ಪೋಕ್ಸೋ ಪ್ರಕರಣ | ಯಡಿಯೂರಪ್ಪ ಎಲ್ಲಿದ್ದಾರೆ? ಸಿಐಡಿ ಪೊಲೀಸರ ಹುಡುಕಾಟ
ಸಿಐಡಿ ಪೊಲೀಸರು ಮಾಜಿ ಮುಖ್ಯಮಂತ್ರಿಯ ಪತ್ತೆಗೆ ಪ್ರಯತ್ನಿಸಿದ್ದಾರೆ. ಅದರ ಭಾಗವಾಗಿ ಕೆಲವು ಆಪ್ತರನ್ನು ಕರೆದು ಗುರುವಾರ ಮಧ್ಯಾಹ್ನ ಪ್ರಶ್ನಿಸಿದ್ದಾರೆ. ಆದರೆ, ಯಡಿಯೂರಪ್ಪ ಎಲ್ಲಿದ್ದಾರೆ ಎಂಬುದು ಪತ್ತೆಯಾಗಿಲ್ಲ ಎನ್ನಲಾಗಿದೆ.;
ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ. ಆ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ ಸಿಐಡಿ ಮುಂದಾಗಿದ್ದು, ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ಎನ್ನಲಾಗಿರುವ ಯಡಿಯೂರಪ್ಪ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.
ತಮ್ಮ ವಿರುದ್ಧ ಮೂರು ತಿಂಗಳ ಹಿಂದೆ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಸಹೋದರ ಹೈಕೋರ್ಟ್ ಮೊರೆಹೋದ ಬೆನ್ನಲ್ಲೇ ಪ್ರಕರಣ ರದ್ದು ಕೋರಿ ಬುಧವಾರ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ಯಡಿಯೂರಪ್ಪ, ಗುರುವಾರ ಮತ್ತೊಂದು ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಕೋರಿದ್ದರು. ಈ ನಡುವೆ, ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿ, ವಿಚಾರಣೆಗೆ ಹಾಜರಾಗುವಂತೆ ಆರೋಪಿ ಯಡಿಯೂರಪ್ಪ ಅವರಿಗೆ ಬುಧವಾರ ನೊಟೀಸ್ ಜಾರಿ ಮಾಡಿತ್ತು.
ಆದರೆ, ಸಂತ್ರಸ್ತೆಯ ಸಹೋದರನ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಗುರುವಾರ ಯಡಿಯೂರಪ್ಪ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ. ಅಲ್ಲದೆ, ಪ್ರಕರಣ ದಾಖಲಾಗಿ ಜೂ.15 ಕ್ಕೆ 90 ದಿನಗಳು ಪೂರ್ತಿಯಾಗುವ ಹಿನ್ನೆಲೆಯಲ್ಲಿ ಅಷ್ಟರಲ್ಲಿ ಆರೋಪ ಪಟ್ಟಿ ಸಲ್ಲಿಸುವ ಅನಿವಾರ್ಯತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿಗೆ ಎದುರಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಸಿಐಡಿ ಗುರುವಾರ ಪತ್ತೆ ಕಾರ್ಯ ಆರಂಭಿಸಿದ್ದು, ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಿಂದ ವಾಪಸ್ಸಾಗಿರುವ ಮಾಜಿ ಸಿಎಂ?
ಈ ನಡುವೆ, ತಮ್ಮ ಬಂಧನಕ್ಕೆ ಆದೇಶ ಕೋರಿ ಹೈಕೋರ್ಟಿಗೆ ಸಂತ್ರಸ್ತೆಯ ಸಹೋದರ ಅರ್ಜಿ ಸಲ್ಲಿಸುತ್ತಿದ್ದಂತೆ ಮಂಗಳವಾರ ರಾತ್ರಿಯೇ ದೆಹಲಿಗೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂಪ್ಪ ಅವರು ಬುಧವಾರ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ನಡೆಸಿದ ಯತ್ನ ಫಲ ಕೊಟ್ಟಿಲ್ಲ. ಪ್ರಭಾವಿ ಹೈಕಮಾಂಡ್ ನಾಯಕರು ಭೇಟಿಗೆ ಸಮಯ ನೀಡದ ಹಿನ್ನೆಲೆಯಲ್ಲಿ ಅವರು ಬುಧವಾರ ರಾತ್ರಿಯೇ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.
ಆದರೆ, ಪ್ರಕರಣದ ವಿಚಾರಣೆಗೆ ಸಿಐಡಿ ಮುಂದೆ ಹಾಜರಾಗಿಲ್ಲ. ಈ ನಡುವೆ, ಕೋರ್ಟ್ ಜಾಮೀನುರಹಿತ ವಾರಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಮಾಜಿ ಮುಖ್ಯಮಂತ್ರಿಯ ಪತ್ತೆಗೆ ಪ್ರಯತ್ನಿಸಿದ್ದಾರೆ. ಅದರ ಭಾಗವಾಗಿ ಅವರ ಕೆಲವು ಆಪ್ತರನ್ನು ಕರೆದು ಗುರುವಾರ ಮಧ್ಯಾಹ್ನ ಪ್ರಶ್ನಿಸಿದ್ದಾರೆ. ಆದರೆ, ಯಡಿಯೂರಪ್ಪ ಎಲ್ಲಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಸಿಐಡಿಯ ಒಂದು ತಂಡ ಬುಧವಾರ ದೆಹಲಿಗೆ ಭೇಟಿ ನೀಡಿತ್ತು ಎನ್ನಲಾಗಿದ್ದು, ಮಾಜಿ ಮುಖ್ಯಮಂತ್ರಿಗಳ ಬಂಧನಕ್ಕೆ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಯಾವುದೇ ಕ್ಷಣದಲ್ಲಿ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.
ಈ ನಡುವೆ ಅವರ ನಿರೀಕ್ಷಣಾ ಜಾಮೀನು ಅರ್ಜಿ ಮತ್ತು ಪ್ರಕರಣ ರದ್ದು ಕೋರಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಂಡರೂ ಕೋರ್ಟ್ ಪ್ರಕ್ರಿಯೆಗಳು ಮುಂದುವರಿಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಬಂಧನದಿಂದ ಪಾರಾಗುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.