ಲೋಕ ಸ್ವಾರಸ್ಯ| ಒಕ್ಕಲಿಗ ವರ್ಸಸ್ ಒಕ್ಕಲಿಗ?

ಕರ್ನಾಟಕದಲ್ಲಿ ಈಗ ಒಕ್ಕಲಿಗ ವರ್ಸಸ್‌ ಒಕ್ಕಲಿಗ ಸೆಣಸಾಟ ಶುರುವಾಗಿದೆ. ಮೊದಲ ಹಂತದ 14 ಕ್ಷೇತ್ರಗಳಲ್ಲಿ ಒಕ್ಕಲಿಗರ ಮತ ನಿರ್ಣಾಯಕವಾಗಿದೆ. ಹೀಗಾಗಿ, ಈ ಬಾರಿ ಒಕ್ಕಲಿಗ ನಾಯಕರ ನಡುವೆ ಪೈಪೋಟಿ ಇದೆ.;

By :  Hitesh Y
Update: 2024-04-16 13:08 GMT
ಡಿ.ಕೆ ಶಿವಕುಮಾರ್‌ - ಎಚ್‌.ಡಿ ದೇವೇಗೌಡ

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಒಕ್ಕಲಿಗ ವರ್ಸಸ್ ಒಕ್ಕಲಿಗ ಸೆಣಸಾಟ ಪ್ರಾರಂಭವಾಗಿದೆ. ರಾಜ್ಯ ರಾಜಕೀಯದಲ್ಲಿ ಲಿಂಗಾಯತ ಸಮುದಾಯ ಮತ್ತು ಒಕ್ಕಲಿಗ ಸಮುದಾಯ ಪ್ರಧಾನ ಪಾತ್ರವನ್ನು ವಹಿಸಿವೆ. ಅಲ್ಲದೇ ದಲಿತರು, ಕುರುಬರು ಹಾಗೂ ಅಲ್ಪಸಂಖ್ಯಾತರು ಸಹ ಕ್ರಮವಾಗಿ ಪ್ರಭಾವ ಹೊಂದಿದ್ದಾರೆ.

ಎಚ್.ಡಿ ದೇವೇಗೌಡ ಅವರು ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಪುತ್ರ ಎಚ್.ಡಿ ಕುಮಾರಸ್ವಾಮಿ ಅವರು ಸಹ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.  ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ಆರ್ .ಅಶೋಕ್ , ಅಶ್ವಥ್ ನಾರಾಯಣ ಸೇರಿದಂತೆ ಹಲವು ಪ್ರಮುಖರು ಇದ್ದಾರೆ. ಕಾಂಗ್ರೆಸ್‌ನಲ್ಲಿ ಪ್ರಮುಖ ಒಕ್ಕಲಿಗ ನಾಯಕರಾಗಿ ಡಿ.ಕೆ ಶಿವಕುಮಾರ್ ಗುರುತಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಡಿ.ಕೆ ಶಿವಕುಮಾರ್ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ವಾಕ್ಸಮರ ನಡೆಯುತ್ತಿದೆ. ಒಕ್ಕಲಿಗ ನಾಯಕರ ಬಗ್ಗೆ ಮೃದುಧೋರಣೆ ಅನುಸರಿಸುತ್ತಿದ್ದ ಡಿ.ಕೆ ಶಿವಕುಮಾರ್ ಅವರು, ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಕುರುಬ / ಒಕ್ಕಲಿಗ, ಲಿಂಗಾಯತ / ಒಕ್ಕಲಿಗ ಅಥವಾ ಇತರೆ ಸಮುದಾಯದ ನಾಯಕರ ನಡುವೆ ಏರ್ಪಡುತ್ತಿದ್ದ ವಾಗ್ವಾದ, ಟೀಕೆ ಹಾಗೂ ಆರೋಪಗಳು ಈಗ ಒಕ್ಕಲಿಗ ನಾಯಕರ ನಡುವೆಯೇ ಕೇಳಿಬರುತ್ತಿವೆ. ಇನ್ನು ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡು ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ವಿರುದ್ಧ ಬೆಂಗಳೂರು ಗ್ರಾಮಾಂತ ಪ್ರದೇಶದಲ್ಲಿ ಮೈತ್ರಿ ಅಭ್ಯರ್ಥಿ (ಒಕ್ಕಲಿಗ ಸಮುದಾಯದ) ಸಿ.ಎನ್ ಮಂಜುನಾಥ್ ಅವರನ್ನೇ ಸ್ಪರ್ಧೆಗೆ ಇಳಿಸಿರುವುದು ಸಹ ಡಿ.ಕೆ ಶಿವಕುಮಾರ್ ಆಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವೆ ಒಕ್ಕಲಿಗ ಸಮುದಾಯದವರಾದ ಹಾಗೂ ಬಿಜೆಪಿಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಹ ಡಿ.ಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಒಕ್ಕಲಿಗರ ಮತಕ್ಕಾಗಿ ಸೆಣಸಾಟ ?

