ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ; ನವೆಂಬರ್ ಕ್ರಾಂತಿ ತಳ್ಳಿಹಾಕಿದ ಡಿ.ಕೆ.ಸುರೇಶ್
ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ಸಮಾನವಾಗಿ ನೋಡಬೇಕಿರುವುದು ಡಿಸಿಎಂ ಕರ್ತವ್ಯ. "ನನಗೆ ನವೆಂಬರ್ ಎಂದರೆ ಕನ್ನಡ ರಾಜ್ಯೋತ್ಸವ ನೆನಪಾಗುತ್ತದೆ. ನಾವು, ನೀವೆಲ್ಲರೂ ಸೇರಿ ರಾಜ್ಯೋತ್ಸವ ಆಚರಿಸುತ್ತೇವೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್
ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ, ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಮಾತುಗಳ ಬೆನ್ನಲ್ಲೇ ಡಿಸಿಎಂ ಸಹೋದರ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಹೇಳಿಕೆ ಸಂಚಲನ ಮೂಡಿಸಿದೆ.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಡಿ.ಕೆ.ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗುತ್ತಾರೆ, ಇಲ್ಲದಿದ್ದರೆ ಇಲ್ಲ. ಅದಕ್ಕಾಗಿ ಏಕೆ ತಲೆಕೆಡಿಸಿಕೊಳ್ಳಬೇಕು" ಎಂದು ಹೇಳಿರುವುದು ನಾನಾ ಚರ್ಚೆಗಳಿಗೆ ಕಾರಣವಾಗಿದೆ.
ಡಿಕೆಶಿ ರಾಜಕೀಯ ಭವಿಷ್ಯ ಬದಲಾಗಲಿದೆ. ಅಣ್ಣನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಆಸೆಯಿದೆ ಎಂದು ಈ ಹಿಂದೆ ಡಿ.ಕೆ. ಸುರೇಶ್ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಅಣ್ಣ ಸಿಎಂ ಆಗಬೇಕೆಂಬ ಆಸೆಯಿದೆ ಎಂದು ಈ ಹಿಂದೆ ಹೇಳಿದ್ದೆ. ಅವರ ಹಣೆಯಲ್ಲಿ ಬರೆದಿದ್ದರೆ ಅದು ಆಗುತ್ತದೆ, ಇಲ್ಲದಿದ್ದರೆ ಇಲ್ಲ. ಪಕ್ಷ ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ಪಕ್ಷದ ಅಧ್ಯಕ್ಷರಾಗಿ, ಡಿಸಿಎಂ ಆಗಿ ಪಕ್ಷದ ಏಳಿಗೆ, ಘನತೆಗೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತಿದ್ದಾರೆ" ಎಂದರು.
ನವೆಂಬರ್ ಕ್ರಾಂತಿಯ ಬಗ್ಗೆ ಡಿಸಿಎಂ ಗಮನ ಹರಿಸುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ಸಮಾನವಾಗಿ ನೋಡಬೇಕಿರುವುದು ಡಿಸಿಎಂ ಅವರ ಕರ್ತವ್ಯ. "ನನಗೆ ನವೆಂಬರ್ ಎಂದರೆ ಕನ್ನಡ ರಾಜ್ಯೋತ್ಸವ ನೆನಪಾಗುತ್ತದೆ. ನಾವು, ನೀವೆಲ್ಲರೂ ಸೇರಿ ಈ ಹಬ್ಬವನ್ನು ಆಚರಣೆ ಮಾಡೋಣ. ಮಿಕ್ಕ ವಿಚಾರಗಳ ಬಗ್ಗೆ ನನಗೆ ತಿಳಿದಿಲ್ಲ. ಈ ಪ್ರಶ್ನೆಯನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಎಐಸಿಸಿ ನಾಯಕರಿಗೆ ಕೇಳಬೇಕು ಎಂದು ತಿಳಿಸಿದರು.
