ಗ್ಯಾರಂಟಿ ಯೋಜನೆಗಳಿಗೆ ಹಂಚಿಕೆಯಾದ ಎಸ್‌ಸಿಪಿ / ಟಿಎಸ್‌ಪಿ ಹಣವೆಷ್ಟು?
ರಾಜ್ಯ ಸರ್ಕಾರ ಎಸ್‌ಸಿಪಿ/ಟಿಎಸ್‌ಪಿಯ 13,433.84 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ಮಾಹಿತಿ ʼದ ಫೆಡರಲ್ ಕರ್ನಾಟಕʼಕ್ಕೆ ಲಭ್ಯವಾಗಿದೆ.;
ವಿಧಾನಸೌಧ
ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಾಗಿರುವ ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ವಿಚಾರ ಇದೀಗ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಕಿಚ್ಚು ಹೊತ್ತಿಸಿದೆ.
ಪರಿಶಿಷ್ಟ ಕಲ್ಯಾಣ ಕಾರ್ಯಕ್ರಮಗಳ ಅನುದಾನವನ್ನು ಬೇರೆ ಯೋಜನೆಗಳಿಗೆ ತಿರುಗಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ದಲಿತ ಸಮುದಾಯಗಳು ಹಾಗೂ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯ ಸರ್ಕಾರ ಎಸ್‌ಸಿಪಿ/ಟಿಎಸ್‌ಪಿಯ 13,433.84 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ಮಾಹಿತಿ ಲಭ್ಯವಾಗಿದೆ.
ಅದರಂತೆ 2025-26 ನೇ ಸಾಲಿನಲ್ಲಿ ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಎಸ್‌ಸಿಎಸ್‌ಪಿ 5,364 ಕೋಟಿ, ಟಿಎಸ್‌ಪಿಯ 2,074 ಕೋಟಿ ಸೇರಿ ಒಟ್ಟು 7,438.08 ಕೋಟಿ ರೂ ಹಂಚಿಕೆ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆಗೆ ಎಸ್‌ಸಿಎಸ್‌ಪಿಯ 1,156.68 ಕೋಟಿ ರೂ, ಟಿಎಸ್‌ಪಿಯ 414.08 ಕೋಟಿ ಸೇರಿ ಒಟ್ಟು 1,670.76 ಕೋಟಿ ರೂ. ಬಳಸಲಾಗಿದೆ.
ಗೃಹ ಜ್ಯೋತಿ ಯೋಜನೆಗೆ ಎಸ್‌ಸಿಎಸ್‌ಪಿಯ 1,818 ಕೋಟಿ ರೂ, ಟಿಎಸ್‌ಪಿಯ 808 ಕೋಟಿ ರೂ. ಸೇರಿ ಒಟ್ಟು 2,626 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ಶಕ್ತಿ ಯೋಜನೆಗೆ ಎಸ್‌ಸಿಎಸ್‌ಪಿಯ 1,060 ಕೋಟಿ ರೂ., ಟಿಎಸ್‌ಪಿಯ 477 ಕೋಟಿ ರೂ. ಸೇರಿ ಒಟ್ಟು 1,537 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಯುವನಿಧಿ ಯೋಜನೆಗೆ ಎಸ್‌ಸಿಎಸ್‌ಪಿಯ 114 ಕೋಟಿ ರೂ., ಟಿಎಸ್‌ಪಿಯ 48 ಕೋಟಿ ರೂ. ಸೇರಿ ಒಟ್ಟು 162 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.