Breaking... HMPV Virus | ಸೋಂಕಿತ ಮಕ್ಕಳು ಗುಣಮುಖ: ಒಂದು ಮಗು ಡಿಸ್‌ಚಾರ್ಜ್
ಬೆಂಗಳೂರು ಗ್ರಾಮಾಂತರ ಭಾಗದ ಈ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಈ ಇಬ್ಬರು ಮಕ್ಕಳು ಸುರಕ್ಷಿತವಾಗಿದ್ದಾರೆ.;
ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಎರಡು ಎಚ್‌ಎಂಪಿವಿ ವೈರಸ್ ಸೋಂಕಿತ ಪ್ರಕರಣಗಳ ಪೈಕಿ ಮೂರು ತಿಂಗಳ ಮಗು ಗುಣಮುಖವಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಎಂಟು ತಿಂಗಳ ಮತ್ತೊಂದು ಮಗು ಕೂಡ ಚೇತರಿಸಿಕೊಂಡಿದೆ. ಆ ಮಗು ಕೂಡ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಬೆಂಗಳೂರು ಗ್ರಾಮಾಂತರ ಭಾಗದ ಈ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಈ ಇಬ್ಬರು ಮಕ್ಕಳು ಸುರಕ್ಷಿತವಾಗಿದ್ದಾರೆ. ಚೀನಾದಲ್ಲಿ ಎಚ್‌ಎಂಪಿವಿ ಸೋಂಕು ವ್ಯಾಪಕವಾಗಿ ಹರಡಿದ ಬೆನ್ನಲ್ಲೇ ಕರ್ನಾಟಕದಲ್ಲಿ ಮೊದಲ ಎರಡು ಪ್ರಕರಣಗಳು ಬೆಂಗಳೂರಿನಲ್ಲಿ ದೃಢಪಟ್ಟಿದ್ದವು.
ದೇಶದಲ್ಲೇ ಮೊದಲ ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಸರಣಿ ಸಭೆಗಳನ್ನು ನಡೆಸಿದ್ದು, ಮುಂಜಾಗ್ರತಾ ಕ್ರಮಗಳನ್ನುಕೈಗೊಂಡಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಚ್‌ಎಂಪಿವಿ ಸೋಂಕು ತಡೆಯವ ಕುರಿತು ಚರ್ಚಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಜ್ವರ, ಕೆಮ್ಮು ಹಾಗೂ ಶೀತದಿಂದ ದಾಖಲಾಗುವ ಮಕ್ಕಳ ಬಗ್ಗೆ ವರದಿ ಪಡೆದು, ಅಗತ್ಯ ಚಿಕಿತ್ಸೆ ದೊರಕುವಂತೆ ನೋಡಿಕೊಳ್ಳಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ. ಆದಾಗ್ಯೂ ಎರಡೂ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ. ಗ್ರಾಮಾಂತರ ಭಾಗದ ಪ್ರಕರಣಗಳಾಗಿವೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಆಯುಕ್ತ ವಿಕಾಸ್ ಸುರಳ್ಕರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ
ಬೆಂಗಳೂರಿನಲ್ಲಿ ಎರಡು ಎಚ್‌ಎಂಪಿವಿ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
- ಜ್ವರದ ಲಕ್ಷಣ ಹೊಂದಿರುವವರು ಜನನಿಬಿಡ ಪ್ರದೇಶದಿಂದ ದೂರ ಇರಬೇಕು. ಅನಗತ್ಯ ಓಡಾಟ ತಪ್ಪಿಸಬೇಕು.
- ಕೈಗಳನ್ನು ಸಾಬೂನಿನಿಂದ ಆಗಾಗ್ಗೆ ತೊಳೆಯಬೇಕು. ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿ ಮಾಡಬೇಕು.
- ಜ್ವರ, ಕೆಮ್ಮು, ನೆಗಡಿ ಹೊಂದಿರುವವರು ಮನೆಯಲ್ಲೇ ಇದ್ದು, ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು.
- ಸೋಂಕಿತರು ಬಳಸಿದ ಟವಲ್ ಮತ್ತು ಬಟ್ಟೆಗಳನ್ನು ಬೇರೆಯವರು ಬಳಸಬಾರದು.
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಮನೆ ಮದ್ದು ಆಶ್ರಯಿಸದೇ ನೆಗಡಿ, ಕೆಮ್ಮು ಕಾಣಿಸಿಕೊಂಡಾಗ ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯಬೇಕು.
- ಮನೆ ಮತ್ತು ಸುತ್ತಲಿನ ಪ್ರದೇಶ, ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
- ಸೋಂಕಿತರು ಹಾಗೂ ಪ್ರತಿಯೊಬ್ಬರು ನಿತ್ಯ ಪೌಷ್ಠಿಕಾಂಶವಿರುವ ಆಹಾರ ಸೇವಿಸಬೇಕು.