದ ಪಲಾಯನ ಮಾಡಿದ್ದಾರೆ. ಕೆಲ ಸಮಯದ ಬಳಿಕ ದಂಪತಿಯು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸ್ಥಳಕ್ಕೆ ತೆರಳಿ ಕಾರಿನ ಬಿಡಿ ಭಾಗಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು.