ಸ್ವದೇಶಿ ನಿರ್ಮಿತ ಮೊದಲ ಚಾಲಕ ರಹಿತ ಕಾರು ಅನಾವರಣ; ವಿಪ್ರೊ, ಐಐಎಸ್ಸಿ, ಆರ್‌ವಿ ಕಾಲೇಜಿನ ತಜ್ಞರಿಂದ ಕಾರು ತಯಾರಿಕೆ
ಭಾರತದಲ್ಲೇ ನಿರ್ಮಿತವಾದ ಚಾಲಕರಹಿತ ಕಾರಿಗೆ “ವೀರೆನ್” (WIRIN – Wipro-IISc Research and Innovation Network) ಎಂದು ನಾಮಕರಣ ಮಾಡಲಾಗಿದೆ. ಅ.27 ರಂದು ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕಾರಿನ ಪರೀಕ್ಷಾರ್ಥ ಸಂಚಾರ ನಡೆಸಲಾಯಿತು.
ದೇಶದ ಮೊದಲ ಚಾಲಕರಹಿತ ಕಾರು ಉತ್ಪಾದನೆಯಲ್ಲಿ ಕರ್ನಾಟಕ ಮಹತ್ವದ ಸಾಧನೆ ಮಾಡಿದೆ. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ), ವಿಪ್ರೋ ಹಾಗೂ ಆರ್‌ವಿ ಎಂಜಿನಿಯರಿಂಗ್ ಕಾಲೇಜು ಜಂಟಿಯಾಗಿ ಚಾಲಕ ರಹಿತ ಕಾರು ವಿನ್ಯಾಸ ಮಾಡಿವೆ. ಅಲ್ಲದೇ ಪ್ರಯೋಗಾರ್ಥ ಸಂಚಾರ ಕೂಡ ನಡೆಸಿವೆ.
ವಿಪ್ರೊ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಆರ್‌ವಿ ಎಂಜಿನಿಯರಿಂಗ್ ಕಾಲೇಜು ತಾಂತ್ರಿಕ ತಂಡವು ಆರು ವರ್ಷಗಳ ನಿರಂತರ ಸಂಶೋಧನೆಯ ಫಲವಾಗಿ ಭಾರತದ ಮೊದಲ ಚಾಲಕರಹಿತ ಕಾರು ನಿರ್ಮಾಣವಾಗಿದೆ. ಈ ಕಾರನ್ನು ಭಾರತೀಯ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ಸ್ವಯಂ ಚಾಲಿತ ತಂತ್ರಜ್ಞಾನ ವ್ಯವಸ್ಥೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಭಾರತದಲ್ಲೇ ನಿರ್ಮಿತವಾದ ಚಾಲಕರಹಿತ ಕಾರಿಗೆ “ವೀರೆನ್” (WIRIN – Wipro-IISc Research and Innovation Network) ಎಂದು ನಾಮಕರಣ ಮಾಡಲಾಗಿದೆ. ಅ.27 ರಂದು ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕಾರನ್ನು ಪ್ರಯೋಗಾರ್ಥ ಸಂಚಾರ ನಡೆಸಲಾಯಿತು.
ವಿಪ್ರೋ ಸಂಸ್ಥೆಯ ಸ್ವಯಂ ಚಾಲಿತ ವ್ಯವಸ್ಥೆ ಮತ್ತು ರೋಬೋಟಿಕ್ಸ್ ವಿಭಾಗದ ಜಾಗತಿಕ ಮುಖ್ಯಸ್ಥ ರಾಮಚಂದ್ರ ಬುದ್ಧಿಹಾಳ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ (RSST) ಅಧ್ಯಕ್ಷ ಎಂ.ಪಿ. ಶ್ಯಾಮ್ ಹಾಗೂ ಆರ್ವಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎನ್. ಸುಬ್ರಮಣ್ಯ ಅವರು ಕಾರು ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವಿಡಿಯೊ
ಚಾಲಕರಹಿತ ಕಾರು ಅನಾವರಣ ಸಮಾರಂಭದಲ್ಲಿ ಬೆಂಗಳೂರಿನ ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಅವರು ಕಾರಿನೊಳಗೆ ಪ್ರಯಾಣಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಪ್ರೋ ಮತ್ತು ಐಐಎಸ್ಸಿ ನಡುವೆ 2019ರಲ್ಲಿ ಚಾಲಕ ರಹಿತ ಕಾರು ಅಭಿವೃದ್ಧಿಪಡಿಸಲು ಸಹಯೋಗ ಏರ್ಪಟ್ಟಿತ್ತು.
