Norcotics Coast | ಕರ್ನಾಟಕದ ʼಡ್ರಗ್ಸ್‌ ಹಬ್‌ʼ ಆಗುವ ಹಾದಿಯಲ್ಲಿದೆಯೇ ಕುಡ್ಲ?

ಮಂಗಳೂರು ಡ್ರಗ್ಸ್‌ ಹಬ್‌ ಆಗುತ್ತಿರುವ ಬಗ್ಗೆ ಸಂಸದ ಬ್ರಿಜೇಶ್‌ ಚೌಟ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಗಮನ ಸೆಳೆದಿದ್ದರು. ದಿಲ್ಲಿಯ ಶಕ್ತಿಸೌಧದವರೆಗೆ ತಲುಪಿದೆ ಈ ಪಿಡುಗಿನ ಧ್ವನಿ ಎಂದರೆ, ಸ್ಥಳೀಯ ಮಟ್ಟದಲ್ಲಿ ಎಷ್ಟೊಂದು ತೀವ್ರವಾಗಿದೆ ಎಂಬುದನ್ನು ಊಹಿಸಬಹುದು.

Update: 2024-08-10 10:46 GMT

ಆರೋಗ್ಯ, ಶಿಕ್ಷಣದ ಹಬ್‌ ಎನಿಸಿಕೊಂಡಿರುವ ಮಂಗಳೂರು, ಇತ್ತೀಚಿನ ದಿನಗಳಲ್ಲಿ ರಾಜ್ಯದ ಮಾದಕ ವಸ್ತು ಜಾಲದ 'ಹಾಟ್‌ಸ್ಪಾಟ್‌' ಆಗಿ ಬದಲಾಗುತ್ತಿರುವ ಅಪಾಯಕಾರಿ ಬೆಳವಣಿಗೆ ಕುಡ್ಲದವರಿಗೆ ಆತಂಕ ಮೂಡಿಸಿದೆ.

ಮಂಗಳೂರು ಡ್ರಗ್ಸ್‌ ಹಬ್‌ ಆಗುತ್ತಿರುವ ಬಗ್ಗೆ ಸಂಸದ ಬ್ರಿಜೇಶ್‌ ಚೌಟ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಗಮನ ಸೆಳೆದಿದ್ದರು. ದಿಲ್ಲಿಯ ಶಕ್ತಿಸೌಧದವರೆಗೆ ತಲುಪಿದೆ ಈ ಪಿಡುಗಿನ ಧ್ವನಿ ಎಂದರೆ, ಸ್ಥಳೀಯ ಮಟ್ಟದಲ್ಲಿ ಎಷ್ಟೊಂದು ತೀವ್ರವಾಗಿದೆ ಎಂಬುದನ್ನು ಊಹಿಸಬಹುದು.

ಅದಕ್ಕೆ ಪೂರಕ ಸಾಕ್ಷ್ಯ ಎಂಬಂತೆ ಈ ವರ್ಷದ ಜೂನ್‌ವರೆಗೆ ಡ್ರಗ್ಸ್‌ ಸೇವನೆ, ಸಾಗಾಟ, ಮಾರಾಟ ಸಂಬಂಧಿಸಿದಂತೆ 500 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಪೈಕಿ 400 ಜನ ಡ್ರಗ್ಸ್‌ ಸೇವನೆ ಮಾಡುವವರು ಎನ್ನುತ್ತವೆ ಪೊಲೀಸ್‌ ದಾಖಲೆಗಳು.

ಮಂಗಳೂರಿನಲ್ಲಿ ಡ್ರಗ್ಸ್‌ ಜಾಲಕ್ಕೆ ದಶಕಗಳ ಇತಿಹಾಸವೇ ಇದೆ. 60ರ ದಶಕದಲ್ಲೇ ನಗರದ ಪ್ರತಿಷ್ಠಿತ ಕಾಲೇಜುಗಳ ಸುತ್ತಮುತ್ತ ಡ್ರಗ್ಸ್‌ ಮಾರಾಟ ನಡೆಯುತ್ತಿದ್ದದ್ದು ಸಾಮಾನ್ಯವೇ ಅನಿಸುವಷ್ಟಿತ್ತು ಎಂದು ಇಲ್ಲಿನ ಹಳೆಯ ತಲೆಮಾರು ನೆನಪಿಸಿಕೊಳ್ಳುತ್ತದೆ.

ಅಭಿವೃದ್ಧಿ ನಕ್ಷೆಯಲ್ಲಿ ಅವನತಿ ಜಾಲದ ರೇಖೆಗಳು

ಮಂಗಳೂರು ನಗರ ಆರ್ಥಿಕವಾಗಿ ಬೆಳವಣಿಗೆ ಹೊಂದಿರುವುದು, ಎಲ್ಲ ಬಗೆಯ ಸಾರಿಗೆ, ಸಂವಹನ ಸಂಪರ್ಕ ವೃದ್ಧಿಯಾಗಿರುವುದು, ರಾಜ್ಯ, ಹೊರ ರಾಜ್ಯ ಮತ್ತು ಹೊರದೇಶಗಳ ಸಂಪರ್ಕ ಅತ್ಯಂತ ಸುಲಭವಾಗಿರುವುದು ಮುಂತಾದ ಅಭಿವೃದ್ಧಿಯೇ ಈ ಕರಾಳ ಜಾಲ ವ್ಯಾಪಕವಾಗಿ ಚಾಚಿಕೊಳ್ಳಲು ಕಾರಣ ಎನ್ನುತ್ತಾರೆ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌.

ವಿದ್ಯಾರ್ಥಿಗಳೇ ಟಾರ್ಗೆಟ್‌

ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಎಂಜಿನಿಯರಿಂಗ್‌ ಹಾಗೂ ಮೆಡಿಕಲ್‌ಸಹಿತ ನೂರಾರು ಕೋರ್ಸ್‌ಗಳಿಗೆ ಸೇರಿರುವ ಸುಮಾರು ಒಂದು ಲಕ್ಷಕ್ಕೂ ಅಧಿಕ ಹೊರ ರಾಜ್ಯದ ವಿದ್ಯಾರ್ಥಿಗಳಿದ್ದಾರೆ. ಅಲ್ಲದೇ ರಾಜ್ಯದ ಬೇರೆ ಬೇರೆ ಕಡೆಯಿಂದ ವಲಸೆ ಬಂದವರಿದ್ದಾರೆ. ಇವರೇ ಈ ಪೆಡ್ಲರ್‌ಗಳ ಪ್ರಧಾನ ಗುರಿ ಆಗಿರುತ್ತಾರೆ. ಜೊತೆಗೆ ಸ್ಥಳೀಯರೂ ಬೇರೆ ಬೇರೆ ರೂಪದಲ್ಲಿ ಈ ಜಾಲದ ಸಂಪರ್ಕಕ್ಕೆ ಬೀಳುತ್ತಾರೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

ಹದಿಹರೆಯದಲ್ಲೇ ವ್ಯಸನಕ್ಕೆ ಬಲಿ

ನಗರದಲ್ಲಿ ಪತ್ತೆಯಾಗುವ ಪ್ರತಿ 10 ಡ್ರಗ್ಸ್‌ ಪ್ರಕರಣಗಳಲ್ಲಿ 9 ಮಂದಿ ತಮ್ಮ 18ನೇ ವಯಸ್ಸಿಗೂ ಮುನ್ನವೇ ಈ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇಲ್ಲಿನ ವ್ಯಸನ ನಿರ್ಮೂಲನಾ ಕೇಂದ್ರಗಳಿಗೆ ಪ್ರತಿ ತಿಂಗಳು ಕನಿಷ್ಟ 60 ಮಂದಿ ಮಾದಕ ವ್ಯಸನಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ ಎನ್ನುವುದು ಆರೋಗ್ಯ ಇಲಾಖೆಯ ಮಾಹಿತಿ.

ಕಳೆದ ವರ್ಷದ ಆರಂಭದಲ್ಲೇ 23 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳೂ ಆರೋಪಿಗಳಾಗಿದ್ದರು.

ವ್ಯಸನಿಗಳು ಪೆಡ್ಲರ್‌ಗಳಾಗುವ ಬಗೆ

2021ರಲ್ಲಿ ಇಲ್ಲಿನ ನಿಟ್ಟೆ ವಿಶ್ವವಿದ್ಯಾನಿಲಯವು ಮಾದಕ ವ್ಯಸನ ಜಾಲ ಮತ್ತು ಯುವಕರು ಅದರ ಬಲಿಪಶುಗಳಾಗುವ ಕುರಿತು ಅಧ್ಯಯನ ನಡೆಸಿತ್ತು. ಅದರ ಪ್ರಕಾರ ಸಮೀಕ್ಷೆಗೆ ಒಳಪಡಿಸಿದವರ ಪೈಕಿ ಶೇ.48.78ರಷ್ಟು ವ್ಯಸನಿಗಳು ಕಾಲೇಜು ದಿನಗಳಲ್ಲೇ ಈ ಚಟಕ್ಕೆ ಬಲಿಯಾಗಿದ್ದರು. ಅವರ ಪೈಕಿ ಶೇ.12ರಷ್ಟು ಜನರು ತಮ್ಮ 18ರ ವಯೋಮಾನಕ್ಕೂ ಮೊದಲೇ ಮಾದಕ ದ್ರವ್ಯಗಳನ್ನು ಸೇವಿಸಲು ಶುರು ಮಾಡಿದ್ದರು. ಮಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿರುವುದು ಗಾಂಜಾ. ಮಲೆನಾಡು ಮತ್ತು ಕರಾವಳಿಯ ವಿವಿಧ ಭಾಗಗಳಿಂದ ಮಾತ್ರವಲ್ಲದೆ ನೆರೆಯ ಗೋವಾ, ಕೇರಳ ಮತ್ತು ತಮಿಳುನಾಡು ಮೂಲದಿಂದಲೂ ಇಲ್ಲಿಗೆ ಗಾಂಜಾ ಸರಬರಾಗುತ್ತದೆ.

ವಯೋ ದೌರ್ಬಲ್ಯವೇ ಗುರಿ

ಇದೇ ಅಧ್ಯಯನ ಹೇಳುವ ಪ್ರಕಾರ, ʼಮಂಗಳೂರು ಪ್ರದೇಶವು 35ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳನ್ನು ಹೊಂದಿರುವ ಶಿಕ್ಷಣ ಕೇಂದ್ರ. 18 ರಿಂದ 30 ವರ್ಷ ವಯಸ್ಸಿನವರ ವಯೋಸಹಜ ಮತ್ತು ಮಾನಸಿಕ ದೌರ್ಬಲ್ಯವನ್ನೇ ಬಳಸಿಕೊಂಡು ಈ ಜಾಲ ಸುಲಭವಾಗಿ ವಿದ್ಯಾರ್ಥಿಗಳನ್ನು ತನ್ನೊಳಗೆ ಸೆಳೆಯುತ್ತದೆ.

ಗೆಳೆಯರ ಒತ್ತಡ, ಕಾಲೇಜು ಆವರಣದ ಹೊರಗೆ ಮಾದಕ ದ್ರವ್ಯಗಳು ಸುಲಭವಾಗಿ ಸಿಗುವುದು ಮತ್ತು ಈ ವ್ಯಸನಕ್ಕೆ ಹಣ ಹೊಂದಿಸಲು ತಾವೇ ಡ್ರಗ್‌ಸಾಗಾಟ ಮತ್ತು ಮಾರಾಟಗಾರರಾಗಿ (ಪೆಡ್ಲರ್‌) ಬದಲಾಗುತ್ತಿರುವುದು ಈ ಪಿಡುಗಿನ ತೀವ್ರತೆಯನ್ನು ಹೆಚ್ಚಿಸಿದೆ. ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಕರ್ನಾಟಕದ ‘ಡ್ರಗ್ ರಾಜಧಾನಿ’ ಆಗುವ ಹಾದಿಯಲ್ಲಿದ್ದರೂ, ಪೋಷಕರಾಗಲಿ, ವಿದ್ಯಾರ್ಥಿ ಸಂಘಟನೆಗಳಾಗಲಿ, ಶಿಕ್ಷಣ ಸಂಸ್ಥೆಗಳಾಗಲಿ ಅಥವಾ ಸ್ಥಳೀಯ ರಾಜಕಾರಣಿಗಳಾಗಲಿ ಯಾರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ನಿಟ್ಟೆ ವಿವಿಯ ಅಧ್ಯಯನ ಹೇಳಿತ್ತು. ಆದರೆ ಇದೀಗ ಚರ್ಚೆಯ ಹಂತಕ್ಕಂತೂ ಬಂದಿದೆ.

ಪೊಲೀಸರ ಕ್ರಮವೇನು?

ನಗರದ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಹೇಳುವ ಪ್ರಕಾರ, "ಕಳೆದ ಒಂದು ವರ್ಷದಿಂದ ನಮ್ಮ ಕಮಿಷನರೇಟ್‌ ವ್ಯಾಪ್ತಿಯಲ್ಲಿ 3 ನಾರ್ಕೋಟಿಕ್‌ ನಿಯಂತ್ರಣ ದಳಗಳು ಸಹಾಯಕ ಕಮಿಷನರ್‌ ನೇತೃತ್ವದಲ್ಲಿ ಕೆಲಸ ಮಾಡುತ್ತಿವೆ. ನಾವು ಕಂಡಂತೆ ಈ ಜಾಲ ಮಟ್ಟ ಹಾಕಲು ದಿನದ 24 ಗಂಟೆಯೂ ಕೆಲಸ ಮಾಡಬೇಕು. ಈ ಪ್ರದೇಶವು ಡ್ರಗ್‌ ಸಂಬಂಧಿಸಿ ಹಾಟ್‌ಬೆಲ್ಟ್‌ ಆಗಿದೆ. ಹಾಗಾಗಿ ಪ್ರತಿ ಉಪವಿಭಾಗಕ್ಕೊಂದು ನಾರ್ಕೋಟಿಕ್‌ ದಳವನ್ನು ಆರಂಭಿಸಿದೆವು. ಈ ತಂಡಕ್ಕೆ ಕೇವಲ ಮಾದಕ ವಸ್ತುಗಳ ಪೂರೈಕೆ, ಸಾಗಾಟ, ಮಾರಾಟ ಮತ್ತು ಸೇವನಾ ಜಾಲಗಳ ಮೇಲೆ ಕಣ್ಣಿಟ್ಟು ಅವರ ಬಗ್ಗೆ ಮಾಹಿತಿ ಕೋಶವನ್ನು ಸಂಗ್ರಹಿಸುವ ಕೆಲಸ ನೀಡಲಾಗಿದೆ. ಅದೀಗ ತುಂಬಾ ವ್ಯವಸ್ಥಿತವಾಗಿ ನಡೆಯುತ್ತಿದೆ. ಹಾಗಾಗಿ ಪೆಡ್ಲರ್‌ಗಳಿಗೆ ಸ್ಪಷ್ಟ ಎಚ್ಚರಿಕೆ ರವಾನೆಯಾಗಿದೆ" ಎಂದರು.

ಹೇಗಿದೆ ತನಿಖಾ ತಂಡ?

ಈ ತಂಡವು ಒಬ್ಬ ಪಿಎಸ್‌ಐ ನೇತೃತ್ವದಲ್ಲಿ ನಾಲ್ಕು ಸಿಬ್ಬಂದಿಯನ್ನು ಒಳಗೊಂಡಿದೆ. ಮಾದಕ ವಸ್ತು ಸೇವಿಸುವವರನ್ನು ತನಿಖೆಗೊಳಪಡಿಸಿ ಅವರಿಗೆ ಮಾದಕ ವಸ್ತು ಪೂರೈಸುವವರು ಯಾರು ಎಂಬುದನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ. ಹಾಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಕರಣಗಳು ದಾಖಲಾಗುವ ಪ್ರಮಾಣ ಹೆಚ್ಚಿದೆ. ಪೆಡ್ಲರ್‌ಗಳ ಸಂಖ್ಯೆಯೂ ಕಡಿಮೆಯಾಗಿದೆ. ಅವರಿಗೂ ಆತಂಕ ಹುಟ್ಟಿದೆ. ಹಾಗಾಗಿ ಮಾದಕ ವಸ್ತು ಮಾರಾಟ ನಡೆಯುತ್ತಿರುವ ಬಗ್ಗೆ ಬರುತ್ತಿರುವ ದೂರುಗಳು ಕಡಿಮೆಯಾಗಿವೆ ಎಂಬುದು ಅಗರ್‌ವಾಲ್‌ ಅವರ ಮಾಹಿತಿ.

ಜಾಗೃತಿಯೇ ಮದ್ದು

"ಇಂಥ ವ್ಯಸನಕ್ಕೆ ಒಳಗಾಗುವುದನ್ನು ತಪ್ಪಿಸುವ ಸಲುವಾಗಿ ನನ್ನ ಸಹಿತ ಎಲ್ಲ ಅಧಿಕಾರಿಗಳು ಶಾಲಾ ಕಾಲೇಜುಗಳಿಗೆ ತೆರಳಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೊಂದಿಗೆ ನಿರಂತರ ಸಭೆ ನಡೆಸಿ ಅವರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗೆಗೂ ತಿಳಿಸಿದ್ದೇವೆ. ಇದೊಂದು ನಿರಂತರ ಕಾರ್ಯ. ಹೆಚ್ಚು ಕಡಿಮೆ ನಾವು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಜಾಗೃತಿ ಕಾರ್ಯಕ್ರಮಗಳ ಮೂಲಕ ತಲುಪಿದ್ದೇವೆ. ನಮ್ಮ ಎಲ್ಲ ಪ್ರಯತ್ನಗಳು ನಿರಂತರ ಸಾಗಿವೆ. ಸಾಕಷ್ಟು ಉತ್ತಮ ಫಲಿತಾಂಶವನ್ನೇ ಕೊಟ್ಟಿದೆ. ಇನ್ನೂ ಪ್ರಯತ್ನಗಳು ಮುಂದುವರಿಯುತ್ತಲೇ ಇವೆ" ಎಂದರು ಅಗರ್‌ವಾಲ್‌.

Tags:    

Similar News