Assembly Session | ಒಳ ಮೀಸಲಾತಿ ವರದಿ ಅಂಗೀಕಾರ; ಚರ್ಚೆಗೆ ಸಿಗದ ಅವಕಾಶ, ವಿಪಕ್ಷಗಳ ಸಭಾತ್ಯಾಗ
ಎಸ್‌ಸಿಪಿ\ಟಿಎಸ್‌ಪಿ ಕಾಯ್ದೆಯ ಸೆಕ್ಷನ್ 7 (ಸಿ) ಅಡಿ ಇತರ ಯೋಜನೆಗಳಿಗೆ ಹಣ ವರ್ಗಾಯಿಸಲು ಅವಕಾಶವಿದೆ ಸಚಿವ ಮಹದೇವಪ್ಪ ಸ್ಪಷ್ಟಪಡಿಸಿದರು.;
ವಿಧಾನಸಭಾ ಅಧಿವೇಶನದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ\ ಟಿಎಸ್‌ಪಿ ಹಣ ಬಳಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ-ಚರ್ಚೆ ನಡೆಯಿತು.
ಬಿಜೆಪಿ ಶಾಸಕರಾದ ಸುನೀಲ್ ಕುಮಾರ್, ಚಂದ್ರಪ್ಪ, ಆರ್.ಅಶೋಕ್, ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಮಂದಿ, ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ತಿರುಗಿಸಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಎಸ್ಸಿಪಿ, ಟಿಎಸ್ಪಿಯ 13,500 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಲಾಗಿದೆ. ಬಸ್ಸಿನಲ್ಲಿ ಹೋಗುವವರಿಗೆ ಹೇಗೆ ದಲಿತರು ಎಂದು ಗುರುತಿಸಿದ್ದೀರಿ?, ಇದು ಯೋಜನೆ ಹಳ್ಳ ಹಿಡಿಸುವಂತಾಗಿದೆ, ದಲಿತರಿಗೆ ಅನ್ಯಾಯ ಮಾಡಿದ್ದೀರಿ ಎಂದು ಸುನೀಲ್ ಕುಮಾರ್ ಆರೋಪಿಸಿದರು.
ಆರ್. ಅಶೋಕ್ ಮಾತನಾಡಿ, “ಕಳೆದ ಎರಡು ವರ್ಷಗಳಲ್ಲಿ ತಪ್ಪು ಆಗಿದೆ ಎಂದರೆ ಕ್ಷಮಿಸೋಣ, ಆದರೆ, ಇದೀಗ ನಡೆಯುತ್ತಿರುವುದು ನೇರ ಅನ್ಯಾಯ. ದಲಿತರ ಹಣವನ್ನು ನುಂಗುತ್ತಿದ್ದೀರಿ. ಗ್ಯಾರಂಟಿ ಯೋಜನೆಗಳು ವಾರೆಂಟಿಯಾಗಿವೆ. ದಲಿತ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲು ಎಷ್ಟು ಧೈರ್ಯ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಚಂದ್ರಪ್ಪ ಮಾತನಾಡಿ, “ಎಸ್ಸಿಪಿ–ಟಿಎಸ್ಪಿಗೆ 42 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೀರಾ, ಆದರೆ, ಬಿಡುಗಡೆ ಮಾಡಿದ್ದು ಕೇವಲ 8,459 ಕೋಟಿ. ಉಳಿದ ಹಣವನ್ನು ಎಲ್ಲಿ ಖರ್ಚು ಮಾಡಿದ್ದೀರಿ? ಸಮಾಜಕ್ಕೆ ಇದು ಮೋಸವಲ್ಲವೇ" ಎಂದು ಪ್ರಶ್ನಿಸಿದರು.
ಜೆಡಿಎಸ್ ಶಾಸಕ ಸುರೇಶ್ ಬಾಬು ಕೂಡ ಬಿಜೆಪಿ ಸದಸ್ಯರ ಹೇಳಿಕೆಗೆ ದನಿಗೂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಪ್ರತಿಕ್ರಿಯಿಸಿ, ಶಾಸಕ ಚಂದ್ರಪ್ಪ ಹೇಳಿದ್ದು ಸರಿಯಾಗಿದೆ. ಈ ವರ್ಷ ಎಂಟು ಸಾವಿರ ಕೋಟಿ ರೂ.ಮಾತ್ರ ಖರ್ಚಾಗಿದೆ, ಉಳಿದ ಹಣವನ್ನು ಕಾಯ್ದೆಯಡಿಯಲ್ಲಿಯೇ ಬೇರೆ ಯೋಜನೆಗಳಿಗೆ ಬಳಸಿದ್ದೇವೆ. ಪರಿಶಿಷ್ಟ ಜಾತಿ ಜನರಿಗೆ ಅನಕೂಲವಾಗಲೆಂದೇ ನೀಡಲಾಗಿದೆ” ಎಂದರು.
ಎಸ್‌ಸಿಪಿ\ಟಿಎಸ್‌ಪಿ ಕಾಯ್ದೆಯ ಸೆಕ್ಷನ್ 7 (ಸಿ) ಅಡಿ ಇತರ ಯೋಜನೆಗಳಿಗೆ ಹಣ ವರ್ಗಾಯಿಸಲು ಅವಕಾಶವಿದೆ ಸಚಿವ ಮಹದೇವಪ್ಪ ಸ್ಪಷ್ಟಪಡಿಸಿದರು.
ಸಚಿವರ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಸುರೇಶ್ ಗೌಡ ಮಾತನಾಡಿ, “ಅಂಬೇಡ್ಕರ್ ಬಗ್ಗೆ ನೀವು ಸದನದಲ್ಲಿ ಮಾತನಾಡುತ್ತೀರಾ, ಆದರೆ, ಅವರ ತತ್ವಗಳಿಗೆ ವಿರುದ್ಧವಾಗಿ ದಲಿತರಿಗೆ ಮೀಸಲಾದ ಹಣವನ್ನು ಬೇರೆಡೆ ಬಳಸುತ್ತಿದ್ದೀರಾ” ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಸಂದರ್ಭದಲ್ಲಿ ನನಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ಕಾಕಾ ಪಾಟೀಲ್ ಗೂ ಫ್ರೀ ಎಂದು ಸಿದ್ದರಾಮಯ್ಯ ತಿಳಿಸಿದ್ದರು. ಈಗ ಯಾರಿಗೂ ಅನುದಾನ ಇಲ್ಲದಂತಾಗಿದೆ ಎಂದು ಆರ್. ಅಶೋಕ್ ತಿಳಿಸಿದರು.
ಸಿಎಂ ಅವರ ಆರ್ಥಿಕ ಸಲಹೆಗಾರರೇ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ ಎಂದಿದ್ದಾರೆ. ಶಾಸಕ ರಾಜು ಕಾಗೆ ಕಳೆದ ವರ್ಷದಿಂದ ನನ್ನ ಗೋಳು ಆಲಿಸುತ್ತಿಲ್ಲ, ಹೀಗಾಗಿ ವಿಧಾನಸೌಧಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ತೀನಿ ಎಂದಿದ್ದರು. ವಿರೋಧ ಪಕ್ಷದವರು ಆತ್ಮಹತ್ಯೆ ಮಾಡಿಕೊಳ್ಳಬೇಕು ಆದರೆ ಆಡಳಿತ ಪಕ್ಷದ ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಅನುದಾನ ನೀಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತವಾಗಿದ್ದು, ಶಾಸಕರಿಗೆ ಅನುದಾನ ದೊರೆಯುತ್ತಿಲ್ಲ ಎಂದು ಪ್ರತಿಪಕ್ಷದ ನಾಯಕ ಆರ್. ಆಶೋಕ್ ಸದನದಲ್ಲಿ ತಿಳಿಸಿದರು.
ಕಳದೆ ಮೂರು ವರ್ಷದಿಂದ ರಾಜ್ಯದಲ್ಲಿ ಅಭಿವೃದ್ಧಿಯಾಗಿಲ್ಲ. ಗ್ಯಾರಂಟಿಗಳಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಣವನ್ನು ಬಳಸಿಕೊಳ್ಳಲಾಗುತ್ತಿದೆ. ಶಾಸಕರು ತಮ್ಮ ಕ್ಷೇತ್ರಗಳಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರವನ್ನು ಕುಟುಕಿದರು.
