Internal Reservation | ಪರಿಶಿಷ್ಟರಲ್ಲಿ ರಾಜಕೀಯ, ಶೈಕ್ಷಣಿಕ ಅಸಮಾನತೆ ಅಜಗಜಾಂತರ, ಸಮುದಾಯದ ಸ್ಥಿತಿಗತಿ ತೆರೆದಿಟ್ಟ ನಾಗಮೋಹನ್ ದಾಸ್ ಆಯೋಗ

ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ಪರಿಶಿಷ್ಟ ಜಾತಿಯ 101 ಉಪ ಜಾತಿಗಳಲ್ಲಿ ಇಂದಿಗೂ 90 ಕ್ಕೂ ಅಧಿಕ ಜಾತಿಗಳು ರಾಜಕೀಯ, ಶಿಕ್ಷಣ, ಉದ್ಯೋಗ ಸೌಲಭ್ಯದಿಂದ ದೂರ ಉಳಿದಿರುವುದು ಬಯಲಾಗಿದೆ.;

Update: 2025-08-20 03:30 GMT

ನಿವೃತ್ತ ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗ ನಡೆಸಿದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ 101 ಒಳಜಾತಿಗಳಲ್ಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಯ ಅಂತರ ಬಹಿರಂಗಗೊಂಡಿದೆ. 

ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ 101 ಉಪ ಜಾತಿಗಳಲ್ಲಿ ಇಂದಿಗೂ 90 ಕ್ಕೂ ಅಧಿಕ ಜಾತಿಗಳು ರಾಜಕೀಯ, ಶಿಕ್ಷಣ, ಉದ್ಯೋಗ ಸೌಲಭ್ಯದಿಂದ ವಂಚಿತವಾಗಿವೆ. ಸ್ಥಳೀಯ ಸಂಸ್ಥೆಗಳಲ್ಲಿ 60 ಜಾತಿಗಳು ಮಾತ್ರ ಪ್ರಾತಿನಿಧ್ಯ ಹೊಂದಿವೆ. ಈ ಸಂಖ್ಯೆಯಲ್ಲಿ 51 ಜಾತಿಗಳು ಅತಿ ಕಡಿಮೆ ರಾಜಕೀಯ ಪ್ರಾತಿನಿಧ್ಯ ಹೊಂದಿವೆ. ಉಳಿದ 42 ಜಾತಿಗಳು ಈವರೆಗೂ ರಾಜಕೀಯ ಪ್ರಾತಿನಿಧ್ಯವನ್ನೇ ಪಡೆದಿಲ್ಲ ಎಂಬ ಸಂಗತಿ ತಳ ಸಮುದಾಯಗಳ ಶೋಚನೀಯ ಸ್ಥಿತಿಯನ್ನು ತೆರೆದಿಟ್ಟಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಪಡೆಯುವಲ್ಲಿ ಹೊಲೆಯ ಸಮುದಾಯ ಮೊದಲ ಸ್ಥಾನದಲ್ಲಿದ್ದರೆ,  ಮಾದಿಗ ಸಮುದಾಯ ಎರಡನೇ ಸ್ಥಾನದಲ್ಲಿದೆ. ಆದಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಬಂಜಾರ ಸಮುದಾಯ ನಾಲ್ಕನೇ ಸ್ಥಾನದಲ್ಲಿದೆ. ಭೋವಿ ಸಮುದಾಯ ಐದನೇ ಸ್ಥಾನದಲ್ಲಿದೆ. 

ಇನ್ನು ಪರಿಶಿಷ್ಟ ಜಾತಿಯ 42 ಜಾತಿಗಳು ಈವರೆಗೂ ರಾಜಕೀಯ ಪ್ರಾತಿನಿಧ್ಯ ಪಡೆಯದಿರಲು ಹಲವು ಕಾರಣಗಳನ್ನು ಆಯೋಗ ಕಂಡುಕೊಂಡಿದೆ. ಬಡತನ, ಅನಕ್ಷರತೆ, ಕಡಿಮೆ ಜನಸಂಖ್ಯೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತು ಅರಿವಿನ ಕೊರತೆ, ರಾಜಕೀಯ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಬಗ್ಗೆ ತಿಳಿವಳಿಕೆ ಕೊರತೆ ಹಾಗೂ ಸಮುದಾಯದಲ್ಲಿ ಸಂಘಟನೆ ದುರ್ಬಲವಾಗಿರುವುದರಿಂದ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗಿಲ್ಲ ಎಂದು ವರದಿ ಹೇಳಿದೆ. 

