ಅಂಗನವಾಡಿಗೆ 50 ವರ್ಷ|ಅಂಗನವಾಡಿಗಳಲ್ಲಿ ಅನ್ಯ ಕಾರ್ಯಗಳಿಗೇ ಒತ್ತು, ಅಪೌಷ್ಠಿಕತೆಗೆ ಮಕ್ಕಳು ತುತ್ತು!

ಆರಂಭದ ಅವಧಿಯಲ್ಲಿ ಅಂಗನವಾಡಿ ಕೇಂದ್ರಗಳು ಆರು ವರ್ಷದೊಳಗಿನ ಮಕ್ಕಳ ತೂಕ, ಎತ್ತರ ಮಾಪನ, ಆರೋಗ್ಯ ತಪಾಸಣೆ, ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಆಹಾರ ಒದಗಿಸುವಲ್ಲಿ ಮಾತ್ರ ತೊಡಗಿಸಿಕೊಂಡಿದ್ದವು.

Update: 2025-11-28 04:59 GMT

ಸಾಂದರ್ಭಿಕ ಚಿತ್ರ 

Click the Play button to listen to article

ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭವಾಗಿ 50 ವರ್ಷದ ಪೂರೈಸಿರುವ ಈ ಹೊತ್ತಿನಲ್ಲಿ ಯೋಜನೆ ಕೇವಲ ಪೌಷ್ಠಿಕ ಆಹಾರ ವಿತರಿಸುವ ಸರ್ಕಾರಿ ಕಾರ್ಯಕ್ರಮವಾಗಿ ಉಳಿದಿಲ್ಲ, ಭವಿಷ್ಯದ ಪೀಳಿಗೆಯನ್ನು ಪೋಷಿಸುವ ಕ್ರಾಂತಿಯಾಗಿ ಬದಲಾಗಿದೆ.

1975ರಲ್ಲಿ ಐಸಿಡಿಎಸ್( ಸಮಗ್ರ ಶಿಶು ಅಭಿವೃದ್ಧಿ ಯೋಜನೆ) ಯೋಜನೆಯಡಿ ಚಿಗುರೊಡೆದ ಅಂಗನವಾಡಿ ಎಂಬ ಎಳೆಯರ ಅಕ್ಷಯಪಾತ್ರೆ ಇಂದು ಲಕ್ಷಾಂತರ ಮಕ್ಕಳ ಜೀವನಕ್ಕೆ ಮೊದಲ ಪಾಠಶಾಲೆಯಾಗಿ, ಆರೈಕೆಯ ಕೇಂದ್ರವಾಗಿ ಬೆಳೆದಿದೆ. ಆದರೆ, ಇತ್ತೀಚೆಗೆ ಅಂಗನವಾಡಿ ಸಿಬ್ಬಂದಿಯನ್ನು ಅನ್ಯ ಕಾರ್ಯಗಳಿಗೆ ಬಳಸುತ್ತಿರುವುದು ಹಾಗೂ ಸರಿಯಾದ ಪೂರಕ ಪೌಷ್ಠಿಕ ಆಹಾರ ನೀಡದಿರುವ ಪರಿಣಾಮ ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ.

ಆರಂಭದ ಅವಧಿಯಲ್ಲಿ ಅಂಗನವಾಡಿ ಕೇಂದ್ರಗಳು ಆರು ವರ್ಷದೊಳಗಿನ ಮಕ್ಕಳ ತೂಕ, ಎತ್ತರ ಮಾಪನ, ಆರೋಗ್ಯ ತಪಾಸಣೆ, ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಆಹಾರ ಒದಗಿಸುವಲ್ಲಿ ಮಾತ್ರ ತೊಡಗಿಸಿಕೊಂಡಿದ್ದವು. ಆದರೆ, ಹಂತ ಹಂತವಾಗಿ ಶೈಕ್ಷಣಿಕ ವಲಯದಲ್ಲಿ ಗುರುತು ಮೂಡಿಸುವತ್ತ ಹೆಜ್ಜೆ ಹಾಕುತ್ತಿವೆ.

2000ನೇ ಇಸವಿಯಲ್ಲಿ ಹಲವು ಕಲಿಕಾ ಕಾರ್ಯಕ್ರಮಗಳ ಸೇರ್ಪಡೆ ಬಳಿಕ ಅಂಗನವಾಡಿಗಳು ಇಂದು ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸುವ ಪಾಠಶಾಲೆಗಳಾಗಿ ಬದಲಾಗಿವೆ.

ಬೆಳವಣಿಗೆ ನಡುವೆಯೂ ಅಪೌಷ್ಠಿಕತೆಯ ಶಾಪ

ಮಕ್ಕಳ ಆರೋಕ್ಷ ರಕ್ಷಣೆಗೆ ಅಂಗನವಾಡಿ ಮೂಲಕ‌ ಸಾಕಷ್ಟು ಕಾರ್ಯಕ್ರಮ ರೂಪಿಸಿದರೂ ರಾಜ್ಯದಲ್ಲಿ 2024–25 ರ ವೇಳೆಗೆ 1.3 ಲಕ್ಷಕ್ಕಿಂತ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 11,674 ಮಕ್ಕಳು ಗಂಭೀರ ವರ್ಗದಲ್ಲಿ ದಾಖಲಾಗಿರುವುದು ಕಳವಳಕಾರಿ ವಿಚಾರವಾಗಿದೆ ಎಂಬುದು ಪೋಷಣ್ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ರಾಜ್ಯದಲ್ಲಿ 65 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ   33 ಲಕ್ಷಕ್ಕೂ ಹೆಚ್ಚು ಮಕ್ಕಳಿದ್ದಾರೆ, ಪ್ರತಿದಿನ ಪೌಷ್ಠಿಕ ಅಹಾರ ಮತ್ತು ಬೆಳವಣಿಗೆಯ ಮೇಲ್ವಿಚಾರಣೆ  ನಡೆಯುತ್ತಿದೆ. ಆದರೂ ಇಷ್ಟೊಂದು ದೊಡ್ಡ ಅಂಖ್ಯೆಯ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಗಂಭೀರ ವಿಚಾರವಾಗಿದೆ.

ಕೇಂದ್ರದಿಂದ ಅನುದಾನ ಕಡಿಮೆ

ಅಂಗನವಾಡಿ ಯೋಜನೆ ರಾಜ್ಯ ಹಾಗೂ ಕೇಂದ್ರ ಸಂಯೋಜಿತ ಕಾರ್ಯಕ್ರಮವಾಗಿದೆ. ಅಂಗನವಾಡಿ ಕಾರ್ಯಕರ್ತೆ, ಸಹಾಯಕರ ವೇತನ, ನಿರ್ವಹಣಾ ವೆಚ್ಚ, ಶಾಲಾ ಪೂರ್ವ ಶಿಕ್ಷಣ, ಮೂಲಸೌಕರ್ಯಗಳಿಗೆ ಕೇಂದ್ರ ಸರ್ಕಾರ ಶೇ 60, ರಾಜ್ಯ ಸರ್ಕಾರ ಶೇ 40 ಅನುದಾನ ಒದಗಿಸುತ್ತವೆ. ಆದರೆ, ಕರ್ನಾಟಕದಲ್ಲಿ ರಾಜ್ಯ ಸರ್ಕಾರವೇ ಶೇ 90 ರಷ್ಟು ಅನುದಾನ ಒದಗಿಸುತ್ತಿದ್ದು, ಕೇಂದ್ರದ ಪಾಲು ಕೇವಲ 10 ರಷ್ಟಿದೆ.

ಇನ್ನು ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 50 : 50‌ ಅನುದಾನ ಒದಗಿಸುತ್ತಿವೆ.ವಿಶೇಷ ವರ್ಗದ ರಾಜ್ಯಗಳಿಗೆ ಅಂದರೆ ಈಶಾನ್ಯ ರಾಜ್ಯಗಳಲ್ಲಿ ಕೇಂದ್ರ ಶೇ 90, ರಾಜ್ಯ ಶೇ 10 ವೆಚ್ಚ ಹೊಂದಿವೆ.

ಕರ್ನಾಟಕದಲ್ಲಿ ಅಂಗನವಾಡಿ ಆರಂಭವಾಗಿದ್ದು ಹೇಗೆ?

ಕರ್ನಾಟಕದಲ್ಲಿ 1975ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಆರಂಭವಾಯಿತು. ಆರು ವರ್ಷದೊಳಗಿನ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ಸುಧಾರಣೆಗೆ ಪೌಷ್ಠಿಕ ಆಹಾರ ಪೂರೈಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಆರಂಭದಲ್ಲಿ ಮಕ್ಕಳಿಗೆ ಉಚಿತ ಪೌಷ್ಟಿಕಾಹಾರ, ತೂಕ ಮೌಲ್ಯಮಾಪನ, ಆರೋಗ್ಯ ತಪಾಸಣೆ, ಲಸಿಕೆ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದೇ ಅಂಗನವಾಡಿಗಳ ಮುಖ್ಯ ಗುರಿಯಾಗಿತ್ತು. ಟಿ. ನರಸೀಪುರದಲ್ಲಿ ಒಟ್ಟು 100 ಅಂಗನವಾಡಿಗಳನ್ನು ಪ್ರಾಯೋಗಿಕವಾಗಿ ಆರಂಭಿಸಿ, ಆ ನಂತರ ಹಂತ ಹಂತವಾಗಿ ರಾಜ್ಯಾದ್ಯಂತ ಯೋಜನೆ ವಿಸ್ತರಿಸಲಾಯಿತು. ಈಗ ಅವುಗಳ ಸಂಖ್ಯೆ 65 ಸಾವಿರ ದಾಟಿವೆ.

1990ರ ನಂತರ ಗ್ರಾಮೀಣ ಮತ್ತು ನಗರ ವಲಯಗಳಿಗೆ ಅಂಗನವಾಡಿ ಜಾಲ ವಿಸ್ತರಿಸಲಾಯಿತು. 2000ರ ದಶಕದಿಂದ ಅಂಗನವಾಡಿಗಳು ಕೇವಲ ಪೌಷ್ಟಿಕಾಹಾರ ವಿತರಿಸುವ ಕೇಂದ್ರವಾಗಿರದೇ ಪ್ರಾಥಮಿಕ ಶಿಕ್ಷಣ‌ ನೀಡುವ ಮೂಲಕ ಮೊದಲ ಶಾಲೆಯಾಗಿ ಬದಲಾದವು.

ರಾಜ್ಯ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಆಯ್ದ ಕೇಂದ್ರಗಳಲ್ಲಿ ಎಲ್ ಕೆಜಿ ಹಾಗೂ ಯುಕೆಜಿ ಆರಂಭಿಸಲಾಗುತ್ತಿದೆ. ಈಗಾಗಲೇ ಮಾಂಟೆಸರಿ ಶೈಕ್ಷಣಿಕ ವಿಧಾನವನ್ನು ಕೆಲವು ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ.

ಅಪೌಷ್ಟಿಕತೆ ಹೇಗೆ ನಿಯಂತ್ರಿಸಲಾಗುತ್ತಿದೆ?

ಕರ್ನಾಟಕದಲ್ಲಿನ ಸಾವಿರಾರು ಮಕ್ಕಳ ಆರೋಗ್ಯ, ಪೌಷ್ಠಿಕತೆ ಮತ್ತು ಮೂಲವಿಕಸನಕ್ಕೆ ಅಂಗನವಾಡಿ ಕೇಂದ್ರಗಳೇ ಆಧಾರವಾಗಿವೆ.

ರಾಜ್ಯದಲ್ಲಿ ಅಪೌಷ್ಟಿಕತೆ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಐಸಿಡಿಎಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ. ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ, ಅಂಗನವಾಡಿ ಕೇಂದ್ರಗಳಲ್ಲಿ 6 ವರ್ಷವರೆಗಿನ, ಅನ್ನ ಸಾಂಬರ್, ಕಿಚಡಿ, ಪಾಯಸ, ಉಪ್ಪಿಟ್ಟು ಒದಗಿಸಲಾಗುತ್ತಿದೆ.

ದೈನಂದಿನವಾಗಿ ಅಗತ್ಯವಿರುವ ಕ್ಯಾಲೊರಿಗೆ ಅನುಗುಣವಾಗಿ ಆಹಾರ ಒದಗಿಸಲಾಗುತ್ತಿದೆ. ಕಡಿಮೆ ತೂಕ ಇರುವ ಮಕ್ಕಳಿಗೆ ವಿಶೇಷ ಆಹಾರ ಪದಾರ್ಥಗಳನ್ನು ನೀಡಿ ಮಕ್ಕಳ ತೂಕ ಮತ್ತು ಬೆಳವಣಿಗೆಯನ್ನು ಸಮತೋಲನಗೊಳಿಸಲಾಗುತ್ತಿದೆ. ಗರ್ಭಿಣಿ ಹಾಗೂ ತಾಯಂದಿರಿಗೆ ಪೋಷಣಾ ಕಾರ್ಯಕ್ರಮದಡಿ ಮೊಟ್ಟೆ, ಪಡಿತರ ನೀಡಲಾಗುತ್ತಿದೆ.

