ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ | 25 ಕೋಟಿ ರೂ. ಮಂಜೂರು; ಜನರ ತೆರಿಗೆ ಹಣ ದುರ್ಬಳಕೆ ಎಂದ ಪ್ರತಿಪಕ್ಷ
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ʼಗಾಂಧಿ ಭಾರತʼ ಸಮಾವೇಶಕ್ಕಾಗಿ ರಾಜ್ಯ ಸರ್ಕಾರ 25 ಕೋಟಿ ರೂ. ಮಂಜೂರು ಮಾಡಿರುವುದು ಪ್ರತಿಪಕ್ಷಗಳು ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ʼಗಾಂಧಿ ಭಾರತʼ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ 25 ಕೋಟಿ ರೂ.ಮಂಜೂರು ಮಾಡಿರುವುದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
ರಾಜಕೀಯ ಪಕ್ಷದ ಕಾರ್ಯಕ್ರಮಕ್ಕಾಗಿ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸರ್ಕಾರದ ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಮಹಾತ್ಮ ಗಾಂಧೀಜಿಗೂ, ಕಾಂಗ್ರೆಸ್ಸಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ರಾಜಕೀಯ ಲಾಭಕ್ಕಾಗಿ ಜನರ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಆರೋಪಿಸಿದ್ದಾರೆ.
ಕೇಂದ್ರ ಸಚಿವರ ಈ ಆರೋಪಕ್ಕೆ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಧಿವೇಶನದ ನೆನಪಿಗಾಗಿ ಗಾಂಧಿ ಭಾರತ ಸಮಾವೇಶ ನಡೆಸಲಾಗುತ್ತಿದೆ. ಇದಕ್ಕೆ ಸರ್ಕಾರದ ಹಣ ಬಳಸುತ್ತಿದ್ದೇವೆ ಎಂದು ಜೋಶಿ ಅವರಿಗೆ ಹೇಳಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಈ ಮಧ್ಯೆ, ಸ್ಥಳೀಯ ಸಂಸದ ಜಗದೀಶ್ ಶೆಟ್ಟರ್, ಬೆಳಗಾವಿ ಅಧಿವೇಶನಕ್ಕೆ ತಮಗೆ ಆಹ್ವಾನವೇ ನೀಡಿಲ್ಲ. ಜನರ ಹಣವನ್ನು ಸರ್ಕಾರ ದುಂದುವೆಚ್ಚ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಚನ್ನಮ್ಮ ಉತ್ಸವಕ್ಕೆ 5ಕೋಟಿ ಅನುದಾನ ನೀಡಲು ಸರ್ಕಾರ ತಿಂಗಳುಗಟ್ಟಲೇ ಸತಾಯಿಸುತ್ತದೆ. ಕಾಂಗ್ರೆಸ್ ಅಧಿವೇಶನದ ಹೆಸರಲ್ಲಿ ಈಗ 25 ಕೋಟಿ ರೂ. ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.
ಮಹಾತ್ಮ ಗಾಂಧಿ ನೆನಪಿಗಾಗಿ ಕಾರ್ಯಕ್ರಮ ಮಾಡುವುದಾದರೆ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಇದು ಸಾರ್ವಜನಿಕರ ಹಣದಲ್ಲಿ ನಡೆಯುತ್ತಿರುವ ನಕಲಿ ಗಾಂಧಿಗಳ ಸಮಾವೇಶ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸಂಸದ ಜಗದೀಶ್ ಶೆಟ್ಟರ್ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, ನಾವು ಜಗದೀಶ್ ಶೆಟ್ಟರ್ ಅವರಿಗೆ ಆಹ್ವಾನ ನೀಡಿದ್ದೇವೆ. ಆದರೆ, ಅವರು ಆಹ್ವಾನವನ್ನೇ ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಕಾರ್ಯಕ್ರಮ ಮಾಡಬಹುದಿತ್ತು ಎಂಬ ಅವರ ಹೇಳಿಕೆಗೆ ನಾವು ಈಗಲೂ ಬದ್ಧ. ವರ್ಷಪೂರ್ತಿ ಕಾರ್ಯಕ್ರಮ ಇರಲಿದೆ. ಶೆಟ್ಟರ್ ಅವರೇ ಮುಂದಾಳತ್ವ ವಹಿಸಿ ಕಾರ್ಯಕ್ರಮ ಆಯೋಜಿಸಲಿ. ಅವರ ಹಿಂದೆ ನಿಂತು ನಾವು ಸೇವಕರಂತೆ ಕೆಲಸ ಮಾಡುತ್ತೇವೆ ಎಂದು ತಿರುಗೇಟು ಕೊಟ್ಟಿದ್ದಾರೆ.
25 ಕೋಟಿ ರೂ. ಬಿಡುಗಡೆ ಗೊಂದಲ
ಡಿ.26 ಹಾಗೂ 27ರಂದು ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸರ್ಕಾರ 25 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಶತಮಾನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ಸಚಿವ ಹೆಚ್.ಕೆ. ಪಾಟೀಲ ತಿಳಿಸಿದ್ದರು.
ಇದಲ್ಲದೇ 4 ಕೋಟಿ ರೂ. ವೆಚ್ಚದಲ್ಲಿ ಸುವರ್ಣ ವಿಧಾನಸೌಧದ ಬಳಿ ಗಾಂಧೀಜಿ ಪುತ್ಥಳಿ ಪ್ರತಿಷ್ಠಾಪಿಸಲಾಗುತ್ತಿದೆ. ವೀರಸೌಧ, ಹುದಲಿ ಸೇರಿ ಜಿಲ್ಲೆಯಲ್ಲಿನ ಗಾಂಧೀಜಿ ಕುರುಹುಗಳ ಅಭಿವೃದ್ಧಿಗೂ ಸರ್ಕಾರ ಮುಂದಾಗಿದೆ ಎಂದು ಹೇಳಿದ್ದರು.
ಆದರೆ, ಕೃಷಿ ಸಚಿವ ಚಲುವರಾಯ ಸ್ವಾಮಿ ಅವರು, ಕೇಂದ್ರ ಸಚಿವ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಗಾಂಧಿ ಭಾರತ ಕಾರ್ಯಕ್ರಮಕ್ಕೆ ಸರ್ಕಾರ 25 ಕೋಟಿ ನೀಡಿದೆ ಎಂದು ಜೋಶಿಯವರಿಗೆ ಯಾರು ಹೇಳಿದರು? ಎಂದು ಪ್ರಶ್ನಿಸುವ ಮೂಲಕ ಸರ್ಕಾರ ಹಣ ಬಿಡುಗಡೆ ಮಾಡಿರುವುದೇ ಸುಳ್ಳು ಎಂದು ಹೇಳಿದ್ದಾರೆ.
ಒಟ್ಟಾರೆ, ಬೆಳಗಾವಿಯ ಗಾಂಧಿ ಭಾರತದ ಹಣಕಾಸು ವಿಷಯ ಇದೀಗ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.