ಚಿತ್ರದುರ್ಗದಲ್ಲಿ 19 ವರ್ಷದ ವಿದ್ಯಾರ್ಥಿನಿಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ; ಅತ್ಯಾಚಾರ, ಕೊಲೆ ಶಂಕೆ
ಹಿರಿಯೂರು ತಾಲ್ಲೂಕಿನ ಕೋವೇರಹಟ್ಟಿ ಗ್ರಾಮದ ನಿವಾಸಿಯಾದ ವರ್ಷಿತಾ, ಚಿತ್ರದುರ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು.;
ಹತ್ಯೆಯಾದ ಯುವತಿ ವರ್ಷಿತಾ
19 ವರ್ಷದ ಕಾಲೇಜು ಯುವತಿಯ ಶವ ಅರೆಬೆಂದ ಸ್ಥಿತಿಯಲ್ಲಿ ನಗ್ನವಾಗಿ ಪತ್ತೆಯಾಗಿರುವ ಘಟನೆ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48ರ ಬಳಿ ನಡೆದಿದೆ. ಈ ಘೋರ ಕೃತ್ಯವು 2012ರ ದೆಹಲಿ ನಿರ್ಭಯಾ ಪ್ರಕರಣದಂತಿದ್ದು, ತಕ್ಷಣವೇ ಆರೋಪಿಗಳ ಪತ್ತೆಗೆ ವಿವಿಧ ಸಂಘಟನೆಗಳು ಆರೋಪಿಸಿವೆ.
ಹಿರಿಯೂರು ತಾಲ್ಲೂಕಿನ ಕೋವೇರಹಟ್ಟಿ ಗ್ರಾಮದ ನಿವಾಸಿ ವರ್ಷಿತಾ ಮೃತ ದುರ್ದೈವಿ. ಚಿತ್ರದುರ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಈಕೆ, ನಗರದ ಬಾಲಕಿಯರ ವಸತಿ ಶಾಲೆಯಲ್ಲಿ ತಂಗಿದ್ದಳು.
ಕಳೆದ ಆಗಸ್ಟ್ 14ರಂದು ರಜೆಗಾಗಿ ಹಾಸ್ಟೆಲ್‌ನಿಂದ ಹೊರ ಹೋಗಿದ್ದು, ಮರಳಿ ಹಾಸ್ಟೆಲ್‌ಗೆ ಹಿಂತಿರುಗಿರಲಿಲ್ಲ. ಐದು ದಿನಗಳ ಬಳಿಕ ಆ.19ರಂದು ಗೋನೂರು ಗ್ರಾಮದ ಬಳಿಯ ಹೆದ್ದಾರಿ ಅಂಚಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಆಕೆಯ ದೇಹ ಪತ್ತೆಯಾಗಿದೆ. ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದು, ವರ್ಷಿತಾ ಜೊತೆ ಸಂಪರ್ಕದಲ್ಲಿದ್ದ ಚೇತನ್ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ವರ್ಷಿತಾಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಎಬಿವಿಪಿ, ದಲಿತ ಮತ್ತು ಕನ್ನಡಪರ ಸಂಘಟನೆಗಳು ಒನಕೆ ಓಬವ್ವ ವೃತ್ತ ಮತ್ತು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದವು.
ವರ್ಷಿತಾ ಸಾವಿನ ಕುರಿತು ಆಕೆಯ ತಾಯಿ ಜ್ಯೋತಿ ತಿಪ್ಪೇಸ್ವಾಮಿ ಮಾತನಾಡಿ, ಗಂಡು ಮಕ್ಕಳಿಲ್ಲದ ನಮಗೆ, ಮಗಳು ಓದಿ ದೊಡ್ಡ ವ್ಯಕ್ತಿಯಾಗಲಿ ಎಂದು ನಗರಕ್ಕೆ ಕಳುಹಿಸಿದ್ದೆವು. ನಮ್ಮ ಮಗಳಿಗೆ ಆದ ಪರಿಸ್ಥಿತಿ ಬೇರೆ ಯಾವುದೇ ಮಕ್ಕಳಿಗೂ ಬರಬಾರದು ಎಂದು ಅಳಲು ತೋಡಿಕೊಂಡಿದ್ದಾರೆ.