ಬಾಗಲಕೋಟೆಯಲ್ಲಿ ಕಬ್ಬು ತುಂಬಿದ 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ; ನಿಷೇಧಾಜ್ಞೆ ಜಾರಿ

ಕಳೆದ 16 ದಿನಗಳಿಂದಲೂ ರೈತರು ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಮುಧೋಳದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

Update: 2025-11-13 15:09 GMT

ಬೆಂಕಿಯ ಕೆನ್ನಾಲಗೆಯಲ್ಲಿ ಸುಟ್ಟು ಹೋಗುತ್ತಿರುವ ಟ್ರ್ಯಾಕ್ಟರ್​ಗಳು.

ಕಬ್ಬಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದ ಉತ್ತರ ಕರ್ನಾಟಕದ ರೈತರ ತಾಳ್ಮೆಯ ಕಟ್ಟೆ ಕೊನೆಗೂ ಒಡೆದಿದೆ. ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಹಲವು ದಿನಗಳಿಂದ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯು ಗುರುವಾರ ಹಿಂಸಾರೂಪಕ್ಕೆ ತಿರುಗಿದ್ದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ನಿಂತಿದ್ದ ಕಬ್ಬು ತುಂಬಿದ 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಮತ್ತು ಟ್ರಾಲಿಗಳಿಗೆ ಆಕ್ರೋಶಗೊಂಡ ಗುಂಪೊಂದು ಬೆಂಕಿ ಹಚ್ಚಿದೆ. ಈ ಅನಿರೀಕ್ಷಿತ ಘಟನೆಯು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರ್ಖಾನೆಗೆ ಕಬ್ಬು ಸಾಗಿಸಲು ಸಾಲುಗಟ್ಟಿ ನಿಂತಿದ್ದ ಟ್ರ್ಯಾಕ್ಟರ್‌ಗಳು ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾದವು. ಕಣ್ಣೆದುರೇ ತಮ್ಮ ಬೆವರು ಮತ್ತು ಶ್ರಮದಿಂದ ಬೆಳೆದ ಕಬ್ಬು ಸುಟ್ಟು ಕರಕಲಾಗುತ್ತಿರುವುದನ್ನು ಕಂಡ ರೈತರು ಮತ್ತು ಚಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಸಂಗಾನಟ್ಟಿ ಕ್ರಾಸ್ ಬಳಿ ಆರಂಭವಾದ ಬೆಂಕಿಯ ಆರ್ಭಟ, ಕಾರ್ಖಾನೆಯ ಆವರಣದವರೆಗೂ ವ್ಯಾಪಿಸಿತು. ತಕ್ಷಣವೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರೂ, ಅಷ್ಟರಲ್ಲಾಗಲೇ ಕೋಟ್ಯಂತರ ರೂಪಾಯಿ ಮೌಲ್ಯದ ಕಬ್ಬು ಮತ್ತು ವಾಹನಗಳು ಸುಟ್ಟು ಕರಕಲಾಗಿದ್ದವು.

ಹಿಂಸಾಚಾರಕ್ಕೆ ಕಾರಣವೇನು?

ಕಳೆದ 16 ದಿನಗಳಿಂದಲೂ ರೈತರು ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಮುಧೋಳದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಆದರೆ, ಸರ್ಕಾರವು ರೈತರ ಬೇಡಿಕೆಯನ್ನು ಕಡೆಗಣಿಸಿ, ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ ಏಕಪಕ್ಷೀಯವಾಗಿ ದರ ನಿಗದಿ ಮಾಡಿದೆ ಎಂದು ರೈತರು ಆರೋಪಿಸುತ್ತಿದ್ದರು. ಗುರುವಾರ ಸಂಜೆ, ಸರ್ಕಾರಿ ಆದೇಶದ ಮೇರೆಗೆ ಕಾರ್ಖಾನೆಗಳು ಕಬ್ಬು ನುರಿಸಲು ಆರಂಭಿಸಿವೆ ಎಂಬ ಸುದ್ದಿ ಹರಡುತ್ತಿದ್ದಂತೆ, ರೈತರ ಆಕ್ರೋಶ ಸ್ಫೋಟಗೊಂಡಿತು.

ಕಾರ್ಖಾನೆಗೆ ಮುತ್ತಿಗೆ ಹಾಕಲು ಹೊರಟಿದ್ದ ಸಾವಿರಾರು ರೈತರನ್ನು ಪೊಲೀಸರು ತಡೆದಾಗ, ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಕೆಲವರು ಕಲ್ಲು ತೂರಾಟ ನಡೆಸಿದರು ಮತ್ತು ಕಬ್ಬು ಸಾಗಿಸುತ್ತಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು ಎಂದು ಹೇಳಲಾಗಿದೆ.

3 ತಾಲೂಕುಗಳಲ್ಲಿ ನಿಷೇಧಾಜ್ಞೆ

ಘಟನೆಯ ತೀವ್ರತೆಯನ್ನು ಅರಿತ ಜಿಲ್ಲಾಡಳಿತ, ತಕ್ಷಣವೇ ಮುಂಜಾಗ್ರತಾ ಕ್ರಮವಾಗಿ ಮುಧೋಳ, ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕುಗಳಲ್ಲಿ ನವೆಂಬರ್ 16ರ ಬೆಳಿಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ. ಯಾವುದೇ ರೀತಿಯ ಸಭೆ, ಸಮಾರಂಭ ಮತ್ತು ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ.

ರೈತ ಮುಖಂಡರ ಪ್ರಕಾರ, "ಹಾನಿ ಮಾಡುವುದು ನಮ್ಮ ಉದ್ದೇಶವಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ತಾಳ್ಮೆ ಕಳೆದುಕೊಂಡಾಗ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ," ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಬಾಗಲಕೋಟೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದ್ದು, ಸರ್ಕಾರದ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ.

Tags:    

Similar News