ಧರ್ಮಸ್ಥಳ ಪ್ರಕರಣದ ಮಾಸ್ಟರ್‌ ಮೈಂಡ್‌ ಸಸಿಕಾಂತ್‌ ಸೆಂಥಿಲ್‌ ; ಶಾಸಕ ಜನಾರ್ದನ ರೆಡ್ಡಿ ಆರೋಪ

ಕಾಂಗ್ರೆಸ್ ಹೈಕಮಾಂಡ್‌ ನಾಯಕರಿಗೆ ಹತ್ತಿರವಾಗಿದ್ದುಕೊಂಡು ಧರ್ಮಸ್ಥಳಕ್ಕೆ ಕಳಂಕ ತಂದಿದ್ದಾರೆ. ತಪ್ಪು ಮಾಡಿಲ್ಲದಿದ್ದರೆ ಯಾವುದೇ ತನಿಖೆಗೆ ಮುಂದೆ ಬಂದು ನಿಲ್ಲುತ್ತೇನೆ ಎಂಬ ಮಾತು ಹೇಳಬೇಕಿತ್ತು ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದರು.;

Update: 2025-08-20 08:27 GMT

ಶಾಸಕ ಜನಾರ್ಧನ ರೆಡ್ಡಿ ಹಾಗೂ ಸಂಸದ ಸಸಿಕಾಂತ್‌ ಸೆಂಥಿಲ್‌

ಧರ್ಮಸ್ಥಳ ಪ್ರಕರಣದ ಹಿಂದೆ ತಮಿಳುನಾಡು ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡವಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. 

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಸಿಬಿಐ ಪ್ರಕರಣ ದಾಖಲಾದಾಗ ಸಸಿಕಾಂತ್ ಸೆಂಥಿಲ್ ಬಳ್ಳಾರಿಯಲ್ಲಿ ಉಪವಿಭಾಗಾಧಿಕಾರಿಯಾಗಿರಲಿಲ್ಲ. ನನ್ನ ಬಂಧನವಾದ ಬಳಿಕ ಸೆಂಥಿಲ್ ಕರ್ತವ್ಯಕ್ಕೆ ಸೇರಿದ್ದರು. ನನ್ನ ಪ್ರಕರಣಕ್ಕೂ, ಅವರಿಗೂ ಯಾವುದೇ ಸಂಬಂಧ ಇಲ್ಲ. ಈ ವಿಚಾರದಲ್ಲಿ ಸೆಂಥಿಲ್‌ ಸುಳ್ಳು ಹೇಳುತ್ತಿದ್ದಾರೆ ದೂರಿದ್ದಾರೆ.

ಸಸಿಕಾಂತ್‌ ಸೆಂಥಿಲ್ ಒಬ್ಬ ಹಿಂದೂ ವಿರೋಧಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗಲೇ ಧರ್ಮಸ್ಥಳದ ಕುರಿತು ಅಪಪ್ರಚಾರಕ್ಕೆ ಯೋಜನೆ ರೂಪಿಸಿದ್ದರು. ಡಿಸಿ ಹುದ್ದೆಗೆ ರಾಜೀನಾಮೆ ಕೊಡುವ ಮೊದಲೇ ಆರ್ಟಿಕಲ್ 370, ಎನ್ಆರ್‌ಸಿ, ಸಿಎಎ ವಿರೋಧಿಸಿದ್ದರು. ಎಸ್‌ಡಿಪಿಐ ಸಂಘಟನೆಗಳ ಸಮಾವೇಶಗಳಲ್ಲಿ ಪಾಲ್ಗೊಂಡು ಹಿಂದೂ ವಿರೋಧಿ ಹೇಳಿಕೆ ನೀಡಿರುವ ವಿಡಿಯೋಗಳಿವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್‌ ನಾಯಕರಿಗೆ ಹತ್ತಿರವಾಗಿದ್ದುಕೊಂಡು ಧರ್ಮಸ್ಥಳಕ್ಕೆ ಕಳಂಕ ತಂದಿದ್ದಾರೆ. ತಪ್ಪು ಮಾಡಿಲ್ಲದಿದ್ದರೆ ತನಿಖೆಗೆ ಮುಂದೆ ಬರುತ್ತೇನೆಂದು ಹೇಳಬೇಕಿತ್ತು. ನನಗೆ ಲಭ್ಯವಿರುವ ದಾಖಲೆಗಳನ್ನು ಉಲ್ಲೇಖಿಸಿ ಮಾತಾಡುತ್ತಿದ್ದೇನೆ ಎಂದು ಸೆಂಥಿಲ್‌ ಹೇಳಿರುವುದು ಸುಳ್ಳು. ನನ್ನ ಬಂಧನವಾದ ಬಳಿಕ ಆ ವ್ಯಕ್ತಿ ಬಳ್ಳಾರಿಗೆ ಬಂದಿರುವುದು. ಸೆಂಥಿಲ್‌ರನ್ನು ದೊಡ್ಡ ಮಟ್ಟದ ವಿಚಾರಣೆಗೆ ಒಳಪಡಿಸಬೇಕು. ಆಗ ಮಾತ್ರ ಹುನ್ನಾರದ ವಿಚಾರ ಹೊರಗೆ ಬರಲಿದೆ ಎಂದು ಹೇಳಿದ್ದಾರೆ.

ಜನಾರ್ದನ ರೆಡ್ಡಿ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಸಂಸದ ಹಾಗೂ ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್, ಶಾಸಕ ಜನಾರ್ದನರೆಡ್ಡಿ ಅವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Tags:    

Similar News