ಪೋಕ್ಸೋ ಪ್ರಕರಣ | ಸಿಐಡಿ ನೊಟೀಸ್, ಬಂಧನ ಭೀತಿ: ದೆಹಲಿಗೆ ಹಾರಿದ ಮಾಜಿ ಸಿಎಂ ಯಡಿಯೂರಪ್ಪ?
ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೊಟೀಸ್ ನೀಡಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿಗಳು ದಿಢೀರನೇ ದೆಹಲಿಗೆ ತೆರಳಿದ್ದು, ಪ್ರಕರಣದ ಮುಂದಿನ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ.;
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಹತ್ವದ ಬೆಳವಣಿಗೆಗಳು ನಡೆದಿದ್ದು, ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೊಟೀಸ್ ನೀಡಿದ ಬೆನ್ನಲ್ಲೇ ಪ್ರಕರಣ ರದ್ದು ಮಾಡುವಂತೆ ಕೋರಿ ಬಿಎಸ್‌ವೈ ಹೈಕೋರ್ಟ್ ಮೊರೆಹೋಗಿದ್ದಾರೆ.
ಈ ನಡುವೆ, ಮತ್ತೊಂದು ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ದಿಢೀರನೇ ದೆಹಲಿಗೆ ತೆರಳಿದ್ದು, ಪ್ರಕರಣದ ಮುಂದಿನ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ.
ಮಾರ್ಚ್ 14ರಂದು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಬಿ ಎಸ್ ಯಡಿಯೂರಪ್ಪ ವಿರುದ್ಧದ ಗಂಭೀರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿತ್ತು. ಬಳಿಕ ಬಿ ಎಸ್ ಯಡಿಯೂರಪ್ಪ ಅವರು ಸಿಐಡಿ ಮುಂದೆ ಹಾಜರಾಗಿ ತಮ್ಮ ಧ್ವನಿ ಮಾದರಿಯನ್ನು ನೀಡಿದ್ದರು.
ಆ ಬಳಿಕ ಪ್ರಕರಣ ಬಹುತೇಕ ಸದ್ದಿಲ್ಲದೆ ಬದಿಗೆ ಸರಿದಿತ್ತು. ಈ ನಡುವೆ ಪ್ರಕರಣದ ದೂರುದಾರರಾದ ಸಂತ್ರಸ್ತ ಬಾಲಕಿಯ ತಾಯಿ ಸಾವು ಕಂಡಿದ್ದರು.
ಹೈಕೋರ್ಟ್ ಮೊರೆ ಹೋದ ಸಹೋದರ
ಆದರೆ, ಮಂಗಳವಾರ ಸಂತ್ರಸ್ತ ಬಾಲಕಿಯ ಸಹೋದರ ರಾಜ್ಯ ಹೈಕೋರ್ಟ್ ಮೊರೆ ಹೋಗಿ, ಪ್ರಕರಣದ ತನಿಖೆ ಸ್ಥಗಿತವಾಗಿದ್ದು, ನಿಯಮದಂತೆ ನಡೆಸಬೇಕಾದ ಪ್ರಕ್ರಿಯೆಗಳನ್ನು ಪೊಲೀಸರು ನಡೆಸಿಲ್ಲ. ಆ ಹಿನ್ನೆಲೆಯಲ್ಲಿ ಆರೋಪಿಯನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸುವಂತೆ ಸಿಐಡಿಗೆ ಸೂಚನೆ ನೀಡಬೇಕು ಎಂದು ರಿಟ್ ಅರ್ಜಿ ಸಲ್ಲಿಸಿದ್ದರು.
ಘಟನೆ ನಡೆದು ಹಲವು ತಿಂಗಳುಗಳಾದರೂ ಪೊಲೀಸರಿಂದ ಕ್ರಮವಿಲ್ಲ. ಯಡಿಯೂರಪ್ಪರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ. ಮಾಜಿ ಸಿಎಂ ಬಿಎಸ್‌ವೈ ಮನೆಯ ಸಿಸಿಟಿವಿ ದೃಶ್ಯಾವಳಿ ಸೀಜ್ ಮಾಡಿಲ್ಲ. ಕನಿಷ್ಠ 41ಎ ಅಡಿ ನೊಟೀಸ್ ನೀಡಿ ಯಡಿಯೂರಪ್ಪರನ್ನು ವಿಚಾರಣೆಗೆ ಕರೆದಿಲ್ಲ. ಈ ಮಧ್ಯೆ, ದೂರುದಾರರಾಗಿರುವ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದಾರೆ. ಲೈಂಗಿಕ ದೌರ್ಜನ್ಯ ನಡೆದು ಹಲವು ತಿಂಗಳಾದರೂ ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಯಡಿಯೂರಪ್ಪರನ್ನು ಬಂಧಿಸುವಂತೆ ನಿರ್ದೇಶಿಸಬೇಕೆಂದು ರಿಟ್ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಸಭೆ
ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸುತ್ತಿದ್ದಂತೆ ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪೊಲೀಸ್ ಮುಖ್ಯಸ್ಥರು ಮತ್ತು ಗೃಹ ಸಚಿವರೊಂದಿಗೆ ಸಭೆ ನಡೆಸಿ, ಪ್ರಕರಣದ ಕುರಿತು ಮಾಹಿತಿ ಪಡೆದಿದ್ದರು. ಜೊತೆಗೆ ಮುಂದಿನ ಕ್ರಮದ ಸಾಧ್ಯತೆ ಕುರಿತು ಚರ್ಚಿಸಿದ್ದರು ಎನ್ನಲಾಗಿದೆ.
