ಗದ್ದುಗೆ ಗುದ್ದಾಟ| ನಾಯಕತ್ವ ಬದಲಾವಣೆ; ಸಿಎಂ ಬೆಂಬಲಕ್ಕೆ ನಿಂತ ʼಅಹಿಂದʼ ಒಕ್ಕೂಟ
ಹಿಂದುಳಿದ ಸಮುದಾಯಗಳಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಬದಲಾಯಿಸುವ ದುಸ್ಸಾಹಸಕ್ಕೆ ಹೈಕಮಾಂಡ್ ಕೈಹಾಕಬಾರದು ಎಂದು ಹಿಂದುಳಿದ ವರ್ಗಗಳ ಒಕ್ಕೂಟಗಳು ಆಗ್ರಹಿಸಿವೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ. ಎಂ. ರಾಮಚಂದ್ರಪ್ಪ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಕುರಿತು ದಿನಕ್ಕೊಂದು ಬೆಳವಣಿಗೆಯಾಗುತ್ತಿದೆ. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟವು ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದು, ಸಿಎಂ ಹುದ್ದೆ ಬದಲಿಸದಂತೆ ಹೈಕಮಾಂಡ್ ನಾಯಕರನ್ನು ಆಗ್ರಹಿಸಿವೆ.
ಬೆಂಗಳೂರಿನಲ್ಲಿ ಗುರುವಾರ(ನ.27) ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಶೋಷಿತ ಜಾತಿಗಳ ಒಕ್ಕೂಟದ ನಾಯಕ ಮಾವಳ್ಳಿ ಶಂಕರ್, ರಾಜ್ಯ ರಾಜಕೀಯದಲ್ಲಿ ಏರು ಪೇರುಗಳಾಗುತ್ತಿವೆ. ಸಿಎಂ ಸಿದ್ದರಾಮಯ್ಯನವರನ್ನು ಬದಲಾವಣೆ ಮಾಡಬೇಕು ಎಂಬ ಯತ್ನ ನಡೆಯುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗದ ಮತಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗಾಗಿ ಅವರನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಅಧಿಕಾರ ಪಡೆಯಲು ʼಅಹಿಂದʼ ಕಾರಣ
ಹಿಂದುಳಿದ ಸಮುದಾಯಗಳಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಬದಲಾಯಿಸುವ ದುಸ್ಸಾಹಸಕ್ಕೆ ಹೈಕಮಾಂಡ್ ಕೈಹಾಕಬಾರದು. ಕಾಂಗ್ರೆಸ್ ನಾಯಕರು ಈ ಬಗ್ಗೆ ಯೋಚನೆ ಮಾಡಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನವೂ ಸಿಕ್ಕಿಲ್ಲ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನ ಬದಲಾವಣೆ ಮಾಡಬಾರದು. ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ಕಾಂಗ್ರೆಸ್ 140 ಸ್ಥಾನ ಗೆಲ್ಲಲು ತಳಸಮುದಾಯದ ಅಹಿಂದ ಮತಗಳೂ ಕಾರಣ ಎಂದು ಹೇಳಿದರು.
ಒಕ್ಕಲಿಗ ಶ್ರೀಗಳಿಂದ ಬೆದರಿಕೆ ಸಲ್ಲ
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಅಹಿಂದ ವರ್ಗದ ಮತ ಪಡೆದು ಬಂದ ಕಾಂಗ್ರೆಸ್ ಈಗ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದನ್ನು ಹಿಂದುಳಿದ ವರ್ಗಗಳು ಒಪ್ಪುವುದಿಲ್ಲ. ಎರಡೂವರೆ ವರ್ಷಕ್ಕೆ ಸಿಎಂ ಸ್ಥಾನದ ಬಗ್ಗೆ ನಮಗೆ ಯಾರೂ ಹೇಳಿಲ್ಲ. ಒಕ್ಕಲಿಗರಿಗೆ ಈಗಾಗಲೇ ಫಲ ಸಿಕ್ಕಿದೆ. ಒಕ್ಕಲಿಗರ ಸಂಘದ ಸ್ವಾಮೀಜಿಗಳು ಸಿಎಂ ಸ್ಥಾನದ ಬಗ್ಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬೆದರಿಕೆಗೆ ಅಹಿಂದ ಸಮುದಾಯ ಕೇಳುವುದಿಲ್ಲ ಎಂದರು.
2028ಕ್ಕೆ ಕಾಂಗ್ರೆಸ್‌ಗೆ ತಕ್ಕ ಪಾಠ
ಯಾವುದೇ ವರ್ಗದ ಸ್ವಾಮೀಜಿಯಾದರೂ ಎಲ್ಲಾ ಸಮುದಾಯಗಳನ್ನು ನೋಡಬೇಕು. ಒಕ್ಕಲಿಗ ಸ್ವಾಮೀಜಿಗಳು ನಾಯಕತ್ವ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದರೆ ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಸುಮ್ಮನೆ ಕೂರುವುದಿಲ್ಲ. ಅಹಿಂದ ನಾಯಕತ್ವ ಇಲ್ಲವಾದರೆ 2028 ರ ಚುನಾವಣೆಗೆ ಕಾಂಗ್ರೆಸ್ ಪ್ರತಿಫಲ ನೋಡಬೇಕಾಗುತ್ತದೆ. ಈ ಕುರಿತು ಹೈಕಮಾಂಡ್ ಯೋಚನೆ ಮಾಡಬೇಕು. ಅಹಿಂದ ವರ್ಗದಿಂದ ಸರ್ಕಾರ ಅಧಿಕಾರಕ್ಕೆ ಬಂದಿರುವುದು. ಸಿಎಂ ಬದಲಾವಣೆ ವಿಷಯದಲ್ಲಿ ಒಕ್ಕಲಿಗರ ಸಂಘ ಹಾಗೂ ಆದಿಚುಂಚನಗಿರಿ ಸ್ವಾಮೀಜಿಗಳು ನಮಗೆ ದಾರಿ ತೋರಿಸಿಕೊಟ್ಟಿದ್ದಾರೆ. ಅಹಿಂದ ವರ್ಗದ ಸಂಘಟನೆಗಳು ಸುಮ್ಮನಿರುವುದಿಲ್ಲ ಎಂದು ಪರೋಕ್ಷವಾಗಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದರು.