ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣ | ಕೋಮು ಗಲಭೆ ಸೃಷ್ಟಿಸುವ ಕಿಡಿಗೇಡಿಗಳಿಗೆ ಸಿಎಂ ಎಚ್ಚರಿಕೆ

ಕೋಮು ಗಲಭೆಗಳನ್ನು ಉಂಟುಮಾಡುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಕಾನೂನಿನ ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.;

Update: 2025-05-29 08:30 GMT

ಬಿ.ಕೆ ಹರಿಪ್ರಸಾದ್‌ ಜೊತೆ ಸಿ.ಎಂ ಸಿದ್ದರಾಮಯ್ಯ 

ಕೋಮು ಗಲಭೆ ಸೃಷ್ಟಿಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಕಿಡಿಗೇಡಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. 

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರೊಂದಿಗೆ ಗುರುವಾರ ಉಪಾಹಾರ ಕೂಟದಲ್ಲಿ ಭಾಗಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಂಗಳೂರಿನಲ್ಲಿ ಸೌಹಾರ್ದತೆ ನೆಲೆಸಬೇಕು, ದ್ವೇಷ ಯಾವುದೇ ಕಾರಣಕ್ಕೂ ಇರಬಾರದು. ಕರಾವಳಿಯಲ್ಲಿ ಅನಗತ್ಯವಾಗಿ ಕೋಮುದಳ್ಳುರಿ ಸೃಷ್ಟಿಸುವವರ ವಿರುದ್ಧ ಸರ್ಕಾರ ನಿಗಾ ಇಡಲಿದೆ. ಶೀಘ್ರದಲ್ಲೇ ಕೋಮು ಸಾಮರಸ್ಯ ನಿಯಂತ್ರಣ ಪಡೆ ರಚಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಕೋಮು ಗಲಭೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ವಿಭಾಗದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಶಾಂತಿ ಕಾಪಾಡುವಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಇನ್ನು ದಕ್ಷಿಣ ಕನ್ನಡದಲ್ಲಿ ಮೇಲಿಂದ ಮೇಲೆ ಗಲಭೆ ನಡೆಯುತ್ತಿದ್ದರೂ ಸೂಕ್ತ ಕ್ರಮ ಜರುಗಿಸುವಲ್ಲಿ ವಿಫಲರಾದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ತೆಗೆದು ಹಾಕಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.

ಮುಲಾಜಿಲ್ಲದೇ ಕ್ರಮ: ಪರಮೇಶ್ವರ್‌

ಬಂಟ್ವಾಳದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಗಂಭೀರವಾಗಿ ಪರಿಗಣನೆ ಮಾಡಿದ್ದೇವೆ. ನಿರಂತರ ಕೋಮುಗಲಭೆ ಸೃಷ್ಟಿಸುತ್ತಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

Tags:    

Similar News