Internal Reservation | ಒಳ ಮೀಸಲಾತಿ ವರದಿಗೆ ಸಂಪುಟ ಅಸ್ತು ; ಬಲಗೈ-ಎಡಗೈ ಗುಂಪಿಗೆ ತಲಾ ಶೇ 6, ಸ್ಪೃಶ್ಯ ಜಾತಿಗಳಿಗೆ ಶೇ 5 ಮೀಸಲಾತಿ ಹಂಚಿಕೆ
ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ವರದಿ ಕುರಿತು ಸಚಿವರ ಅಭಿಪ್ರಾಯ ಆಲಿಸಿದ ಬಳಿಕ ಸರ್ವಾನುಮತದಿಂದ ಅಂಗೀಕರಿಸಲು ನಿರ್ಣಯಿಸಲಾಯಿತು.;
ಮೀಸಲಾತಿ ಹಂಚಿಕೆ ಕುರಿತು ಬಲಗೈ ಸಮುದಾಯದ ಆಕ್ಷೇಪ ಪರಿಗಣಿಸಿದ ಸಚಿವ ಸಂಪುಟ ಅಂತಿಮವಾಗಿ ಬಲಗೈ ಸಮುದಾಯ ಹಾಗೂ ಎಡಗೈ ಸಮುದಾಯಕ್ಕೆ ಸಮನಾಗಿ ಅಂದರೆ ತಲಾ ಶೇ 6 ರಷ್ಟು ಮೀಸಲಾತಿ ಹಂಚಿಕೆ ಮಾಡಿದೆ.
ನಾಗಮೋಹನ್ ದಾಸ್ ಆಯೋಗವು ತನ್ನ ವರದಿಯಲ್ಲಿ ಎಡಗೈ ಸಮುದಾಯಕ್ಕೆ ಶೇ 6, ಬಲಗೈ ಸಮುದಾಯಕ್ಕೆ ಶೇ 5, ಸ್ಪೃಶ್ಯ ಸಮುದಾಯಗಳಿಗೆ ಶೇ 4 , ಇತರೆ ಸಮುದಾಯಗಳಿಗೆ ಶೇ 1 ಹಾಗೂ ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಸಮುದಾಯ ಒಳಗೊಂಡ ಪ್ರತ್ಯೇಕ ಗುಂಪಿಗೆ ಶೇ 1 ರಷ್ಟು ಮೀಸಲಾತಿ ಹಂಚಿಕೆ ಮಾಡಿತ್ತು.
ಆಯೋಗ ಹಂಚಿಕೆ ಮಾಡಿದ ಮೀಸಲಾತಿ ಪ್ರಮಾಣಕ್ಕೆ ಬಲಗೈ ಸಮುದಾಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವರದಿ ಜಾರಿ ಮಾಡದಂತೆ ಆಗ್ರಹಿಸಿದ್ದವು. ಒಂದು ವೇಳೆ ವರದಿ ಜಾರಿ ಮಾಡುವುದಾದರೆ ಬಲಗೈ ಸಮುದಾಯಕ್ಕೂ ಶೇ 6 ರಷ್ಟು ಮೀಸಲಾತಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದವು. ಬಲಗೈ ಸಮುದಾಯದ ಸಚಿವರು ಕೂಡ ಮೀಸಲಾತಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಪುಟ ಸಭೆಯಲ್ಲಿ ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ತಲಾ ಶೇ 6ರಷ್ಟು ಮೀಸಲಾತಿ ನೀಡಲಾಗಿದೆ. ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿಗಳನ್ನು ಬಲಗೈ ಗುಂಪಿಗೆ ಸೇರಿಸಿ ಶೇ 1 ರಷ್ಟು ಮೀಸಲಾತಿಯನ್ನೂ ಅಡಕ ಮಾಡಲಾಗಿದೆ. ಹಾಗಾಗಿ ಬಲಗೈ ಗುಂಪಿನ ಮೀಸಲಾತಿ ಶೇ 6 ರಷ್ಟಾಗಿದೆ. ಅದೇ ರೀತಿ ಸ್ಪೃಶ್ಯ ಜಾತಿಗಳಿಗೆ ಶೇ 4 ರಷ್ಟು ಮೀಸಲಾತಿ ನೀಡಲಾಗಿತ್ತು. ಈ ಗುಂಪಿಗೆ ಇತರೆ ಸಮುದಾಯಗಳನ್ನು ಸೇರಿಸಿ ಅವರಿಗೆ ಕೊಟ್ಟಿದ್ದ ಶೇ 1ರಷ್ಟು ಮೀಸಲಾತಿಯನ್ನು ಅಡಕ ಮಾಡಲಾಗಿದೆ. ಆ ಮೂಲಕ ಸ್ಪೃಶ್ಯ ಜಾತಿಗಳ ಒಟ್ಟು ಮೀಸಲಾತಿ ಶೇ 5 ರಷ್ಟಾಗಿದೆ.