ಶಾಸಕ ಸಿ.ಪಿ.ವೈ.ಕುಟುಂಬದ ಆಸ್ತಿ ವಿವಾದ; 217 ಆಸ್ತಿಗಳ ಮೇಲಿನ ಪ್ರತಿಬಂಧಕ ಆದೇಶ ತೆರವು
ಯೋಗೇಶ್ವರ್ ಅವರ 223 ಆಸ್ತಿಗಳಲ್ಲಿ ಆರು ಆಸ್ತಿಗಳ ಮೇಲಷ್ಟೇ ಮಾಳವಿಕಾ ಅವರು ತಕರಾರು ಮುಂದುವರಿಸಬಹುದು. ಆದರೆ, ಈ ಆಸ್ತಿಗಳನ್ನು ಮೂರನೇ ವ್ಯಕ್ತಿಗೆ ಮಾರಾಟ ಅಥವಾ ಪರಭಾರೆ ಮಾಡಬಾರದೆಂದು ದಾವೆ ಪ್ರತಿವಾದಿಗಳಿಗೆ ಕೋರ್ಟ್ ಸೂಚನೆ ನೀಡಿದೆ.
ಶಾಸಕ ಸಿ.ಪಿ. ಯೋಗೇಶ್ವರ್ ಹಾಗೂ ಪುತ್ರಿ ನಿಶಾ ಯೋಗೇಶ್ವರ್
ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಕುಟುಂಬಕ್ಕೆ ಸೇರಿದ 223 ಸ್ಥಿರಾಸ್ತಿಗಳ ಮಾರಾಟ ಮತ್ತು ಪರಭಾರೆಗೆ ವಿಧಿಸಿದ್ದ ಪ್ರತಿಬಂಧಕ ಆದೇಶವನ್ನು ನ್ಯಾಯಾಲಯ ಸಡಿಲಿಸಿದೆ.
ಬೆಂಗಳೂರಿನ 43ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಧೀಶ ಚಿನ್ನಣ್ಣವರ ರಾಜೇಶ್ ಸದಾಶಿವ ಅವರು, ಸಿ.ಪಿ. ಯೋಗೇಶ್ವರ್ ಕುಟುಂಬದ 217 ಆಸ್ತಿಗಳ ಮೇಲಿನ ಪ್ರತಿಬಂಧಕ ಆದೇಶವನ್ನು ತೆರವುಗೊಳಿಸಿದ್ದು, ಉಳಿದ ಆರು ಆಸ್ತಿಗಳ ಮೇಲಷ್ಟೇ ತಕರಾರು ಮುಂದುವರಿಸಬಹುದು ಎಂದು ಆದೇಶಿಸಿದ್ದಾರೆ.
ಶಾಸಕ ಸಿ.ಪಿ. ಯೋಗೇಶ್ವರ್ ಕುಟುಂಬದ ಆಸ್ತಿಗಳ ಮಾರಾಟ ಹಾಗೂ ಪರಾಭಾರೆ ಕುರಿತು ಯೋಗೇಶ್ವರ್ ಮೊದಲ ಪತ್ನಿ ಮಾಳವಿಕಾ ಸೋಲಂಕಿ ಮತ್ತು ಪುತ್ರಿ ನಿಶಾ ಯೋಗೇಶ್ವರ್ ಸಲ್ಲಿಸಿದ್ದ ಮೂಲ ದಾವೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರತಿಬಂಧಕ ಆದೇಶ ತೆರವು ಮಾಡಿದ್ದಾರೆ.
ಯೋಗೇಶ್ವರ್ ಅವರ 223 ಆಸ್ತಿಗಳಲ್ಲಿ ಆರು ಆಸ್ತಿಗಳ ಮೇಲಷ್ಟೇ ಮಾಳವಿಕಾ ಅವರು ತಕರಾರು ಮುಂದುವರಿಸಬಹುದು. ಆದರೆ, ಈ ಆಸ್ತಿಗಳನ್ನು ಮೂರನೇ ವ್ಯಕ್ತಿಗೆ ಮಾರಾಟ ಅಥವಾ ಪರಭಾರೆ ಮಾಡಬಾರದೆಂದು ದಾವೆ ಪ್ರತಿವಾದಿಗಳಾದ ಸಿ.ಪಿ.ಯೋಗೇಶ್ವರ್, ಅವರ ತಾಯಿ ನಾಗರತ್ನಮ್ಮ, ಎರಡನೇ ಪತ್ನಿ ಪಿ.ವಿ. ಸುಶೀಲಾ, ಪುತ್ರ ಧ್ಯಾನ್, ಯೋಗೇಶ್ವರ್ ಸಹೋದರರಾದ. ಗಂಗಾಧರ ಸಿ.ಪಿ. ರಾಜೇಶ್, ಸಹೋದರಿಯರಾದ ಪುಷ್ಪಾ ಹಾಗೂ ಭಾಗ್ಯಲಕ್ಷ್ಮಿ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ ಏನು?