ರಾಜಕೀಯ ಅಧಿಕಾರದಿಂದ ದೂರ

ಲೋಕಸಭೆಯಿಂದ ಗ್ರಾಮ ಪಂಚಾಯ್ತಿವರೆಗಿನ ರಾಜಕೀಯ ಅಧಿಕಾರವು ಪರಿಶಿಷ್ಟ ಜಾತಿಯ ಕೆಲವೇ ಪ್ರಬಲ ಉಪಜಾತಿಗಳ ಕೈಯಲ್ಲಿದ್ದು, 97 ಜಾತಿಗಳು ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿವೆ. ರಾಜಕೀಯ ಅಧಿಕಾರವು ಹೊಲೆಯ, ಮಾದಿಗ, ಭೋವಿ ಹಾಗೂ ಲಂಬಾಣಿ ಜಾತಿಗಳಲ್ಲಷ್ಟೇ ಕೇಂದ್ರೀಕೃತವಾಗಿದೆ. ಆ ಮೂಲಕ ಸಂವಿಧಾನದ ಆಶಯ ವಾಸ್ತವದಲ್ಲಿ ನಿರರ್ಥಕ ಎನಿಸಿದೆ. 

ಸಂವಿಧಾನದ ಅನುಚ್ಛೇದ 330 ಮತ್ತು 332 ರ ಪ್ರಕಾರ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಯ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಒದಗಿಸಲಾಗಿದೆ.

27,917 ಪರಿಶಿಷ್ಟ ಗ್ರಾಮ ಪಂಚಾಯತಿ ಸದಸ್ಯರಲ್ಲಿ 41 ಜಾತಿಗಳಿಗೆ ಈವರೆಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಮಹಾನಗರ ಪಾಲಿಕೆಯ 52 ಸದಸ್ಯ ಸ್ಥಾನಗಳಲ್ಲಿ ಈವರೆಗೆ 89 ಜಾತಿಗಳಿಗೆ ಒಮ್ಮೆಯೂ ಪ್ರಾತಿನಿಧ್ಯ ದೊರೆಯದಿರುವುದನ್ನು ವರದಿ ಬೊಟ್ಟು‌ ಮಾಡಿದೆ. ಅದೇ ರೀತಿ ನಗರಪಾಲಿಕೆಯ 308 ಪರಿಶಿಷ್ಟ ಸ್ಥಾನಗಳಲ್ಲಿ 82 ಉಪಜಾತಿಗಳಿಗೆ ಅವಕಾಶ ಸಿಕ್ಕಿಲ್ಲ. ಪುರಸಭೆಗಳ 516 ಸ್ಥಾನಗಳಲ್ಲಿ 79 ಉಪಜಾತಿಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಪಟ್ಟಣ ಪಂಚಾಯತಿಯ 252 ಸ್ಥಾನಗಳಲ್ಲಿ 78 ಜಾತಿಗಳಿಗೆ ಈವರೆಗೆ ರಾಜಕೀಯ ಅಧಿಕಾರ ದೊರೆತಿಲ್ಲ.

ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಪಡೆದವರಲ್ಲಿ ಭೋವಿ, ಲಂಬಾಣಿ, ಹೊಲೆಯ, ಮಾದಿಗ, ಆದಿ ಕರ್ನಾಟಕ, ಅದಿ ದ್ರಾವಿಡ ಜಾತಿಗಳ ಪಾಲು ಹೆಚ್ಚಿದೆ. ಇದಲ್ಲದೆ ಭೂ ಹಿಡುವಳಿ ಮತ್ತು ಸರ್ಕಾರದ ಆರ್ಥಿಕ ಅನುದಾನಗಳ ಬಳಕೆಯಲ್ಲೂ ಇದೇ ಪರಿಸ್ಥಿತಿ ಕಂಡು ಬಂದಿದೆ. 

ಪರಿಶಿಷ್ಟ ಜಾತಿಯಲ್ಲಿ ಹೊಲಯ, ಹೊಲೆರ್, ಮಾದಿಗ,ಆದಿ ಕರ್ನಾಟಕ, ಬಂಜಾರ, ಲಂಬಾಣಿ, ಭೋವಿ, ಒಡ್, ಒಡ್ಡೆ,ಭಂಬೀ, ಮಾದರ್,ಆದಿ ದ್ರಾವಿಡ, ಚಲವಾದಿ, ಚಲವಾದಿ, ಕೊರಮ, ಕೊರವ ಜಾತಿಗಳು ಕಡಿಮೆ ರಾಜಕೀಯ ಪ್ರಾತಿನಿಧ್ಯ ಪಡೆದಿವೆ. 

ಆದಿ ಆಂಧ್ರ, ಸಮಗಾ‌ರ್, ಮೊಗೇರ, ಚೆನ್ನ ದಾಸರ್, ಹೊಲೆಯ ದಾಸರ್, ಬಾಕುಡಾ, ಮಹಾರ್, ತರಾಲ್, ಪಲ್ಲಾನ್, ಹೊಲಾರ್, ವಲಹಾರ್, ಭಂಗಿ, ಕೊರಚ, ಕೊರಚರ್, ಪಂಬದ, ಮಾಲಾ ಸೇರಿ 51ಜಾತಿಗಳು ಅತೀ ಕಡಿಮೆ ರಾಜಕೀಯ ಪ್ರಾತಿನಿಧ್ಯ ಪಡೆದಿವೆ.  

 

42 ಜಾತಿಗಳಿಗೆ ಇಂದಿಗೂ ಸಿಕ್ಕಿಲ್ಲ ಅಧಿಕಾರ

ಒಳ ಮೀಸಲಾತಿ ವರದಿಯಲ್ಲಿ ಸುಮಾರು 42 ಉಪ ಜಾತಿಗಳು ಈವರೆಗೂ ರಾಜಕೀಯ ಪ್ರಾತಿನಿಧ್ಯ ಪಡೆಯದಿರುವುದು ಕಂಡು ಬಂದಿದೆ.

ಅನಾಮುಕ್, ಗಾರೋಡಾ, ಗಾರೋ, ಆರ್ಯಮಾಲಾ, ಅರುಂಧತಿಯಾರ್(ತಮಿಳುನಾಡು ಮೂಲ), ಹಸಲಾ, ಅಶ್ವಮಾಲಾ, ಜಗ್ಗಲಿ,ಬಾಕಡ್, ಕದಾಯನ್, ಬಂಡಿ, ಕೆಪ್ ಮಾರೀಸ್, ಬಿಂಡ್ಲಾ,ಕೊಲುಪುಲ್‌ವಂಡು, ಚಕ್ಕಿಲಿಯನ್, ಕೂಸ, ಚಂಡಾಲ, ಕುಡುಂಬನ್ ಸೇರಿ 42 ಜಾತಿಗಳು ರಾಜಕೀಯ ಅಧಿಕಾರ ವಂಚಿತವಾಗಿ ತಳ ಸಮುದಾಯಗಳಾಗಿ ಗುರುತಿಸಿಕೊಂಡಿವೆ. 

ಕೆಲವೇ ಜಾತಿಗಳ ಪಾರುಪತ್ಯ

2024ನೇ ಲೋಕಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಉಪಜಾತಿಗಳಲ್ಲಿ ಹೊಲೆಯ ಸಮುದಾಯದ ಇಬ್ಬರು, ಮಾದಿಗ ಸಮುದಾಯದ ಇಬ್ಬರು ಹಾಗೂ ಭೋವಿ ಸಮುದಾಯದ ಒಬ್ಬರು ಮಾತ್ರ ಸಂಸದರಾಗಿ ಆಯ್ಕೆಯಾಗಿದ್ದಾರೆ. ಉಳಿದ 98 ಒಳಜಾತಿಗಳಿಗೆ ಲೋಕಸಭೆಯಲ್ಲಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ವಿಷಯವನ್ನು ಆಯೋಗವೇ ಖುದ್ದು ದೂರವಾಣಿ ಮೂಲಕ ಮಾಹಿತಿ ಸಂಗ್ರಹಿಸಿದೆ. 