ಈ ಬಾರಿ ಒಕ್ಕಲಿಗ ನಾಯಕರ ನಡುವೆ ನಡೆಯುತ್ತಿರುವ ಸೆಣಸಾಟಕ್ಕೆ ಮುಖ್ಯ ಕಾರಣ ಲೋಕಸಭೆ ಚುನಾವಣೆ ಎನ್ನುವುದು ಸ್ಪಷ್ಟ. ಅದರಲ್ಲಿಯೂ ಈ ಬಾರಿ ಕಾಂಗ್ರೆಸ್, ಬಿಜೆಪಿ – ಜೆಡಿಎಸ್‌ಗೆ ಒಂದೊಂದು ಕಾರಣಕ್ಕೆ ಲೋಕಸಭೆ ಚುನಾವಣೆ ಸವಾಲಾಗಿದೆ. ಈಚೆಗೆ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳಿಸಿರುವ ಬಿಜೆಪಿ – ಜೆಡಿಎಸ್‌ಗೆ ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ. ಇನ್ನೊಂದು ಕಡೆ ಡಿ.ಕೆ ಶಿವಕುಮಾರ್ ಅವರು ಸೇರಿದಂತೆ ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗ ನಾಯಕರು ಹೈಕಮಾಂಡ್‌ನ ಮೇಲೆ ಒತ್ತಡ ಹಾಕಿ, ಕರ್ನಾಟಕದ 8 ಲೋಕಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರಿಗೆ ಟಿಕೆಟ್ ಸಿಗುಂತೆ ನೋಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಹಂತದ 14 ಲೋಕಸಭೆ ಕ್ಷೇತ್ರಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದ ಮತ ನಿರ್ಣಾಯಕವಾಗಿದೆ. ಅದರಲ್ಲಿಯೂ ಹಳೇ ಮೈಸೂರು ಪ್ರಾಂತ್ಯ ಹಾಗೂ ಮೈಸೂರು-ಕೊಡಗು, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕವಾಗಿದೆ. ಮೊದಲಿನಿಂದಲೂ ಈ ಭಾಗದಲ್ಲಿ ಜೆಡಿಎಸ್ ತನ್ನ ಹಿಡಿತ ಸಾಧಿಸಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್‌ ನೀಡಿದೆ. ಬಿಜೆಪಿ - ಜೆಡಿಎಸ್‌ ಮೈತ್ರಿಯಿಂದ 6 ಜನ ಒಕ್ಕಲಿಗರಿಗೆ ಟಿಕೆಟ್ ನೀಡಲಾಗಿದೆ. ಹೀಗಾಗಿ, ಒಕ್ಕಲಿಗ ನಾಯಕರ ನಡುವೆ ತೀವ್ರ ಪೈಪೋಟಿ ಇದೆ.

ಎಚ್ಚರಿಕೆಯ ಹೆಜ್ಜೆ ಇರಿಸಿದ್ದ ಕಾಂಗ್ರೆಸ್

ಕಳೆದ ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯದ ಎಚ್.ಡಿ ಕುಮಾರಸ್ವಾಮಿ ಮತ್ತು  ಅಹಿಂದ ನಾಯಕ ಸಿದ್ದರಾಮಯ್ಯ ಅವರ ನಡುವೆ ವಾಕ್ಸಮರ ನಡೆಯುತ್ತಿತ್ತು. ಅದೇ ರೀತಿ ಒಕ್ಕಲಿಗ ಸಮುದಾಯದ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆಯೂ ಶೀತ ಸಮರ ಇದೆ. ಆದರೆ, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಅನ್ಯೋನ್ಯವಾಗಿ ಚುನಾವಣೆಯಲ್ಲಿ ಭಾಗಿಯಾಗಿದ್ದರು. ಇಬ್ಬರ ನಡುವೆ ಅಧಿಕಾರದ ಗುದ್ದಾಟವಿದ್ದರೂ, ಫಲಿತಾಂಶದವರೆಗೆ ಬಹಿರಂಗಪಡಿಸಿರಲಿಲ್ಲ. ಮತ ವಿಭಜನೆಯಾಗದಂತೆ ಹಾಗೂ ಎರಡೂ ಸಮುದಾಯಗಳು ಕಾಂಗ್ರೆಸ್‌ಗೆ ಬೆಂಬಲಿಸುವಂತೆ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಿದ್ದರು. ಇದು ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ಸೃಷ್ಟಿಸಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು,  ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಅವರ ಬಗ್ಗೆ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ನೇರವಾಗಿ ಟೀಕೆ ಮಾಡಿರಲಿಲ್ಲ. ಈ ಬಾರಿಯೂ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ, ಜೆಡಿಎಸ್ ಮಾಡುವ ಟೀಕೆಗಳಿಗಷ್ಟೇ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸುತ್ತಿದ್ದಾರೆ.