ಶಾಸಕ ಸಿ.ಪಿ.ಯೋಗೇಶ್ವರ್ ಅವರು ಬೆಂಗಳೂರಿಗೆ ತೆಂಗಿನಕಾಯಿ ವ್ಯಾಪಾರ ನಿಮಿತ್ತ ಆಗಾಗ್ಗೆ ಬರುತ್ತಿದ್ದರು. ಆಗ ನಾನು ಪರಿಚಯವಾದೆ. ಇಬ್ಬರೂ ಮದುವೆಯಾದ ನಂತರ "ಮೆಗಾಸಿಟಿ ಡೆವಲಪರ್ಸ್ ಆ್ಯಂಡ್ ಬಿಲ್ಡರ್ಸ್ ಪ್ರೈ.ಲಿಮಿಟೆಡ್" ಎಂಬ ರಿಯಲ್ ಎಸ್ಟೇಟ್ ಕಂಪನಿ ಆರಂಭಿಸಿದೆವು. ಈ ಅವಧಿಯಲ್ಲಿ ಬೆಂಗಳೂರು ಮತ್ತು ಹೊರವಲಯಗಳಲ್ಲಿ ಅನೇಕ ಆಸ್ತಿಗಳನ್ನು ಖರೀದಿಸಿ ಲೇಔಟ್‌ಗಳನ್ನು ಅಭಿವೃದ್ಧಿಪಡಿಸಿದ್ದೆವು ಎಂದು ಮಾಳವಿಕಾ ಸೋಲಂಕಿ ದಾವೆಯಲ್ಲಿ ತಿಳಿಸಿದ್ದರು.
ಯೋಗೇಶ್ವರ್ ಕ್ರಮೇಣ ಕಂಪನಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ ಕೆಲ ಆಸ್ತಿಗಳನ್ನು ತಮ್ಮ ಎರಡನೇ ಪತ್ನಿ ಸುಶೀಲಾ ಹಾಗೂ ಪುತ್ರ ಧ್ಯಾನ್ ಹೆಸರಿಗೆ ವರ್ಗಾಯಿಸಿದ್ದಾರೆ. ಕಂಪನಿಯ ಬೆಳವಣಿಗೆಯಲ್ಲಿ ಇವರಿಬ್ಬರ ಕೊಡುಗೆ ಇಲ್ಲದಿದ್ದರೂ ಅವರಿಗೆ ಪಾಲು ನೀಡಲಾಗಿದೆ ಎಂದು ಮಾಳವಿಕಾ ದೂರು ನೀಡಿದ್ದರು.
ಶಾಸಕ ಸಿ.ಪಿ. ಯೋಗೇಶ್ವರ್ ಅವರ ಪಿತ್ರಾರ್ಜಿತ ಮತ್ತು ಕುಟುಂಬದ ಆಸ್ತಿಯಲ್ಲಿ ತನಗೂ ಹಾಗೂ ಮಗಳಾದ ನಿಶಾ ಯೋಗೇಶ್ವರ್ ಅವರಿಗೂ ನಾಲ್ಕನೇ ಒಂದು ಭಾಗ ಪಾಲು ಪಡೆಯಲು ಹಕ್ಕಿದೆ. ಈ ಹಿನ್ನೆಲೆಯಲ್ಲಿ ಆಸ್ತಿಗಳನ್ನು ಮೂರನೇ ವ್ಯಕ್ತಿಗೆ ಹಸ್ತಾಂತರಿಸದಂತೆ ನ್ಯಾಯಾಲಯದ ಆದೇಶಿಸಬೇಕು ಎಂದು ಮಾಳವಿಕಾ ದೂರಿನಲ್ಲಿ ಕೋರಿದ್ದರು.