ಆ ಸಭೆಯ ಬೆನ್ನಲ್ಲೇ ಮಧ್ಯಾಹ್ನದ ಹೊತ್ತಿಗೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿ ಪ್ರಕರಣದ ಆರೋಪಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಸಿಆರ್‌ಪಿಸಿ ಸೆಕ್ಷನ್ 41A ನಡಿ ಸಿಐಡಿ ನೊಟೀಸ್ ನೀಡಿದ್ದು, ಯಾವುದೇ ಪ್ರಕರಣದ ಆರೋಪಿಯ ಬಂಧನಕ್ಕೆ ಮುನ್ನ ನೀಡುವ ಎಚ್ಚರಿಕೆ ನೊಟೀಸ್ ಇದಾಗಿದ್ದು, ಗಂಭೀರ ಪೋಕ್ಸೋ ಪ್ರಕರಣ ದಾಖಲಾಗಿ ಸರಿಸುಮಾರು ಮೂರು ತಿಂಗಳ ಬಳಿಕ ಸಿಐಡಿ, ಪ್ರಕರಣದ ತನಿಖೆಯನ್ನು ಗಂಭೀರವಾಗಿ ಕೈಗೆತ್ತಿಕೊಂಡಿದೆ ಎಂಬ ಸೂಚನೆ ಸಿಕ್ಕಿತ್ತು.
ಜೊತೆಗೆ, ಪ್ರಕರಣದ ವಿಶೇಷ ಅಭಿಯೋಜಕ(ಎಸ್‌ಪಿಪಿ)ರಾಗಿ ಅಶೋಕ್ ಎನ್ ನಾಯಕ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಮಧ್ಯಾಹ್ನ ಆದೇಶ ಹೊರಡಿಸಿತ್ತು.
ರದ್ದು ಕೋರಿ ಅರ್ಜಿ: ದೆಹಲಿಗೆ ಮಾಜಿ ಸಿಎಂ?
ಸಿಐಡಿ ನೋಟಿಸ್ ಜಾರಿಯಾದ ಬೆನ್ನಲ್ಲೇ ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಬಿ ಎಸ್ ಯಡಿಯೂರಪ್ಪ, ತಮ್ಮ ವಿರುದ್ಧದ ಪೋಕ್ಸೋ ಪ್ರಕರಣವನ್ನು ರದ್ದು ಮಾಡುವಂತೆ ಕೋರಿದ್ದಾರೆ. ತಮ್ಮ ವಿರುದ್ಧ ದೂರುದಾರ ಮಹಿಳೆಗೆ ಸುಳ್ಳು ದೂರು ನೀಡುವ ಅಭ್ಯಾಸವಿದ್ದು, ಈ ದೂರು ಕೂಡ ದುರುದ್ದೇಶದ ಸುಳ್ಳು ದೂರು ಎಂಬ ಕಾರಣ ನೀಡಿ ಮಾಜಿ ಸಿಎಂ ಪೋಕ್ಸೋ ಪ್ರಕರಣ ರದ್ದತಿಗೆ ನ್ಯಾಯಾಲಯಕ್ಕೆ ಮೊರೆ ಇಟ್ಟಿದ್ದಾರೆ.
ಪ್ರಕರಣ ರದ್ದು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಬಿ ಎಸ್ ಯಡಿಯೂರಪ್ಪ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದ್ದು, ಇತ್ತ ತಮ್ಮ ವಿರುದ್ಧದ ಪೋಕ್ಸೋ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸುತ್ತಿದ್ದಂತೆಯೇ ಯಡಿಯೂರಪ್ಪ ದೆಹಲಿಯತ್ತ ಪ್ರಯಾಣ ಬೆಳೆಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಏನಿದು ಪ್ರಕರಣ?
ಫೆಬ್ರವರಿ 2 ರಂದು ಬೆಂಗಳೂರಿನ ಯಡಿಯೂರಪ್ಪ ಅವರ ಮನೆಯಲ್ಲಿ ಅವರನ್ನು ಭೇಟಿ ಮಾಡಿ, ಈಗಾಗಲೇ ತಮ್ಮ ಪುತ್ರಿಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣವೊಂದರ ವಿಷಯದಲ್ಲಿ ನೆರವು ಕೇಳಲು ಹೋಗಿದ್ದೆವು. ಆಗ ಮಗಳೊಂದಿಗೆ ಮಾತನಾಡುವ ನೆಪದಲ್ಲಿ ಯಡಿಯೂರಪ್ಪ ಅವರು ತಮ್ಮ ಮಗಳನ್ನು ಖಾಸಗಿ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತೆಯಾಗಿದ್ದ ಸಂತ್ರಸ್ತೆಯ ತಾಯಿ ಆರೋಪಿಸಿದ್ದರು.
ಬಾಲಕಿಯ ತಾಯಿ ಮಾರ್ಚ್ 14ರಂದು ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.