1998ರ ಕೊಯಮತ್ತೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾದಿಕ್ ವಿಜಯಪುರದಲ್ಲಿ ಬಂಧನ
ಕೊಯಮತ್ತೂರು ಸ್ಫೋಟದಲ್ಲಿ 58 ಜನ ಮೃತಪಟ್ಟು, 250 ಜನ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾದಿಕ್ ತಲೆಮರೆಸಿಕೊಂಡಿದ್ದ.;
1998ರ ಕೊಯಮತ್ತೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸಾದಿಕ್‌ನನ್ನು ಕರ್ನಾಟಕದ ವಿಜಯಪುರದಲ್ಲಿ ಬಂಧಿಸಿರುವುದಾಗಿ ತಮಿಳುನಾಡು ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇಂದು ಘೋಷಿಸಿದೆ.
ಕೊಯಮತ್ತೂರು ಸ್ಫೋಟದಲ್ಲಿ 58 ಜನ ಮೃತಪಟ್ಟು, 250 ಜನ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾದಿಕ್ ತಲೆಮರೆಸಿಕೊಂಡಿದ್ದ.
ಹಲವಾರು ಹೆಸರುಗಳಲ್ಲಿ ತಲೆಮರೆಸಿಕೊಂಡಿದ್ದ ಸಾದಿಕ್:
ಸಾದಿಕ್ ತಮಿಳುನಾಡಿನಾದ್ಯಂತ ನಡೆದ ಹಲವು ಹತ್ಯೆ ಪ್ರಕರಣಗಳಲ್ಲೂ ಆರೋಪಿಯಾಗಿದ್ದು, 26 ವರ್ಷಗಳ ಹಿಂದೆ ಅಂದರೆ 1996ರಿಂದ ತಲೆಮರೆಸಿಕೊಂಡಿದ್ದ. ಕೊಯಮತ್ತೂರು ಮೂಲದವನಾದ ಸಾದಿಕ್, ರಾಜಾ, ಟೇಲರ್ ರಾಜಾ, ವಲರಂತ ರಾಜಾ, ಶಹಜಹಾನ್ ಅಬ್ದುಲ್ ಮಜೀದ್ ಮಕಂದಾರ್ ಮತ್ತು ಶಹಜಹಾನ್ ಶೇಖ್ ಹೀಗೆ ಹಲವು ಹೆಸರುಗಳನ್ನು ಇಟ್ಟುಕೊಂಡು ವಿವಿಧ ಪ್ರದೇಶಗಳಲ್ಲಿ ಅಡಗಿಕೊಂಡಿದ್ದ.
'ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ದಳ ಮತ್ತು ಕೊಯಮತ್ತೂರು ನಗರ ಪೊಲೀಸರ ವಿಶೇಷ ತಂಡವು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಿದೆ. ವಿಜಯಪುರದಲ್ಲಿ 'ಟೇಲರ್ ರಾಜಾ' ಎನ್ನುವ ಹೆಸರಿನಲ್ಲಿ ಸಾದಿಕ್ ವಾಸಿಸುತ್ತಿದ್ದ" ಎಂದು ಎಟಿಎಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇತರೆ ಪ್ರಕರಣಗಳಲ್ಲೂ ಆರೋಪಿ
ಈತ 1996ರಲ್ಲಿ ನಡೆದ ಪೆಟ್ರೋಲ್ ಬಾಂಬ್ ಸ್ಫೋಟ, 1996ರಲ್ಲಿ ನಗೋರ್‌ನಲ್ಲಿ ನಡೆದ ಸಯೀತಾ ಹತ್ಯೆ ಪ್ರಕರಣ, ಹಾಗೂ 1997ರಲ್ಲಿ ಮಧುರೈನಲ್ಲಿ ನಡೆದ ಜೈಲರ್ ಜಯಪ್ರಕಾಶ್ ಹತ್ಯೆ ಪ್ರಕರಣಗಳಲ್ಲೂ ಆರೋಪಿಯಾಗಿದ್ದಾನೆ.
1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದ ವಿವರ
ತಮಿಳುನಾಡಿನ ಕೊಯಮತ್ತೂರು ನಗರದಲ್ಲಿ 1998ರ ಫೆಬ್ರವರಿ 14ರಂದು ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳು ಭಾರತದ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದವು. ಈ ಭಯಾನಕ ದಾಳಿಯಲ್ಲಿ 58 ಮಂದಿ ಮೃತಪಟ್ಟಿದ್ದರೆ, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಶನಿವಾರದಂದು, ನಗರದ 11 ವಿಭಿನ್ನ ಸ್ಥಳಗಳಲ್ಲಿ ಒಟ್ಟು 12 ಬಾಂಬ್ ಸ್ಫೋಟಗಳು ನಡೆದು, ಕೊಯಮತ್ತೂರು ನಗರವನ್ನು ಬೆಚ್ಚಿಬೀಳಿಸಿದ್ದವು.
ಈ ಸ್ಫೋಟಗಳು ಆಗಿನ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ಕೊಯಮತ್ತೂರಿಗೆ ಆಗಮಿಸುವ ಕೆಲವೇ ಗಂಟೆಗಳ ಮೊದಲು ನಡೆದಿದ್ದವು. ಅಡ್ವಾಣಿ ಅವರ ಚುನಾವಣಾ ಸಭೆಯನ್ನು ಗುರಿಯಾಗಿಸಿ ಈ ದಾಳಿ ನಡೆದಿತ್ತು ಎಂದು ತನಿಖೆ ಬಳಿಕ ತಿಳಿದುಬಂದಿದೆ. ದಾಳಿಕೋರರು ಬಾಂಬ್‌ಗಳನ್ನು ಕಾರು, ಬೈಕ್, ಸೈಕಲ್, ಹಣ್ಣುಗಳ ಗಾಡಿ ಮತ್ತು ಬ್ಯಾಗ್‌ಗಳಲ್ಲಿ ಅಡಗಿಸಿಟ್ಟಿದ್ದರು. ಕೆಲ ಬಾಂಬ್‌ಗಳು ಸ್ಫೋಟವಾಗದೆ ಉಳಿದಿದ್ದವು. ಅವುಗಳನ್ನು ಸೇನೆ ಹಾಗೂ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್ (NSG) ತಂಡಗಳು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದವು.
ಈ ದಾಳಿಗೆ ಪ್ರಮುಖ ಸಂಚುಕೋರ ಅಲ್ ಉಮ್ಮಾ ಸಂಘಟನೆಯ ಸ್ಥಾಪಕ ಎಸ್.ಎ. ಬಾಷಾ ಎಂದು ಗುರುತಿಸಲಾಗಿದೆ. 1997ರ ಕೊಯಮತ್ತೂರು ಕೋಮುಗಲಭೆಯಲ್ಲಿ 18 ಮುಸ್ಲಿಮರು ಹತ್ಯೆಯಾಗಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ 166 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, 158 ಜನರಿಗೆ ಶಿಕ್ಷೆ ವಿಧಿಸಲಾಗಿದೆ. ಅವರಲ್ಲಿ 43 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಮಾಸ್ಟರ್‌ಮೈಂಡ್ ಎಸ್.ಎ. ಬಾಷಾ 2024ರ ಡಿಸೆಂಬರ್‌ನಲ್ಲಿ ಪೆರೋಲ್‌ನಲ್ಲಿದ್ದಾಗ, ತನ್ನ 84ನೇ ವಯಸ್ಸಿನಲ್ಲಿ ಸತ್ತಿದ್ದ.