ಅಪ್ರಾಪ್ತೆಯನ್ನು ವರಿಸಿದ್ಧ ಗಾ.ಪಂ.ಅಧ್ಯಕ್ಷನ ವಿರುದ್ಧ ಪೋಕ್ಸೋ ಪ್ರಕರಣ

ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಪಂ ಅಧ್ಯಕ್ಷ ಭೀಮಶಿ ಕಳ್ಳಿಮನಿ ಎಂಬಾತ ಬಾಲ್ಯ ವಿವಾಹ ಮಾಡಿಕೊಂಡ ಆರೋಪಿ. ಕಳೆದ 2023 ನ.5 ರಂದು ಅಪ್ರಾಪ್ತೆ ಜೊತೆಗೆ ಭೀಮಶಿ ವಿವಾಹವಾಗಿದ್ದರು. ಮದುವೆ ವೇಳೆ ಆ ಬಾಲಕಿಗೆ ಕೇವಲ 15 ವರ್ಷ ವಯಸ್ಸಾಗಿತ್ತು.;

Update: 2025-09-01 07:01 GMT

ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಳ್ಳಿಮನಿ

ಬಾಲ್ಯ ವಿವಾಹದ ವಿರುದ್ಧ ಜಾಗೃತಿ ಮೂಡಿಸಬೇಕಾದ ಗ್ರಾಮ ಪಂಚಾಯಿತಿ ಅಧ್ಯಕ್ಷನೇ ಕಳೆದ ಎರಡು ವರ್ಷಗಳ ಹಿಂದೆ 15 ವರ್ಷದ ಅಪ್ರಾಪ್ತೆಯನ್ನು ವಿವಾಹವಾಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾ.ಪಂ.ಅಧ್ಯಕ್ಷರ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. 

ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾ.ಪಂ ಅಧ್ಯಕ್ಷ ಭೀಮಶಿ ಕಳ್ಳಿಮನಿ ಎಂಬುವರು ಬಾಲ್ಯ ವಿವಾಹ ಮಾಡಿಕೊಂಡಿದ್ದ ಆರೋಪಿ. ಕಳೆದ 2023 ನ.5 ರಂದು ಅಪ್ರಾಪ್ತೆ ಜೊತೆಗೆ ಭೀಮಶಿ ವಿವಾಹವಾಗಿದ್ದರು. ಮದುವೆ ವೇಳೆ ಆ ಬಾಲಕಿಗೆ ಕೇವಲ 15 ವರ್ಷ ವಯಸ್ಸಾಗಿತ್ತು. ಇದು ಬಾಲ್ಯ ವಿವಾಹ ಎಂಬ ವಿಚಾರ ತಡವಾಗಿ ಗೊತ್ತಾಗಿದ್ದು, ಈ ಸಂಬಂಧ ಆರೋಪಿ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಆ.30 ರಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇದೀಗ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಬಾಲ್ಯ ವಿವಾಹ ಕುರಿತು ದೂರು ದಾಖಲಾದ ತಕ್ಷಣವೇ ಬಸಾಪುರ ಗ್ರಾಮಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ತಂಡವು ನಾಲ್ಕು ಬಾರಿ ಭೇಟಿ ನೀಡಿತ್ತು. ಆದರೆ, ಬಾಲಕಿಯನ್ನು ಪತ್ತೆ ಹಚ್ಚಲು ರಕ್ಷಣಾ ತಂಡ ವಿಫಲವಾಗಿತ್ತು. ಈ ನಡುವೆ ತನ್ನ ಪತ್ನಿ ಪ್ರಾಪ್ತ ವಯಸ್ಸಿನವಳು ಎಂಬ ದಾಖಲೆಯನ್ನು ಆರೋಪಿ ಭೀಮಶಿ ಬಿಡುಗಡೆ ಮಾಡಿದ್ದರು. ಬಂಧನದ ಭೀತಿಯಿಂದಲೇ ಪತ್ನಿಯ ನಕಲಿ ಜನನ ಪ್ರಮಾಣ ಪತ್ರ ಬಿಡುಗಡೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಯಾದಗಿರಿ ಹಾಗೂ ಶಿವಮೊಗ್ಗದಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾದ ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬಾಲ್ಯವಿವಾಹ ನಡೆಯುವ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ  ಮದುವೆಯಿಂದ ತಪ್ಪಿಸಿಕೊಳ್ಳಲು ಬಾಲಕಿಯರೇ ಧೈರ್ಯ ತೋರಬೇಕು ಎಂದು ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

Tags:    

Similar News