ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರಾಗಿ ಪ್ರೊ.ಗೋವಿಂದ ರಾವ್ ನೇಮಕ

ಆರ್ಥಿಕ ತಜ್ಞ ಪ್ರೊ.ಗೋವಿಂದ ರಾವ್ ಅವರನ್ನು ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

Update: 2024-03-17 08:04 GMT

ಬೆಂಗಳೂರು: ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರಾಗಿ ಆರ್ಥಿಕ ತಜ್ಞ ಪ್ರೊ. ಗೋವಿಂದ ರಾವ್ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

“ಡಾ. ಡಿ.ಎಂ.ನಂಜುಂಡಪ್ಪನವರ ಪ್ರಾದೇಶಿಕ ಅಸಮತೋಲನ ನಿವಾರಣಾ ವರದಿಯು 22 ವರ್ಷಗಳಷ್ಟು ಹಳೆಯದಾಗಿದೆ. ಹೀಗಾಗಿ ರಾಜ್ಯ ಸರ್ಕಾರವು 233 ತಾಲ್ಲೂಕುಗಳಲ್ಲಿ ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಿ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕ ಗುರುತಿಸಲು ಆರ್ಥಿಕ ತಜ್ಞ ಪ್ರೊ. ಗೋವಿಂದ ರಾವ್ ಅವರನ್ನು ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಳಿಸಿ ಆದೇಶಿಸಲಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಪ್ರೊ. ಗೋವಿಂದ್‌ ರಾವ್‌ ಹಿನ್ನೆಲೆ ಏನು?

ತಕ್ಷಶಿಲಾ ಸಂಸ್ಥೆಯ ಕೌನ್ಸಿಲರ್ ಆಗಿರುವ ಡಾ.ಎಂ.ಗೋವಿಂದ ರಾವ್ ಅವರು, ಅರ್ಥಶಾಸ್ತ್ರಜ್ಞರಾಗಿದ್ದು, 14ನೇ ಹಣಕಾಸು ಆಯೋಗದ ಸದಸ್ಯರಾಗಿದ್ದರು. ಈ ಹಿಂದೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿಯ ನಿರ್ದೇಶಕರಾಗಿ ಮತ್ತು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆಯ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾಗಿ, ಹಣಕಾಸು ವಲಯದ ಶಾಸಕಾಂಗ ಸುಧಾರಣಾ ಆಯೋಗ (ಎಫ್‌ಎಸ್‌ಎಲ್‌ಆರ್‌ಸಿ) ಮತ್ತು ಬಹುಮಟ್ಟದ ಯೋಜನೆ, ಯೋಜನಾ ಆಯೋಗದ ತಜ್ಞರ ಸಮಿತಿಯ ಸದಸ್ಯರಾಗಿದ್ದರು. ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿ, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮತ್ತು ಯುಎನ್‌ಡಿಪಿಗೆ ಸಲಹೆಗಾರರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ಡಿ.ಎಂ. ನಂಜುಂಡಪ್ಪ ಸಮಿತಿ

ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮತೋಲನ ನಿವಾರಿಸುವ ಸಲುವಾಗಿ ಅರ್ಥಶಾಸ್ತ್ರಜ್ಞ ಡಾ.ಡಿ.ಎಂ. ನಂಜುಂಡಪ್ಪ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2000ರಲ್ಲಿ ರಚಿಸಲಾಗಿತ್ತು.

ಡಾ.ನಂಜುಂಡಪ್ಪ ಸಮಿತಿಯ ವರದಿಯು ರಾಜ್ಯದ ವಿವಿಧ ತಾಲ್ಲೂಕುಗಳು ಹಿಂದುಳಿದಿರುವುದನ್ನು ಎತ್ತಿ ತೋರಿಸಿತು. 2001ರಲ್ಲಿದ್ದ ರಾಜ್ಯದ ಒಟ್ಟು 175 ತಾಲೂಕುಗಳ ಪೈಕಿ 35 ತಾಲೂಕುಗಳನ್ನು ಹಿಂದುಳಿದ, 40 ತಾಲೂಕುಗಳನ್ನು ಅತಿ ಹಿಂದುಳಿದ ಮತ್ತು 39 ತಾಲೂಕುಗಳನ್ನು ಅತ್ಯಂತ ಹಿಂದುಳಿದ ತಾಲೂಕುಗಳೆಂದು ವರದಿಯು ಗುರುತಿಸಿತ್ತು.