ವಿಧಾನಸಭೆಯಲ್ಲೂ ಐದಾರು ಜಾತಿಗಳಷ್ಟೇ ರಾಜಕೀಯ ಪ್ರಾತಿನಿಧ್ಯ ಪಡೆದಿವೆ. ಆದಾಗ್ಯೂ,1957 ರಿಂದ 2023ರ ವರೆಗೆ ನಡೆದಿರುವ ವಿಧಾನಸಭಾ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿಯ ಸದಸ್ಯರು ತಮ್ಮ ಮೂಲ ಜಾತಿ ನಮೂದಿಸದ ಕಾರಣ  ಜಾತಿವಾರು ಮಾಹಿತಿಯನ್ನು ಆಯೋಗ ಉಲ್ಲೇಖಿಸಿಲ್ಲ.  

ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟರ ಪ್ರಾತಿನಿಧ್ಯ ನೋಡುವುದಾದರೆ, ರಾಜ್ಯದ ಒಟ್ಟು 1083 ಜಿಲ್ಲಾ ಪಂಚಾಯತಿ ಸದಸ್ಯರಲ್ಲಿ 212 ಸದಸ್ಯರು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. 2021-22 ರಿಂದ ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳ ರಾಜಕೀಯ ಪ್ರಾತಿನಿಧ್ಯದ ಮಾಹಿತಿ ಲಭ್ಯವಾಗಿಲ್ಲ. 

ತಾಲೂಕು ಪಂಚಾಯ್ತಿಯ 3,902 ಸದಸ್ಯರ ಸ್ಥಾನಗಳಲ್ಲಿ 736 ಮಂದಿ ಮಾತ್ರ ಪರಿಶಿಷ್ಟರಿದ್ದಾರೆ. ಇಲ್ಲಿಯೂ ಜಾತಿವಾರು ಮಾಹಿತಿ ಒದಗಿಸಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚುನಾಯಿತ ಪ್ರತಿನಿಧಿಗಳ ಸಂಖ್ಯೆ 21,917ಇದೆ. ರಾಜಕೀಯ ಅಧಿಕಾರ ಪಡೆದ ಜಾತಿಗಳಲ್ಲಿ ಹೊಲೆಯ, ಮಾದಿಗ, ಬಂಜಾರ, ಆದಿ ಕರ್ನಾಟಕ, ಭೋವಿ ಕ್ರಮವಾಗಿ ಮೊದಲ ಐದು ಸ್ಥಾನ ಪಡೆದಿವೆ. 41 ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯವೇ ದೊರತಿಲ್ಲ. 

ಮಹಾನಗರ ಪಾಲಿಕೆಗಳಲ್ಲಿ 12 ಒಳಜಾತಿಗಳು ಮಾತ್ರ ಪ್ರಾತಿನಿಧ್ಯ ಪಡೆದುಕೊಂಡಿವೆ. ಉಳಿದ 89 ಜಾತಿಗಳು ಪಾಲಿಕೆಗಳಿಂದ ದೂರ ಉಳಿದವೆ. ಇಲ್ಲೂ ಕೂಡ ಮಾದಿಗ, ಭೋವಿ, ಹೊಲೆಯ, ಬಂಜಾರ, ಛಲವಾದಿ ಕ್ರಮವಾಗಿ ಮೊದಲ ಐದು ಸ್ಥಾನ ಅಲಂಕರಿಸಿವೆ.

ನಗರಸಭೆಗಳಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ 314 ಸ್ಥಾನಗಳಲ್ಲಿ 308 ಸದಸ್ಯರು ರಾಜಕೀಯ ಪ್ರಾತಿನಿಧ್ಯ ಪಡೆದಿದ್ದಾರೆ. ಇಲ್ಲಿ ಕೇವಲ 19 ಒಳಜಾತಿಗಳು ರಾಜಕೀಯ ಪ್ರಾತಿನಿಧ್ಯ ಪಡೆದರೆ, ಉಳಿದ 82 ಜಾತಿಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ. ಆದಿಕರ್ನಾಟಕ, ಆದಿ ದ್ರಾವಿಡ, ಭೋವಿ, ಮಾದಿಗ ಹಾಗೂ ಹೊಲೆಯ ಸಮುದಾಯದ ಮೊದಲ ಐದು ಸ್ಥಾನಗಳಲ್ಲಿವೆ. 