ಗಣೇಶೋತ್ಸವದ ವೇಳೆ ಸೌಂಡ್ ಸಿಸ್ಟಂ ಹಾಕಲು ಪೊಲೀಸರು ತೊಂದರೆ ಮಾಡುತ್ತಿದ್ದಾರೆ. ಆದರೆ ಅಜಾನ್ ಯಾವುದೇ ಸಮಯದಲ್ಲಿ ಕೂಗಬಹುದು ಎಂಬ ಬಿಜೆಪಿ ಶಾಸಕರ ಮಾತಿಗೆ ಕಾಂಗ್ರೆಸ್ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ತಿರುಗೇಟು ನೀಡಿದ್ದಾರೆ.
ಸದನದಲ್ಲಿ ಮಾತನಾಡಿದ ಅವರು, ಇದೇ ಬಿಜೆಪಿ ಸದಸ್ಯರು ಆಜಾನ್‌ಗೆ ರಾತ್ರಿ ವೇಳೆ ಸೌಂಡ್ ಬೇಡ, ನಿಷೇಧ ಮಾಡಿ ಅಂತ ವಿರೋಧ ಮಾಡಿದವರು ಇವರೇ. ಈಗ ಸದನದಲ್ಲಿ ಕಾನೂನು ಬಾಹಿರ ವಿಚಾರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಶಾಸಕ ನರೇಂದ್ರ ಸ್ವಾಮಿ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಅಶ್ವಥ್ ನಾರಾಯಣ ಮಾತನಾಡಿ, ನಾವು ಹಿಂದೂಗಳ ಹಬ್ಬದಲ್ಲಿ ಸೌಂಡ್ ಸಿಸ್ಟಂ ಬಳಕೆ ನಿಲ್ಲಿಸುತ್ತೇವೆ. ನೀವು ಆಜಾನ್ ಘೋಷಣೆ ನಿಲ್ಲಿಸಲಿ ನೋಡೋಣ. ನಾವು ಕಾನೂನು ಪಾಲನೆಗೆ ರೆಡಿ, ನೀವು ರೆಡಿ ಇದ್ದೀರಾ ಅಂತ ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರಾವಳಿಯಲ್ಲಿ ಹಿಂದೂ ಆಚರಣೆಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ವೇದವ್ಯಾಸ್ ಕಾಮತ್ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ "ಕೋಲಾ ಆರಂಭವಾಗುವುದೇ ರಾತ್ರಿ ವೇಳೆ. ಗಣೇಶ ಹಬ್ಬದ ಸಮಯದಲ್ಲಿ ಇಷ್ಟೊಂದು ಪೊಲೀಸ್ ಭದ್ರತೆ ಯಾಕೆ? ಕಳೆದ ಬಾರಿ ಗಣೇಶನನ್ನೇ ಬಂಧಿಸಿದ್ದಿರಿ. ಈ ಬಾರಿ ಹಾಗೆ ಮಾಡಬೇಡಿ" ಎಂದು ಹೇಳಿದರು. ಗಣೇಶ ಹಬ್ಬ ಕೇವಲ ಬಿಜೆಪಿ ಮಾತ್ರ ಆಚರಿಸುವುದಿಲ್ಲ, ಎಲ್ಲಾ ಪಕ್ಷದವರೂ ಆಚರಿಸುತ್ತಾರೆ. ಸರ್ಕಾರಕ್ಕೆ ಕಣ್ಣು-ಕಿವಿ ಇಲ್ಲ, ಹೀಗಾಗಿ ಕಣ್ಣು ತೆರೆದು ನೋಡಿ ಎಂದು ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಶೂನ್ಯವೇಳೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಹಬ್ಬ, ಧಾರ್ಮಿಕ ಆಚರಣೆ, ಉತ್ಸವ ವೇಳೆ ಪೊಲೀಸರಿಂದಾಗುತ್ತಿರುವ ತೊಂದರೆಗಳ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಪ್ರಸ್ತಾಪಿಸಿದ್ದು, ಇದಕ್ಕೆ ಇತರ ಬಿಜೆಪಿ ಸದಸ್ಯರು