ರಾಜ್ಯದ ಪ್ರಮುಖ ಒಕ್ಕಲಿಗ ನಾಯಕರು

ಎಚ್.ಡಿ ದೇವೇಗೌಡ

ಎಚ್.ಡಿ ಕುಮಾರಸ್ವಾಮಿ

ಡಿ.ಕೆ ಶಿವಕುಮಾರ್

ಆರ್. ಅಶೋಕ್

ಕೃಷ್ಣ ಬೈರೇಗೌಡ

ಚೆಲುವರಾಯಸ್ವಾಮಿ

ಸಿ.ಎನ್ ಅಶ್ವತ್ ನಾರಾಯಣ್

ಸಿ.ಟಿ ರವಿ

ಎಚ್.ಡಿ ರೇವಣ್ಣ

ಶೋಭಾ ಕರಂದ್ಲಾಜೆ

ಸದಾನಂದಗೌಡ

ಪ್ರತಾಪ್ ಸಿಂಹ

ಒಕ್ಕಲಿಗ ನಾಯಕರ ವಾಕ್ಸಮರದ ಮಾತುಗಳು

ಡಿ.ಕೆ ಶಿವಕುಮಾರ್

* ಸಮುದಾಯದವರು ದಡ್ಡರಲ್ಲ, ಎಚ್.ಡಿ ಕುಮಾರಸ್ವಾಮಿ ಮಾತನಾಡುವುದನ್ನು ನೋಡಿ ಏನಪ್ಪಾ ಒಕ್ಕಲಿಗರು ಇಷ್ಟು ದರಿದ್ರವಾಗಿ ಮಾತನಾಡುತ್ತಾರೆ ಎಂದುಕೊಳ್ಳುತ್ತಾರೆ.

* ಒಕ್ಕಲಿಗರಿಗೆ ಬಿಜೆಪಿಯಲ್ಲಿ ಯಾವುದೇ ಭವಿಷ್ಯವಿಲ್ಲ. ಆರ್. ಅಶೋಕ್, ಅಶ್ವತ್ ನಾರಾಯಣ್ ಅವರು ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಇದೆ.

* ಒಕ್ಕಲಿಗ ಮುಖ್ಯಮಂತ್ರಿಯನ್ನು ಬಿಜೆಪಿಯವರು ಕೆಳಗೆ ಇಳಿಸಿದ್ದರು. ಅವರೊಂದಿಗೇ ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡಿದ್ದಾರೆ.

* ಪ್ರತಾಪ್ ಸಿಂಹ, ಸದಾನಂದ ಗೌಡ ಅವರಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಎನ್ನುವುದು ದೊಡ್ಡ ಪ್ರಶ್ನೆ. ಬಿ.ಎನ್. ಬಚ್ಚೇಗೌಡ ಅವರು ಬಿಜೆಪಿ ಸಹವಾಸವೇ ಬೇಡ ಎಂದು ರಾಜಕೀಯದಿಂದ ದೂರ ಸರಿದಿದ್ದಾರೆ.

ಎಚ್.ಡಿ ಕುಮಾರಸ್ವಾಮಿ

* ನಮ್ಮ ಸಮಾಜದ ಜನ ದಡ್ಡರಲ್ಲ, ಎಲ್ಲವನ್ನೂ ಗಮನಿಸುತ್ತಾರೆ.

* ಒಕ್ಕಲಿಗ ನಾಯಕರನ್ನು ಒಗ್ಗೂಡಿಸುತ್ತೇವೆ.

* ನನ್ನ ಅಧಿಕಾರಕ್ಕಾಗಿ ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ದುರುಪಯೋಗಪಡಿಸಿಕೊಂಡಿಲ್ಲ.

* 90ರ ಇಳಿವಯಸ್ಸಿನಲ್ಲಿಯೂ ದೇವೇಗೌಡರು ಸಂಸತ್ತಿನ ಒಳ-ಹೊರಗೆ ರಾಜ್ಯಕ್ಕಾಗಿ ಅವಿರತವಾಗಿ ಹೋರಾಡುತ್ತಿದ್ದಾರೆ.

ಆರ್. ಅಶೋಕ್

* ಡಿ.ಕೆ. ಶಿವಕುಮಾರ್ ಒಕ್ಕಲಿಗ ಸಮುದಾಯದ ನಾಯಕ ಅಲ್ಲ. ಕುಕ್ಕರ್ ಬಾಂಬರ್‌ನನ್ನು ಬ್ರದರ್ ಎಂದವರು, ನಮ್ಮನ್ನು ಬ್ರದರ್ ಎಂದು ಹೇಳುವ ನೈತಿಕತೆ ಕಳೆದುಕೊಂಡಿದ್ದಾರೆ.

Tags:    

Similar News