ಪುರಸಭೆಯ ಚುನಾಯಿತ 516 ಸದಸ್ಯರ ಪೈಕಿ 27 ಜಾತಿಗಳಿಗೆ ಮಾತ್ರ ರಾಜಕೀಯವಾಗಿ ಪ್ರಬಲವಾಗಿವೆ. ಆದಿ ಕರ್ನಾಟಕ, ಭೋವಿ, ಹೊಲೆಯ, ಬಂಜಾರ ಕ್ರಮವಾಗಿ ನಾಲ್ಕು ಸ್ಥಾನಗಳನ್ನು ಕಾಯ್ದುಕೊಂಡಿವೆ.  

ಪಟ್ಟಣ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿಯ ಒಟ್ಟು 252 ಸದಸ್ಯರಲ್ಲಿ 23 ಜಾತಿಗಳು ಪ್ರಾತಿನಿಧ್ಯ ಪಡೆದರೆ, 78 ಜಾತಿಗಳಿಗೆ ಪ್ರಾತಿನಿಧ್ಯ ಮರೀಚಿಕೆಯಾಗಿದೆ. ಆದಿ ಕರ್ನಾಟಕ, ಭೋವಿ, ಮಾದಿಗ, ಬಂಜಾರ, ಹೊಲೆಯ ಮತ್ತು ಮಾದರ ಕ್ರಮವಾಗಿ ಐದು ಸ್ಥಾನದಲ್ಲಿವೆ. 

ಮಹಿಳೆಯರ ಪ್ರಾತಿನಿಧ್ಯ ಕಡಿಮೆ

ಪರಿಶಿಷ್ಟ ಜಾತಿಗಳಲ್ಲಿ ಗಂಡು ಮತ್ತು ಹೆಣ್ಣಿನ ಪ್ರಮಾಣ ಸರಿಸಮವಾಗಿದೆ. ಆದರೆ, ಸರ್ಕಾರಿ ಹುದ್ದೆಗಳಲ್ಲಿ ಹೆಣ್ಣು-ಗಂಡಿನ ನಡುವೆ ಅಸಮಾನತೆ ಸಾಕಷ್ಟಿದೆ. ಸರ್ಕಾರಿ ಹುದ್ದೆಗಳಲ್ಲಿರುವ 1,47,671 ಪರಿಶಿಷ್ಟ ಜಾತಿ ನೌಕರರಲ್ಲಿ 1,05,142 ಪುರುಷರಿದ್ದರೆ, 40,044 ಮಾತ್ರ ಮಹಿಳಾ ನೌಕರರಿದ್ದಾರೆ. 

ಹೊಲೆಯ ಸಂಬಂಧಿತ ಜಾತಿಗಳಲ್ಲಿ ಮಹಿಳೆಯರಿಗಿಂತ 2.4 ಪಟ್ಟು ಹೆಚ್ಚು ಪುರುಷರು ಸರ್ಕಾರಿ ಕೆಲಸದಲ್ಲಿದ್ದರೆ, ಮಾದಿಗ ಸಂಬಂಧಿತ ಜಾತಿಗಳಲ್ಲಿ ಮಹಿಳೆಯರಿಗಿಂತ 2.67 ಪಟ್ಟು  ಪುರುಷರು ಸರ್ಕಾರಿ ನೌಕರಿಯಲ್ಲಿದ್ದಾರೆ. ಲಂಬಾಣಿಗಳಲ್ಲಿ ಈ ಲಿಂಗ ತಾರತಮ್ಯ ಇನ್ನೂ ಹೆಚ್ಚಿದೆ. ಲಂಬಾಣಿ ಮಹಿಳೆಯರಿಗಿಂತ 4.5 ಪಟ್ಟು ಪುರುಷರು ಸರ್ಕಾರಿ ನೌಕರಿಯಲ್ಲಿದ್ದಾರೆ.

