ಅಪರೂಪದ ಪರಿಸರವಾದಿ, ಕವಿ ಭೂಹಳ್ಳಿ ಪುಟ್ಟಸ್ವಾಮಿ ಇನ್ನಿಲ್ಲ

Update: 2024-07-29 07:09 GMT

ಕವಿ ಮತ್ತು ಅಪರೂಪದ ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ(76) ಅವರು ನಿಧನರಾಗಿದ್ದಾರೆ.

ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಅವರ ಸ್ವಗ್ರಾಮ ಭೂಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.

ಚನ್ನಪಟ್ಟಣದಲ್ಲಿ ನೆಲೆಸಿದ್ದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆ ಹಿನ್ನೆಲೆಯಲ್ಲಿ ಭಾನುವಾರ(ಜು.28) ರಾತ್ರಿ ತಮ್ಮ ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಜೀವ ತೆಗೆದುಕೊಳ್ಳುತ್ತಿರುವ ತಮ್ಮ ನಿರ್ಧಾರವನ್ನು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಸ್ವತಃ ಪ್ರಕಟಿಸಿದ್ದರು. “ನನ್ನ ಸಾವಿಗೆ ನಾನೇ ಕಾರಣ. ಅನಾರೋಗ್ಯದಿಂದ ಬೇಸರಗೊಂಡು ಜೀವನ ಯಾತ್ರೆ ಮುಗಿಸುತ್ತಿದ್ದೇನೆ. 28.07.24 ರಾತ್ರಿ 2.40.. ಇತಿ ಭೂಹಳ್ಳಿ ಪುಟ್ಟಸ್ವಾಮಿ” ಎಂದು ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿ ಸಾವಿಗೆ ಶರಣಾಗಿದ್ದಾರೆ.

ವೃತ್ತಿಯಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದ ಅವರು ಪರಿಸರ ಮತ್ತು ಕಾವ್ಯವನ್ನು ತಮ್ಮ ಜೀವನದುದ್ದಕ್ಕೂ ಅಪಾರವಾಗಿ ಹಚ್ಚಿಕೊಂಡಿದ್ದರು. ಸುಮಾರು 25ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಹೊರತಂದಿದ್ದ ಅವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಕೌಸ್ತುಭ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿದ್ದವು.

ಚನ್ನಪಟ್ಟಣ ತಾಲೂಕಿನ ವಿವಿಧ ಸರ್ಕಾರಿ ಜಾಗಗಳಲ್ಲಿ ಸಾವಿರಾರು ಗಿಡ ನೆಟ್ಟು ಪೋಷಿಸಿ ಹತ್ತಾರು ವನಗಳನ್ನು ನಿರ್ಮಿಸಿದ್ದ ಅವರು, ಸ್ವಂತ ಹಣ ಕರ್ಚು ಮಾಡಿ ಕಾಡು ಬೆಳೆಸುವುದರ ಜೊತೆಗೆ ಮಕ್ಕಳ ಆಟೋಟಕ್ಕೆ ಪೂರಕ ಚಟುವಟಿಕೆ, ಹಿರಿಯ ಸದಬಿರುಚಿ ರೂಪಿಸುವ ಕೆಲಸದಲ್ಲಿ ನಿರಂತರ ತೊಡಗಿಸಿಕೊಂಡಿದ್ದರು. ಅವರಿಂದಾಗಿ ಚನ್ನಪಟ್ಟಣ ತಾಲೂಕಿನಲ್ಲಿ ಸುಮಾರು 40 ಎಕರೆ ಜಾಗ ಹಸಿರು ಹೊದ್ದು ನೈಸರ್ಗಿಕ ವನವಾಗಿದೆ.

ಬುದ್ಧೇಶ್ವರ ವನ(ಕವಿ ವನ), ಬುದ್ಧವನ, ಜೀವೇಶ್ವರ ವನ, ಪುಲಕೇಶಿ ವನ, ನೃಪತುಂಗ ವನ, ಕದಂಬವನ, ಗಾಂಧಿವನ, ಅಂಬೇಡ್ಕರ್ ವನ ಮುಂತಾದ ಹೆಸರುಗಳಿಂದ ವನಗಳನ್ನು ಬೆಳೆಸಿದ ಪುಟ್ಟಸ್ವಾಮಿ ಅವರು, ಆ ವನಗಳಲ್ಲಿ ಕೆಲವು ಕಡೆ ಸ್ವಂತ ದುಡಿಮೆಯ ಹಣದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವೇದಿಕೆ, ಗ್ರಂಥಾಲಯ, ಕಲ್ಲುಬೆಂಚುಗಳ ವ್ಯವಸ್ಥೆಯನ್ನೂ ಮಾಡಿದ್ದರು. ಭೂಹಳ್ಳಿ ಪುಟ್ಟಸ್ವಾಮಿ ಟ್ರಸ್ಟ್ ಮೂಲಕ ನಿರಂತರ ಪರಿಸರಪರ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.

Tags:    

Similar News