ಅಧಿಕಾರಿಗಳ ಬಗ್ಗೆ ಸಿಎಂ ಅವಹೇಳನಕಾರಿಯಾಗಿ ಮಾತನಾಡಿದರೂ ಕ್ರಮವಿಲ್ಲ ಏಕೆ: ಆರ್. ಅಶೋಕ
ಬಿಜೆಪಿಯವರು ಮಾಡಿದರೆ ಎಫ್‌ಐಆರ್ ದಾಖಲಿಸುತ್ತಾರೆ. ಕಾಂಗ್ರೆಸ್‌ನವರು ಮಾಡಿದರೆ ಯಾವುದೇ ದೂರು ದಾಖಲಾಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲೇ ಕರೆಯುತ್ತಾರೆ ಎಂದು ಆರ್ ಅಶೋಕ್ ಆರೋಪಿಸಿದ್ದಾರೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ಬಾರಿ ಅಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರೂ ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರ ಹೇಳಿಕೆಯನ್ನು ಅನಗತ್ಯವಾಗಿ ವಿವಾದ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
"ಕಾಂಗ್ರೆಸ್‌ಗೆ ಬೇರೆಯೇ ಕಾನೂನು ಇದೆಯೇ?"
"ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೆ, ಐಎಎಸ್ ಅಧಿಕಾರಿ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆದರೂ ಕ್ರಮ ಕೈಗೊಳ್ಳಲಿಲ್ಲ" ಎಂದು ಅಶೋಕ ಹರಿಹಾಯ್ದರು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದೆ ಶಾಸಕರು ದಂಗೆ ಏಳುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಹೈಕೋರ್ಟ್ ಸೂಚಿಸಿದೆ. ಈ ಸಮಸ್ಯೆಗಳನ್ನು ಮರೆಮಾಚಲು ರವಿಕುಮಾರ್ ಹೇಳಿಕೆಯನ್ನು ವಿವಾದ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
"ಬಿಜೆಪಿಯವರು ಮಾಡಿದರೆ ಎಫ್‌ಐಆರ್ ದಾಖಲಿಸುತ್ತಾರೆ. ಕಾಂಗ್ರೆಸ್‌ನವರು ಮಾಡಿದರೆ ಯಾವುದೇ ದೂರು ದಾಖಲಾಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲೇ ಕರೆಯುತ್ತಾರೆ. ರಾಷ್ಟ್ರಪತಿಗಳಿಗೆ ಗೌರವ ಕೊಡದೆ ಏಕವಚನದಲ್ಲೇ ಮಾತಾಡುತ್ತಾರೆ. ಅಂದರೆ ಕಾಂಗ್ರೆಸ್‌ಗೆ ಬೇರೆಯೇ ರೀತಿಯ ಕಾನೂನು ಇದೆ ಎಂದಾಯಿತು. ರವಿಕುಮಾರ್ ಯಾವ ರೀತಿಯ ಅಶ್ಲೀಲ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್ ಸ್ಪಷ್ಟಪಡಿಸಲಿ" ಎಂದು ಅಶೋಕ ಸವಾಲೆಸೆದರು.
ಕೋವಿಡ್ ಲಸಿಕೆ, ಬೆಳೆ ಹಾನಿ, ಮೇಕೆದಾಟು: ಸರ್ಕಾರದ ವಿರುದ್ಧ ಅಶೋಕ ಟೀಕಾಪ್ರಹಾರ
ಹಾಸನದಲ್ಲಿ ಸರಣಿ ಹೃದಯಾಘಾತ ಪ್ರಕರಣಗಳು ಕಂಡುಬಂದರೂ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿಲ್ಲ ಎಂದು ಆರ್. ಅಶೋಕ ದೂರಿದರು. "ಕೋವಿಡ್ ಲಸಿಕೆಯಿಂದ ಹೀಗಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೋವಿಡ್ ಲಸಿಕೆಯನ್ನು ಇಡೀ ದೇಶದ ಜನರಿಗೆ ನೀಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಲಸಿಕೆ ಬಗ್ಗೆ ಆರೋಪ ಮಾಡಲಾಗುತ್ತಿದೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಮಗಳೂರು, ಕೊಡಗು, ಸಕಲೇಶಪುರದಲ್ಲಿ ಕಾಫಿ ಬೆಳೆ ಹಾನಿಯಾಗಿದ್ದರೂ, ತೋಟಗಾರಿಕೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ರೈತರನ್ನು ಭೇಟಿ ಮಾಡಿಲ್ಲ. "ನಾನು ಹಾಸನಕ್ಕೆ ಭೇಟಿ ನೀಡಿ, ಹೃದಯಾಘಾತ ಹಾಗೂ ಕಾಫಿ ಬೆಳೆ ನಾಶದ ಬಗ್ಗೆ ವಿಚಾರಿಸುತ್ತೇನೆ. ಸರ್ಕಾರ ಕೂಡ ಈ ಕೆಲಸವನ್ನು ಕೂಡಲೇ ಮಾಡಬೇಕು" ಎಂದು ಅಶೋಕ ಆಗ್ರಹಿಸಿದರು. "ಇನ್ನೂ ಯಾರು ಮುಖ್ಯಮಂತ್ರಿ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆಯೇ ಹೊರತು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಎರಡೂವರೆ ವರ್ಷವಾದರೂ ಸರ್ಕಾರ ಟೇಕಾಫ್ ಆಗಿಲ್ಲ" ಎಂದು ಅವರು ಟೀಕಿಸಿದರು.
ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ ಅಶೋಕ, "ಮೊದಲು ನಮ್ಮ ರೈತರಿಗೆ ನೀರು ನೀಡಿ, ಮತ್ತೆ ತಮಿಳುನಾಡಿಗೆ ನೀರು ನೀಡಿ ಎಂದು ರೈತರು ಒತ್ತಾಯಿಸಿದ್ದಾರೆ. ತಮಿಳುನಾಡು ಸರ್ಕಾರದ ಜೊತೆಗಿನ ಸ್ನೇಹಕ್ಕಾಗಿ ಇಲ್ಲಿನ ಕಾಂಗ್ರೆಸ್ ಸರ್ಕಾರ ರೈತರಿಗೆ ವಂಚಿಸುತ್ತಿದೆ" ಎಂದು ಆರೋಪಿಸಿದರು.
"ಕಾಂಗ್ರೆಸ್‌ಗೆ ನನ್ನ ಭಯವಿದೆ, ಸಿಎಂ ಖುರ್ಚಿ ಬದಲಾವಣೆ ಖಚಿತ"
ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರಿಗೆ ಅಶೋಕ ತಿರುಗೇಟು ನೀಡಿದರು. "ಆರ್‌ಎಸ್‌ಎಸ್‌ಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿಗೆ ಆರ್‌ಎಸ್‌ಎಸ್‌ಗೆ ಏನೂ ಮಾಡಲು ಸಾಧ್ಯವಾಗಿಲ್ಲ. ಅಂದಿನ ಪ್ರಧಾನಿ ನೆಹರೂ ಯೋಧರಿಗೆ ರಕ್ತ ನೀಡಲು ಆರ್‌ಎಸ್‌ಎಸ್‌ನ ಸಹಾಯ ಪಡೆದಿದ್ದರು. ಅಧಿಕಾರವಿದ್ದಾಗಲೇ ಕಾಂಗ್ರೆಸ್‌ಗೆ ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಅಧಿಕಾರಕ್ಕೆ ಬರುವ ಅವಕಾಶವೂ ಇಲ್ಲ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗಲಿದೆ" ಎಂದು ಅವರು ಭವಿಷ್ಯ ನುಡಿದರು.
"ಸಿಎಂ ಕುರ್ಚಿ ಬದಲಾವಣೆ ಖಚಿತವಾಗಿದೆ. ಕಾಂಗ್ರೆಸ್ ಶಾಸಕರು ಕೂಡ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆಂದು ಭವಿಷ್ಯ ನುಡಿಯುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸುತ್ತಿರುವುದು ಅದರ ಲಕ್ಷಣ. ಬಿಜೆಪಿಗೆ ಮದ್ದು ಅರೆಯುವ ಮೊದಲು ಕಾಂಗ್ರೆಸ್‌ಗೆ ಕಾಂಗ್ರೆಸ್ಸೇ ಮದ್ದು ಅರೆಯಲಿ" ಎಂದು ಆರ್. ಅಶೋಕ ವ್ಯಂಗ್ಯವಾಡಿದರು.