ಸರ್ಕಾರಿ ನೌಕರಿಯಲ್ಲೂ ಇದೇ ಅಸಮಾನತೆ 

ಪರಿಶಿಷ್ಟ ಜಾತಿಗಳ ಜನಸಂಖ್ಯೆ ಪ್ರಮಾಣಕ್ಕೆ ಹೋಲಿಸಿದರೆ ಶೇ.1.52 ರಷ್ಟು ಪರಿಶಿಷ್ಟ ಜಾತಿಗಳಿಗೆ ಸೇರಿದ ವ್ಯಕ್ತಿಗಳು ಸರ್ಕಾರಿ ಹುದ್ದೆಗಳಲ್ಲಿದ್ದಾರೆ. ಆದರೆ, ಇದರಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಇನ್ನಿತರ (ಪ್ರವರ್ಗ ಎ ದಲ್ಲಿರುವ) ಜಾತಿಗಳಲ್ಲಿ ಶೇ.0.81 ರಷ್ಟು ಮಂದಿಗೆ ಮಾತ್ರ ಸರ್ಕಾರಿ ನೌಕರಿ ಇದೆ. ಮಾದಿಗ ಸಂಬಂಧಿತ ಜಾತಿಗಳಲ್ಲಿ ಶೇ. 1.57 ರಷ್ಟು, ಹೊಲೆಯ ಸಂಬಂಧಿತ ಜಾತಿಗಳಲ್ಲಿ ಶೇ 2.05, ಸ್ಪೃಶ್ಯ ಜಾತಿಗಳು ಶೇ.1.25 ರಷ್ಟು ಪ್ರಾತಿನಿಧ್ಯ ಪಡೆದಿವೆ.

ಸೃಶ್ಯ ಜಾತಿಗಳಲ್ಲಿ ಸರ್ಕಾರಿ ನೌಕರಿ ಪಡೆದವರಲ್ಲಿ ಲಂಬಾಣಿ ಸಮುದಾಯದ  ಪಾಲು ಅತಿ ಹೆಚ್ಚಿದೆ. ಪರಿಶಿಷ್ಟ ಜಾತಿಗೆ ಸೀಮಿತವಾದ ಹುದ್ದೆಗಳಲ್ಲಿ 10 ಜಾತಿಗಳು ಅತಿ ಹೆಚ್ಚು ಪ್ರಾತಿನಿಧ್ಯ ಪಡೆದರೆ,51 ಜಾತಿಗಳು ಅತಿ ಕಡಿಮೆ ಪಡೆದುಕೊಂಡಿವೆ.

ಚಾಂಡಾಲ, ಗರೋಡಿ, ಸಿಂಧೋಳು-ಚಿಂಧೋಳ್ಳು ಎಂಬ 12 ಉಪಜಾತಿಗಳಲ್ಲಿ ಈವರೆಗೆ ಒಬ್ಬರಿಗೂ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ. ಹಾಗಾಗಿ ಪರಿಶಿಷ್ಟ ಜಾತಿಗಳ ಮರುವರ್ಗೀಕರಣದ ಅಗತ್ಯ ಹೆಚ್ಚಿದೆ ಎಂಬುದು ವರದಿ ಆಶಯವಾಗಿದೆ.

ಸಾಕ್ಷರತೆ ಪ್ರಮಾಣ ಹೇಗಿದೆ?

ಪರಿಶಿಷ್ಟರಲ್ಲಿ 26 ಜಾತಿಗಳು ಅತಿ ಹೆಚ್ಚು ಸಾಕ್ಷರತೆ ಪಡೆದಿವೆ (ಶೇ. 80 ಕ್ಕಿಂತ ಹೆಚ್ಚು), ಮಧ್ಯಮ ಪ್ರಮಾಣದ 67 ಜಾತಿಗಳು (ಶೇ. 60 ಕ್ಕಿಂತ ಹೆಚ್ಚು ಸಾಕ್ಷರತೆ), 17 ಜಾತಿಗಳು ಕಡಿಮೆ ಸಾಕ್ಷರತೆ ಹಾಗೂ 3 ಜಾತಿಗಳು ಅತ್ಯಂತ ಕಡಿಮೆ ಸಾಕ್ಷರತೆ ಹೊಂದಿವೆ.