ಭಾರತೀಯ ರಸ್ತೆಗಳಲ್ಲಿ ಗುಂಡಿಗಳು, ಜಾನುವಾರುಗಳ ಸಂಚಾರ ಇತ್ಯಾದಿ ಸವಾಲುಗಳನ್ನು ಎದುರಿಸುವ ರೀತಿಯಲ್ಲಿ ಕಾರು ಅಭಿವೃದ್ಧಿಪಡಿಸಲಾಗಿದೆ. ಕಾರು ತಯಾರಿಕೆಗೆ ಸಂಪೂರ್ಣ ಸ್ವದೇಶಿ ನಿರ್ಮಿತ ಸ್ವಯಂ ಚಾಲಿತ ವಾಹನ ತಂತ್ರಜ್ಞಾನ ಬಳಸಲಾಗಿದೆ. ಸ್ಥಳೀಯ ರಸ್ತೆಗಳಿಗೆ ತಕ್ಕಂತೆ ಕಾಗ್ನಿಟಿವ್ ನ್ಯಾವಿಗೇಶನ್ ಮತ್ತು 5G ಆಧಾರಿತ Vehicle-to-Everything (V2X) ಸಂವಹನ ವ್ಯವಸ್ಥೆ ಒಳಗೊಂಡಿದೆ.
ಸಂಶೋಧನೆ, ಅಭಿವೃದ್ಧಿ ಹಿನ್ನೆಲೆ
‘ವೀರೆನ್’ ಯೋಜನೆಯಡಿ (Wipro IISc Research and Innovation Network (WIRIN) ಚಾಲಕರಹಿತ ಕಾರು ನಿರ್ಮಿಸಲಾಗಿದೆ. ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್ (ML), ದೃಶ್ಯ ಸಂವಹನ (Visual Computing), ಮಾನವ-ಯಂತ್ರ ಸಂವಹನ (HCI) ಮತ್ತು ವಾಹನ-ಸಂಪರ್ಕ (V2X) ತಂತ್ರಜ್ಞಾನಗಳನ್ನು ಆಧರಿಸಿ ಕಾರು ನಿರ್ಮಾಣ ಮಾಡಲಾಗಿದೆ.
ಈ ಯೋಜನೆಯು ಭಾರತೀಯ ಅನ್ವಯಿಕ ಕೈಗಾರಿಕೆಗಳಿಗೆ ನೆರವಾಗುವಂತೆಯೇ ಐಐಎಸ್ಸಿ ಸಂಶೋಧನಾ ಸಾಮರ್ಥ್ಯ ಬಳಸಿ ನಿರ್ಮಿಸಲಾಗಿದೆ. ದೇಶದ ಮೊದಲ ಚಾಲಕರಹಿತ ಕಾರು ತಯಾರಿಕೆ ಕುರಿತು ವಿಪ್ರೊ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲದಿದ್ದರೂ ಕಂಪನಿಯ ಮೂಲಗಳು ಈ ಯೋಜನೆ ಭಾರತೀಯ ಸ್ವಯಂ ಚಾಲಿತ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಮಾರ್ಗ ಅನ್ವೇಷಿಸಿದೆ ಎಂದು ಹೇಳಿವೆ .
ಬೃಹತ್ ತಂತ್ರಜ್ಞಾನ ಸಂಸ್ಥೆ ಜಂಟಿ ಸಹಭಾಗಿತ್ವದಿಂದಾಗಿ ಭಾರತವು ತನ್ನ ಮೊದಲ ಸ್ವದೇಶಿ ಸ್ವಯಂ ಚಾಲಿತ ವಾಹನ ಅಭಿವೃದ್ಧಿಯ ಯುಗಕ್ಕೆ ಕಾಲಿಟ್ಟಿದೆ ಎಂಬ ಮಾತುಗಳು ತಜ್ಞರಿಂದ ಕೇಳಿ ಬರುತ್ತಿವೆ.