ರಾಜ್ಯದಲ್ಲಿನ 39 ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ 21 ತಾಲ್ಲೂಕುಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿದ್ದವು. ಡಾ.ನಂಜುಂಡಪ್ಪ ಸಮಿತಿಯ ವರದಿಯ ಜಾರಿಯ ಭಾಗವಾಗಿ ಈ ತಾಲ್ಲೂಕುಗಳ ಹಿಂದುಳಿದಿರುವಿಕೆಯನ್ನು ನಿವಾರಿಸಲು ರಾಜ್ಯ ಸರ್ಕಾರವು ವಿಶೇಷ ಅಭಿವೃದ್ಧಿ ಯೋಜನೆಯನ್ನು (ಎಸ್‌ಡಿಪಿ) ಪ್ರಾರಂಭಿಸಿತ್ತು.

ಅದಾಗ್ಯೂ, ಕಲ್ಯಾಣ ಕರ್ನಾಟಕ ಪ್ರದೇಶವು ಹಿಂದುಳಿದಿರುವ ಪ್ರದೇಶವಾಗಿಯೇ ಉಳಿದಿದ್ದರಿಂದ ರಾಜ್ಯ ವಿಧಾನಸಭೆಯು ಭಾರತದ ಸಂವಿಧಾನದ 371ನೇ ವಿಧಿಯಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ನಿರ್ಣಯವನ್ನು 2010 ರಲ್ಲಿ ಅಂಗೀಕರಿಸಿತ್ತು. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆಯುವಲ್ಲಿ ಪ್ರೊ. ನಂಜುಂಡಪ್ಪ ವರದಿಯು ಪ್ರಮುಖ ಪಾತ್ರ ನಿರ್ವಹಿಸಿತ್ತು.

ಪ್ರೊ. ನಂಜುಂಡಪ್ಪ ಸಮಿತಿಯ ವರದಿ ಆಧರಿಸಿಯೇ ರಾಜ್ಯ ಬಜೆಟ್ ನಲ್ಲಿ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಅನುದಾನ ನೀಡುತ್ತಾ ಬಂದಿದ್ದು, ಬಜೆಟ್‌ ಅನ್ನು ಸಮರ್ಪಕವಾಗಿ ಬಳಿಸಿದಲ್ಲಿ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಬಹುದು ಎಂದು ಸಮಿತಿ ಶಿಫಾರಸು ಮಾಡಿತ್ತು.

ನಂಜುಂಡಪ್ಪನವರ ವರದಿಯನ್ನಾಧರಿಸಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಇದುವರೆಗೆ 61,330 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು 2023ರ ಚಳಿಗಾಲದ ಅಧಿವೇಶನದಲ್ಲಿ ಸದನಕ್ಕೆ ತಿಳಿಸಿದ್ದರು. ಅದೇ ವೇಳೆ, ನಂಜುಂಡಪ್ಪನವರ ವರದಿಯ ಅನುಷ್ಠಾನ ಹಾಗೂ ಅದರ ಫಲಶ್ರುತಿಯನ್ನು ಅಧ್ಯಯನ ಮಾಡಲು ಉನ್ನತ ಸಮಿತಿ ರಚಿಸುವುದಾಗಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು. ಅದರ ಮುಂದುವರಿದ ಭಾಗವಾಗಿ ಇದೀಗ ರಾಜ್ಯದ ಎಲ್ಲಾ ತಾಲೂಕುಗಳ ಸ್ಥಿತಿಗತಿ ಅಧ್ಯಯನಕ್ಕೆ ಪ್ರೊ ಗೋವಿಂದ ರಾವ್‌ ನೇತೃತ್ವದಲ್ಲಿ ಹೊಸ ಸಮಿತಿ ರಚಿಸಲಾಗಿದೆ.

Tags:    

Similar News