ಪಿಯುಸಿ ಪಾಸಾಗಿರುವ ಶೇ. 72 ರಷ್ಟು ಪರಿಶಿಷ್ಟ  ಜಾತಿಯ ಮಕ್ಕಳು ಕೇವಲ ನಾಲ್ಕು ಜಾತಿಗಳಲ್ಲಿ ಮಾತ್ರ ಇದ್ದಾರೆ. ಉಳಿದ 97 ಜಾತಿಗಳಲ್ಲಿ ಶೇ.28 ಮಕ್ಕಳು ಮಾತ್ರ ಪಿಯುಸಿ ಮುಗಿಸಿದ್ದಾರೆ.

ಪದವಿ ಪೂರೈಸಿರುವ ಶೇ.71 ಮಕ್ಕಳು ಕೂಡ ಕೇವಲ ನಾಲ್ಕು ಪರಿಶಿಷ್ಟ ಉಪಜಾತಿಗಳಿಗೆ ಸೇರಿದ್ದಾರೆ. ಅದೇ ರೀತಿ ಮೆಡಿಕಲ್‌ ವಿದ್ಯಾಭ್ಯಾಸ ಮಾಡುತ್ತಿರುವ ಒಟ್ಟು 11,365 ಪರಿಶಿಷ್ಟ ವಿದ್ಯಾರ್ಥಿಗಳಲ್ಲಿ ಶೇ. 70 ರಷ್ಟು ವಿದ್ಯಾರ್ಥಿಗಳು ಬಂಜಾರ, ಭೋವಿ, ಹೊಲೆಯ ಮತ್ತು ಮಾದಿಗ ಉಪಜಾತಿಗಳಿಗೆ ಸೇರಿದವರಾಗಿದ್ದಾರೆ. ಎಂಜಿನಿಯರಿಂಗ್ ಓದುತ್ತಿರುವ 45, 216 ಪರಿಶಿಷ್ಟ ವಿದ್ಯಾರ್ಥಿಗಳಲ್ಲಿ ಶೇ. 71 ರಷ್ಟು ವಿದ್ಯಾರ್ಥಿಗಳು ಇದೇ ನಾಲ್ಕು ಜಾತಿಗಳಿಗೆ ಸೇರಿದವರಾಗಿದ್ದಾರೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.

ಪರಿಶಿಷ್ಟರ ಮೀಸಲಾತಿಯ ಬಹುಪಾಲನ್ನು ಮಾದಿಗ, ಹೊಲೆಯ, ಲಂಬಾಣಿ ಹಾಗೂ ಭೋವಿ ಸಮುದಾಯಗಳೇ ಅನುಭವಿಸುತ್ತಿವೆ.  ಉಳಿದ 97 ಜಾತಿಗಳಲ್ಲಿ 25 ಜಾತಿಗಳಲ್ಲಿ ಒಬ್ಬರೂ ತಾಂತ್ರಿಕ ಪದವಿ ಪಡೆದಿಲ್ಲ. 14 ಜಾತಿಗಳಲ್ಲಿ ಒಬ್ಬರೂ ಸ್ನಾತಕೋತ್ತರ ಪದವಿ, ಎಂಬಿಬಿಎಸ್ ಪದವಿ ಪಡೆದಿಲ್ಲ. 54 ಜಾತಿಗಳಲ್ಲಿ ಒಬ್ಬರೂ ಪಿಎಚ್.ಡಿ  ಪದವಿ ಪಡೆದಿಲ್ಲ. ಹೀಗಾಗಿ ಪರಿಶಿಷ್ಟರೆಂದು ವರ್ಗೀಕರಿಸಲ್ಪಟ್ಟ 101 ಜಾತಿಗಳಲ್ಲಿ ಶೈಕ್ಷಣಿಕ ಅಸಮಾನತೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಸುಸ್ಪಷ್ಟವಾಗಿದೆ. 

ಯಾವ ಗುಂಪು, ಯಾರು ಪ್ರಬಲ ?

