ಕೋವಿಡ್ ಪರಿಹಾರಕ್ಕೆ ಹಣವಿಲ್ಲ: ಕಂದಾಯ ಇಲಾಖೆಗೆ ಪಿಂಚಣಿ ನಿರ್ದೇಶನಾಲಯ ಪತ್ರ
ಕೋವಿಡ್ ಮೃತರಿಗೆ ಪರಿಹಾರ ನೀಡಲು ಹಣ ಇಲ್ಲ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯವು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಬೆಂಗಳೂರು: ಕೋವಿಡ್ ಮೃತರಿಗೆ ಪರಿಹಾರ ನೀಡಲು ಹಣ ಇಲ್ಲ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯವು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಕೋವಿಡ್ ನಿಂದ ಮೃತಪಟ್ಟವರಿಗೆ ಪರಿಹಾರ ನೀಡಲು ಅನುದಾನವಿಲ್ಲ. 850 ಪ್ರಕರಣಗಳಿಗೆ ತಲಾ 50 ಸಾವಿರ ಅನುದಾನ ನೀಡಬೇಕು. ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ ಒಟ್ಟು 10 ಕೋಟಿ ಪರಿಹಾರ ನೀಡಬೇಕು. ಆದರೆ, ಪರಿಹಾರ ಪಾವತಿಗೆ ಅನುದಾನ ಲಭ್ಯವಿಲ್ಲ ಎಂದು ಪತ್ರದಲ್ಲಿ ಹೇಳಿದೆ.
ಅರ್ಜಿದಾರರು ಪರಿಹಾರ ಪಾವತಿ ಕೋರಿ ಪದೇ ಪದೇ ದೂರವಾಣಿ ಮೂಲಕ ಹಾಗೂ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ನಿರ್ದೇಶನಾಲಯಕ್ಕೆ ಭೇಟಿ ನೀಡಿ ಪರಿಹಾರ ಪಾವತಿಗಾಗಿ ಕೋರುತ್ತಿದ್ದಾರೆ. ಈ ಕುರಿತು ತಾಲ್ಲೂಕು ಹಾಗೂ ಜಿಲ್ಲಾಧಿಕಾರಿಗಳಿಂದ ಪತ್ರಗಳು ಸ್ವೀಕೃತವಾಗಿರುತ್ತದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.
ಪ್ರಸ್ತುತ, ಕೋವಿಡ್ ಪರಿಹಾರ ಅಂಕಿ-ಅಂಶಗಳಂತೆ 850 ಪ್ರಕರಣಗಳಲ್ಲಿ ಏಪ್ರಿಲ್ 2023ರ ನಂತರ NPCI ಮ್ಯಾಪಿಂಗ್ ಆಗಿದ್ದು ಅನುದಾನ ಲಭ್ಯವಿಲ್ಲದೆ ಪರಿಹಾರ ಪಾವತಿಗೆ ಬಾಕಿ ಇದೆ ಎಂದು ನಿರ್ದೇಶಾನಲಯ ತಿಳಿಸಿದೆ.
ಕೋವಿಡ್ ನಿಂದ ಮೃತಪಟ್ಟವರಿಗೆ ರೂ.50,000 ಪರಿಹಾರವನ್ನು ಪಾವತಿಸಲು ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿ (SDRF) ಅನುದಾನ ಭರಿಸಲು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈಗಾಗಲೇ ಈ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾದರೂ ಆಡಳಿತ ಇಲಾಖೆಯಿಂದ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ ಎಂದು ನಿರ್ದೇಶಾನಲಯವು ಪತ್ರದಲ್ಲಿ ಹೇಳಿದೆ.
ಹೈಕೋರ್ಟ್‌ನಲ್ಲಿ ತೀರ್ಮಾನವಾಗಿರುವ ಪ್ರಕರಣ ಒಂದರಲ್ಲಿ 2024 ರ ಜನವರಿ ತಿಂಗಳ ಮೊದಲ ವಾರದೊಳಗೆ ಪರಿಹಾರ ವಿತರಿಸಲು ಆದೇಶಿಸಿರುವ ಕುರಿತು ಕಲಬುರಗಿ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಅಗತ್ಯ ದಾಖಲೆಗಳನ್ನು ಕಳುಹಿಸುವಂತೆ ಕೋರಲಾಗಿದೆ. ಸೀಕೃತವಾದ ಕೂಡಲೇ ಪರಿಹಾರ ಪಾವತಿಗೆ ಕ್ರಮ ವಹಿಸಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.