HMPV Virus | ಆತಂಕ ಬೇಡ, ಕಠಿಣ ನಿರ್ಬಂಧ ಕ್ರಮ ಸದ್ಯಕ್ಕಿಲ್ಲ: ಸಚಿವ ದಿನೇಶ್ ಗುಂಡೂರಾವ್

'ಚೀನಾದಲ್ಲಿ ಕಾಣಿಸಿಕೊಂಡಿರುವ ವೈರಸ್ ಬಗ್ಗೆ ಮಾಹಿತಿ ಇಲ್ಲ. ಇಲ್ಲಿ ಕಾಣಿಸಿರುವ ವೈರಸ್ ಅಪಾಯಕಾರಿಯಲ್ಲ. ಆದರೆ ಉಸಿರಾಟದ ಸಮಸ್ಯೆ ಇರುವವರು, ಮಕ್ಕಳು, ಹಿರಿಯ ನಾಗರಿಕರ ಬಗ್ಗೆ ಎಚ್ಚರವಹಿಸಬೇಕು' ಎಂದು ಸಲಹೆ ನೀಡಿದರು.;

Update: 2025-01-06 11:55 GMT
ದಿನೇಶ್‌ ಗುಂಡೂರಾವ್‌
Click the Play button to listen to article

ಚೀನಾದಲ್ಲಿ ಮತ್ತೆ ಕೋವಿಡ್‌ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಎಚ್‌ಎಂಪಿವಿ ವೈರಸ್‌ ಸೋಂಕಿನ ಬಗ್ಗೆ ಎಲ್ಲೆಲ್ಲೂ ಆತಂಕ ಎದುರಾಗಿದೆ. ಅದರಲ್ಲೂ ಬೆಂಗಳೂರಿನ ಮಕ್ಕಳಿಬ್ಬರಲ್ಲಿ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಮತ್ತೆ ಬಂದ್‌, ಲಾಕ್‌ಡೌನ್‌ ಹೇರಬಹುದೇ ಎಂಬ ಚರ್ಚೆಗಳು ಆರಂಭವಾಗಿವೆ.

ಈ ನಡುವೆ ಅಂತಹ ಆತಂಕಪಡುವ ಪರಿಸ್ಥಿತಿ ಸದ್ಯಕ್ಕಿಲ್ಲ ಎಂದಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ವೈರಸ್‌ ಸೋಂಕಿನ ವಿಷಯದಲ್ಲಿ ಆರೋಗ್ಯ ಇಲಾಖೆ ಯಾವುದೇ ಕಠಿಣ ನಿರ್ಬಂಧಗಳನ್ನು ಹೇರುವುದಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಈ ವೃರಸ್‌ ಬಗ್ಗೆ ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ. ಈ ಸಂಬಂಧ ರಾಜ್ಯದಲ್ಲಿ ಆರೋಗ್ಯ ಇಲಾಖೆ ಯಾವುದೇ ಕಠಿಣಕ್ರಮಗಳನ್ನು ಕೈಗೊಳ್ಳುವುದಿಲ್ಲ. ಕೇಂದ್ರದಿಂದಲೂ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಐಸಿಎಂಆರ್ ಸೂಚನೆಗಳನ್ನು ಅನುಸರಿಸುತ್ತೇವೆ' ಎಂದು ಹೇಳಿದ್ದಾರೆ. 

ಎಚ್‌ಎಂಪಿವಿ ಎರಡು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸೋಮವಾರ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಸಾಮಾನ್ಯವಾಗಿ ಐಎಲ್‌ಐ ಪ್ರಕರಣಗಳಲ್ಲಿ ಶೇ 1 ರಷ್ಟು ಜನರಲ್ಲಿ ಈ ವೈರಸ್ ಕಂಡು ಬರುತ್ತದೆ. ಇಂಥದ್ದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳನ್ನು ಪರೀಕ್ಷೆ ಮಾಡಿದಾಗ, ಎಚ್‌ಎಂಪಿ ವೈರಾಣು ಪತ್ತೆಯಾಗಿದೆ. ಇಬ್ಬರು ಮಕ್ಕಳ ಪೈಕಿ ಮೂರು ತಿಂಗಳ ಮಗು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಡೆಯಾಗಿದೆ. ಎಂಟು ತಿಂಗಳ ಮಗು ಇವತ್ತು ಅಥವಾ ನಾಳೆ ಬಿಡುಗಡೆಯಾಗುತ್ತದೆ. ವೈರಸ್ ಕುರಿತು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು.

'ಚೀನಾದಲ್ಲಿ ಕಾಣಿಸಿಕೊಂಡಿರುವ ವೈರಸ್ ಬಗ್ಗೆ ಮಾಹಿತಿ ಇಲ್ಲ. ಇಲ್ಲಿ ಕಾಣಿಸಿರುವ ವೈರಸ್ ಅಪಾಯಕಾರಿಯಲ್ಲ. ಆದರೆ ಉಸಿರಾಟದ ಸಮಸ್ಯೆ ಇರುವವರು, ಮಕ್ಕಳು, ಹಿರಿಯ ನಾಗರಿಕರ ಬಗ್ಗೆ ಎಚ್ಚರವಹಿಸಬೇಕು' ಎಂದು ಸಲಹೆ ನೀಡಿದರು. 'ಇದು ಮಾರಣಾಂತಿಕವೂ ಅಲ್ಲ. ಉಸಿರಾಟದ ತೊಂದರೆ ಇರುವವರಿಗೆ, ನ್ಯುಮೋನಿಯಾ ಸಮಸ್ಯೆ ಇರುವವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಮತ್ತು ಹಿರಿಯರಲ್ಲಿ ಈ ವೈರಸ್‌ನಿಂದ ಸ್ವಲ್ಪ ತೊಂದರೆಯಾಗಬಹುದು. ಅಷ್ಟನ್ನು ಹೊರತುಪಡಿಸಿ, ಬೇರೆ ಯಾವುದೇ ಸಮಸ್ಯೆ ಇಲ್ಲ' ಎಂದು ಅವರು ತಿಳಿಸಿದರು. 

ಕರ್ನಾಟಕದಲ್ಲಿ 2 ಲಕ್ಷ 36 ಸಾವಿರ ಐಎಲ್ಐ ಕೇಸ್​ಗಳಿವೆ. ಐಎಲ್ಐ ಕೇಸ್​ನಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಪುದುಚೆರಿ, ಗುಜರಾತ್​ನಲ್ಲಿ ಹೆಚ್ಎಂಪಿ ವೈರಸ್ ಪ್ರಕರಣವಿದೆ. ಕೇಂದ್ರ ಸರ್ಕಾರದ ಮಾಹಿತಿ ಅನ್ವಯ ಐಎಲ್​​ಐ ಕೇಸ್ ಹೆಚ್ಚಾಗಿಲ್ಲ. ಚಳಿಗಾಲದಲ್ಲಿ ಸಹಜವಾಗಿ ಶೀತ, ಕೆಮ್ಮು, ಕಫ ಇದ್ದೇ ಇರುತ್ತೆ. ಆದರೆ ಇಂತಹ ಲಕ್ಷಣಗಳೆಲ್ಲವೂ ಹೆಚ್ಎಂಪಿವಿ ಪ್ರಕರಣವಲ್ಲ. ರಾಜ್ಯ ಆರೋಗ್ಯ ಇಲಾಖೆಯಲ್ಲಿ ಹಣಕಾಸಿನ ಕೊರತೆಯಿಲ್ಲ. ವೈದ್ಯಕೀಯ ಪರಿಕರ ಖರೀದಿ ಸಹಜವಾಗಿಯೇ ನಡೆಯುತ್ತಿದೆ. ಆಯಾ ಆಸ್ಪತ್ರೆಗಳಿಂದಲೇ ವೈದ್ಯಕೀಯ ಸಾಮಗ್ರಿ ಖರೀದಿ ಮಾಡಲಾಗುವುದು ಎಂದಿದ್ದಾರೆ.

ಸೋಂಕು ತಡೆಗೆ ಸೂಕ್ತ ಮುಂಜಾಗ್ರತಾ ಕ್ರಮ: ಮುಖ್ಯಮಂತ್ರಿ

ಬೆಂಗಳೂರು ಪ್ರಕರಣಗಳ ಹಿನ್ನೆಲೆಯಲ್ಲಿ ಮತ್ತೊಂದೆಡೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸೋಂಕು ತಡೆಗೆ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಚೀನಾ ದೇಶದಲ್ಲಿ ಹೆಚ್ ಎಂ ಪಿ ವಿ ವೈರಸ್ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಈ ವೈರಸ್ ಪತ್ತೆಯಾಗಿರುವ ಮಾಹಿತಿ ದೊರೆತಿದೆ. ಆದ್ದರಿಂದ ಈ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಆರೋಗ್ಯ ಸಚಿವರು ಈಗಾಗಲೇ ಸಭೆ ನಡೆಸುತ್ತಿದ್ದು, ವೈರಸ್ ತಡೆಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿವೆ ಎಂದರು.

ಸೋಂಕು ತಡೆಯ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಪುನಃ ಪ್ರಾರಂಭಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಆರೋಗ್ಯ ಸಚಿವರು ಸಭೆ ನಡೆಸುತ್ತಿದ್ದು, ರಾಜ್ಯದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. 

Tags:    

Similar News