ಧ್ವನಿಗೂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಕ್ಷಗಾನ, ಕೋಲಾಟ, ಗಣೇಶೋತ್ಸವ, ಹುಲಿವೇಶ, ಶಾರದಾ ಮಹೋತ್ಸವ, ಕೃಷ್ಣ ಜನ್ಮಾಷ್ಠಮಿ ಮುಂತಾದ ಆಚರಣೆಗಳ ಸಂದರ್ಭದಲ್ಲಿ ಪೊಲೀಸರು ಸೌಂಡ್ ಸಿಸ್ಟಮ್‌ಗಳ ಬಳಕೆಗೆ ನಿರ್ಬಂಧ ಹೇರುತ್ತಿದ್ದಾರೆ, ಸೌಂಡ್ ಸಿಸ್ಟಮ್‌ಗಳನ್ನು ಸೀಜ್ ಮಾಡುತ್ತಿದ್ದಾರೆ, ರಾತ್ರಿ 10:30ರ ನಂತರ ಮೊಸರು ಕುಡಿಕೆ ಒಡೆಯಲು ಬಿಡದೆ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಬುಧವಾರ, ಶಾಸಕ ಮುನಿರತ್ನ ಅವರು ಸಚಿವರ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡುವಂತೆ ಒತ್ತಾಯಿಸಿ, ಸದನದಲ್ಲಿ ತೀವ್ರ ಗದ್ದಲ ಸೃಷ್ಟಿಸಿದರು. 250 ಕೋಟಿ ರೂ. ಮೌಲ್ಯದ ಸರ್ಕಾರಿ ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರ ವಿರುದ್ಧ ಈ ಹಕ್ಕುಚ್ಯುತಿ ಮಂಡಿಸಲು ಅವರು ಬಯಸಿದ್ದರು.
ಪ್ರಶ್ನೋತ್ತರ ಅವಧಿಯ ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದ ಮುನಿರತ್ನ "ನನಗೆ ಹಕ್ಕುಚ್ಯುತಿ ಮಂಡನೆ ಮಾಡಲು ಅವಕಾಶ ನೀಡಿ. ನಾನು ಅವಕಾಶ ಕೇಳಿದ್ದೇನೆ, ನೀವು ನನಗೆ ಅವಕಾಶ ಕೊಡಬೇಕು" ಎಂದು ಹಟ ಹಿಡಿದರು. 250 ಕೋಟಿ ರೂ. ಮೌಲ್ಯದ ಆಸ್ತಿ ವಿಚಾರವನ್ನು ಪ್ರಸ್ತಾಪಿಸಿದ ಅವರು, ಇದು ಸರ್ಕಾರದ ಆಸ್ತಿ ಮಾರಾಟಕ್ಕೆ ಸಂಬಂಧಿಸಿದ್ದು ಎಂದು ವಿವರಿಸಿದರು.
ಕರ್ನಾಟಕ ರಾಜ್ಯದ ಅನಾಥ ಮಕ್ಕಳಿಗೆ ವಿಶೇಷ ಪ್ರಾತಿನಿಧ್ಯ ನೀಡುವಂತೆ ಶಾಸಕಿ ನಯನಾ ಮೋಟಮ್ಮ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಉನ್ನತ ವ್ಯಾಸಂಗಕ್ಕೆ ಜಾತಿ ಪ್ರಮಾಣಪತ್ರ ಇಲ್ಲದೆ ತೊಂದರೆ ಅನುಭವಿಸುತ್ತಿರುವ 12ಸಾವಿರ ಅನಾಥ ಮಕ್ಕಳ ಪರಿಸ್ಥಿತಿಯನ್ನು ವಿವರಿಸಿ, ಅವರಿಗೆ ವಿಶೇಷ ಪ್ರಾವಿಜನ್ ಮಾಡುವಂತೆ ಕೋರಿದರು. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯಪ್ರವೇಶಿಸಿ, "ಅನಾಥ ಮಕ್ಕಳಿಗೆ ಸರ್ಕಾರವೇ ತಾಯಿ-ತಂದೆ. ಆದ್ದರಿಂದ, ಅವರಿಗೆ ವಿಶೇಷ ಪ್ರಾವಿಜನ್ ಮಾಡಬೇಕು ಮತ್ತು ಸಾಧ್ಯವಾದರೆ ಎಸ್ಸಿ, ಎಸ್ಟಿ ಪಟ್ಟಿಗೆ ಸೇರಿಸಬೇಕು" ಎಂದು ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಅವರಿಗೆ ಮನವಿ ಮಾಡಿದರು.
ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ನರೇಂದ್ರ ಸ್ವಾಮಿ, "ಅನಾಥ ಮಕ್ಕಳನ್ನು ಎಸ್ಸಿ, ಎಸ್ಟಿ ಪಟ್ಟಿಗೆ ಸೇರಿಸಲು ಬರುವುದಿಲ್ಲ, ಅದಕ್ಕಾಗಿ ಕೇಂದ್ರ ಸರ್ಕಾರ ಹೊಸ ಪ್ರಾವಿಜನ್ ಮಾಡಬೇಕು" ಎಂದು ಹೇಳಿದರು. ಇದಕ್ಕೆ ಸ್ಪೀಕರ್ ಖಾದರ್, "ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡೋಣ" ಎಂದು ಪ್ರತಿಕ್ರಿಯಿಸಿದರು.
ಹೆಬ್ಬಾಳ್ಕರ್ ಅವರು ಮತ್ತೊಮ್ಮೆ ಮಾತನಾಡಿ, "ಅನಾಥ ಮಕ್ಕಳು ನಮಗೆ ಸಿಕ್ಕ ದಿನವನ್ನೇ ಅವರ ಜನ್ಮದಿನಾಂಕ ಎಂದು ಪರಿಗಣಿಸುತ್ತೇವೆ. ಆದ್ದರಿಂದ, ಅವರಿಗೆ ಒಂದು ವಿಶೇಷ ಕ್ಯಾಟಗರಿ ಮಾಡಬೇಕು" ಎಂದು ಒತ್ತಾಯಿಸಿದರು. ಸ್ಪೀಕರ್ ಖಾದರ್ ಅವರು, "ಇದು ಗಂಭೀರವಾದ ವಿಚಾರ. ಸರ್ಕಾರ ಇದರ ಜವಾಬ್ದಾರಿ ತೆಗೆದುಕೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕು" ಎಂದು ಸೂಚಿಸಿದರು.
ಎಸ್‌ಸಿಪಿ/ ಟಿಎಸ್‌ಪಿ ಹಣವನ್ನು ನಾವು ದುರ್ಬಳಕೆ ಮಾಡಿದ್ದರೆ ನೀವು ಸುಮ್ಮನೆ ಬಿಡುತ್ತಿದ್ರಾ ಎಂದು ಪ್ರತಿಪಕ್ಷ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ನಾವು ದಲಿತರ ಹಣವನ್ನು ದುರ್ಬಳಕೆ ಮಾಡಿದ್ದರೆ ಮಹದೇವಪ್ಪ ನಮ್ಮನ್ನು ಸುಮ್ಮನೆ ಬಿಡ್ತಿದ್ರಾ, ಈಗ ಮಹದೇವಪ್ಪರಿಂದಲೇ ಸಮಾಜಕ್ಕೆ ಅನ್ಯಾಯ ಆಗ್ತಿದೆ. ದಲಿತರಿಗೆ ಮೀಸಲಿಟ್ಟ ಹಣದ ಬಗ್ಗೆ ಹಣಕಾಸು ಸಚಿವರು ತೀರ್ಮಾನ ಮಾಡಬಾರದು, ಸಮಾಜ ಕಲ್ಯಾಣ ಸಚಿವರು ತೀರ್ಮಾನ ಮಾಡಬೇಕು ಎಂದು ಕಿಡಿಕಾರಿದರು.
ನೂರು ಗ್ಯಾರಂಟಿ ಮಾಡಿ, ನಮ್ಮದೇನು ತಕರಾರು ಇಲ್ಲ, ಅವೆಲ್ಲ ವಾರೆಂಟಿ ಆಗಿ ಹೋಗಿವೆ, ದಲಿತರ ಹಣ ನುಂಗಿದ್ದೀರಲ್ಲ ನಿಮಗೆ ಎಷ್ಟು ಧೈರ್ಯ ಎಂದು ಆಕ್ರೋಶ ಹೊರಹಾಕಿದರು.