ಗುಂಪು ʼಎʼ ನಲ್ಲಿ ಒಟ್ಟು 59ಜಾತಿಗಳಿದ್ದು, 5,22,099 ಮಂದಿ ಜನಸಂಖ್ಯೆಯಿದೆ. ಈ ಸಮುದಾಯಗಳಲ್ಲಿ ಶಿಳ್ಳೇಕ್ಯಾತ, ತೋಟಿ, ಸುಡುಗಾಡು ಸಿದ್ಧ, ಹಂದಿ ಜೋಗರು, ದೊಂಬರು, ಚೆನ್ನದಾಸರ ಹಾಗೂ ಹೊಲೆಯ ದಾಸರ, ಬೇಡ ಜಂಗಮ-ಬುಡ್ಗ ಜಂಗಮರು ಹೆಚ್ಚು ಸಂಖ್ಯೆಯಲ್ಲಿದ್ದಾರೆ.  ಈ ಜಾತಿಗಳಲ್ಲಿ ಬೇಡ ಜಂಗಮ-ಬುಡ್ಗ ಜಂಗಮ ಪ್ರಬಲ ಜಾತಿಯಾಗಿದೆ.   

ಗುಂಪು ʼಬಿʼ ನಲ್ಲಿ ಬರುವ 18 ಜಾತಿಗಳಲ್ಲಿ 36,69,246 ಜನಸಂಖ್ಯೆಯಲ್ಲಿ ಹೊಂದಿವೆ. ಭಂಬಿ, ಅಸೋಡಿ, ಚಾಮರ್‌, ಹರಳಯ್ಯ, ಕಕ್ಕಯ್ಯ, ಮಾದಿಗ, ಮೊಗೇರ್‌, ಪರೈಯನ್‌, ಪರಯ್ಯ, ಸಮಗಾರ ಸಮುದಾಯಗಳಿವೆ.  ಈ ಗುಂಪಿನಲ್ಲಿ ಮಾದಿಗ ಸಮುದಾಯ 27.73ಲಕ್ಷದೊಂದಿಗೆ ದೊಡ್ಡ ಪ್ರಬಲ ಸಮುದಾಯವಾಗಿದೆ. 

ಗುಂಪು ʼಸಿʼ ನಲ್ಲಿ 17ಜಾತಿಗಳಿದ್ದು, ಒಟ್ಟು 30,08,633 ಜನಸಂಖ್ಯೆ ಇದೆ. ಹೊಲೆಯ, ಛಲವಾದಿ, ಮಹರ್‌, ಬಲಗೈ, ಮುಂಡಾಲ, ಮಾಲ ಸಮುದಾಯಗಳಿವೆ. ಇದರಲ್ಲಿ ಹೊಲೆಯ ಸಮುದಾಯ ದೊಡ್ಡ ಜಾತಿಯಾಗಿದೆ.

ಗುಂಪು ʼಡಿ ʼನಲ್ಲಿ ನಾಲ್ಕು ಜಾತಿಗಳಲ್ಲಿ ಒಟ್ಟು 28,34,939 ಜನಸಂಖ್ಯೆ ಹೊಂದಿದೆ. ಬಂಜಾರ, ಲಂಬಾಣಿ, ಭೋವಿ ಸಮುದಾಯ ಪ್ರಬಲ ಜಾತಿಗಳಾಗಿವೆ. ಸಮೀಕ್ಷೆಯಲ್ಲಿ ಯಾವುದೇ ಉಪಜಾತಿ ದಾಖಲಿಸದೇ ಜಾತಿ ಸೂಚಕದ ಹೆಸರನ್ನು ಬರೆಸಿದವರನ್ನು ಪ್ರತ್ಯೇಕ ಗುಂಪು ಮಾಡಲಾಗಿದ್ದು,  ಗುಂಪು ʼಇʼ ಎಂದು ಹೆಸರಿಸಲಾಗಿದೆ. ಇದರಲ್ಲಿ 4,74,954 ಜನಸಂಖ್ಯೆ ಇದೆ. ಆದಿ ಆಂಧ್ರ, ಆದಿ ದ್ರಾವಿಡ ಹಾಗೂ ಆದಿ ಕರ್ನಾಟಕ ಒಳಗೊಂಡ ಪ್ರತ್ಯೇಕ ಗುಂಪಿಗೆ ಶೇ 1 ರಷ್ಟು ಮೀಸಲಾತಿ ಒದಗಿಸಲಾಗಿದೆ.

Tags:    

Similar News