2028 ಕ್ಕೆ ಸಿದ್ದರಾಮಯ್ಯ ಸ್ಪರ್ಧೆ ತಪ್ಪಿಲ್ಲ
ರಾಜಕೀಯದಲ್ಲಿ 98 ವರ್ಷ ಆದವರೂ ಸಕ್ರಿಯವಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎನ್ನುವುದರಲ್ಲಿ ಯಾವ ತಪ್ಪೂ ಇಲ್ಲ. ಅವರು ನಮ್ಮ ನಾಯಕರು. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಒಬ್ಬ ನಾಯಕನಿಗೆ ಇರಬೇಕಾದ ಎಲ್ಲಾ ಅವಕಾಶಗಳು ಅವರಿಗಿದೆ. ಆರೋಗ್ಯವಾಗಿಯೂ ಇದ್ದಾರೆ. ಉತ್ತಮವಾಗಿ ಆಡಳಿತ ನಡೆಯುತ್ತಿದೆ ಎಂದರು.
ಎಲ್ಲರನ್ನೂ ತೃಪ್ತಿಪಡಿಸಲು ಆಗಲ್ಲ
ನಾಯಕತ್ವ ಬದಲಾವಣೆ ಬಗ್ಗೆ ನನಗೆ ಹೆಚ್ಚು ಮಾಹಿತಿಯಿಲ್ಲ. ಐದು ವರ್ಷಗಳ ಕಾಲ ಕೆಲಸ ಮಾಡಿ ಎಂದು ಜನ 140 ಸ್ಥಾನ ನೀಡಿ ಆಶೀರ್ವಾದ ಮಾಡಿದ್ದಾರೆ. ನಾವು ಜನರ ಹಿತವನ್ನು ಕಾಯಬೇಕು ಹಾಗೂ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿವೆ. ಎಲ್ಲಾ ಕಾರ್ಯಕರ್ತರನ್ನು ತೃಪ್ತಿಪಡಿಸಲು ಆಗುವುದಿಲ್ಲ. ಯಾವುದೇ ಸರ್ಕಾರ ಇದ್ದರೂ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಬೇರೆ ಬೇರೆ ಇರುತ್ತದೆ. ಇದನ್ನು ಸರಿದೂಗಿಸುವ ಕೆಲಸವನ್ನು ಪಕ್ಷ ಹಾಗೂ ನಾಯಕತ್ವ ಮಾಡುತ್ತದೆ ಎಂದರು.
ಆರ್‌ಎಸ್‌ಎಸ್ ಕೆಲ ಬದಲಾವಣೆ ಮಾಡಿಕೊಳ್ಳಬೇಕು
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ದೊಣ್ಣೆ ಹಿಡಿದುಕೊಂಡು ಮಾಡುವ ಪಥಸಂಚಲನಕ್ಕೆ ವಿರೋಧವಿದೆ. ದೊಣ್ಣೆ ಹಿಡಿದುಕೊಂಡು ಮಾಡುವ ಪಥಸಂಚಲನ ಹಿಂದಿನ ಕಾಲದಲ್ಲಿ ಸರಿ ಎನಿಸುತ್ತಿತ್ತು. ಬೇರೆಯವರು ಇದೇ ಸಂದರ್ಭದಲ್ಲಿ ಲಾಠಿ ಹಿಡಿದು ಓಡಾಡುವುದಕ್ಕೆ ಅವಕಾಶ ನೀಡುತ್ತೀರಾ ಎನ್ನುವುದು ಇಲ್ಲಿನ ಪ್ರಶ್ನೆ. ಇವರು ದೊಣ್ಣೆ ಹಿಡಿದು ಓಡಾಡುತ್ತಾರೆ. ಬೇರೆ ಸಮುದಾಯ, ಸಂಘಟನೆಗಳು ಇದೇ ಕೆಲಸ ಮಾಡಿದರೆ ಆಗ ಏನಾಗುತ್ತದೆ ಎನ್ನುವುದನ್ನು ಚಿಂತನೆ ಮಾಡಬೇಕು. ಅದರ ಬಗ್ಗೆ ಸ್ಪಷ್ಟನೆ ನೀಡಬೇಕಿದೆ ಎಂದು ತಿಳಿಸಿದರು.
ದಲಿತ ಸಮಾವೇಶ ತಪ್ಪಿಲ್ಲ
ದಲಿತ ಸಮಾವೇಶ ಮಾಡುವುದು ತಪ್ಪಲ್ಲ. ಪಕ್ಷದ ಸಂಘಟನೆಗೆ ಇದು ಶಕ್ತಿಯೇ ಆಗುತ್ತದೆ. ಪಕ್ಷದ ಅಡಿಯಲ್ಲಿಯೇ ಕಾರ್ಯಕ್ರಮ ಮಾಡುತ್ತಾರೋ ಇಲ್ಲವೋ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದರು.