ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆಗೆ ಅನುಮೋದನೆ
ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳು ನಿರ್ವಹಣಾ ಹುದ್ದೆಗಳಲ್ಲಿ 50% ಮತ್ತು ನಿರ್ವಹಣೇತರ ಹುದ್ದೆಗಳಲ್ಲಿ 75% ಹುದ್ದೆಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಕಾಯ್ದಿರಿಸಬೇಕೆಂದು ಕಡ್ಡಾಯಗೊಳಿಸುವ ಮಸೂದೆಯನ್ನು ಕರ್ನಾಟಕ ಸಚಿವ ಸಂಪುಟ ಅನುಮೋದಿಸಿದೆ.;
ರಾಜ್ಯದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಸೇರಿದಂತೆ ಇತರೆ ಖಾಸಗಿ ಸಂಸ್ಥೆಗಳ ನಿರ್ವಹಣಾ ಹುದ್ದೆಗಳಲ್ಲಿ 50% ಮತ್ತು ನಿರ್ವಹಣೇತರ ಹುದ್ದೆಗಳಲ್ಲಿ 75%ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಕಾಯ್ದಿರಿಸಬೇಕೆಂದು ಕಡ್ಡಾಯಗೊಳಿಸುವ ಮಸೂದೆಯನ್ನು ಕರ್ನಾಟಕ ಸಚಿವ ಸಂಪುಟ ಅನುಮೋದಿಸಿದೆ.
ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಕರ್ನಾಟಕ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ- 2024ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಪ್ರಸ್ತುತ ವಿಧಾನಮಂಡಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುತ್ತದೆ.
ಮಸೂದೆ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ "ಸಿ ಮತ್ತು ಡಿ" ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು ಕಡ್ಡಾಯಗೊಳಿಸುವ ವಿಧೇಯಕಕ್ಕೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಕುರಿತು ಸಂತಸ ವ್ಯಕ್ತಪಡಿಸಿರುವ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್, ಎಕ್ಸ್ ಪೋಸ್ಟ್‌ನಲ್ಲಿ, ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸುವ ವಿಧೇಯಕಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ವಿಷಯವನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಈ ವಿಧೇಯಕದ ಜಾರಿಯಿಂದ ರಾಜ್ಯದಲ್ಲಿರುವ ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ 50 ರಿಂದ ಶೇ 75ರ ವರೆಗೆ ಮೀಸಲಾತಿ ಸಿಗಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಉದ್ಯೋಗಕ್ಕಾಗಿ ಕನ್ನಡಿಗರಿಗೆ ಆದ್ಯತೆ ನೀಡದ ಕಂಪನಿಗಳಿಗೆ ದಂಡವನ್ನು ವಿಧಿಸಲಾಗುತ್ತದೆ. ಬಿಲ್‌ನಲ್ಲಿನ ನಿಬಂಧನೆಗಳನ್ನು ಅನುಸರಿಸದ ಕಂಪನಿಗಳಿಗೆ ₹ 10,000 ರಿಂದ ₹ 25,000 ದಂಡ ವಿಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಸ್ಥಳೀಯ ಅಭ್ಯರ್ಥಿ ಯಾರು?
ಕರಡು ಮಸೂದೆಯ ಪ್ರಕಾರ ಕನ್ನಡ ಮಾತನಾಡುವುದರಿಂದ ಒಬ್ಬ ಕನ್ನಡಿಗನಾಗುವುದಿಲ್ಲ. ಅರ್ಹತೆ ಪಡೆಯಲು, ಒಬ್ಬ ವ್ಯಕ್ತಿಯು 15 ವರ್ಷಗಳ ಕಾಲ ರಾಜ್ಯದಲ್ಲಿ ನೆಲೆಸಿರಬೇಕು. ಅಭ್ಯರ್ಥಿಗಳು ಕನ್ನಡವನ್ನು ಒಂದು ಭಾಷೆಯಾಗಿ ಹೊಂದಿರುವ ಮಾಧ್ಯಮಿಕ ಶಾಲಾ ಪ್ರಮಾಣಪತ್ರವನ್ನು ಹೊಂದಿರಬೇಕು ಅಥವಾ ನಿರ್ದಿಷ್ಟಪಡಿಸಿದ ಕನ್ನಡ ಪ್ರಾವೀಣ್ಯತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಸಂಸ್ಥೆಗಳು ವಿನಾಯಿತಿಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಕೆಲವು ಷರತ್ತುಗಳ ಅಡಿಯಲ್ಲಿ ಸರ್ಕಾರವು ಕೆಲವು ಸಡಿಲಿಕೆಗಳನ್ನು ಅನುಮತಿಸುತ್ತದೆ. ಆದರೂ ಎಲ್ಲಾ ಖಾಸಗಿ ಸಂಸ್ಥೆಗಳು ಗ್ರೂಪ್ 'ಸಿ' ಮತ್ತು 'ಡಿ' ಬ್ಲೂ ಕಾಲರ್ ಉದ್ಯೋಗಗಳಿಗೆ ಕನ್ನಡಿಗರನ್ನು ಮಾತ್ರ ನೇಮಿಸಿಕೊಳ್ಳಬೇಕು. ಸ್ಥಳೀಯ ಅಭ್ಯರ್ಥಿಗಳ ಶೇಕಡಾವಾರು ನಿರ್ವಹಣಾ ಸ್ಥಾನಗಳಿಗೆ 25% ಮತ್ತು ನಿರ್ವಹಣೇತರ ಹುದ್ದೆಗಳಿಗೆ 50% ಕ್ಕಿಂತ ಕಡಿಮೆಯಿರಬಾರದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.