ಪ್ರತಿ ಮಗುವಿನ ತೂಕ, ಎತ್ತರ ತಿಂಗಳಿಗೆ ಒಮ್ಮೆ ದಾಖಲಿಸಲಾಗುತ್ತದೆ. ತೂಕ ಕಡಿಮೆಯಾದರೆ ತಕ್ಷಣ ವಿಶೇಷ ಪೋಷಣಾ ಯೋಜನೆಯಡಿ ವೈದ್ಯಕೀಯ ನೆರವು ಆರಂಭಿಸಲಾಗುತ್ತದೆ. ಈ ಎಲ್ಲವನ್ನು ಸಮನ್ವಯಗೊಳಿಸಲು ಅಂಗನವಾಡಿ, ಆಶಾ, ಎಎನ್ ಎಂ ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರಗಳನ್ನು ಒಟ್ಟಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲಾಗುತ್ತದೆ.

ಅದಾಗ್ಯೂ, 2025ರ ಫೆಬ್ರವರಿಯಲ್ಲಿ ಪೋಷಣಾ ಟ್ರ್ಯಾಕರ್ ಪ್ರಕಾರ ಶೇ 41.2 ರಷ್ಟು ಮಕ್ಕಳು ಎತ್ತರಕ್ಕೆ ಅನುಗುಣವಾದ ಬೆಳವಣಿಗೆ ಹೊಂದಿರಲಿಲ್ಲ. ಶೇ 17.61ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದ‌ರು ಎಂಬ ಅಂಶ ಕಂಡು ಬಂದಿದೆ.

2024–25ರಲ್ಲಿ 441 ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ 63.32 ಕೋಟಿ ಬಿಡುಗಡೆ ಮಾಡಿದ್ದಿ, ಈಗಾಗಲೇ ಕೆಲವೆಡೆ ಅಂಗನವಾಡಿಗಳು ಕಾರ್ಯಾರಂಭ‌ ಮಾಡಿವೆ.

ಅಂಗನವಾಡಿಗಳಿಗೆ ಅನ್ಯ ಜವಾಬ್ದಾರಿಯೇ ಹೆಚ್ಚು

ರಾಜ್ಯದಲ್ಲಿ ಮಕ್ಕಳ ಪೋಷಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಪಾತ್ರ ಅನನ್ಯ. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರದ ಪ್ರತಿ ಕಾರ್ಯಕ್ರಮ, ಸಮೀಕ್ಷೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನೇ ಹೆಚ್ಚು ಬಳಸುತ್ತಿರುವುದರಿಂದ ಮಕ್ಕಳ ಪೋಷಣೆ ಕಡೆ ಗಮನ ಕೊಡುವುದು ಕಷ್ಟವಾಗಿದೆ. ಈ ಅನ್ಯ ಕಾರ್ಯಗಳಿಂದಾಗಿಯೇ ಅಂಗನವಾಡಿ ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಈ ನಡುವೆ ಗೌರವಧನ ಹೆಚ್ಚಳ, ಸರ್ಕಾರಿ ನೌಕರರಂತೆ ಪರಿಗಣಿಸಬೇಕೆಂಬ ಬೇಡಿಕೆ ಮುಂದಿಟ್ಟು ಸಾಲು ಸಾಲು ಪ್ರತಿಭಟನೆಗಳು ನಡೆಸುತ್ತಲೇ ಇರುತ್ತವೆ.

" ಅಂಗನವಾಡಿ ಯೋಜನೆಯನ್ನು ಕೇಂದ್ರ ಸರ್ಕಾರವೇ ಆರಂಭಿಸಿದರೂ ಈಗ ಸಮರ್ಪಕ ಅನುದಾನ ಒದಗಿಸುತ್ತಿಲ್ಲ. ರಾಜ್ಯ ಸರ್ಕಾರವೇ ಶೇ 90ರಷ್ಟು ಅನುದಾನ ಒದಗಿಸುತ್ತಿದೆ. 2018 ರಿಂದ ಕೇಂದ್ರ ಸರ್ಕಾರ ಗೌರವಧನ ಪರಿಷ್ಕರಿಸಿಲ್ಲ. ಪ್ರಸ್ತುತ, ರಾಜ್ಯ ಸರ್ಕಾರದ ಕ್ರಮಗಳಿಂದ ಕಾರ್ಯಕರ್ತೆಯರಿಗೆ 12 ಸಾವಿರ, ಸಹಾಯಕಿಯರಿಗೆ 10 ಸಾವಿರ ವೇತನ‌ ಸಿಗುತ್ತಿದೆ. ವಿವಿಧ ಇಲಾಖೆಗಲ ಕೆಲಸ ಮಾಡಿಸಿಕೊಂಡರೂ ಕಡಿಮೆ ಸಂಬಳ ನೀಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ನಳಿನಿ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

Tags:    

Similar News